Tuesday, 2 September 2014

ಶೋಷಣೆಗೊಳಗಾದ ಗಣೇಶ, ಅಯ್ಯಪ್ಪ, ಅಲ್ಲಾಹನ ಕ್ಷಮೆ ಕೋರುತ್ತಾ...

ದೇವರುಗಳಲ್ಲಿ ಅತ್ಯಂತ ಶೋಷಣೆಗೊಳಗಾದವರೆಂದರೆ ಗಣೇಶ ಮತ್ತು ಶಬರಿಮಲೆ ಅಯ್ಯಪ್ಪ. ಹಾ ಮುಸ್ಲಿಮರಲ್ಲಿ ಅಲ್ಲಾಹನೂ... ಹೀಗೆಯೇ ಇದ್ದಾನೆ.
ಹಬ್ಬವನ್ನು ಒಂದು ದಶಕದ ಹಿಂದೆ ಈಗಿನಂತೆ ಕಲ್ಪಿಸಿಕೊಳ್ಳುವಂತೆಯೂ  ಇರಲಿಲ್ಲ.
ಗಣೇಶನ ವಿಚಾರಕ್ಕೆ ಬರೋಣ. ಹಬ್ಬವೆಂದರೆ ಒಂದು ದಿನ ಇರಬೇಕು. ಮತ್ತೂ ಮುಂದುವರಿದರೆ ಅದರ ತಾಜಾತನ,  ಉತ್ಸಾಹ ಕೆಡುತ್ತದೆ. ಆದರೆ ಶಿವಮೊಗ್ಗದಿಂದ ಮುಂದೆ ಬನ್ನಿ ಬಯಲು ಸೀಮೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಗಣೇಶನನ್ನು ನಿಜವಾಗಿಯೂ ಭಕ್ತರೇ ಹೀನಾಯವಾಗಿ ಶೋಷಿಸುತ್ತಾರೆ. ಮಧ್ಯಾಹ್ನ ಕಳೆದರೂ ಅವನನ್ನು ನಿರ್ಮಾಣ ಸ್ಥಳದಿಂದ ಪ್ರತಿಷ್ಠಾಪನಾ ಸ್ಥಳದವರೆಗೆ ಒಯ್ಯುವ ಕಾರ್ಯಕ್ರಮ. ಅದಕ್ಕೋ ಕೆಟ್ಟ ಕೊಳಕು ಕರ್ಕಶ, ಅಶ್ಲೀಲ ಸಾಹಿತ್ಯದ ಸಂಗೀತ. ಅದೆಲ್ಲಿದ್ದವೋ ಡಿಜೆಗಳೆಂಬ ದೈತ್ಯಗಳು. ದಾವಣಗೆರೆಯಲ್ಲಿ ಒಂದೆರಡು ಕಡೆ ಬಿಟ್ಟರೆ ಉಳಿದಂತೆ ಅನುಸರಿಸುವುದು ಪಕ್ಕಾ ಅನಾಗರಿಕ ಪದ್ಧತಿ. ಅವರಿಗೆ ಗಣೇಶೋತ್ಸವಕ್ಕೂ ಮಾರಿಹಬ್ಬಕ್ಕೂ ವ್ಯತ್ಯಾಸವೇ ಗೊತ್ತಿಲ್ಲ. ವಿಸರ್ಜನಾ ಮೆರವಣಿಗೆಯೋ ಅದಿನ್ನೂ ಶೋಚನೀಯ. ವಿಗ್ರಹದಲ್ಲಿ ಪ್ರಾಣ ಪ್ರತಿಷ್ಠಾಪನೆಗೊಂಡಿದ್ದರೆ(!) ಡಿಜೆ  ಅಬ್ಬರಕ್ಕೆ ಹೃದಯಾಘಾತವಾಗಲೇಬೇಕು. ಸೂಕ್ಷ್ಮ ಪ್ರದೇಶಗಳಲ್ಲಂತೂ ಬೇಕೆಂತಲೇ ಸಂಗೀತದ  ಅಬ್ಬರ ಏರುತ್ತದೆ.
ಇಂಥ ಡಿಜೆ ಪಿಶಾಚಿ ನಮ್ಮೂರಿನ ಗಣೇಶನಿಗೂ ಆವರಿಸಿದೆ ಎಂದು ಬೇಸರದಿಂದಲೇ ಹೇಳುತ್ತೇನೆ. ಸಾತ್ವಿಕನಾಗಿದ್ದ ನಮ್ಮೂರ ಗಣೇಶ ನಮ್ಮೂರಿನ ಕೆಲವು ದೆವ್ವ ಪಿಶಾಚಿಗಳಂತೇ ಇಂಥ ಕರ್ಕಶತೆಗೆ ಒಗ್ಗಿಕೊಂಡಿದ್ದಾನೆ.
ನಿಜವಾಗಿಯೂ ಗಣೇಶನ ಭಕ್ತರು, ಅಥವಾ ಆರಾಧನಾ ಪದ್ಧತಿ ಅದರ ಹಿನ್ನೆಲೆ ಗೊತ್ತಿದ್ದವರು ಮಾಡುವ ಕ್ರಮ  ಇದಲ್ಲ.
ಒಂದು ನಂಬಿಕೆಯಿತ್ತು. ಗಣೇಶನ ಆರಾಧನೆಯಲ್ಲಿ ಕೊಂಚ ವ್ಯತ್ಯಯವಾದರೂ ಗಣೇಶ ಮುನಿಸಿಕೊಳ್ಳುತ್ತಾನೆ. ಊರಿಗೆ ಕೆಡುಕಾಗುತ್ತದೆ ಎಂದು ನಂಬಿದ ಮಂದಿ ಆದಷ್ಟು ಮಡಿವಂತಿಕೆ ಕಾಯ್ದುಕೊಳ್ಳುತ್ತಿದ್ದರು. ಗಣೇಶ ಬೆಳಿಗ್ಗೆ 8ರ ಒಳಗೆ ಆಗಮಿಸುತ್ತಿದ್ದ. (ಕರಾವಳಿ ಭಾಗದಲ್ಲಿ ಈಗಲೂ ಹಾಗೇ ಇದೆ.) ಆರಾಧಿಸುವವರಂತೂ ಪಕ್ಕಾ ಶಾಸ್ತ್ರ ತಿಳಿದವರೇ ಆಗಿರಬೇಕು. ಪ್ರಾರ್ಥನೆ ಇಡೀ ಊರಿಗೆ ಸಂಬಂಧಿಸಿದ್ದಾಗಿತ್ತು. ಗಣೇಶನನ್ನು ನೀರಿಗೆ ಬಿಡುವವರೆಗೂ ಸಣ್ಣ ಸಣ್ಣ ಅಂಶಗಳಿಗೂ ಗಮನ ಕೊಡಲಾಗುತ್ತಿತ್ತು.
ಆದರೆ....
ಈ ಭಾಗಗಳಲ್ಲಿ ಗಣೇಶನನ್ನು ಚರಂಡಿ, ಕೊಳಕಿನ ಮಧ್ಯೆ ಕೂರಿಸುತ್ತಾರೆ. ಬಲವಂತವಾಗಿ ಚಂದಾ ವಸೂಲಿ ಮಾಡುತ್ತಾರೆ. ಬರೀ ಕುಣಿದಲ್ಲ, ಕುಡಿದು ಕುಪ್ಪಳಿಸುತ್ತಾರೆ. ಕರ್ಕಶ ಡಿಜೆ ಸಂಗೀತ ಗಣೇಶನನ್ನು ವಿಸರ್ಜನೆಗೆ ಮೊದಲೇ ಅಟ್ಟಿಬಿಡುತ್ತದೆ. ಜನಪದ ಸಂಗೀತ ಮರೆಗೆ ಸರಿದಿದೆ. ಊರಿಗೊಬ್ಬನೇ ಇದ್ದ ಗಣೇಶ ಮಾರಿಗೊಂದರಂತೆ ಇದ್ದಾನೆ. ಅವರಿಗಿಂತ ನಮ್ಮ ಗಣೇಶ ದೊಡ್ಡವ, ಅವರಿಗಿಂತ ನಮ್ಮ ಸೌಂಡ್‍ ಬಾಕ್ಸ್ ದೊಡ್ಡದು, ಇಂಥದ್ದೇ ಕ್ಷುಲ್ಲಕ ವಿಷಯಗಳೇ ಪ್ರತಿಷ್ಠೆ ಎನಿಸುತ್ತಿವೆ.
ಬಾಲಗಂಗಾಧರ ತಿಲಕರು ಯಾವ ಉದ್ದೇಶವಿಟ್ಟು ಈ ಹಬ್ಬ ಜಾರಿಗೆ ತಂದಿದ್ದರೋ ಅದೆಲ್ಲವನ್ನೂ ಮರೆತಿದ್ದೇವೆ.  ಗಣೇಶ ನಮ್ಮನ್ನು ಕ್ಷಮಿಸು. ನಾವು ನಿನ್ನ ಭಕ್ತರಲ್ಲ. ನಮ್ಮ ಮೈಕ್‍ ಸೆಟ್, ಕುಡಿತ, ಕುಣಿತ ನಮಗೆ ಮುಖ್ಯ. ಅದಕ್ಕೆ ನೀನು ನೆಪ ಅಷ್ಟೆ.
ಇನ್ನು ಶಬರಿಮಲೆ ಅಯ್ಯಪ್ಪನದ್ದೂ ಇದೇ ಪಾಡು. ಸಮಾಧಾನಕರ ಸಂಗತಿ ಎಂದರೆ ಇಲ್ಲಿಗೆ ಡಿಜೆ ಸಂಗೀತ ಬಂದಿಲ್ಲ. ಕನ್ನಡ, ಹಿಂದಿ ಚಿತ್ರಗೀತೆಗಳ ಭಟ್ಟಿ ಇಳಿಸಿದ ರಾಗಗಳ ಭಕ್ತಿಗೀತೆ(!)ಯಿದೆ. ಇಲ್ಲಿಯೂ ವ್ಯಕ್ತಿಯೊಬ್ಬನ ಮನಃಪರಿವರ್ತನೆ, ಕಷ್ಟಗಳ ಅರಿವು, ಸರಳ ಜೀವನದ  ಆದರ್ಶಗಳನ್ನು ಅನುಸರಿಸುವುದು ಮುಖ್ಯಗುರಿ. ಆದರೆ ಇಲ್ಲಿ ಅಯ್ಯಪ್ಪನ ಭಕ್ತರೂ ಮೊದಲು ಮೈಕ್‍ ಭಕ್ತರು. ಬೆಳಗಿನ ಜಾವ, ಸಂಜೆ ಮೌನವಾಗಿ ಅಯ್ಯಪ್ಪನನ್ನು ಆರಾಧಿಸಬಹುದು. ಆದರೆ, ಊರೆಲ್ಲಾ ಕರ್ಕಶ ಸೃಷ್ಟಿಸಲು ಮೈಕ್‍ ಚಾಲನೆ ಮಾಡಲೇಬೇಕು. ಇಲ್ಲವಾದರೆ ಅಯ್ಯಪ್ಪನಿಗೆ ಎಚ್ಚರವಾಗುವುದೇ ಇಲ್ಲ. ಇನ್ನು ಇಂಥ ಶಿಬಿರಗಳು ಮಾರು ದೂರಕ್ಕೊಂದು ಇರುತ್ತವೆ. ಹತ್ತಾರು ಮೈಕ್‍ಗಳ ಧ್ವನಿ ಏಕಕಾಲಕ್ಕೆ ಅರಚಿದಾಗ. ನಮ್ಮಂತೆ ಅತ್ತ ಹಗಲೂ ಅಲ್ಲದ ಇತ್ತ ರಾತ್ರಿಯೂ ಅಲ್ಲದ ಕೆಲಸಗಳಲ್ಲಿ ತೊಡಗಿ ಒಂದಿಷ್ಟು ಕಣ್ಣು ಮುಚ್ಚಿ ನಿದ್ದೆ ನಿರೀಕ್ಷಿಸುವವರ, ತೊಟ್ಟಿಲಲ್ಲಿ ಮಲಗಿರುವ ಪುಟ್ಟ ಕಂದಮ್ಮಗಳ, ಹಿರಿಯರ ಗತಿ, ಮಾನಸಿಕ ಸ್ಥಿತಿ ಏನಾಗಿರಬೇಡ?  ಎಷ್ಟೋ ಬಾರಿ ಇಂಥ ಮೈಕಪ್ಪ ಭಕ್ತರಿಗೆ ಕೆಟ್ಟ ಭಾಷೆಯಲ್ಲಿ ಶಾಪ ಹಾಕಿದ್ದಿದೆ.
ಇನ್ನು ಅಲ್ಲಾಹನೋ... ಅವನದ್ದಂತೂ ವರ್ಷಪೂರ್ತಿ ಇದೇ ಗೋಳು. ಇದಕ್ಕೊಂದು ನಿಯಂತ್ರಣ ವ್ಯವಸ್ಥೆಯೇ ಇಲ್ಲ. ದಿನಕ್ಕೆ ಐದಾರು ಬಾರಿ ಆಜಾನ್‍ ಕೂಗಲೇಬೇಕು. ಸಂಜೆ, ರಾತ್ರಿ, ಒಮ್ಮೊಮ್ಮೆ ತಡರಾತ್ರಿ, ಬೆಳಗಿನ ಜಾವ... ಹೀಗೆ ಕೂಗು ಮೊಳಗುವುದಕ್ಕೆ ಹೊತ್ತುಗೊತ್ತು ಒಂದೂ ಇಲ್ಲ. ಒಂದು ಆಜಾನ್‍ ಮೊಳಗಿದರೆ ಸಾಕು ಊರಿನಲ್ಲಿದ್ದ  ಎಲ್ಲ ಮೈಕ್‍ಗಳಿಗೂ ಎಚ್ಚರವಾಗಿಬಿಡುತ್ತದೆ. ನಿಯಮಗಳಂತೂ ಇಲ್ಲಿ ಅನ್ವಯಿಸುವುದಿಲ್ಲ.
ಪ್ರಾಮಾಣಿಕ, ದಿನಕ್ಕೈದು ಬಾರಿ ನಮಾಜ್‍ ಮಾಡುವ ಅಲ್ಲಾಹನ ಭಕ್ತನಿಗೆ ಈ ಕೂಗು ಬೇಕಾಗಿಯೇ ಇಲ್ಲ. ಆತ ಎಲ್ಲಿದ್ದರೂ ಅವನಿಗೆ ನಮಸ್ಕರಿಸುತ್ತಾನೆ.
ಈ ಮೇಲಿನ ಮೂರೂ ಉದಾಹರಣೆಗಳಲ್ಲಿ ನಮಗೆ ಧರ್ಮಕ್ಕಿಂತ ನಮ್ಮ ಧ್ವನಿ, ಪ್ರತಿಷ್ಠೆಯದೇ ಮೇಲುಗೈ ಆಗಬೇಕೆಂಬ ಹುಚ್ಚು ಉತ್ಸಾಹ.
ಊರೆಲ್ಲಾ ಅರಚಿ ಸ್ವಾಮಿಯೇ ಶರಣಂ ಅಯ್ಯಪ್ಪ  ಎಂದು ಶರಣು ಕರೆದ  ಅಯ್ಯಪ್ಪ ಭಕ್ತರು  ಪರಿವರ್ತನೆ ಹೊಂದಿದ ಮಂದಿ ಎಲ್ಲೋ ಮೂಲೆಯಲ್ಲಿ ಸಿಕ್ಕಾರು. ಗಣೇಶನನ್ನು ಗದ್ದಲದಲ್ಲಿ ಒಯ್ದು, ಚರಂಡಿ ಪಕ್ಕ ಕೂರಿಸಿದವರ ಜೀವನಮಟ್ಟ ಇನ್ನೂ ಹಾಗೇ ಇದೆ. ಅಲ್ಲಾ... ಎಂದು ಆಜಾನ್‍ ಕೂಗುವ ಮಸೀದಿಯ ಪಕ್ಕದಲ್ಲೇ ಮರುದಿನದ ತುತ್ತಿಗಾಗಿ ಚಿಂತಿಸುವ, ಆತಂಕದ ನಾಳೆ ನೋಡುತ್ತಿರುವ ಬಡಪಾಯಿ ಮುಸ್ಲಿಂ ಕಾಣಸಿಗುತ್ತಾನೆ.
ಪರಸ್ಪರ ಧರ್ಮದ ಜಿದ್ದಿನಿಂದ ಇತ್ತೀಚೆಗೆ ಉರೂಸ್‍, ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಊರು ತುಂಬಾ ಮೈಕ್‍ ಕಟ್ಟಿ ಅಹೋರಾತ್ರಿ ಗದ್ದಲ ಎಬ್ಬಿಸುವ ಶಕ್ತಿಗಳೂ ಹೆಚ್ಚಾಗಿವೆ. ಸೀಮಿತ ಸಮುದಾಯ ಅಥವಾ ಗುಂಪಿಗೆ ತಲುಪಬೇಕಾದ ಸಂದೇಶ ಕೇವಲ ಪ್ರತಿಷ್ಠೆಯ ಕಾರಣಕ್ಕೆ ಊರೆಲ್ಲಾ ಗರ್ಜಿಸುತ್ತಿದೆ.
ಎರಡೂ ಧರ್ಮದವರು ಸ್ವಲ್ಪ ಕ್ರೈಸ್ತರ ಆರಾಧನಾ ಕ್ರಮದತ್ತ ನೋಡಿ. ಅವರ ಯಾವುದೇ ಪ್ರಾರ್ಥನೆ, ಸಂಗೀತದ ಧ್ವನಿ ಅವರ ಚರ್ಚ್, ಮನೆ ಅಥವಾ ಆರಾಧನಾ ಸ್ಥಳದಿಂದ  ಆಚೆ ಕೇಳಿಸುವುದಿಲ್ಲ. ಆದರೆ, ದೇವರು ಕೇಳಿಸಿಕೊಂಡರೆ ಸಾಕು ಎಂಬುದು ಅವರ ನಂಬಿಕೆ. ನಮ್ಮಲ್ಲೂ ಬರಬಾರದೇ?

Saturday, 7 June 2014

ರೈಲ್ವೆ ಮಂತ್ರಿ ಸ್ಮೈಲ್‍ಗೌಡ್ರಿಗೆ ಸಲಹೆಗಳು


ರೈಲ್ (ಸ್ಮೈಲ್) ಗೌಡ್ರೆ ನಮಸ್ಕಾರ.

ನಿಮ್ಮ ಸ್ಮೈಲ್‍ನಂತೆಯೇ ದೇಶದಲ್ಲಿ ರೈಲುಗಳೂ ಚೆನ್ನಾಗಿಯೇ ಓಡಲಿ ಎಂದು ಆಶಿಸುತ್ತಾ, ಕೆಲವು ಮಾತು ಹಂಚಿಕೊಳ್ಳಲು ಬಯಸುತ್ತೇನೆ.
* ನೀವು ರೈಲು ಪ್ರಯಾಣದ ದರ ಏರಿಸ್ತೀರಿ ಅಂತ ಹೇಳಿದ್ದನ್ನು ಕೇಳಿದ್ದೇನೆ. ಅದಕ್ಕೆ ವಿರೋಧ ಬರಲೂಬಹುದು. ಆಗ ನೀವು ಅದನ್ನು ಹಿಂದಿನ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರ ತಲೆಗೆ ಹಾಕಿ ಕೈತೊಳೆದುಕೊಳ್ಳುತ್ತೀರಿ. ಏಕೆಂದರೆ ಈ ಪ್ರಸ್ತಾವ ಇದ್ದದ್ದು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ. ನಾವು ಅದನ್ನು ಜಾರಿಗೊಳಿಸುತ್ತಿದ್ದೇವೆ ಎಂಬ ಕಾಮನ್ ಸ್ಟೇಟ್‍ಮೆಂಟ್ ಕೊಟ್ಟು ಮತ್ತೆ ಹಿಹಿ ಹಿ... ಅಂತ ಸ್ಮೈಲ್ ಕೊಡ್ತೀರಿ ಅಲ್ವಾ?
* ದರ ಏರಿಸದೇ ರೈಲು ಓಡಿಸಲು ಸಾಧ್ಯವಿಲ್ಲದಿರಬಹುದು. ಆದರೆ, ಶೇ 10ರಷ್ಟು ಏರಿಸಿದರೆ ಕೆಎಸ್‍ಆರ್‍ಟಿಸಿ ಬಸ್‍ಗಳಿಗೂ ರೈಲಿಗೂ ವ್ಯತ್ಯಾಸ ಇರೋದಿಲ್ಲ. ಆದ್ದರಿಂದ ಶೇ 3ರಿಂದ 4ರ ಒಳಗೆ ಇದ್ದರೆ ಸಾಕು. (ಅದೂ ಅಗತ್ಯವಿಲ್ಲ ಎಂಬುದು ನನ್ನ ವಾದ)
* ಗೌಡ್ರೇ ಪ್ರಶ್ನಿಸಿಕೊಳ್ಳಿ, ರೈಲ್ವೆ ಇಲಾಖೆ ನಿಜವಾಗ್ಲೂ ನಷ್ಟದಲ್ಲಿದೆಯಾ? ನಾನೇನೂ ನಿಮ್ಮ ಲೆಕ್ಕ ಪರಿಶೀಲಿಸಿಲ್ಲ. ಆದರೂ ನಷ್ಟದಲ್ಲಿ ಇಲ್ಲ ಎಂದು ಖಚಿತವಾಗಿ ಹೇಳಬಲ್ಲೆ. ಆದರೆ, ಓಡುವ ಎಲ್ಲ ರೈಲುಗಳ ಆದಾಯ ಪೂರ್ತಿಯಾಗಿ ಇಲಾಖೆಗೆ ಬರುತ್ತಿಲ್ಲ ಎಂದಷ್ಟೇ ಹೇಳಿ. ನಷ್ಟದಲ್ಲಿದೆ ಎಂದು ಸುಳ್ಳು ಹೇಳಬೇಡಿ. ಹಿಂದಿನವರೂ ಅದನ್ನೇ ಹೇಳಿದ್ದರು. (ಯಾಕೋ ನಿಮ್ಮ ಸ್ಮೈಲ್‍ನಲ್ಲಿ ಒಮ್ಮೊಮ್ಮೆ ವೀರಪ್ಪ ಮೊಯಿಲಿ ಅವರ ಪಟಾಕಿ ಬಾಯಿ ಕಾಣುವುದೂ ಉಂಟು. ಅದು ಬೇರೆ ವಿಚಾರ). ಬಸ್ಸಿನ ಆದಾಯ ಕಂಡಕ್ಟರ್, ಡ್ರೈವರ್ ಪಾಲಾದಂತೆ ನಿಮ್ಮ ಇಲಾಖೆಯಲ್ಲಿ ಇಡೀ ರೈಲನ್ನೇ ನುಂಗುವ ತಿಮಿಂಗಿಲಗಳೂ ಇದ್ದಾರೆ ಎಂಬುದೂ ನೆನಪಿರಲಿ.
* ಎಲ್ಲ ರೈಲುಗಳು ತುಂಬಿ ಓಡಾಡುತ್ತಿದ್ದರೂ 'ಇಲಾಖೆ ನಷ್ಟದಲ್ಲಿದೆ', ನೋ ಲಾಸ್ ನೋ ಪ್ರಾಫಿಟ್ (ಲಾಭವೂ ಇಲ್ಲ ನಷ್ಟವೂ ಇಲ್ಲ) ಹೇಗೆ? ಆ ದುಡ್ಡು ಎಲ್ಲಿ ಹೋಯಿತು?
* ರೈಲು ನಿಲ್ದಾಣಗಳ ಆಧುನೀಕರಣ ಘೋಷಿಸಿದ್ದರೂ ಅದು ಸೀಮಿತ ಪ್ರದೇಶಕ್ಕಷ್ಟೇ ಇದೆ. ಉಳಿದಂತೆ ಅಂಥ ಘನಾಂದಾರಿ ನಿರ್ಮಾಣಗಳು ಬಹುತೇಕ ಕಾಗದ ಪತ್ರದಲ್ಲೇ ಇವೆ. ಅತ್ತ ಇಲಾಖೆಯಲ್ಲಿ ದುಡ್ಡಿಲ್ಲ ಎನ್ನುತ್ತಾರೆ ನಿಮ್ಮವರು. ಯಾವುದನ್ನು ನಂಬಬೇಕು?
* ಎಲ್ಲ ಲೈನುಗಳಲ್ಲಿ ಪ್ರಯಾಣಿಕ ರೈಲುಗಳಷ್ಟೇ, ಕೆಲವೆಡೆ ಅದಕ್ಕಿಂತ ಹೆಚ್ಚು ಗೂಡ್ಸ್ ರೈಲುಗಳು ಓಡುತ್ತಿವೆ. ನಿಮ್ಮ ಇಲಾಖೆ ಅದಿಕಾರಿಗಳು ಯಾವ ಮಾರ್ಗವನ್ನೂ ನಷ್ಟದ್ದೆಂದು ಘೋಷಿಸಿಲ್ಲ. ಇಲಾಖೆಗೆ ಪ್ರಯಾಣಿಕ ರೈಲುಗಳ ಎರಡುಪಟ್ಟು ಆದಾಯ ಗೂಡ್ಸ್ ಸೇವೆಯಿಂದ  ಬರುತ್ತಿದೆ. ಹೇಳಿ ಈ ಆದಾಯ ಎಲ್ಲಿ ಹೋಯಿತು?
ದೇಶದ 1,15,000 ಕಿ.ಮೀ ಉದ್ದದ ಹಳಿ, 65,000 ಕಿ.ಮೀ ಮಾರ್ಗಗಳಲ್ಲಿ ರೈಲುಗಳು (ಗೂಡ್ಸ್/ ಪ್ಯಾಸೆಂಜರ್) ತುಂಬಿ ಓಡುತ್ತಿದ್ದರೂ ಇಷ್ಟೊಂದು ಬೃಹತ್ ವ್ಯವಸ್ಥೆಯಲ್ಲಿ ಅದರ ಆದಾಯ ಪಡೆಯಲು ಇಲಾಖೆ ಏಕೆ ವಿಫಲವಾಯಿತು? 2012ರಲ್ಲಿ ರೈಲ್ವೆ ಪ್ರಯಾಣಿಕ ರೈಲುಗಳಿಂದ 282,464.3 ರೂಪಾಯಿ ಆದಾಯ ಗಳಿಸಿತ್ತು. (ಆ ನಂತರದ ಲೆಕ್ಕ ಇಲ್ಲ)

