Wednesday, 9 October 2013

ಕಡ್ತಲದ ರೂಪಕ ಅಂಗಡಿ ಮೋನಣ್ಣ


ಕಡ್ತಲ ಎಂದರೆ ಅದು ಬರೀ ಊರಲ್ಲ. ಅದೇ ಒಂದು ಕಥೆ. ಕಾಲ ಸನ್ನಿವೇಶಗಳು, ಪಾತ್ರಗಳು ಬದಲಾಗುತ್ತಲೇ ಇರುತ್ತವೆ.
ಹೊಸ ಪಾತ್ರಗಳು ಬರುತ್ತವೆ. ಹಳೇ ಪಾತ್ರಗಳು ಕಾಲದ ಮರೆಗೆ ಸರಿಯುತ್ತವೆ.
ಈ ಬಾರಿ ನಿಮಗೆ ಮೋನಣ್ಣನನ್ನು ಪರಿಚಯಿಸುತ್ತೇನೆ.
ಮೋನಣ್ಣ ನಮ್ಮ ತಲೆಮಾರಿನ ಹಿರಿಯ ಕಂಬ. ನಾವು ಪ್ರೈಮರಿ ಶಾಲೆಗೆ ಹೋಗುತ್ತಿದ್ದ ದಿನಗಳಿಂದ ಇಂದಿನವರೆಗೆ ಮೋನಣ್ಣನನ್ನು ನೋಡುತ್ತಲೇ ಇದ್ದೇನೆ. ಅವರು ಬೆಳೆದ ಪರಿ. ಎಲ್ಲರಿಗೂ ಬೇಕಾಗುವ ವ್ಯಕ್ತಿತ್ವ. ಎಲ್ಲರಿಗೂ ಬೈದುಕೊಳ್ಳಲು ಅವರೇ ಬೇಕು. ಪ್ರೀತಿಯಿಂದ ಮಾತನಾಡಿ ಒಂದು ಲೋಟ ಚಾ, ಅಥವಾ ಬೇಸಗೆಯಾದರೆ ಎಳ್ಳು ಜ್ಯೂಸೋ ಕುಡಿದು ತಣ್ಣಗಾಗಲೂ ಮೋನಣ್ಣನ ಅಂಗಡಿಯೇ ಬೇಕು.
ಮೋನಣ್ಣನ ಅಂಗಡಿ ಅಂದರೆ ಊರಿನ ಸುದ್ದಿ ಕೇಂದ್ರ. ಮಾಹಿತಿ ಕೇಂದ್ರ, ಸಂಪರ್ಕ ವ್ಯವಸ್ಥೆ. ಬೇಡ ಬಿಡಿ ಒಂದು ಪುಟ್ಟ ವಿಧಾನಮಂಡಲ ಎಂದೇ ಕರೆಯೋಣ.
ಏಕೆಂದರೆ ಇಲ್ಲಿ ಎಲ್ಲರೂ ಸೇರುತ್ತಾರೆ. ಆ ಪಕ್ಷ ಈ ಪಕ್ಷದವರೂ ಎದುರು ಬದುರಾಗಿ ಮಾತು ಆರಂಭಿಸುತ್ತಾರೆ. ಚಹಾ ಸೊರ ಸೊರ ಹೀರುತ್ತಾ...
ಮಾತು, ಚರ್ಚೆ ತಾರಕಕ್ಕೆ ಏರುತ್ತದೆ. ಕೊನೆಗೆ ಮೋನಣ್ಣನದ್ದು ’‘ವಿಧಾನಸೌಧದ’ ಸ್ಪೀಕರ್‌ ಪಾತ್ರ. ‘ಒರ ಮನ್ಪಂದೆ ಕುಲ್ಲುಲೇ, ಎಂಚಿನ ಚೊರೆ ಚೊರೆ ಪಾತೆರ್ನು’ ಅಂತ ಹೇಳಿ ಎರಡೂ ಪಕ್ಷದವರ ಬಾಯಿ ಮುಚ್ಚಿಸುತ್ತಾರೆ. ಮಾತಿನಿಂದ ಎಲ್ಲಾದರೂ ವಿವಾದ ಸೃಷ್ಟಿಯಾಗುತ್ತದೆ ಎಂದಾದರೆ ಅಲ್ಲಿನ ಸಂದರ್ಭವನ್ನೇ ನಿವಾರಿಸುತ್ತಾರೆ.
