Wednesday, 9 October 2013


ನಮಸ್ಕಾರ
ಕಡ್ತಲ ಎಂದರೆ ಹಾಗೆಯೇ. ಈ ಊರು ಹೇಗಿತ್ತು ಹೇಗಾಯಿತು? ಅದಕ್ಕೊಂದು ನಾಮಧೇಯ ಹೇಗೆ ಬಂತು ಎಂಬುದು ನಮ್ಮೂರಿನ ಹಣ್ಣು ತಲೆಯವರಿಗೂ, ಬೋಳು ತಲೆಯವರಿಗೂ, ಕೈಯಲ್ಲಿ ಕೋಲು ಹಿಡಿದು ನಡೆಯುವವರಿಗೂ, ಹೋಗಲಿ ಊರ ಶಾನುಭೋಗರಿಗೂ ಇಂದಿಗೂ ಸ್ಪಷ್ಟವಾಗಿ ಹೊಳೆದಿಲ್ಲ. ಕಡ್ತಲ ಎಬ ಹೆಸರಷ್ಟೇ ಇದೆ.
ಕಾರ್ಕಳ ತಾಲ್ಲೂಕಿನ ಅಜೆಕಾರು ಹೋಬಳಿಯ, ಅಜೆಕಾರು ಪೆರ್ಡೂರು ಮಾರ್ಗದಲ್ಲಿ ಕಾಣಸಿಗುವ ಒಂದು ಪುಟ್ಟ ಹಳ್ಳಿ ಕಡ್ತಲ. ಸುಮಾರು ವರ್ಷಗಳ ಹಿಂದೆ ಈ ಊರ ಮಂದಿ ಪೆಟ್ಟು ಜಗಳ, ಹೊಡೆದಾಟ, ಕಡಿದಾಟಗಳಲ್ಲೇ ಬ್ಯುಸಿ ಆಗಿದ್ದರಂತೆ. ಹೀಗೆ ತಲೆಕಡಿಯುವವರ ಊರೇ ಕಡ್ತಲ ಆಯಿತು ಎಂದು ಒಂದೆರಡು ವರ್ಷಗಳ ಹಿಂದೆ ತೀರಿಕೊಂಡ ನಮ್ಮೂರ ಶೆಟ್ರು ಹೇಳಿದ ಬಾಯಿಕಥೆ. ಇದಕ್ಕೆ ಹೋಲಿಕೆ ಇರುವ ಹಲವು ಕಥೆಗಳನ್ನು ಅದೇ ತಲೆಮಾರಿನವರು ಹೇಳಿದರಾದರೂ ಅದನ್ನು ಒಪ್ಪಿಕೊಂಡು ನಮ್ಮೂರಿನ ಪ್ರತಿಷ್ಠೆ, ಘನತೆ, ಇತಿಹಾಸಕ್ಕೆ ಕಳಂಕ ತರಲು ಸುತಾರಾಂ ಇಷ್ಟವಿಲ್ಲ. ಒಂದು ವೇಳೆ ಅಂದಿನವರೆಲ್ಲ ಶೂರರೂ ಧೀರರೂ ಆಗಿದ್ದು ಪೆಟ್ಟಿನವರೇ (ಪೆಟ್ಟು– ಹೊಡೆದಾಟ, ಬಡಿದಾಟ) ಆಗಿದ್ದರೆ ಈಗಿನವರೇಕೆ ‘ಪೆಟ್ಟುಕಮ್ಮಿ’ಗಳಾಗುತ್ತಿದ್ದರು ಎಂಬುದು ನನ್ನ ಮಂಡೆಗೆ ಹೊಳೆದ ಅರ್ಧಸತ್ಯ.
ಹಾ ಅದೂ ಸರಿ ಎಂದೇ ಒಪ್ಪಿಕೊಳ್ಳೋಣ. ಸುಮಾರು 80ರ ದಶಕದಲ್ಲಿ ಪೆಟ್ಟು ಜಗಳ ಸಾಮಾನ್ಯ ವಿಷಯಗಳೇ. ಕೋಳಿ ಅಂಕದಲ್ಲಿ ಪೆಟ್ಟು, ಯಕ್ಷಗಾನಕ್ಕೆ ಹೋದರೆ ಪೆಟ್ಟು, ಹೋಗಲಿ ಬಿಡಿ ಸಿರಿಬೈಲು ಬೊಬ್ಬರ್ಯ ಜಾತ್ರೆಯಲ್ಲೂ ಪೆಟ್ಟು ಜಗಳ... ಹೀಗೆ ಹೇಳುತ್ತಾ ಹೋದರೆ ಸರ್ಕಾರದ ತೊಟ್ಟೆ ಸಾರಾಯಿ ಬಂದ್‌ ಆಗುವವರೆಗೂ ಕಡ್ತಲಕ್ಕೊಂದು ಪೆಟ್ಟು ಗಲಾಟೆಯ ಗಟ್ಟಿಗಾರಿಕೆ ಇದ್ದೇ ಇತ್ತು. ಬಳಿಕ ಅದು ಬಾರ್‌ಗಳಿರುವ ಊರಿಗೆ ಸ್ಥಳಾಂತರವಾಯಿತು ಎಂಬುದು ಬೇರೆ ವಿಚಾರ.
ಈ ಪೆಟ್ಟು ಗಲಾಟೆಯವರು ಅಂದು ಕಾರ್ಕಳದ ಸಬ್‌ ಇನ್‌ಸ್ಪೆಕ್ಟರ್‌ ಕೃಷ್ಣಪ್ಪರಿಂದ ಹಿಡಿದು ಇತ್ತೀಚೆಗೆ ಅಜೆಕಾರು ಠಾಣೆಯ ಇನ್‌ಸ್ಪೆಕ್ಟರ್‌ನ ಪೆಟ್ಟು ತಿಂದವರೇ.
ಈಗ ಕುಡಿದು–ಕುಡಿಯದೆಯೂ ಪೆಟ್ಟು ಗಲಾಟೆ ಮಾಡುವವರ ವಂಶ ಚಿಗುರುತ್ತಲೇ ಇವೆ. ಹಲವರು ಆ ಪರಂಪರೆಯನ್ನು ಮುಂದುವರಿಸಿದರಾದರೂ ಖಾಕಿ ಮಂದಿ ಆಗಾಗ ಗುಟುರು ಹಾಕುವುದರಿಂದ ಸ್ವಲ್ಪ ನಿಯಂತ್ರಣದಲ್ಲಿದೆ.
ಹಾಗಾಗಿ ಕಡ್ತಲ ಹೆಸರಿನ ಬಗ್ಗೆ ಇರುವ ಜಿಜ್ಞಾಸೆ ಸಂಪೂರ್ಣ ಬಗೆಹರಿದಿಲ್ಲವಾದರೂ ಅದಕ್ಕೆ ಋಣಾತ್ಮಕ ವ್ಯಾಖ್ಯಾನ ಕೊಡಲು ಸಿದ್ಧನಿಲ್ಲ.
ಹೀಗೆ ಕಡ್ತಲದಲ್ಲಿ ಹುಟ್ಟಿ ಬೆಳೆದಿದ್ದೇನೆ. ಹಾಗೇ ಬೆಳೆದು ಜೀವನದ 28ನೇ ಮಳೆಗಾಲದವರೆಗೂ ಶರತ್‌ ಹೆಗ್ಡೆಯ ಜತೆಗೆ ಕಡ್ತಲ ಎಂಬ ಹೆಸರೂ ಸೇರಿಕೊಂಡೇ ಇತ್ತು. ಇತ್ತೀಚೆಗೇಕೋ ನನ್ನ ಉದ್ಯೋಗದಾತ ಸಂಸ್ಥೆ ಶರತ್‌ ಹೆಗ್ಡೆಯನ್ನು ಮಾತ್ರ ಸೇರಿಸಿಕೊಂಡು ಕಡ್ತಲವನ್ನು ಕೈಬಿಟ್ಟಿತು. ಒಂಥರಾ ಬಾಲ ಕಟ್‌ ಮಾಡಿದ ಹಾಗೆ  ಆಯ್ತು ಮಾರಾಯ್ರೆ.
ಊರು ಬಿಟ್ಟು ಸುಮಾರು ದಿನ ಆಯ್ತು. ಮನಸ್ಸಿನ್ನೂ ಕಡ್ತಲದಲ್ಲಿಯೇ ಇದೆ. ಕಡ್ತಲದ ಕಥೆಗಳಲ್ಲಿ ಕೆಲವನ್ನು ಹೇಳುತ್ತೇನೆ. ನೀವೂ ಮಾತನಾಡಿ...

ಪ್ರೀತಿಯಿಂದ
ಶರತ್‌ ಹೆಗ್ಡೆ, ಕಡ್ತಲ

No comments:

Post a Comment