ಗೌಡ್ರೇ ಹೀಗೆ ಮಾಡಿ

* ನಿಮ್ಮ ಇಲಾಖೆಯಲ್ಲಿ ಕೆಲವು ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳಿಗೆ ಅಗತ್ಯಕ್ಕಿಂತ ಜಾಸ್ತಿ ಸೌಲಭ್ಯ ಕೊಟ್ಟಿದ್ದೀರಿ. ವಲಯದ ಮುಖ್ಯ ಅಧಿಕಾರಿಗಳಿಗಾಗಿಯೇ ಪ್ರತ್ಯೇಕ ವಿಶೇಷ ರೈಲು (ಅವರು ರೈಲಿನ ಎಸಿ ಕೊಠಡಿಯೊಳಗೆ ಕುಳಿತು ಹಳಿ ಪರಿಶೀಲನೆ ಮಾಡುತ್ತಾರೆ) ಅವರಿಗೆ ಅದರಲ್ಲಿ ನೂರು ಮಂದಿ ಸಿಬ್ಬಂದಿ. ಅದಕ್ಕಾಗಿ ಇತರ ರೈಲುಗಳ ಓಡಾಟ ವಿಳಂಬ ಮಾಡಿ ಪ್ರಯಾಣಿಕರನ್ನು ಗೋಳಾಡಿಸುವುದು. ಚಿಕ್ಕಾಸಿನ ಪ್ರಯೋಜನವಿಲ್ಲದ ತಪಾಸಣೆಗೆ ಲಕ್ಷಾಂತರ ರೂಪಾಯಿ ವೆಚ್ಚ, ವಿಪರೀತ ಭದ್ರತೆ ಹೆಸರಿನ ಕಿರಿಕಿರಿ (ಇಂಥ 17 ವಲಯಗಳ ಹಿರಿಯ ಅಧಿಕಾರಿಗಳಿದ್ದಾರೆ ಜತೆಗೆ ಮಂಡಳಿಯ ಉನ್ನತಾಧಿಕಾರಿಗಳಿದ್ದಾರೆ). ಒಟ್ಟಿನಲ್ಲಿ ಕೋಟಿ ರೂಪಾಯಿ ಖರ್ಚಿನ ಬಾಬ್ತು ಇಲ್ಲಿಯೇ ಹೋಗುತ್ತದೆ. ಒಂದು ಕಾರಿನಲ್ಲಿ ನಿಲ್ದಾಣ ಭೇಟಿ, ಅಥವಾ ನಿತ್ಯ ಸಂಚಾರದ ರೈಲಿನಲ್ಲೇ ವಿಶೇಷ ಭೋಗಿ, ಹಳಿ ಮೇಲೆ ಓಡುವ ಒಂದು ಟ್ರಾಲಿಯಲ್ಲಿ ಮಾಡಬಹುದಾದ ಕೆಲಸವಿದು. ಇಂಥ ದುಂದುವೆಚ್ಚಕ್ಕೆ ಪೂರ್ತಿ ಕತ್ತರಿ ಹಾಕಿ. ಜನಸಾಮಾನ್ಯನ ದುಡ್ಡಿನಲ್ಲಿ ಇಂಥ ವೇಸ್ಟ್ ಬಾಡಿಗಳ ಪೋಷಣೆ ಬೇಡ.
* ಕೇಂದ್ರ ಸರ್ಕಾರದ ನೌಕರಿ, ಕೈತುಂಬಾ ಸಂಬಳ, ಸೌಲಭ್ಯ ಎಂದುಕೊಂಡು ತಲೆಕೆಡಿಸಿಕೊಳ್ಳದೇ ಕುರ್ಚಿ ಬಿಸಿ ಮಾಡುವ ನೂರಾರು ವ್ಯರ್ಥ ಜೀವಿಗಳನ್ನು ಕಿತ್ತೆಸೆಯಿರಿ (ಅದಕ್ಕೆ ವಿಆರ್‍ಎಸ್ ಯೋಜನೆ ತರಬಹುದು). ಹೊಸಬರನ್ನು ನೇಮಿಸಿ ಪ್ರತಿ ಕೆಲಸದ ಗುರಿ ಹಾಗೂ ಕಾಲಮಿತಿ ನೀಡಿ.
* ರೈಲ್ವೆ ಕಾಮಗಾರಿಗಳ ಸಂದರ್ಭ ಸಾಮಗ್ರಿ ಖರೀದಿ, ತಂತ್ರಜ್ಞಾನ ಅಳವಡಿಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅಕ್ಷರಶಃ ಕಳ್ಳಕಾಕರ ಪಾಲಾಗುತ್ತಿದೆ. ಇಂದಿಗೂ ನಿಮ್ಮ ಇಲಾಖೆಯಲ್ಲಿ ಅಂಥ ಭಯಂಕರ ತಂತ್ರಾಂಶವೇನೂ ಅಳವಡಿಕೆಯಾಗಿಲ್ಲ. ಸಾಮಾನ್ಯ ರಿಸರ್ವೇಷನ್ ವೆಬ್‍ಸೈಟ್ ತೆರೆಯಲು ತಾಸು ಬೇಕು. ಕೌಂಟರ್‍ಗಳ ಮುಂದಿನ ಉದ್ದನೆಯ ಸರದಿ ಸಾಲು ತಪ್ಪಿಲ್ಲ. ಹೋಗಲಿ ಬ್ರಿಟೀಷರ ಕಾಲದಲ್ಲಾದ ಬ್ರಾಡ್‍ಗೇಜ್ ವಿನ್ಯಾಸವನ್ನು ಒಂದಿಂಚೂ ಬದಲಾವಣೆ ಮಾಡಲು ಇಂದಿಗೂ ಆಗಿಲ್ಲ. ಹಾಗಿದ್ದರೆ  ಇಲಾಖೆ ವೆಚ್ಚ ಮಾಡುವುದು ಯಾವುದಕ್ಕೆ?
* ಎಲ್ಲ ರೈಲು ನಿಲ್ದಾಣಗಳಲ್ಲಿ ಕನಿಷ್ಟ ಒಂದು ಗೂಡ್ಸ್ ಷೆಡ್ ಹೆಸರಿನ ತಗಡು ಮಾಡು ಆದರೂ ನಿರ್ಮಿಸಿ. ಖಂಡಿತ ಆದಾಯ ಹೆಚ್ಚಳವಾಗುತ್ತದೆ. ಸಣ್ಣ ಹಳ್ಳಿಗಳಿಗೂ ಸಿಮೆಂಟ್, ಗೊಬ್ಬರ, ತೈಲ, ಲಾರಿಗಳ ಬದಲು ರೈಲಿನಲ್ಲಿ ಹೋಗುತ್ತದೆ. ಮಂಗಳೂರಿನ ಸುರತ್ಕಲ್‍ನಿಂದ ಮುಂಬಯಿಗೆ ಆರಂಭಿಸಿದಂತೆ ಎಲ್ಲ ಮಾರ್ಗಗಳಲ್ಲಿಯೂ ಲಾರಿಗಳ ರೋಲ್ ಆನ್ ರೋಲ್ ಆಫ್ ಸೇವೆ ಆರಂಭಿಸಿ. ರಸ್ತೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇಲಾಖೆಯ ಆದಾಯ ಹೆಚ್ಚುತ್ತದೆ.
* ಸಾಧ್ಯತೆ ಇರುವಲ್ಲೆಲ್ಲಾ ರೈಲ್ವೆ ಕೊರಿಯರ್ ಸೇವೆ ಆರಂಭಿಸಿ. ಪ್ರತಿ ರೈಲಿನಲ್ಲೂ ಗಂಟೆಗೊಮ್ಮೆ ಟಪಾಲು ಸೇವೆ ಹೋಗಲಿ. ಸಣ್ಣಪುಟ್ಟ ಟಪಾಲು ಪತ್ರಗಳು ಈ ಮೂಲಕ ಹಾಲಿ ಇರುವ ಕೊರಿಯರ್ ವ್ಯವಸ್ಥೆಗಿಂತಲೂ ವೇಗವಾಗಿ ಗಮ್ಯ ತಲುಪುತ್ತವೆ.
* ಪಾರ್ಸೆಲ್ ಅಥವಾ ಗೂಡ್ಸ್ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಲು ಏಜೆಂಟರ ಬದಲು ಕಾರ್ಪೋರೇಟ್ ಸ್ವರೂಪದ ಪ್ರತಿನಿಧಿಗಳನ್ನು (ಪ್ರಮೋಟರ್ಸ್) ನೇಮಿಸಿ. ಅವರಿಗೆ ಆದಾಯ ಗುರಿ ನೀಡಿ.
* ಇಲಾಖೆ ಸಿಬ್ಬಂದಿಗೆ ಕನಿಷ್ಠ ಸೌಜನ್ಯದ ತರಬೇತಿ ಕೊಡಿಸಿ. ಹಾ ಇಲಾಖೆಯಲ್ಲಿರುವ ಅತ್ಯಂತ ಅಗತ್ಯದ ಸ್ಟೇಷನ್ ಮಾಸ್ಟರ್, ಮ್ಯಾನೇಜರ್, ಟಿಕೆಟ್ ಕೌಂಟರ್ ಸಿಬ್ಬಂದಿ, ಗಾರ್ಡ್‍ಗಳನ್ನು ತಕ್ಷಣ ನೇಮಿಸಿ.
* ಹಗಲು ಹೊತ್ತಿನಲ್ಲಿ ರಿಸರ್ವೇಷನ್ ಭೋಗಿಗೆ ಹತ್ತಿದ ಪ್ರಯಾಣಿಕರಿಂದ ಟಿಕೆಟ್ ತಪಾಸಣೆ ಮಾಡುವವರು ಹೆಚ್ಚುವರಿ ಮೊತ್ತ ವಸೂಲು ಮಾಡಿ ರಸೀದಿ ನೀಡುವ ಬದಲು ಸ್ವಲ್ಪ ಮೊತ್ತ ಪಡೆದು ಜೇಬಿಗಿಳಿಸುತ್ತಾರೆ. ಏನಿಲ್ಲವೆಂದರೂ ಒಬ್ಬ ಟಿಸಿ ಕನಿಷ್ಠ 1ರಿಂದ 2 ಸಾವಿರ ಕಮಾಯಿಸುತ್ತಾನೆ. ಅದಕ್ಕಾಗಿ ಹಗಲು ವೇಳೆ ಪ್ರಯಾಣಿಸುವವರಿಗೆ ವಿಧಿಸುವ ಹೆಚ್ಚುವರಿ ಮೊತ್ತದ ಪ್ರಮಾಣ ಇಳಿಸಿ. ಪ್ರಾಮಾಣಿಕವಾಗಿ ಹಣ ಪಾವತಿಸುವ ಮನೋಭಾವ ಪ್ರಯಾಣಿಕರಲ್ಲೂ ಮೂಡಲಿ. ಟಿಕೆಟ್ ತಪಾಸಣೆಕಾರರ ಮೇಲೆ ಹದ್ದಿನ ಕಣ್ಣಿಡಿ. ಇಂಥವರಿಂದ ದೊಡ್ಡ ಪ್ರಮಾಣದ ಆದಾಯ ಸೋರಿ ಹೋಗುತ್ತಿದೆ. ಇನ್ನು ಬೆಂಗಳೂರು- ಮೈಸೂರು ಮಾರ್ಗದಲ್ಲಂತೂ ಯಾವ ತಪಾಸಣೆಯೂ ಇರುವುದಿಲ್ಲ.
* ರೈಲುಗಳು, ನಿಲ್ದಾಣದಲ್ಲಿ ಹಾಕಿರುವ ಬೃಹತ್ ಜಾಹೀರಾತುಗಳ ಕೋಟ್ಯಂತರ ರೂಪಾಯಿ ಮೊತ್ತ, ಸ್ಟಾಲ್, ಕೆಟರಿಂಗ್ ಸರ್ವೀಸ್, ವಸತಿ ಕೊಠಡಿಗಳಿಂದ ಬಂದ ಆದಾಯವನ್ನೂ ಬಜೆಟ್‍ನಲ್ಲಿ ಪ್ರಕಟಿಸಿ.
* ನೀವು ನಾಲ್ಕು ಎಸ್‍ಗಳ ಬಗ್ಗೆ ಹೇಳಿದ್ದೀರಿ. ಸ್ಪೀಡ್(ವೇಗ), ಸರ್ವೀಸ್(ಸೇವೆ), ಸೆಕ್ಯೂರಿಟಿ(ಭದ್ರತೆ) ಮತ್ತು ಸೇಫ್ಟಿ (ಸುರಕ್ಷತೆ) ಅದಕ್ಕೆ ಇನ್ನೊಂದು ಎಸ್ (ಸ್ಯಾನಿಟೇಷನ್ (ನೈರ್ಮಲ್ಯ)) ಸೇರಿಸಿ. ರೈಲಿನ ಮೇಲೆ ಉಗಿಯುವ, ಮೂತ್ರ ಮಾಡುವ, ಗಲೀಜು ನರಪ್ರಾಣಿಗಳಿಗೆ ನಿರ್ದಾಕ್ಷಿಣ್ಯ ಹಿಂಸೆ ಕೊಡಲೇಬೇಕು. ನಿಲ್ದಾಣ, ರೈಲಿನ ಪಾವಿತ್ರ್ಯತೆ ಅರಿವಾಗಬೇಕು.
* ಇನ್ನು ರೈಲಿನಲ್ಲಿ ಯಾರು ಬೇಕಾದರೂ ಆಹಾರ ಪೂರೈಸುವಂತಿಲ್ಲ. ನಿಗದಿತ ಗುಣಮಟ್ಟ ಇದ್ದರೆ ಮಾತ್ರ ಅವಕಾಶ ಕೊಡಿ ( ಈಗಾಗಲೇ ಈ ಗುತ್ತಿಗೆ ನೀಡಿರುವುದರಲ್ಲಿಯೂ ಭ್ರಷ್ಟಾಚಾರದ ವಾಸನೆಯಿದೆ).

ಕರ್ನಾಟಕದ ಬಗ್ಗೆ ಮಾತು

* ಕರ್ನಾಟಕದಲ್ಲಿ ರೈಲು ಸೇವೆಯ ಮಹತ್ವ ಇನ್ನೂ ಪೂರ್ತಿಯಾಗಿ ಅರಿವಾಗಿಲ್ಲ. ಎಲ್ಲಿಗಾದರೂ ಪ್ರಯಾಣಿಸುವಾಗ ಮಾತ್ರ ರೈಲು ಇದೆಯೇ ಎಂದು ಕೇಳುತ್ತೇವೆ. ಅದರ ಮಹತ್ವ ಉತ್ತರ ಭಾರತದವರಿಗೆ, ಮುಂಬೈ, ತಮಿಳುನಾಡು ಅಥವಾ ಕೇರಳದವರಿಗೆ ಚೆನ್ನಾಗಿ ಗೊತ್ತು. ಅವರಿಗೆ ರೈಲು ಕೇವಲ ವಾಹನವಲ್ಲ. ಜೀವನದ ಒಂದು ಭಾಗ. ಅದು ನಮ್ಮಲ್ಲಿಯೂ ಬರಬೇಕಾದರೆ ಆ ಪ್ರಮಾಣದಲ್ಲಿ ರೈಲು ಸೇವೆ ವಿಸ್ತರಣೆಗೊಳ್ಳಬೇಕು. ಅದು ನಿಮ್ಮ ಅವಧಿಯಲ್ಲಿ ಆಗಲಿ. ತವರು ರಾಜ್ಯದ ಪ್ರೇಮ ಹೆಚ್ಚು ಇರಲಿ. ಅದನ್ನು ಬೇಕಿದ್ದರೆ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಂದ ಕಲಿಯಿರಿ.
* ನೀವು (ಅಥವಾ ಯಾರೇ ಮಂತ್ರಿಗಳು ಬಂದರೂ) ಬಜೆಟ್ ಮಾಡುವ ಮುನ್ನ ಪ್ರಯಾಣಿಕರ ಜತೆ ಚರ್ಚಿಸಿದ್ದೀರಾ? ಅಂಥದ್ದೊಂದು ಪ್ರಯತ್ನ ಯಾರೂ ಮಾಡಿದಂತಿಲ್ಲ. ಎಲ್ಲ ಸಂಸದರು ತಮ್ಮ ಕ್ಷೇತ್ರದ ರೈಲ್ವೆ ಸಲಹಾ ಸಮಿತಿಯ ಅಧ್ಯಕ್ಷರು/ ಸದಸ್ಯರು ಆಗಿರುತ್ತಾರೆ. ಆದರೆ, ಬಹುತೇಕವು ಕಾಟಾಚಾರದ ಸಭೆಗಳಾಗಿರುತ್ತವೆ. ಅಥವಾ ಶಿಷ್ಟಾಚಾರ ಪಾಲನೆ ಆಗುತ್ತವೆ.
ಗೌಡ್ರೇ. ಸಾಧ್ಯವಾದಷ್ಟು ರೈಲ್ವೆ ಸಲಹಾ ಸಮಿತಿಯಲ್ಲಿ ಕೇವಲ ಉದ್ಯಮಿಗಳು, ಗಣ್ಯರು, ಆಯಾ ಕ್ಷೇತ್ರದ ಸಂಸದರಿಗೆ ರೈಲ್ವೆ ಅಧಿಕಾರಿಗಳಿಗೆ ಬೇಕಾದವರು ಇರುತ್ತಾರೆ. ಬದಲಾಗಿ ನಿತ್ಯ ಬಳಕೆದಾರರು, ಜನಸಾಮಾನ್ಯರನ್ನು ಸೇರಿಸಿ. ದೇಶದ ಎಲ್ಲ ಭಾಗಗಳಲ್ಲಿ ಪ್ರಯಾಣಿಕರೇ ಕಟ್ಟಿಕೊಂಡ ಪರಿಣಾಮಕಾರಿ ಪ್ರಯಾಣಿಕರ ಸಂಘಟನೆಗಳಿವೆ. ನೀವು ಅವರ ಸಭೆಯನ್ನೂ ಕರೆದು ಸಲಹೆ ಸ್ವೀಕರಿಸಿ. ಅಥವಾ ನಿಮ್ಮ ಪ್ರತಿನಿಧಿಗಳು ಆ ಕೆಲಸ ಮಾಡಲಿ. ಪ್ರಯಾಣಿಕರ ಸಂಘಟನೆ/ ಹೋರಾಟ ಸಮಿತಿಗಳು ಕೇವಲ ದೂರು ನೀಡಲು, ಮನವಿ ಸಲ್ಲಿಸಲಷ್ಟೇ ಸೀಮಿತವಾಗುತ್ತಿವೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಖಂಡಿತ ನಿಮಗೇನೂ ನಷ್ಟವಿಲ್ಲ. ಬದಲಾಗಿ ಇಲಾಖೆಗೇ ಲಾಭವಿದೆ.
* ಕರ್ನಾಟಕದಲ್ಲಿ ರೈಲು ಸೇವೆ ವಿಸ್ತರಣೆಗೆ ವಿಪುಲ ಅವಕಾಶ ಇದೆ. ಮೊದಲು ಎಲ್ಲ ಹಳಿಗಳನ್ನು ದ್ವಿಪಥಗೊಳಿಸಿ. ಹೊಸ ಮಾರ್ಗ ರೂಪಿಸುವಾಗ ದ್ವಿಪಥ ವಿನ್ಯಾಸದಲ್ಲೇ ಘೋಷಣೆ ಹೊರಡಿಸಿ. ಭೂಸ್ವಾಧೀನಕ್ಕೆ ಅನುಕೂಲ. ಇಲ್ಲವಾದರೆ ಮತ್ತೊಮ್ಮೆ ಭೂಸ್ವಾಧೀನ ಮಾಡಬೇಕಾಗುತ್ತದೆ. ಈಗಾಗಲೇ ದ್ವಿಪಥ ಘೋಷಣೆ ಮಾಡಿರುವ, ನನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳು ( ಕಾರಣ ಹುಡುಕಿದರೆ ಕ್ಷುಲ್ಲಕವಾದವುಗಳೂ ಇವೆ) ನಿಮ್ಮ ಅವಧಿಯಲ್ಲಿ ಪೂರ್ಣಗೊಳ್ಳಲಿ. (ಉದಾಹರಣೆಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ -ಆಂಧ್ರಪ್ರದೇಶದ ಮೆಹಬೂಬ್‍ನಗರದ 280 ಕಿ.ಮೀ ಅಂತರದ ರೈಲು ಮಾರ್ಗ ಕಾಮಗಾರಿ ಆರಂಭವಾಗಿ ಕೇವಲ 17 ವರ್ಷಗಳಷ್ಟೇ ಆಗಿವೆ!! ಬಹುಶಃ ಮುಂದಿನ ತಲೆಮಾರಿನ ವೇಳೆಗೆ ಪೂರ್ಣವಾದೀತು. ಬೆಂಗಳೂರು-ಮೈಸೂರು ಕ್ರಮಿಸಲು ಈಗ 4 ಗಂಟೆ ಆಗುತ್ತದೆ. ಬಸ್‍ನಲ್ಲಿ ಎರಡೂವರೆ ಗಂಟೆ ದಾರಿ. ಈ ಮಾರ್ಗ ದ್ವಿಪಥವಾಗಲು ಟಿಪ್ಪುವಿನ ಶಸ್ತ್ರಾಗಾರ ಅಡ್ಡಿಯಾಗಿದೆ. ಇದರ ಹಿಂದೆ ಹಲವಾರು ಮುಖಗಳಿವೆ. ದಾವಣಗೆರೆ- ತುಮಕೂರು ನೇರ ರೈಲು ಮಾರ್ಗ ದ್ವಿಪಥ ಕಾಮಗಾರಿಯೇನೋ ನಡೆಯುತ್ತಿದೆ. ನಿಮ್ಮ ಅವಧಿಯಲ್ಲಿ ಪೂರ್ಣವಾಗಲಿ) ಹೊಸಪೇಟೆ- ಹರಪನಹಳ್ಳಿ- ಹರಿಹರ ಲಿಂಕ್ ಮಾಡುವ ಕೆಲಸವಾಗಲಿ. ಆಗ ಬಳ್ಳಾರಿ- ಕೊಪ್ಪಳದಿಂದ ಬೆಂಗಳೂರಿಗೆ ಹೋಗುವ ಪ್ರಯಾಣದ ಅವಧಿ ಸುಮಾರು 3 ಗಂಟೆ ಕಡಿಮೆಯಾಗಲಿದೆ. ಇಲ್ಲಿ ಹರಿಹರ ಕೊಟ್ಟೂರು ರೈಲು ಓಡುತ್ತಿದೆ. ಹೊಸಪೇಟೆಗೆ ಹಳಿ ಹಾಕಬೇಕು.