ಹೀಗೆ ಮೋನಣ್ಣನದು ಅಜಾತಶತ್ರು ವ್ಯಕ್ತಿತ್ವ (ಇಲ್ಲವಾದರೆ ಕಡ್ತಲದಲ್ಲಿ ಕಾಲಮಾಡುವುದು ಸುಲಭವೇ?)
ಪಂಚಾಯಿತಿಯಲ್ಲಿ ಯಾರೇ ಆಡಳಿತಕ್ಕೆ ಬರಲಿ ಮೋನಣ್ಣನ ಚಾ ಇಲ್ಲದೇ ಮೀಟಿಂಗು ಇಲ್ಲ. ಗಣೇಶೋತ್ಸವ, ಎಸ್‌ಡಿಎಂಸಿ ಸಭೆ, ಟೈಂಪಾಸ್‌ ಟೀ ಹೀಗೆ ಒಂದಾ ಎರಡಾ. ಒಂದು ಲೋಟ ಚಹಾ ಮತ್ತು ಬನ್ಸ್‌ ಪೋಡಿಯೋ ಕೊಟ್ಟು ಬಂದವರನ್ನು ತಣ್ಣಗಾಗಿಸುತ್ತಾರೆ.
ಇಂತಿಪ್ಪ ಮೋನಣ್ಣ ನಮ್ಮೂರಿನ ದಶಕಗಳ ವ್ಯಕ್ತಿ. ಹಿರಿಯ ತಲೆಯ ಅಜ್ಜ ಅಜ್ಜಿಯರಿಗೆ ಒಂದು ಕಾಟು ಬೀಡ ಕಟ್ಟಿಕೊಟ್ಟು ಅಜ್ಜೆರೆ ’ಚಿಂಯ್ಯೆ’ (ತಿನ್ಲೆ– ತಿನ್ನಿರಿ) ಎನ್ನುತ್ತಾ ಕೊಟ್ಟು ಕಳುಹಿಸುತ್ತಾರೆ. ಇದೇ ಮೋನಣ್ಣನ ಅಂಗಡಿ ಮುಂದೆ ಬಸ್ಸಿಗೆ ಕಾಯುತ್ತಾ ಪೇಪರ್‌ ಓದಿ ಶಾಲೆಗೆ ಹೋದವರು ಇಂದು ದೇಶದ ಮಿಲಿಟರಿಯಿಂದ ಹಿಡಿದು ಉನ್ನತ ಹುದ್ದೆಗಳವರೆಗೆ ಏರಿದವರಿದ್ದಾರೆ. ಅದೇ ಪೇಪರು ಓದಿ ಪೇಪರಿನಲ್ಲೇ ಕೆಲಸಕ್ಕೆ ಸೇರಿದ ನನ್ನಂಥವರಿದ್ದಾರೆ.