ಸಮೀಕ್ಷೆ ನಡೆದ ಮಾರ್ಗಗಳು...

* ಬೈಂದೂರು- ಮಂಗಳೂರಿಗೆ ದ್ವಿಪಥವಾಗುವ ಪ್ರಸ್ತಾವ ಎಲ್ಲಿವರೆಗೆ ಬಂದಿದೆಯೋ ಗೊತ್ತಿಲ್ಲ. ಉಡುಪಿ ರೈಲು ನಿಲ್ದಾಣ ನಗರದ ಹೃದಯ ಭಾಗಕ್ಕೆ ಹತ್ತಿರವಾಗಬೇಕು. ಹೀಗಾದರೆ ಮಂಗಳೂರು- ಉಡುಪಿ- ಕುಂದಾಪುರಕ್ಕೆ ಎಕ್ಸ್‍ಪ್ರೆಸ್ ಬಸ್‍ಗಳ ಅವಲಂಬನೆ ತಪ್ಪುತ್ತದೆ. ಬಹು ಬೇಡಿಕೆಯ ಮುಂಬೈ- ಕನ್ಯಾಕುಮಾರಿಗೆ ಇನ್ನಷ್ಟು ರೈಲು ಓಡಿಸಬಹುದು.
* ಬೈಂದೂರು- ಕೊಲ್ಲೂರು- ಕುಂದಾಪುರ- ಹೆಬ್ರಿ- ಕಾರ್ಕಳ- ಮೂಡಬಿದ್ರೆ- ಬಿ.ಸಿ. ರಸ್ತೆ ಹೊಸ ಮಾರ್ಗ ಸಮೀಕ್ಷೆ ಆಗಿದೆ. ಕಾಮಗಾರಿ ಆರಂಭಿಸಿ.
* ಶಿವಮೊಗ್ಗ - ಹೊನ್ನಾಳಿ- ಹರಿಹರ ಮಾರ್ಗ ಬೇಗನೆ ಆಗಲೇಬೇಕು. ಹಾಗೆಯೇ ತಾಳಗುಪ್ಪದಿಂದ ಮುಂದೆ ಉತ್ತರ ಕನ್ನಡಕ್ಕೆ ಸಂಪರ್ಕ ಒದಗಿಸುವ ಯೋಜನೆ ಮಾಡಿದರೆ ಒಳ್ಳೆಯದು. ಮಧ್ಯಕರ್ನಾಟಕವೇನೋ ಪರ್ವಾಗಿಲ್ಲ. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ರೈಲು ಸೇವೆಗೆ ಹೆಚ್ಚು ಒತ್ತು ಬೇಕು.

ಮುಗಿಸುವ ಮುನ್ನ...

ಗೌಡ್ರೆ, ರಾಜಕೀಯ, ಆಡಳಿತದಲ್ಲಿ ಮುತ್ಸದ್ದಿತನ ಇದೆ ಎಂದು ಭಾವಿಸಿ ಈ ಸಲಹೆ ಕೊಟ್ಟಿದ್ದೇನೆ. ಇನ್ನು ರೈಲ್ವೆ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದ ನಿಮಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಮೋದಿಯವರ ವೇಗದ ಜತೆಗೆ ನಿಜವಾದ ಕಾಳಜಿಯುಳ್ಳ ಜನಪ್ರತಿನಿಧಿಗೆ ಇದೇನೂ ಕಷ್ಟವಾಗಲಿಕ್ಕಿಲ್ಲ. ಆದಾಯ ಸೋರಿಕೆ ತಡೆಗಟ್ಟಲು ಹಣಕಾಸು ಬೇಕಾಗಿಲ್ಲ. ಮೇಲೆ ಹೇಳಿದವುಗಳಲ್ಲಿ ಎಲ್ಲವನ್ನೂ ಮಾಡುತ್ತೀರಿ ಎಂದೂ ನಾನು ನಂಬಿಲ್ಲ. ಆದರೆ, ಇಚ್ಛಾಶಕ್ತಿಯಿದ್ದರೆ ಕೆಲವನ್ನಾದರೂ ಈಡೇರಿಸಬಹುದು. ಅದರಲ್ಲೂ ದರ ಏರಿಕೆ ಮಾಡದೇ ಇರಬಹುದು. ಒಬ್ಬ ಸಾಮಾನ್ಯ ಪ್ರಯಾಣಿಕನಾಗಿ ಕಂಡದ್ದು, ಕೇಳಿದ್ದನ್ನು ಬರೆದಿದ್ದೇನೆ. ಒಂದಿಷ್ಟು ನಿಮ್ಮ ಕಿವಿಗೆ/ ಮನಸ್ಸಿಗೆ ಬಿದ್ದೀತು ಎಂದು ಭಾವಿಸಿದ್ದೇನೆ.
                                             ತಮ್ಮ ವಿಶ್ವಾಸಿ
                                         ಶರತ್ ಹೆಗ್ಡೆ, ಕಡ್ತಲ  

Thursday, 8 May 2014

ಗೋಪಾಲಣ್ಣನ ಪುಟ್ಟ ಸೈಕಲ್ ಮೇಲೆ ಕಳೆದ ಬಾಲ್ಯ

ವರು ಗೋಪಾಲಣ್ಣ. ಕಡ್ತಲದಲ್ಲಿ ನನ್ನ ಹಾಗೂ ನನಗಿಂತ ಒಂದು ದಶಕದ ಹಿರಿಯ ತಲೆಮಾರುಗಳು ನೆನಪಿಡಲೇಬೇಕಾದ ನನ್ನೂರಿನ ಜೀವಂತ ಪಾತ್ರ. ನಮ್ಮ ಬಾಲ್ಯಗಳೆಲ್ಲಾ ಗೋಪಾಲಣ್ಣನ ಮುಂದೆಯೇ ಸುಂದರವಾಗಿ ಸಾಗಿವೆ. ಅವರ ಮೋಟು ಸೈಕಲಿನ ಪೆಡಲಿನ ಮೇಲೆ ನಮ್ಮ ಬಾಲ್ಯದ ಪುಟ್ಟ ಹೆಜ್ಜೆಗಳಿವೆ. ಮೊನ್ನೆ ಊರಿಗೆ ಹೋದಾಗ ಗೋಪಾಲಣ್ಣ ಹಾಗೂ ಅವರ ಪುಟ್ಟ ಮೋಟು ಸೈಕಲ್ಲಿನ ಭೇಟಿಯಾಯಿತು.


ಬಾಲ್ಯ ಕಳೆದ ಸೈಕಲ್‍ ಇದು

ಸೈಕಲ್‌ ಇನ್ನೂ ಇದೆ. ವಯಸ್ಸು ಮುಪ್ಪಾಗಿದ್ದರಿಂದ ‘ಮೂಳೆ ಸವೆದು’ ಮೂಲೆ ಸೇರಿದೆ. ಗೋಪಾಲಣ್ಣನ ಬಳಿ ಮೋಟು ಸೈಕಲ್ಲಿನ ಬಗ್ಗೆ ಕೇಳಿದೆ. ‘ಹೋ ನನ್ನ ನೆನಪಿದೆಯಾ ಮಾರಾಯ ನಿನಗೆ?’ ಎಂದು ಕೇಳುತ್ತಾ ಅದು ಗೋಪಾಲಣ್ಣನ ಕೈ ಹಿಡಿದು ಮೆಲ್ಲನೆ ಹೊರ ಬಂದು ಮೈ ಕೊಡವಿ ಅಂಗಡಿ ಮುಂದೆ ನಿಂತಿತು.
ಹೌದು ಮೋಟು ಸೈಕಲ್ಲು ನಮ್ಮ ಬಾಲ್ಯದ ಗೆಳೆಯ. ಅದರ ಹಿಂದೆ ಚೆಂದದ ಬಾಲ್ಯದ ನೆನಪು ಇದೆ. ಅದನ್ನು ಓಡಿಸುವುದೊಂದು ಪ್ರತಿಷ್ಠೆ. ರೋಲ್‌ ಇಲ್ಲದ ಪುಟ್ಟ ಸೈಕಲ್‌ ನಮಗೆ ಸೈಕಲ್‌ ಓಡಿಸುವುದನ್ನು ಹೇಳಿಕೊಟ್ಟ ಐರಾವತ.
ಅಂದು ನಮಗಿದ್ದದ್ದು ಕಡ್ತಲದ ಶಾಲಾ ಮೈದಾನ ಎಂಬ ಇಂಟರ್‌ನ್ಯಾಷನಲ್‌ ಸ್ಟೇಡಿಯಂ!. ಅದಕ್ಕೆ ಆಗ ಆವರಣ ಇರಲಿಲ್ಲ. ಅಲ್ಲಿ ಸೈಕಲ್‌ ಓಡಿಸುವ ಸಂಭ್ರಮವೇ ಬೇರೆ. ಮೊದಲು ತಳ್ಳಿಕೊಂಡು, ಹಿಂದೊಬ್ಬ ಆಧಾರವಾಗಿ ಹಿಡಿದುಕೊಂಡು ನಡೆಯುತ್ತಾ, ಕಾಲಿನಿಂದ ಪೆಡಲ್‌ ತುಳಿಯುತ್ತಾ ಮುಂದೆ ಸಾಗುತ್ತಿದ್ದಂತೆಯೇ ಅಸಾಧ್ಯವಾದದ್ದನ್ನು ಸಾಧಿಸಿದೆವೇನೋ ಎಂಬ ಪ್ರತಿಷ್ಠೆಯ ಸಂಭ್ರಮ. ಆಗಿನ ಕಾಲಕ್ಕೆ ಸೈಕಲ್‌ ಕೂಡಾ ನಮ್ಮ ಪಾಲಿಗೆ ಪ್ರತಿಷ್ಠೆಯೇ. ಈಗಿನವರಿಗೆ ಬೈಕ್‌ ಕೂಡಾ ಕ್ಯಾರೇ ಇಲ್ಲ ಬಿಡಿ.
ಮೋಟು ಸೈಕಲ್ಲು ಏರಿಕೊಂಡು ವೇಗ ಹೆಚ್ಚಿಸಿ ಅಲ್ಲಲ್ಲಿ ಪಲ್ಟಿ ಹೊಡೆದು ಬಿದ್ದಿದ್ದೇವೆ. ಮತ್ತೆ ಸಾವರಿಸಿಕೊಂಡು ಎದ್ದು ಮತ್ತಷ್ಟು ವೇಗವಾಗಿ ಓಡಿಸಿದ್ದೇವೆ. ಕಡ್ತಲ, ಮುಳ್ಕಾಡು, ಎಳ್ಳಾರೆ ಹೀಗೆ ಸುತ್ತಮುತ್ತಲಿನ ಹಳ್ಳಿ ಸುತ್ತಿದ್ದೇವೆ... ಹೀಗೆ ಮೋಟು ಸೈಕಲ್‌ನ ಸವಾರಿಯ ನೆನಪುಗಳು ಒಂದೆರಡಲ್ಲ.
1982–84ರ ಆಸುಪಾಸು ಮೋಟು ಸೈಕಲ್‌ನ ಜನನ ಕಾಲ. ಸುಮಾರು 20 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದೆ. ಪ್ರತಿ ವರ್ಷ ಗೋಪಾಲಣ್ಣ ಬೇರೆ ಸೈಕಲ್‌ಗೆ ಬಳಿಯಲು ತಂದು ಉಳಿದ ಪೈಂಟ್‌ ಬಳಿದುಕೊಂಡು ಲಕಲಕ ಹೊಳೆಯುತ್ತಿತ್ತು. ನಮಗೆ ಅದೇ ಆಕರ್ಷಣೆ. ಗೋಪಾಲಣ್ಣನ ಸೈಕಲ್‌ ಅಂಗಡಿ ಎಂಬ ಪ್ರಯೋಗ ಶಾಲೆ ನಮ್ಮ ಕುತೂಹಲದ ಕೇಂದ್ರ. ಎಷ್ಟೇ ಹಳೆಯ ಗುಜಿರಿ ಸೈಕಲ್‌ ಇದ್ದರೂ ಅದನ್ನೂ ಪೂರ್ತಿ ಕಿತ್ತುಹಾಕಿ, ಕೆರೆದು ರೆಡ್‌ ಆಕ್ಸೈಡ್ ಕೊಟ್ಟು ಮೇಲೊಂದು ಬಣ್ಣ ಬಳಿದು ಹೊಚ್ಚ ಹೊಸ ಸೈಕಲ್‌ ಸಿದ್ಧಪಡಿಸುತ್ತಾರೆ.

ಬೆಕ್ಕುಗಳ ಸೆಲೂನ್‌!!!

ಸೈಕಲ್‌ಗಳ ಮಡ್‌ ಗಾರ್ಡ್‌ ಮೇಲಿನ ಲೈನಿಂಗ್‌ಗೆ ಬಣ್ಣ ಬಳಿಯುವ ಚೆಂದ ನೋಡಬೇಕು. ಸೈಕಲ್‌ಗಳ ಮಡ್‌ಗಾರ್ಡ್‌ಗಳ ಮೇಲೆ ಗೋಲ್ಡನ್‌ ಲೈನ್‌ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಗೋಪಾಲಣ್ಣ ಬಿಡಿಸುತ್ತಾರೆ. ಅವರ ಬಳಿ ಪಾಯಿಂಟ್‌ ಬ್ರಷ್‌ ಇರಲಿಲ್ಲ. ಅಂಗಡಿಯ ಆಸುಪಾಸು ಓಡಾಡುವ ಬೆಕ್ಕುಗಳನ್ನು ಹಿಡಿದು ನಿಧಾನಕ್ಕೆ ಮೀಸೆ ಕತ್ತರಿಸಿಬಿಡುತ್ತಾರೆ. ಅದನ್ನು ನೀಟಾಗಿ ಪುಟ್ಟ ಸೈಕಲ್‌ ಕಡ್ಡಿಗೆ ಕಟ್ಟಿದರೆ ಪಾಯಿಂಟ್‌ ಬ್ರಷ್‌ ರೆಡಿ. ಅಂದು ಪಕ್ಕದಲ್ಲೇ ರಾಘವ ಹೆಗ್ಡೇರ ಮುಳಿಹುಲ್ಲು ಮಾಡಿನ ಹೋಟೆಲ್‌ ಇತ್ತು. ಅಲ್ಲಿಯೂ ಒಂದೆರಡು ಬೆಕ್ಕುಗಳಿದ್ದವು. ಅವುಗಳು ಇತ್ತ ಸುಳಿದಾಡಿದರೆ ಮೀಸೆ ಕಟ್‌ ಗ್ಯಾರಂಟಿ. ಬಹುಶಃ ಮಾರುಕಟ್ಟೆಯಲ್ಲಿ ಸಿಗುವ ಬ್ರಷ್‌ಗಳಿಗಿಂತಲೂ ಚೆಂದದ ಚಿತ್ತಾರ ಬೆಕ್ಕಿನ ಮೀಸೆಯಿಂದ ಮೂಡುತ್ತಿತ್ತು. ಈಗ ಹೋಟೆಲ್ಲೂ ಇಲ್ಲ. ಬೆಕ್ಕುಗಳೂ ಸುಳಿಯುವುದಿಲ್ಲ.
ಇದು ಸೈಕಲ್ಲಿನ ಕಥೆಯಾಯಿತು. ಕಗ್ಗತ್ತಲ ರಾತ್ರಿಯಲ್ಲಿ ತಡವಾಗಿ ಮನೆಗೆ ಸೇರುವವರಿಗೆ, ಕಡ್ತಲದಲ್ಲಿ ನಡೆಯುವ ಹಾಲಾಡಿ, ಮಡಾಮಕ್ಕಿ ಮೇಳಗಳ ಯಕ್ಷಗಾನ ಬಯಲಾಟಕ್ಕೆ ಹೋಗುವವರಿಗೆ ಗೋಪಾಲಣ್ಣನ ಅಂಗಡಿ ಹೊರಗೆ ನೇತುಹಾಕುವ ಹಳೇ ಟೈರುಗಳೇ ದಾರಿದೀಪ. ಅವುಗಳನ್ನು ಒಂದೆರಡು ಅಡಿಗೆ ಕತ್ತರಿಸಿ ಬೆಂಕಿ ಹಚ್ಚಿ ದಾರಿಯುದ್ದಕ್ಕೂ ದೊಂದಿಯೊಂದಿಗೆ ನಡುರಾತ್ರಿ ನಡೆಯುವ ‘ಕೊಳ್ಳಿ ದೆವ್ವ’ಗಳೂ ನಮ್ಮೂರಲ್ಲಿದ್ದವು. ಟೈರಿನ ದೊಂದಿಯ ಪ್ರಖರತೆ, ಕಟು ವಾಸನೆಗೆ ಯಾವ ಕಾಡು ಪ್ರಾಣಿ, ಕೀಟಗಳೂ ಹತ್ತಿರ ಬರಲಾರವು.
ಗೋಪಾಲಣ್ಣನಿಗೆ ನನ್ನದೂ ಸೇರಿದಂತೆ ಹಲವರ ಉಪದ್ರವೂ ಇತ್ತು. ಬಾಡಿಗೆ ಸೈಕಲ್‌ ಪಡೆದು ದಿನಗಟ್ಟಲೆ ಸತಾಯಿಸುವವರು, ಬೇಲಿ, ಪೊದೆಗಳೆಡೆ ಹಾಕಿದವರೂ ಇದ್ದರು. ಹಾ ಅಂದಹಾಗೆ ಗೋಪಾಲಣ್ಣನ ಸೈಕಲ್‌ಗೆ ನಮ್ಮೂರ ರುದ್ರಾಯ ಆಚಾರಿ ಅವರದ್ದು ಮೊದಲ ಬಾಡಿಗೆ ಬೋಣಿ ಅಂತೆ. ಅಂದು ಗಂಟೆಗೆ 50 ಪೈಸೆ ಬಾಡಿಗೆ ಇತ್ತು. ಈಗ ರುದ್ರಾಯ ರಿಕ್ಷಾ ಓಡಿಸುತ್ತಿದ್ದಾರೆ.
ಇನ್ನು ನನ್ನ ಸಮಕಾಲೀನರು ಸೈಕಲ್‌ ತೆಗೆದುಕೊಂಡು ಹೋಗುವುದು. ಎಲ್ಲಿಯೋ ಬೀಳುವುದು. ಕೈಕಾಲಿಗೆ ಗಾಯದ ಜತೆಗೆ ಸೈಕಲ್ಲನ್ನೂ ಬೆಂಡ್‌ ಮಾಡಿ ತರುತ್ತಿದ್ದರು. ಇನ್ನು ಕೆಲವು ಕಿಡಿಗೇಡಿಗಳು ಬೇಕೆಂತಲೇ ವೇಗವಾಗಿ ಓಡಿಸಿ ಥಟ್ಟನೆ ಬ್ರೇಕ್‌ ಹಾಕಿ ಚರ್ರನೆ ಟೈರ್‌ ಸವೆಸುತ್ತಿದ್ದರು. ಇದರಲ್ಲಿ ಗೋಪಾಲಣ್ಣನಿಗೆ ನಷ್ಟ ಉಂಟುಮಾಡಬೇಕು ಎಂಬ ಉದ್ದೇಶ ಹೊರತಾಗಿ ಬೇರೇನೂ ಇಲ್ಲ. ಇಂಥ ಘಟನೆಗಳನ್ನೂ ನೋಡಿದ್ದೇನೆ.
ನಾನೂ ಸೇರಿದಂತೆ ನನ್ನ ಗೆಳೆಯರು ಗೋಪಾಲಣ್ಣನ ಮೋಟು ಸೈಕಲನ್ನು ಕದ್ದೇ ಬಿಡುತ್ತಿದ್ದೆವು. ಪ್ರತಿ ಶನಿವಾರ ಗೋಪಾಲಣ್ಣ ಸೈಕಲ್‌ ಬಿಡಿ ಭಾಗಗಳನ್ನು ತರಲು ಕಾರ್ಕಳಕ್ಕೆ ಹೋಗುತ್ತಿದ್ದರು. ಬೆಳಿಗ್ಗೆ 11ರ ಸುಮಾರಿಗೆ ಹೊರಟರೆ ಅವರು ಬರುವುದು ಸಂಜೆಯೇ. ಅಂದು ಹೊಂಚು ಹಾಕಿ ಮೋಟು ಸೈಕಲನ್ನು ಕದ್ದುಬಿಡುತ್ತಿದ್ದೆವು. ಇದು ಗೋಪಾಲಣ್ಣನಿಗೂ ಗೊತ್ತಿತ್ತು. ಅದಕ್ಕೇ ಅವರು ಮೋಟು ಸೈಕಲ್‌ಗೆ ಬೀಗ ಹಾಕುತ್ತಿರಲಿಲ್ಲ. ಹೀಗೆ ಕದ್ದ ಸೈಕಲನ್ನು ಕಡ್ತಲದ ‘ಇಂಟರ್‌ ನ್ಯಾಷನಲ್‌ ಸ್ಟೇಡಿಯಂ’, ಮನೆ ಹತ್ತಿರದ ಪಡ್ಪು, ಗದ್ದೆ, ಗುಡ್ಡೆ ಬಯಲು ಎನ್ನದೇ ಓಡಿಸುತ್ತಿದ್ದೆವು. ಸಂಜೆ ಸುಸ್ತಾದ ಬಳಿಕ ಗೋಪಾಲಣ್ಣ ವಾಪಸಾಗುವ ಮೊದಲು ಅವರ ಅಂಗಡಿ ಮುಂದೆ ಸೈಕಲ್‌ ಇಟ್ಟುಬಿಡುತ್ತಿದ್ದೆವು.
ಹೀಗೆ ಗೋಪಾಲಣ್ಣನ ಸೈಕಲ್‌ನಲ್ಲಿ ಬಾಲ್ಯ ಸವೆಸಿದ ನಾವು ಕೊನೆಗೂ ಅವರ ನಿರಂತರ ಗ್ರಾಹಕರೂ ಆದೆವು. ಹೈಸ್ಕೂಲ್‌ ದಿನಗಳಲ್ಲಿ ಅಪ್ಪ ನನಗೆ ಕೊಡಿಸಿದ್ದ ಅಟ್ಲಾಸ್‌ ಗೋಲ್ಡ್‌ ಲೈನ್‌ ಸೂಪರ್‌ ಎಂಬ 22 ಇಂಚಿನ ಸೈಕಲ್‌ಗೆ ಗೋಪಾಲಣ್ಣನ ಅಂಗಡಿಯೇ ಸರ್ವೀಸ್‌ ಸ್ಟೇಷನ್‌. ವಾರಕ್ಕೊಮ್ಮೆ ಅದಕ್ಕೆ ಏನಾದರೂ ಕಾಯಿಲೆ ಬಂದರೆ ಅಥವಾ ಬರದಿದ್ದರೂ ಗೋಪಾಲಣ್ಣನ ಅಂಗಡಿ ಮುಂದೆ ಹಾಜರಾಗುತ್ತಿದ್ದೆ. ಗೋಪಾಲಣ್ಣ ತರುವ ಚೆಂದದ ಸೀಟು ಕವರ್‌, ರೋಲ್ ಕವರ್‌, ರಿಮ್‌ ಕ್ಲೀನರ್‌, ಬಣ್ಣ ಬಣ್ಣದ ಹಬ್‌ ಬ್ರಷ್‌, ಹ್ಯಾಂಡ್‌ ಕವರ್‌ ಹೀಗೆ ಒಂದಕ್ಕಿಂತ ಒಂದು ಚೆಂದದ ಆ್ಯಕ್ಸೆಸರಿಗಳನ್ನು ನೋಡುವುದು, ಕಿಣಿ ಕಿಣಿ, ಟ್ರಿಂಗ್‌ ಟ್ರಿಂಗ್‌ ಸದ್ದಿನ ಬೆಲ್‌ಗಳನ್ನು ಮುಟ್ಟಿ ಖುಷಿ ಪಡುವುದೇ ಕೆಲಸ. ದುಡ್ಡಿದ್ದರೆ ನನ್ನ ಸೈಕಲ್‌ಗೂ ಹಾಕಿ ಎನ್ನುವುದು, ಅದೇನೂ ಇದೇನು ಎಂದು ಕೇಳುತ್ತಾ ಕಾಡುವುದು... ಹೀಗೆ ಗೋಪಾಲಣ್ಣನಿಗೆ ನಾನು ಕಾಟ ಕೊಟ್ಟದ್ದು, ನನ್ನ ಎಲ್ಲ ಕುತೂಹಲಗಳಿಗೆ ಅವರು ಯಾವತ್ತೂ ಬೇಸರಿಸದೇ ಉತ್ತರಿಸಿದ್ದು ನಿತ್ಯ ನೆನಪು. ಅರ್ಜೆಂಟಿಗೆ ಸ್ಕ್ರೂಡ್ರೈವರ್‌, ಕಟ್ಟಿಂಗ್‌ ಪ್ಲೈಯರ್‌, ಸ್ಪಾನರ್‌ಗಳನ್ನೂ ಪಡೆಯುತ್ತಿದ್ದದ್ದೂ ಇತ್ತು.