80ರ ದಶಕ ನೆನಪಾಗುತ್ತದೆ. ಲಿಂಗರಬೆಟ್ಟಿನ ಮೋಹನದಾಸ ನಾಯಕ್‌ ಅಂದು ನಾಲ್ಕು ಚಕ್ರದ ತಳ್ಳು ಗಾಡಿಯ ಗೂಡಂಗಡಿಯನ್ನು ಬಸ್‌ಸ್ಟ್ಯಾಂಡ್‌ ಪಕ್ಕ ಇಟ್ಟರು. ಇಡೀ ಊರಿಗೆ ಬರುವ ಒಂದೇ ಉದಯವಾಣಿ ಪೇಪರು, ಬೀಡಾ, ಚಾಕಲೇಟು, ಬೀಡಿ, ಗೋಳಿ ಸೋಡ ಇವಿಷ್ಟೇ ಅಂದಿನ ಮೋನಣ್ಣನ ‘ಬಿಗ್‌ ಬಜಾರ್’ನಲ್ಲಿ ಇದ್ದದ್ದು. ಒಂದೈವತ್ತು ರೂಪಾಯಿ ವ್ಯಾಪಾರ ಆದರೆ ಅದೇ ದೊಡ್ಡಮೊತ್ತ. ಹಂತಹಂತವಾಗಿ ಗೂಡು ವಿಸ್ತರಣೆಯಾಗುತ್ತಲೇ ಬಂದಿತು. ಎಂಟೂವರೆ ಹೊತ್ತಿಗೆ ಬರುವ ಮಂಜುನಾಥ ಮೋಟಾರ್ಸ್‌ನ ಡಿಂಗ್ಲಾ ಬಸ್ಸು ಬರುವವರೆಗೆ ಬೆಳಗ್ಗಿನ ವ್ಯಾಪಾರ. ನಂತರ ಮಧ್ಯಾಹ್ನದವರೆಗೆ ಅಷ್ಟೋ ಇಷ್ಟೋ. ಹೀಗೇ ಮೋನಣ್ಣನ ದಿನಗಳು ಸಾಗಲಿಲ್ಲ, ಓಡಿದವು. ಹಲವು ಹುಡುಗರು ಮೊನಣ್ಣನ ಮುಂದೆಯೇ ಬೆಳೆದರು. ಕೆಲವರು ಊರು ಬಿಟ್ಟರು. ಏನೇ ಆದರೂ ಮೋನಣ್ಣ ಜಪ್ಪಯ್ಯ ಅನ್ನಲಿಲ್ಲ.
ಅಲ್ಲಿಯೇ ಗೂಡಿನ ಮಧ್ಯೆ ಪುಟ್ಟ ‌ಚಿಮಿಣಿಎಣ್ಣೆಯ ಸ್ಟವ್‌ ಇಟ್ಟು ಚಹಾ ಕಾಯಿಸಲು ಶುರು ಮಾಡಿದರು. ಬಿಸ್ಕಿಟ್‌, ಬನ್ನು ಅಂದಿನ ಫೈವ್‌ ಸ್ಟಾರ್‌ ತಿನಿಸು. ಹೀಗೇ ಬೆಳೆದ ಅಂಗಡಿ ಕ್ರಮೇಣ ನಾಲ್ಕು ಗೋಡೆ, ತಗಡಿನ ಮಾಡು ಕಂಡಿತು. ಅಂಗಡಿಯೊಳಗೆ ಫ್ರಿಡ್ಜ್‌ ಬಂದು ಸೇರಿ ಎಳ್ಳು ಜ್ಯೂಸನ್ನು ತಣ್ಣಗೆ ಮಾಡಿತು. ಬ್ರೆಡ್‌, ಬನ್ನಿನ ಜತೆಗೆ ಪೋಡಿ, ಗೋಳಿಬಜೆ, ಬನ್ಸ್‌ ಎಣ್ಣೆಯಲ್ಲಿ ಈಜಿ ಬಿಸಿಬಿಸಿಯಾಗಿ ಬೀಳತೊಡಗಿದವು. ಇಡ್ಲಿಯೂ ಗ್ರಾಹಕನ ತಟ್ಟೆಯಲ್ಲಿ ಕೂತಿತು. ಗಿರಾಕಿಗಳ ಹೊಟ್ಟೆ ತುಂಬಿತು. ಮೋನಣ್ಣನ ಹೊಟ್ಟೆ ಸ್ವಲ್ಪ ದುಂಡಗಾಯಿತು.
ಆದರೆ, ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಸುತ್ತಲಿನ ಪರಿಸರದಲ್ಲೇ ಇದ್ದು ಬೆಳೆದ ಪರಿ, ಊರಿನ ಅವರ ಸಮಕಾಲೀನ ಯುವಕರನ್ನು ನಾಚಿಸುವಂತಿದೆ. ಅದೇ ಅವಧಿಯಲ್ಲಿ ಸಣ್ಣ ವ್ಯಾಪಾರ ಆರಂಭಿಸಿದ ಅನೇಕರು ಅಂಗಡಿ ತೆರೆದು ಅರ್ಧದಲ್ಲಿ ಮುಚ್ಚಿದವರಿದ್ದಾರೆ. ಊರುಬಿಟ್ಟು ಹೋದವರಿದ್ದಾರೆ. ಅವರ ಸಹೋದರರೇ ವ್ಯವಹಾರ ಜಗತ್ತಿನಲ್ಲಿ ಏಗಲಾಗದೇ ಹೋಗಿದ್ದಾರೆ. ಆದರೆ, ಮೋನಣ್ಣ ಛಲ ಬಿಡಲಿಲ್ಲ.