 ಹೀಗೆ ಗೋಪಾಲಣ್ಣ ಕೇವಲ ಸೈಕಲ್‌ ರಿಪೇರಿಗಷ್ಟೇ ಸೀಮಿತವಾಗಲಿಲ್ಲ. ಫೋಟೋ ಫ್ರೇಮ್‌ ಕಟ್ಟುತ್ತಾರೆ. ಊರಿನ ಗಣೇಶೋತ್ಸವದ ಗಣೇಶನಿಗೆ ಹೂವಿನ ಅಲಂಕಾರ ಮಾಡುತ್ತಾರೆ. ಪುಟ್ಟ ಹುಡುಗರ ಜತೆ ಮಕ್ಕಳಾಗಿ ಬಿಡುತ್ತಾರೆ. ಅವರ ಮುಂದೆ ಬೆಳೆದ ಹುಡುಗರೆಲ್ಲ ಕಾರು ಬೈಕಿನಲ್ಲಿ ಭರ್ರನೆ ಸಾಗುತ್ತಾರೆ. ನಾನೂ ಸೇರಿದಂತೆ ಹಲವರು ಊರು ಬಿಟ್ಟಿದ್ದಾರೆ. ಹಾಗಿದ್ದರೂ ಗೋಪಾಲಣ್ಣ ಬದಲಾಗಿಲ್ಲ. ತಲೆಗೂದಲು ಸ್ವಲ್ಪ ಹಣ್ಣಾಗಿದ್ದು, ಕನ್ನಡಕ ಬಂದದ್ದು ಬಿಟ್ಟರೆ ಅವರ ಮುಗ್ದತೆ ಹಾಗೇ ಇದೆ. ಕೇವಲ ಮರದ ಗೂಡಿನಲ್ಲಿದ್ದ ಅಂಗಡಿ ಒಂದು ಕಟ್ಟಡದ ರೂಪ ಪಡೆದಿದೆ ಅಷ್ಟೆ.
ಇನ್ನು ಗೋಪಾಲಣ್ಣನ ವೈಯಕ್ತಿಕ ವಿಚಾರ ಹೇಳಲೇಬೇಕು.
ಗೋಪಾಲಣ್ಣ ಮೂಲತಃ ಮುನಿಯಾಲಿನವರು. ಓದಿದ್ದು 5ನೇ ಕ್ಲಾಸು. 1977, 78ರ ಅವಧಿಯಲ್ಲಿ ಮುಂಬೈ ಸೇರಿ ಕೆಲಕಾಲ ಪಾನ್‌ಷಾಪ್‌ ನಡೆಸಿದರು. ಯಾಕೋ ತವರು ಸೆಳೆಯಿತು. ವಾಪಸಾದರು. 1979ರ ಅವಧಿಯಲ್ಲಿ ತಮ್ಮ ಭಾವನ ನೆರವಿನಿಂದ ಕಡ್ತಲದಲ್ಲಿ ಪಾನ್‌ ಅಂಗಡಿ ತೆರೆದರು.
ಆ ವೇಳೆಯ ಕಡ್ತಲದ ಚಿತ್ರವನ್ನು ಹೇಳಲೇಬೇಕು. ಅಂದು ಸೂರ್ಯಣ್ಣ ಹೆಗ್ಡೆ ಅವರ ಏಕೈಕ ಪಾನ್‌ ಅಂಗಡಿ ಇತ್ತು. ಅದಿದ್ದದ್ದು ಈಗಿನ ಕೃಷ್ಣಪ್ರಸಾದ ಕಾಂಪ್ಲೆಕ್ಸ್‌ನ ಸ್ಥಳದಲ್ಲಿ. ಶೆಟ್ಟಿಬೆಟ್ಟು ಗೋವಿಂದ ನಾಯಕರ ಮನೆಯಲ್ಲಿ ದಿನಸಿ ಅಂಗಡಿ, ಉಳಿದಂತೆ ಕಡ್ತಲ ಪೂರ್ಣ ಕುಗ್ರಾಮ. ಈ ಅವಧಿಯ ಸರಿಸುಮಾರಿಗೆ ರಾಘವ ಹೆಗ್ಡೇರ ಮುಳಿಮಾಡಿನ ಹೋಟೆಲ್‌ ಎದ್ದುನಿಂತಿತು.
ಜೀವನೋಪಾಯಕ್ಕಾಗಿ ಈಗಿನ ಅಂಗಡಿಯ ಜಾಗದಲ್ಲೇ ಪುಟ್ಟ ಗೂಡು ಹಾಕಿ ಬೀಡಾ ಅಂಗಡಿ ತೆರೆದರು ನಮ್ಮ ಗೋಪಾಲಣ್ಣ. ಮುನಿಯಾಲಿನಿಂದ ಕಡ್ತಲದವರೆಗೆ ಅವರು ನಡೆದೇ ಬರುತ್ತಿದ್ದರಂತೆ. ಅದೂ ಬೆಳಿಗ್ಗೆ ಗದ್ದೆ ಕೆಲಸ ಮುಗಿಸಿ ಬರುವುದು. ಅದಾಗಲೇ ಅಲ್ಪ ಸ್ವಲ್ಪ ಸೈಕಲ್‌ ರಿಪೇರಿ ಮಾಡುತ್ತಿದ್ದರು. ಬಳಿಕ ಉಜಿರೆಯ ರುಡ್‌ಸೆಟ್‌ ಸಂಸ್ಥೆಯಲ್ಲಿ ಕೆಲಕಾಲ ಸೈಕಲ್‌ ರಿಪೇರಿ ಬಗ್ಗೆ ತರಬೇತಿ ಪಡೆದರು. ಕೊನೆಗೆ ಪಾನ್‌ ಬೀಡಾ ಜತೆ ಸೈಕಲ್‌ ರಿಪೇರಿಯೇ ಬದುಕಿನ ದಾರಿಯಾಯಿತು. ಮದುವೆಯಾದ ಬಳಿಕ 1996ರಿಂದ ಕಡ್ತಲದ ಸಿರಿಬೈಲಿನಲ್ಲಿ ಪುಟ್ಟ ಮನೆ ಕಟ್ಟಿ ಸಂಸಾರ ನಡೆಸುತ್ತಿದ್ದಾರೆ. ಅವರ ಪತ್ನಿ ನಾಟಿ ಚಿಕಿತ್ಸೆ ಬಲ್ಲವರು. ಗಿಡಮೂಲಿಕೆ ಔಷಧಿ ತಯಾರಿಸುತ್ತಾರೆ. ಹೀಗೆ ಗೋಪಾಲಣ್ಣನದ್ದು ಪುಟ್ಟ ಚೆಂದದ ಸಂಸಾರ.
ಗೋಪಾಲಣ್ಣ ಹೇಳುತ್ತಾರೆ, ‘ಈಗ ಸೈಕಲ್‌ ಅಂದರೆ ದೊಡ್ಡವರಿಗೆ ಅಲರ್ಜಿಯಾಗಿಬಿಟ್ಟಿದೆ. ಸರ್ಕಾರ ಶಾಲೆಗಳಿಗೆ ಸೈಕಲ್‌ ವಿತರಿಸಿರುವುದರಿಂದ ಸ್ವಲ್ಪ ಮಟ್ಟಿಗೆ ಮಕ್ಕಳು ಬೈಸಿಕಲ್‌ ಜೋಡಿಸಲು ಅಥವಾ ರಿಪೇರಿ ಮಾಡಿಸಲು ಬರುತ್ತಾರೆ. ಹೀಗಾಗಿ ಜೀವನಕ್ಕೆ ಪರ್ವಾಗಿಲ್ಲ’ ಎನ್ನುತ್ತಾರೆ.
1979–-80ರ ಆಸುಪಾಸಿನಲ್ಲಿ ನನ್ನ ಅಪ್ಪ ಸಹಿತ ಒಟ್ಟು ಆರು ಮಂದಿ ಬಳಿ ಸೈಕಲ್‌ ಇದ್ದವು. ಶೆಟ್ಟಿಬೆಟ್ಟು ಗೋವಿಂದ ನಾಯಕ್‌, ಸುಬ್ರಾಯ ನಾಯಕ್‌, ದೇವೇಂದ್ರ ನಾಯಕ್‌, ಸುಂದರ ಹೆಗ್ಡೆ ಹಾಗೂ ಬೊಬ್ಬರ್ಯ ದೇವಸ್ಥಾನದ ಅರ್ಚಕರಾಗಿದ್ದ ಸುಬ್ರಾಯ ಜೋಯಿಸರು ಅಂದಿನ ಸೈಕಲ್‌ಗಳ ಪ್ರತಿಷ್ಠಿತ ಮಾಲೀಕರು. ಹಾಗೆಯೇ ಗೋಪಾಲಣ್ಣನ ಖಾಯಂ ಗಿರಾಕಿಗಳೂ ಹೌದು.
ಇಂಥ ಗೋಪಾಲಣ್ಣನ ಅಂಗಡಿಯಲ್ಲಿ ದೇವರ ದಯೆಯಿಂದ ಇದುವರೆಗೆ ಕಳ್ಳತನ ಆಗಿಲ್ಲ. ಆಗುವುದೂ ಬೇಡ. ಅವರ ಆಸುಪಾಸಿನ ಅಂಗಡಿಗಳಲ್ಲೇ ಕಳವು ನಡೆದಿದೆ. ಬೊಬ್ಬರ್ಯ ಅವರ ಅಂಗಡಿ ಕಾದಿದ್ದಾನೆ. ಎಲ್ಲವೂ ಚೆಂದವಾಗಿತ್ತು. ಎರಡು ವರ್ಷಗಳ ಹಿಂದೆ ವಿಶಾಲ್‌ ಬಸ್ಸು ನೆಲ್ಲಿಕಟ್ಟೆಯ ಬಳಿ ಗುಜ್ಜೆಮರಕ್ಕೆ ಡಿಕ್ಕಿ ಹೊಡೆದಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಗೋಪಾಲಣ್ಣ ಎದುರಿನ ಗಾಜು ಒಡೆದು ಗುಜ್ಜೆ ಮರದ ಕೊಂಬೆಗೆ ಸಿಲುಕಿ ಕೆಳಗೆ ಬಿದ್ದಿದ್ದರು.
ಇವರೇ ನಮ್ಮ ಗೋಪಾಲಣ್ಣ
ಕತ್ತು– ಭುಜದ ನಡುವಿನ ಮೂಳೆಗೆ ಪೆಟ್ಟಾಗಿ ಕೆಲಕಾಲ ದುಡಿಮೆಗೆ ಕುತ್ತು ಬಂದಿತ್ತು. ಅದೊಂದು ದುರ್ಘಟನೆ ಬಿಟ್ಟರೆ ಉಳಿದೆಲ್ಲ ಸಂದರ್ಭ ಗೋಪಾಲಣ್ಣನ ಮುಗ್ದತೆ– ಪ್ರಾಮಾಣಿಕತೆಗೆ ಒಲಿದ ದೇವರು ಅವರ ಜತೆಗಿದ್ದ.
ಗೋಪಾಲಣ್ಣನ ಸೈಕಲ್‌ ನೀವೂ ಏರಿದ್ದೀರಾ? ನಿಮ್ಮ ಬಾಲ್ಯವೂ ಅವರ ಸೈಕಲ್‌ ಮೇಲಿತ್ತಾ? ನೆನಪಿದೆಯಾ? ಹಾಗಿದ್ದರೆ ಮಾತನಾಡಿ, ಮೊಬೈಲ್‌: 97316 88804

Friday, 14 March 2014

ಟಿವಿ –9 ಪ್ರಕರಣ: ಏಟು ಬುಡಕ್ಕೆ ಬಿದ್ದರೆ ಸದ್ದೇ ಬೇರೆ

ಟು ಬುಡಕ್ಕೆ ಬಿದ್ದರೆ ಎಂಥ ಸದ್ದು ಬರುತ್ತದೆ ಎಂಬುದಕ್ಕೆ ಟಿವಿ–9ನ ಕುಟುಕು ಕಾರ್ಯಾಚರಣೆ ಪ್ರಸಂಗ ನೋಡಿದರೆ ಗೊತ್ತಾಗುತ್ತದೆ.
ಅಂದಹಾಗೆ ಈ ಬರಹ ಟಿವಿ–9ಗೆ ಮಾತ್ರವಲ್ಲ. ಪತ್ರಕರ್ತರೆಂಬ ಹುದ್ದೆಯ ಮುಖವಾಡ ಧರಿಸಿರುವ ನಮ್ಮಂಥ ಎಲ್ಲ ನೌಕರರಿಗೆ ಅನ್ವಯಿಸುವ ಅನುಭವ ಆಧಾರಿತ ಮಾತು.
ನೋಡಿ ಟಿವಿ –9 ಅಷ್ಟೇ ಅಲ್ಲ ಇತರ ಸುದ್ದಿವಾಹಿನಿ, ದಿನಪತ್ರಿಕೆಯ ಪತ್ರಕರ್ತರು ಅಲ್ಲಲ್ಲಿ ಏಟು ತಿಂದ, ಅವಮಾನಕ್ಕೊಳಗಾದ ಪ್ರಕರಣಗಳು ದಿನನಿತ್ಯ ಎಂಬಂತೆ ವರದಿಯಾಗುತ್ತವೆ. ಇಂಥ ಪ್ರಕರಣಗಳಲ್ಲಿ ಆಯಾ ಸಂಸ್ಥೆಗಳು ವರದಿಗಾರರ ಸುರಕ್ಷತೆ ಬಗ್ಗೆ ಎಷ್ಟು ಕಾಳಜಿ ವಹಿಸಿವೆ? ಪತ್ರಿಕೆಯಾದರೆ ಅಬ್ಬಬ್ಬಾ ಎಂದರೆ ಒಂದು ಕಾಲಂ ಸುದ್ದಿ, ಟಿವಿಯಾದರೆ ಒಂದು ಹತ್ತಿಪ್ಪತ್ತು ಸೆಕೆಂಡ್‌ಗಳ ದೃಶ್ಯಗಳ ಓಟ ಅಷ್ಟೇ. ಮುಂದೇನಾಯಿತು? ಗೊತ್ತೇ ಇಲ್ಲ. ಕನಿಷ್ಠ ದೂರು ದಾಖಲೆ ಮಾಡಿದ್ದಾದರೂ ಎಷ್ಟಿದೆ?
ಕೆಲವು ಪ್ರಸಂಗ ಉದಾಹರಿಸುತ್ತೇನೆ.
2006ರಲ್ಲಿ ಮಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರನ್ನು ಮುಸ್ಲಿಂ ಯುವಕರು ಪ್ರವಾಸ ಕರೆದೊಯುತ್ತಿದ್ದಾರೆ ಎಂದು ಸುದ್ದಿ ತಿಳಿದು ಹಿಂದೂ ಸಂಘಟನೆಗಳು ಆ ಪ್ರವಾಸಿ ಬಸ್ಸನ್ನು ತಡೆಗಟ್ಟಿ ಹಾನಿ ಮಾಡಿದರು. ಯುವಕರ ಮೇಲೆ ಹಲ್ಲೆಯೂ ನಡೆಯಿತು. ಘಟನೆಯನ್ನು ಚಿತ್ರಿಸಿದ ಸ್ಥಳೀಯ ಟಿವಿ ಕ್ಯಾಮೆರಾಮನ್‌ಗೆ ಚೂರಿಯಿಂದ ಇರಿದರು. ಕ್ಯಾಮೆರಾ ಕಸಿದರು. (ಅದನ್ನು ನೇತ್ರಾವತಿ ನದಿಗೆ ಎಸೆದಿದ್ದಾರೆ ಎಂಬ ಸುದ್ದಿಯೂ ಇದೆ) ಕೊನೇ ಪಕ್ಷ ಆ ಹುಡುಗ ದೂರು ದಾಖಲಿಸುವ ಧೈರ್ಯ ಮಾಡಲಿಲ್ಲ. ಏಕೆಂದರೆ ನಾಳಿನ ಬಗ್ಗೆ ಅವನಿಗೆ ಧೈರ್ಯವಿಲ್ಲ.
* ದಾವಣಗೆರೆಯಲ್ಲಿ ಕಾರಿನೊಳಗಿಟ್ಟಿದ್ದ ಲ್ಯಾಪ್‌ಟಾಪ್‌ ಕಳವಾದಾಗ ಅದರ ಜವಾಬ್ದಾರಿ ಹೊರಿಸಿ ವರದಿಗಾರನ ಸಂಬಳದಿಂದ ಕಡಿತಗೊಳಿಸಿ ಕೊನೆಗೆ ಆತನನ್ನೇ ಹೊರದಬ್ಬಿದ ಘಟನೆಯೂ ನಡೆದಿದೆ.
* ಹುಬ್ಬಳ್ಳಿಯಲ್ಲಿ ಕೆಪಿಎಸ್‌ಸಿ ಪರೀಕ್ಷಾ ಅಕ್ರಮಗಳು ನಡೆಯುತ್ತಿದ್ದಾಗ ವಿಡಿಯೋ ಚಿತ್ರಿಸಿದ ನನ್ನ ಸಹಪಾಠಿ ಗೆಳೆಯನ ಮೇಲೆ ಹಲ್ಲೆ ನಡೆಯಿತು. ಆತ ದೂರು ನೀಡಲು ಮುಂದಾದಾಗ ಸಂಸ್ಥೆಯವರೇ ತಡೆದು, ರಾಜಿಯಾಗು ಮಾರಾಯ. ಇಲ್ಲದ ರಗಳೆಯೇಕೆ ಎಂದು ಮನವೊಲಿಸಿದ್ದರು. ಆದರೆ ಅಕ್ರಮ ಎಸಗಿದವರು ಸುಮ್ಮನಿರದೆ ಇಲ್ಲದ ಕೇಸುಗಳನ್ನು ಜಡಿದರು. ಕೊನೆಗೂ ಈತನೊಬ್ಬನೇ ಸ್ವಂತ ಖರ್ಚಿನಿಂದ ಕೋರ್ಟ್‌ಗೆ ಅಲೆದಾಡಿ ಪ್ರಕರಣ ಬಗೆಹರಿಸಿಕೊಳ್ಳಬೇಕಾಯಿತು. ಆತ ಆಗ ಇದೇ ಟಿವಿ–9 ಸಂಸ್ಥೆಯಲ್ಲಿದ್ದ.
* ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಸಚಿವ ಶಿವರಾಜ ತಂಗಡಗಿ ಅವರ ಸಹೋದರನ ಮನೆಯ ಮುಂದೆ ‘ವಾಕ್‌ಥ್ರೂ’ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ಪಬ್ಲಿಕ್‌ ಟಿವಿಯ ವರದಿಗಾರ ಮುಕ್ಕಣ್ಣನಿಗೆ ತಂಗಡಗಿ ಬೆಂಬಲಿಗರು ಹಲ್ಲೆ ನಡೆಸಿದರು. ಆದರೆ, ಅಂದೂ ಮುಕ್ಕಣ್ಣ ಅಸಹಾಯಕನಾಗಿದ್ದ. ಸಂಜೆ ಟಿವಿಯ ಮುಖ್ಯಸ್ಥ ಎಚ್‌.ಆರ್‌. ರಂಗನಾಥ್‌ ತಮ್ಮ ವಾಹಿನಿಯ ‘ಬಿಗ್‌ ಬುಲೆಟಿನ್‌’ ಎಂಬ ಏಕಪಾತ್ರಾಭಿನಯದಲ್ಲಿ ಅದೊಂದು ರೋಚಕ ಹಾಸ್ಯಭರಿತ ಘಟನೆ ಎಂಬಂತೆ ನಿರೂಪಿಸಿದ್ದರು. ನೋಡಿ ಮೈಎಲ್ಲಾ ಉರಿದುಹೋಯಿತು.
* ಗಂಗಾವತಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ಪರೀಕ್ಷಾ ಅಕ್ರಮಗಳನ್ನು ಚಿತ್ರಿಸಿದ ಟಿವಿ–9 ಕ್ಯಾಮೆರಾಮನ್‌ ಮಾರುತಿಯನ್ನು ಹಿಡಿದು ಆ ದಂಧೆಕೋರರು ಎಳೆದಾಡಿದ್ದರು. ಟಿವಿ ಸಂಸ್ಥೆಯಿಂದ ಸಾಂತ್ವನ ಬಿಟ್ಟರೆ ಅದೊಂದು ಹೈಪ್‌ ಆಗಲೇ ಇಲ್ಲ. ದೂರು ದಾಖಲಂತೂ ದೂರದ ಮಾತು.
* ಹಲವಾರು ಕಡೆ ಕ್ಯಾಮೆರಾ ಕಸಿದುಕೊಳ್ಳುವುದು. ವರದಿಗಾರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅವಾಚ್ಯ ನಿಂದನೆ ಎಲ್ಲವನ್ನೂ ನಾವು ಸಹಿಸಿಕೊಳ್ಳಲೇಬೇಕು. ಕ್ಯಾಮೆರಾ, ಸಂಸ್ಥೆಯ ಯಂತ್ರೋಪಕರಣಗಳಿಗೆ ವಿಮೆ ಇದೆ. ಆದರೆ, ನಮಗೆ?
ಯಾವ ಸಂಸ್ಥೆಯ ಆಡಳಿತವೂ ಕಾಳಜಿ ವಹಿಸುತ್ತದೆ ಎಂಬ ಖಾತ್ರಿ ಇಲ್ಲ. ಅವುಗಳಿಗೆ ಕೋರ್ಟು, ಕಚೇರಿಯ ರಗಳೆ ಬೇಡವೇ ಬೇಡ. ವಿಪರೀತ ರಿಸ್ಕ್‌ ಬಂದರೆ ಒಂದಿಷ್ಟು ಕಾಸು ಬಿಸಾಕಿ ಕೈತೊಳೆದುಕೊಳ್ಳುತ್ತಾರೆ. ಸುಮ್ಮನೆ ಪತ್ರಿಕೋದ್ಯಮದ ಬೃಹತ್‌ ಐಡಿಯಾಲಜಿಗಳನ್ನು ಹೇಳುತ್ತಾರೆ ಅಷ್ಟೇ.
ಹಾಗಾದರೆ, ಡಿಕೆಶಿ ವಿರುದ್ಧ ಸ್ಟಿಂಗ್‌ ಆಪರೇಷನ್‌ ಪ್ರಕರಣ ಇಷ್ಟೊಂದು ಸದ್ದು ಮಾಡಿತು ಏಕೆ? ಅದಕ್ಕೇ ಹೇಳುವುದು ಏಟು ಬುಡಕ್ಕೇ ಬೀಳಬೇಕು ಅಂತ.
* ಟಿವಿ 9 ಕುಟುಕು ಕಾರ್ಯಾಚರಣೆಯ ಮೊದಲ ಆರೋಪಿ ಸಂಸ್ಥೆಯ ಮುಖ್ಯಸ್ಥ ಮಹೇಂದ್ರ ಮಿಶ್ರಾ. ಈಗ ಅವರನ್ನು ಬಚಾವ್‌ ಮಾಡಲು ಈ ನಾಲ್ಕು ದಿನಗಳಿಂದ ಇಷ್ಟೊಂದು ಹೈಪ್‌ ನಡೆಯುತ್ತಲೇ ಇದೆ. ನಿಜವಾಗಿಯೂ ಇದು ಪತ್ರಕರ್ತರ ಮೇಲೆ ಕಾಳಜಿಯೇ ಆಗಿದ್ದಲ್ಲಿ ಹಲವಾರು ಬಾರಿ ಮಾರಣಾಂತಿಕ ಹೊಡೆತ ತಿಂದ ನಿಷ್ಠಾವಂತ ವರದಿಗಾರ, ಕ್ಯಾಮೆರಾಮನ್‌ಗಳ ಬಗ್ಗೆ ಕಾಳಜಿ ಏಕೆ ತೋರಲಿಲ್ಲ? ಅದನ್ನೂ ಒಂದು ಟಿಆರ್‌ಪಿ ತಂತ್ರವನ್ನಾಗಿಯಷ್ಟೇ ಬಳಸಿಕೊಂಡರು ಏಕೆ? ಆ ಪ್ರಕರಣಗಳು ಏಕೆ ದಿನಗಟ್ಟಲೆ ಹೈಪ್‌ ಆಗಲಿಲ್ಲ? ನೋಡಿ ಇಲ್ಲಿ ಪತ್ರಿಕೋದ್ಯಮದ ಅಳಿವು ಉಳಿವಿನ ಪ್ರಶ್ನೆ ಬಂದೇ ಇಲ್ಲ!
* ಪಾಪ ಬಲಿಪಶುಗಳಾಗಿರುವ ಮುಗ್ದ ಪತ್ರಕರ್ತರ ಬಗ್ಗೆ ವಿಷಾದ, ಬೇಸರವಿದೆ.
* ಮಹಿಳಾ ಪತ್ರಕರ್ತೆಯ ಮೇಲೆ ದೌರ್ಜನ್ಯ (ಯಾವುದೇ ಸ್ವರೂಪದ್ದಿರಲಿ) ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ನಡೆದಿದ್ದರೂ ಅಂಥ  ಹೆಣ್ಣುಮಗಳೊಬ್ಬಳ ಒಟ್ಟಾರೆ ಬದುಕಿಗೆ ಕೆಟ್ಟ ಪರಿಣಾಮ ಬೀರುವ ವಿಷಯನ್ನು ಟಿಆರ್‌ಪಿ ಗುರಿಯಿಟ್ಟುಕೊಂಡು ಮಾರುಕಟ್ಟೆ ಮಾಡುತ್ತಿರುವುದು, ಅದನ್ನೂ ಒಂದು ಅನುಕಂಪವನ್ನಾಗಿ ನಗದೀಕರಿಸಿಕೊಳ್ಳುವುದು ಅಕ್ಷಮ್ಯ.
* ಇದೀಗ ಡಿಕೆಶಿಯೇ ಹೀರೋ ಆಗುತ್ತಿದ್ದಾರೆ. ಏಕೆಂದರೆ ನಿರಂತರ ನೆಗೆಟಿವ್‌ ವರದಿಗಳನ್ನು ಬಿಂಬಿಸುತ್ತಲೇ ಇದ್ದರೆ ವೀಕ್ಷಕರೂ ನಮಗಿಂತ ಬುದ್ಧಿವಂತರಿದ್ದಾರೆ. ಮಾತ್ರವಲ್ಲ ಇದೇ ಪ್ರಕರಣದಿಂದ ಡಿಕೆಶಿಗೆ ಪ್ರಚಾರ ದೊರೆತು, ಅವರ ಮೇಲೇ ಜನರಿಗೆ ಕರುಣೆ ಮೂಡುವುದು ಖಚಿತ.
* ಇಂಥ ಘಟನೆ ನಡೆದಾಗ ಎಲ್ಲ ಮಾಧ್ಯಮಗಳು ಒಟ್ಟಾಗಿ ನಿಂತು ತಿರುಗಿ ಬೀಳುತ್ತಿದ್ದರೆ ಕಥೆಯೇ ಬೇರೆಯಾಗುತ್ತಿತ್ತು. ಕೇವಲ ಪತ್ರಿಕಾ ಸಂಘಟನೆಗಳು ಖಂಡನೆಗಳ ಮಂಡನೆ ಮಾಡಿ, ಒಂದಿಷ್ಟು ಗದ್ದಲ ಎಬ್ಬಿಸಿ ಸುಮ್ಮನಾದವು ಅಷ್ಟೆ. ಸಂಕಷ್ಟದ ಸಮಯದಲ್ಲಿ ಟಿಆರ್‌ಪಿ, ಮಾರುಕಟ್ಟೆ, ವಾಣಿಜ್ಯ ಹಿತಾಸಕ್ತಿಯನ್ನು ಬದಿಗಿಟ್ಟು ಒಂದಾಗಲೇಬೇಕು ಎಂಬ ಕನಿಷ್ಠ ಪ್ರಜ್ಞೆಯೂ ಇತರ ವಾಹಿನಿಗಳಿಗೆ ಹೊಳೆಯಲಿಲ್ಲವೇ? ನಾಳೆ ನಿಮ್ಮ ಮನೆಗೂ ಈ ಪರಿಸ್ಥಿತಿ ಬರುವುದಿಲ್ಲವೇ? ಹೌದು, ಇಲ್ಲಿಯೂ ಏಟು ಬುಡಕ್ಕೆ ಬೀಳಬೇಕು. ಆಗ ಅದರ ಸದ್ದೇ ಬೇರೆ.
ಕೊನೇ ಪಕ್ಷ ಜನಶ್ರೀ ಮತ್ತು ಸುವರ್ಣ ನ್ಯೂಸ್‌ ಒಂದಿಷ್ಟು ಹೊತ್ತು ಮೀಸಲಿಟ್ಟವು ಎಂಬುದು ಸಮಾಧಾನಕರ.
* ಪ್ರಕರಣದಲ್ಲಿ ಹೇಳಿದ್ದನ್ನೇ ಹೇಳಿ ವಿಷಯದ ತಲೆಬುಡ ಗೊತ್ತಿಲ್ಲದೇ ಪ್ರಚಾರ ಪ್ರಿಯರು, ‘ಹೋರಾಟಗಾರರು’ ಮೈಲೇಜ್‌ ಪಡೆದುಕೊಂಡರು. ಚಾನೆಲ್‌ಗೂ ಟೈಂಪಾಸ್‌ ಆಯಿತು. ರಾಜಕಾರಣಿಗಳ ವಾಚಾಳಿತನ, ಆರೋಪ –ಪ್ರತ್ಯಾರೋಪಕ್ಕೂ ವೇದಿಕೆಯಾಯಿತು.
* ನಾವು ಎಂಥ ‘ ಹುಲಿ’, ‘ಸಿಂಹ’ಗಳೇ ಆಗಿರಲಿ. ನಮ್ಮನ್ನು ಮೀರಿದ, ಬಲಿಷ್ಠವಾದ ಶಕ್ತಿಯಾಗಿ ಕಾನೂನು ಮತ್ತು ಸರ್ಕಾರ ಎಂಬವು ಇವೆ. ಸರ್ಕಾರದಲ್ಲಿರುವವರು ಕಾನೂನಿನ ಕೈಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ಆದರೆ, ಬದುಕಿನಲ್ಲಿ ಒಂದು ನೌಕರಿ, ಅದರಿಂದ ಬರುವ ಗಳಿಕೆಯೊಳಗೇ ಜೀವಿಸುವ ನಮ್ಮಂಥವರು ‘ದೊಡ್ಡವರ’ ಗಾಳಕ್ಕೆ ಬೀಳುವ ಮುನ್ನ ಎಚ್ಚರವಿರಬೇಕು. ಬ್ರೇಕಿಂಗ್‌ ನ್ಯೂಸ್‌ ಕ್ರ್ಯಾಕಿಂಗ್‌ ನ್ಯೂಸ್‌ ಎಂಬ ತಗಡು ಸುದ್ದಿಗಳಿಂದ ದೇಶ ಉದ್ಧಾರವಾಗುವುದಿಲ್ಲ.
* ಟಿವಿ ವಾಹಿನಿಗಳ ಮೇಲೆ ನನ್ನ ಆಕ್ರೋಶವಲ್ಲ. ಸಮಾಜ ತಿದ್ದಿದ, ಮಳೆ, ಗಾಳಿ, ಪ್ರವಾಹ, ಅಪಘಾತದಂಥ ಸಂದರ್ಭದಲ್ಲಿ ನಿರಂತರ ಮಾಹಿತಿ ನೀಡಿ ವ್ಯವಸ್ಥೆಗೆ ನೆರವಾದ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ಬೆಳಕು ಚೆಲ್ಲಿದ ಸಾವಿರಾರು ಉದಾಹರಣೆಗಳೂ ಕಣ್ಣಮುಂದಿವೆ. ಆದರೆ, ಮೊದಲು ನಮ್ಮ ಸುರಕ್ಷೆ ಬಳಿಕ ಊರವರ ಕಾಳಜಿ ಇರಲಿ. ಹಾ, ಸುದ್ದಿ ಮಾರ್ಗದಲ್ಲಿ ಅಡ್ಡಹಾದಿಯೂ ಬೇಡ.

                                                                                                                                ಪ್ರೀತಿಯಿಂದ
                                                                                                                                         
                                                                                                                                ಶರತ್‌ ಹೆಗ್ಡೆ, ಕಡ್ತಲ


Monday, 10 March 2014

5 ವರ್ಷಗಳ ಕ್ಯಾಸೆಟ್‌ ರಿವೈಂಡ್‌ ಮಾಡುತ್ತಾ...

ಹಾ... ನೌಕರಿಗೆ ಸೇರಿ ಮೊನ್ನೆಗೆ (ಮಾರ್ಚ್‌ 9) ಭರ್ತಿ 5 ವರ್ಷ. ಒಟ್ಟಾರೆ ಕ್ಷೇತ್ರಕ್ಕೆ ಬಂದು ಏಳೂವರೆ ವರ್ಷ. ಸುಮ್ಮನೆ ಒಮ್ಮೆ ಹಿಂತಿರುಗಿ ನೋಡೋಣ ಅನಿಸುತ್ತಿದೆ.
ಪತ್ರಿಕೋದ್ಯಮವೊಂಬೋ ಕೋರ್ಸು ಮುಗಿಸಿ ಏನೇನೋ ಭಯಂಕರವೆನಿಸುವ ಕನಸು, ಉತ್ಸಾಹದಿಂದ ಬಂದ, ಮಂಗಳೂರಿನ ಬೀದಿ ಸುತ್ತಿದ 2006ರ ದಿನಗಳನ್ನು ನೆನಪಿಸಿಕೊಳ್ಳುತ್ತಲೇ ಇದ್ದೇನೆ. ಅದರಲ್ಲೂ ನನ್ನ ಪ್ರೀತಿಯ ಮಂಗಳೂರನ್ನು.
ಅದಕ್ಕಿಂತಲೂ ಹಿಂದಕ್ಕೆ ಹೋದರೆ ಈಗ ಕಳೆದು ಹೋಗಿರುವ ನನ್ನ ‘ಕಡ್ತಲ’ ಎಂಬ ಬ್ರಾಂಡ್‌ನೇಮ್‌. ಹೀಗೆ ಎಲ್ಲವೂ ಒಮ್ಮೆ ರಿವೈಂಡ್‌ ಮಾಡಿಕೊಳ್ಳಬೇಕೆನ್ನಿಸುವ ಹೊತ್ತು.