ಹಾಗೆಂದು ಮೋನಣ್ಣನನ್ನು ಸುಮ್ಮನೆ ಬೆಳೆಯಲುಬಿಟ್ಟವರೂ ಇಲ್ಲ. ಪ್ರತಿ ಬಾರಿ ಗ್ರಾಮ ಪಂಚಾಯಿತಿಯ ಆಡಳಿತ ಬದಲಾದಾಗ ಮೊದಲ ಚರ್ಚೆಯೇ ಮೋನಣ್ಣನ ಅಂಗಡಿ ತೆರವುಗೊಳಿಸುವ ಬಗ್ಗೆ. ಹೀಗೆ ಹಲವು ಪ್ರಯತ್ನಗಳು ನಡೆದವು. ಅಂಗಡಿಯಲ್ಲಿ ಹಲವು ಬಾರಿ ಕಳ್ಳತನ ನಡೆಯಿತು. ಅಂಗಡಿಯೊಳಗೇ ಪೆಟ್ಟು ಜಗಳಕ್ಕೂ ಹಲವರು ಬಂದರು. ಮೋನಣ್ಣ ಕ್ಷಣಕಾಆಲ ವಿಚಲಿತರಾದದ್ದು ಬಿಟ್ಟರೆ ಸ್ಥಳಬಿಟ್ಟು ಕದಲಲಿಲ್ಲ.
ಕೊನೆಗೂ ಅವರ ಅಂಗಡಿ ತೆರವು ಮಾಡುವಲ್ಲಿ ಪಂಚಾಯಿತಿ ಯಶಸ್ವಿಯಾಯಿತು. ಆದರೆ, ಮೋನಣ್ಣ ಸೋಲಲಿಲ್ಲ. ಅಂಗಡಿ ಇದ್ದ ಜಾಗದಲ್ಲೇ ಪಂಚಾಯಿತಿಯೇ ಅಂಗಡಿ ಕೋಣೆಯನ್ನೂ ಕಟ್ಟಿಕೊಟ್ಟಿತು. ಅದನ್ನು ಬಾಡಿಗೆಗೆ ಪಡೆದ ಮೋನಣ್ಣ ಪಕ್ಕದಲ್ಲಿಯೇ ಕ್ಯಾಂಟೀನ್‌ಗಾಗಿ ಮಾಡು ವಿಸ್ತರಣೆ ಮಾಡಿ ಇನ್ನೊಂದು ಕೋಣೆ ಕಟ್ಟಿದರು. ಮತ್ತೆ ಚಹಾ ಕುದಿಯಿತು. ಪೋಡಿ, ಗೋಳಿಬಜೆ ಕರಿದರು. ಇಂದಿಗೂ ಅಂಗಡಿಯಲ್ಲಿ ಸ್ವತಃ ದುಡಿಯುತ್ತಾರೆ. ಪತ್ನಿ ಸಾಥ್‌ ನೀಡುತ್ತಾರೆ.
ತಮ್ಮ ವಿರುದ್ಧ ಏನೆಲ್ಲಾ ಮಸಲತ್ತು ಮಾಡಿದವರನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೇ  ಬಲೇ ಚಾಪರ್ಲೆ ಎಂದು ಕರೆದು ಮಾತನಾಡಿಸುತ್ತಾರೆ ಮೋನಣ್ಣ...

ಮೋನಣ್ಣನಿಗೊಂದು ಸಲಾಮ್‌

ಪ್ರೀತಿಯಿಂದ
–ಶರತ್‌ ಹೆಗ್ಡೆ, ಕಡ್ತಲ



No comments:

Post a Comment