ಹಲವು ನಮಸ್ಕಾರಗಳು

ಕಡ್ತಲ ಎಂಬ ಪುಟ್ಟ ಊರಿನ ಹಾದಿ ಬೀದಿಯಲ್ಲಿ ಓಡಾಡಿಕೊಂಡಿದ್ದವನಿಗೆ ಬದುಕಿನ ಗಂಭೀರತೆ ಅರಿವಾಗಿದ್ದೇ ಡಿಗ್ರಿ ಎಂಬೋ ಕೊಂಬು ಸ್ವಲ್ಪ ಚಿಗುರಿದಾಗ. ಏನೂ ಕೆಲಸಕ್ಕೆ ಬಾರದವನೆಂದುಕೊಂಡವ ಕಾರ್ಕಳದ ಭುವನೇಂದ್ರ ಕಾಲೇಜು ಎಂಬ ಸಮುದ್ರಕ್ಕೆ ಬಿದ್ದ. ಕಾಲೇಜು ಅಪ್ಪಿಕೊಂಡಿತು. ಪೋಷಿಸಿತು. ಬೆಳೆಸಿತು. ಹಾ ಕೆಲ ಕಾಲ ಬದುಕೂ ಕೊಟ್ಟಿತು. ಅದಕ್ಕೊಂದು ಭಕ್ತಿಯ ನಮಸ್ಕಾರ.
ಮತ್ತಷ್ಟು ರಿವೈಂಡ್‌ ಮಾಡುತ್ತಿದ್ದೇನೆ. ಮಂಗಳೂರಿನ ಆಕಾಶವಾಣಿಯ ಎತ್ತರದ ಟವರ್‌. ನನ್ನದೊಂದು ದೊಂಡೆ (ಗಂಟಲು–ಧ್ವನಿ)ಯನ್ನು ಊರಿಗೆಲ್ಲಾ ಕೇಳಿಸಿದ, ಸಾವಿರಾರು ಜನರಿಗೆ ಪರಿಚಯಿಸಿದ, ಕೆಲಸ ಕಲಿಸಿದ, ಗುರುಗಳು, ಸ್ನೇಹಿತರನ್ನು ಕೊಟ್ಟ
, ಕೀಟಲೆ, ಚೇಷ್ಟೆ ಸಹಿಸಿದ, ಅದ್ಭುತ ಪ್ರೀತಿಯ ದರ್ಶನ ಮಾಡಿಸಿದ ನನ್ನ ಪ್ರೀತಿಯ ಮನೆ ಆಕಾಶವಾಣಿಗೆ ಭಕ್ತಿಯ ನಮಸ್ಕಾರ.
ಕಾರ್ಕಳದಿಂದ ಹೊರಡುವ ಒಂದು ಸ್ಥಳೀಯ ಪತ್ರಿಕೆ ‘ಜನಬಿಂಬ’. ಒಂದಿಷ್ಟು ಬರಹಗಳನ್ನು ಅದರಲ್ಲಿ ‘ಸೋಮಾರಿಕಟ್ಟೆಯಿಂದ’ ಹೆಸರಿನಲ್ಲಿ ಗೀಚುತ್ತಿದ್ದೆ.  ನನಗೇನೋ ಬರೆಯಬೇಕು ಎಂಬ ತೆವಲು ಅಷ್ಟೆ. ಮುಂದೆ ಬರೆದೇ ಬದುಕುತ್ತೇನೆ. ಬರೆಯುತ್ತಲೇ ಬದುಕುತ್ತೇನೆ ಎಂಬ ಕಲ್ಪನೆಯೇ ಇರಲಿಲ್ಲ. ಬಿಡಿ, ಪತ್ರಿಕೋದ್ಯಮ ಎಂಬ ಕೋರ್ಸ್‌, ಉದ್ಯೋಗದ ಕ್ಷೇತ್ರ ಎಂಬ ಸಣ್ಣ ಮಾಹಿತಿಯೂ ಇಲ್ಲದ ಕಾಲವದು. ಅಂಥದ್ದರಲ್ಲಿ ಏನೋ ಮನಸ್ಸಿಗೆ ಬಂದದ್ದನ್ನು ಗೀಚುತ್ತಿದ್ದೆ. ಅದು ಮಾಡುತ್ತಿದ್ದ ಪರಿಣಾಮ ಎಷ್ಟಿದೆ ಎಂಬುದು ಒಂದೊಂದು ಕಾಲಂ ಬರುವಾಗಲೇ ಗೊತ್ತಾಗುತ್ತಿತ್ತು. ಎರಡನೇ ಅಂಕಣ ಬರುವ ಹೊತ್ತಿಗೆ ನಮ್ಮೂರಿನ ಕುಡುಕರ ಕಟಕಟೆಯೊಳಗೆ ವಿಚಾರಣೆ ಎದುರಿಸಿದ್ದೆ. ಸುತ್ತಲೂ ಬಾಟಲ್‌ ಹಿಡಿದಿರುವ ವ್ಯಕ್ತಿಗಳ ಮಧ್ಯೆ ನಾನೊಬ್ಬ ಅಯೋಗ್ಯ ಕುಳಿತಿದ್ದೆ. ಕಾಲಂನ ಸಾಲುಗಳನ್ನು ಆಯ್ದು, ‘ನಾಯಕರ ಹೋಟೆಲಿನಲ್ಲಿ ಮಸಾಲೆದೋಸೆ ಮೂಸುವವರು ಯಾರು? ನಿನ್ನ ಸೋಮಾರಿಕಟ್ಟೆಯ ಸದಸ್ಯರ ಹೆಸರುಗಳನ್ನು ಕೊಡು. ಈ ಸಾಲು ನನಗೇ ಬರೆದದ್ದು ಅಲ್ವಾ?’ ಹೀಗೆ ಪುಂಖಾನು ಪುಂಖದ ಪ್ರಶ್ನೆಗಳು. ಸುಮಾರು 13 ಸರಣಿ ಬರೆದಿದ್ದೆ. ಎಷ್ಟೋ ವೇಳೆ ಸಂಪಾದಕ ರಾಧಾಕೃಷ್ಣ ತೋಡಿಕಾನರಿಗೇ ಈ ಕಾಲಂ ಪೇಚುಂಟು ಮಾಡುತ್ತಿತ್ತು. ಅವರಿಗೆ ಬ
ರುತ್ತಿದ್ದ ಒತ್ತಡಗಳೇನೂ ಕಡಿಮೆ ಇರಲಿಲ್ಲ. ಕೊನೆಗೂ ಅನಿಯಮಿತವಾಗಿಯಾದರೂ ಕಾಲಂ ಪ್ರಕಟಗೊಳ್ಳುತ್ತಿತ್ತು. ಅಕ್ಷರ ಲೋಕದಲ್ಲಿ ಅಂಬೆಗಾಲಿಡಲು (ಈಗಲೂ ಪರಿಪೂರ್ಣನಲ್ಲ) ವೇದಿಕೆ ಕೊಟ್ಟ ‘ಜನಬಿಂಬ’ಕ್ಕೆ ಋಣಿ. ಈ ಮಧ್ಯೆ ಮಂಗಳೂರಿನ ಗೆಳೆಯ ಕೃಷ್ಣಮೋಹನ ಪತ್ರಿಕೋದ್ಯಮ ಕೋರ್ಸ್‌ ಇದೆ ಎಂಬುದನ್ನು ತಲೆಗೆ ತುಂಬಿದ.
ಒಂದಿಷ್ಟು ಕಾಲ ನನ್ನ ಸೋಮಾರಿಕಟ್ಟೆ ಹೆಸರೇನೋ ಮಾಡಿತು. ಅಷ್ಟರಲ್ಲೇ ಕ್ಷೇತ್ರದ ಸಹವಾಸವೇ ಬೇಡಪ್ಪಾ ಎಂದು ಸುಮ್ಮನೆ ಕುಳಿತಿದ್ದೆ. ಯಾವುದೋ ಒಂದು ಸಂದರ್ಭಕ್ಕೆ ಬರೆದ ಬರಹ. ಕಾಕತಾಳೀಯವೆಂಬಂತೆ ನಮ್ಮೂರಿನ ‘ಸಮಾಜ ಸೇವಕ’ರ ಎದೆಗೆ ನಾಟಿತಂತೆ. ಇಂಥ ಹಲವು ‘ಸೇವಕರು’ ಕೊಟ್ಟ ಮಾನಸಿಕ ಹಿಂಸೆ ಮರೆಯುವಂಥದ್ದಲ್ಲ. ಕೊನೆಯಲ್ಲಿ ಅವರಿಗೂ ಒಂದಿಷ್ಟು ಸಾಲುಗಳನ್ನು ಮೀಸಲಿಡುತ್ತೇನೆ. ತಪ್ಪದೇ ಓದಿ.
ಅಂತೂ ಹೊಟ್ಟೆಪಾಡಿಗೊಂದು ಕೆಲಸ ಬೇಕಲ್ಲ. ಅದೇ ತಾನೆ ಆರಂಭವಾಗಿದ್ದ ಉಷಾಕಿರಣ ಕೆಲಸ ಕೊಟ್ಟಿತು. ಒಳ್ಳೆಯದೋ ಕೆಟ್ಟದ್ದೊ ಗೊತ್ತಿಲ್ಲ. ಕೆಲಸಕ್ಕೆ ಸೇರಿ ನೇಮಕಾತಿ ಪತ್ರ ಬಂದ ಒಂದು ತಿಂಗಳಲ್ಲೇ ಸಂಸ್ಥೆ ಮುಚ್ಚಿತು. ಆದರೆ, ಮೂರು ತಿಂಗಳಲ್ಲಿ ಕೆಲಸದ ಅಆಇಈ ಕಲಿಸಿದ ಸಂಸ್ಥೆಗೆ ಕೃತಜ್ಞ. ಇನ್ನು ಮುಂದೆ ಅಂಥ ಪತ್ರಿಕೆ ಕ್ಷೇತ್ರದಲ್ಲಿ ಬರಲಿಕ್ಕಿಲ್ಲ ಎಂದೂ ಧೈರ್ಯವಾಗಿ ಹೇಳಬಲ್ಲೆ.
ಮತ್ತೆ ಒಂದೆರಡು ತಿಂಗಳ ಬ್ರೇಕ್‌. ಬೇಜಾರಾದಾಗ ಅದೇ ಆಕಾಶವಾಣಿಯ ಸ್ಟುಡಿಯೋ. ಸ್ವಲ್ಪ ಕಾಲದಲ್ಲೇ ಉದಯವಾಣಿಯಲ್ಲಿ ಒಂದು ಕುರ್ಚಿ ಸಿಕ್ಕಿತು. ಎನ್‌.ಗುರುರಾಜ್‌ ಎಂಬ ಅದ್ಭುತ ವ್ಯಕ್ತಿಯ ಕೆಳಗೆ ಕೆಲಸ ಮಾಡಿದ್ದೇನೆ ಎಂದು ಕೃತಜ್ಞತೆಯಿಂದಲೇ ಹೇಳುತ್ತೇನೆ. ಆ ಕಾಲಕ್ಕೆ ಕರೆದು ಕೆಲಸ ಕೊಟ್ಟ ಅವರು ದೇವರಂತೆ ಕಂಡಿದ್ದರು.
ಆ ಸಂದರ್ಭದ ಆರಂಭವೂ ಸ್ವಲ್ಪ ಕ್ಲಿಷ್ಟಕರವೇ ಆಗಿತ್ತು. ಮೊದಲೇ ಭಾಷೆ ಇಲ್ಲದವನನ್ನು ಭಾಷಾಂತರ ಮಾಡಲು ಹಾಕಿದರು. ಅಲ್ಲಿ ಏಕೋ ಸರಿಕಾಣಲಿಲ್ಲ. ಇಲ್ಲಿ ಇವನು ಪ್ರಯೋಜನವಿಲ್ಲ ಎಂದುಕೊಂಡವರು, ಡೆಸ್ಕ್‌ಗೆ ಹಾಕಿದರು. ಅದು ಪತ್ರಿಕೆಯ ಮುಂಬೈ ಆವೃತ್ತಿ. ಸತೀಶ್‌ ಮಲ್ಯ ಎಂಬ ಗುರುಗಳು ಪಿರಿಪಿರಿ ಮಾಡುತ್ತಲೇ ಎಲ್ಲವನ್ನೂ ಕಲಿಸಿದರು. ನಾನು ಪತ್ರಕರ್ತನಾಗಲಿಲ್ಲ. ಒಬ್ಬ ಒಳ್ಳೆಯ ಡಿಟಿಪಿ ಆಪರೇಟರ್‌ ಮತ್ತು ಪುಟವಿನ್ಯಾಸಕನಾಗಿದ್ದೆ. ದೇವರು ಕೈಬಿಡಲಿಲ್ಲ. ಯಾವುದೋ ಒಂದು ಕಸ, ಅಲ್ಲಿ ಹೇಗಿದ್ದರೂ ನಡೆಯುತ್ತದೆ ಎಂಬ ವಿಭಾಗಕ್ಕೆ ಹಾಕಿದ್ದರೋ ಅದೇ ವಿಭಾಗದ ಹೊಣೆಗಾರಿಕೆ ಬಂತು. ಇಲ್ಲಿ ಎಲ್ಲವೂ ನಾನೇ. ನನ್ನ ಮುಂಬೈ ಎಕ್ಸ್‌ಪ್ರೆಸ್‌ ವೇಗವಾಗಿಯೇ ಹೊರಟಿತು. ಒಂದಿಡೀ ಆವೃತ್ತಿಯ ನಿರ್ವಹಣೆ, ಸುದ್ದಿ ನಿರ್ಧಾರ ಎಲ್ಲವೂ ನನ್ನದೇ. ನನ್ನಿಂದೊಬ್ಬನಿಂದಲೇ ಅಲ್ಲವಾದರೂ ಆವೃತ್ತಿ ಕ್ಲಿಕ್‌ ಆಯಿತು ಎಂದು ವಿಶ್ವಾಸದಿಂದ ಹೇಳಬಲ್ಲೆ. ಓದುಗರ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೆರೆಮರೆಯಿಂದಲೇ ಗಮನಿಸುತ್ತಿದ್ದೆ. ಅರಿವಿಗೇ ಬಾರದಂತೆ ಓದುಗರೂ ಗುರುತಿಸಿದರು.
ಕಾಲ ನಿಲ್ಲುವುದಿಲ್ಲ. ನಾನೂ ಸುಮ್ಮನಿರಲಾಗಲಿಲ್ಲ. ಯಾಕೋ ಬೇಜಾರೆನಿಸಿತು. ಅಷ್ಟರಲ್ಲೇ ಪತ್ರಿಕೋದ್ಯಮದ ಹಲವು ಮುಖಗಳನ್ನು ನೋಡಿದ್ದೆ. ಸಾಕೆನಿಸಿತು. ಗೌರವದಿಂದಲೇ ಹೊರ ಹೊರಟೆ. ಒಂದಿಷ್ಟು ಕಾಲ ನನಗೆ ಡಿಗ್ರಿ ಕೊಟ್ಟ ಕಾಲೇಜಿನಲ್ಲಿ ಮೇಷ್ಟ್ರಾಗಿ ಸೇರಿದೆ. ಬಹುಶಃ ಶೇ 90ರಷ್ಟು ಪ್ರಾಮಾಣಿಕನಾಗಿದ್ದದ್ದು ಇದ್ದರೆ ಇಲ್ಲಿಯೇ.
ಇದೇ ಸಾಕು. ಕ್ಷೇತ್ರದ ತಂಟೆಯೇ ಬೇಡ ಎಂದು ಸುಮ್ಮನಿದ್ದೆ. ಪತ್ರಿಕೋದ್ಯಮ ಒಂಥರಾ ಆಲ್ಕೋಹಾಲ್‌ ಇದ್ದಹಾಗೆ. ಅದ್ಯಾಕೋ ಈ ಪತ್ರಿಕೆಯ ಪರೀಕ್ಷೆ ಬರೆದೆ. ಯಾಕೋ ಸರಿಯಾಗಿ ಬರೆದಿಲ್ಲ ಅನಿಸಿತು. ಆಸೆಬಿಟ್ಟು ಇದ್ದ ಕೆಲಸ ಮಾಡಿಕೊಂಡಿದ್ದರಾಯಿತು ಎಂದು ಸುಮ್ಮನಿದ್ದೆ. ಹಾಗೆ ಸುಮ್ಮನಿದ್ದವನನ್ನು ಕ್ಷೇತ್ರದ ಅಲೆ ತನ್ನೊಳಗೆ ಬೇಡವೆಂದರೂ ಸೆಳೆದುಕೊಂಡಿತು. ಹಾಗೆ ಸೆಳೆದ ಮಂಗಳೂರಿನವರಿಗೆ ತುಂಬು ಕೃತಜ್ಞ.
ಸುಳಿಗೆ ಸಿಕ್ಕ ಮೇಲೆ ಈಜಲೇಬೇಕು. ಈಜುತ್ತಲೇ ಇದ್ದೇನೆ. ಈಜುತ್ತಲೇ ಇರುತ್ತೇನೆ. ಕೈ ಸೋಲುವವರೆಗೆ...
ಎಷ್ಟೋ ಆಸೆಗಳು ಮೂಡಿ ಕಮರಿವೆ. ಹೋ ನಾನು ಹಾಗಾಗಬೇಕಿತ್ತು. ಉದ್ಯಮಿಯಾಗಿ ದುಡ್ಡು ಮಾಡಬೇಕಿತ್ತು. ಮೇಷ್ಟ್ರಾಗಿ ಆರಾಮವಾಗಿರಬಹುದಿತ್ತು. ಇನ್ನಷ್ಟು ಓದಬೇಕಿತ್ತು. ಛೆ ಕಥೆಗಾರನೋ ಕಲಾವಿದನೋ ಆಗಿ ಸುತ್ತಾಡುತ್ತಲೇ ಇರಬೇಕಿತ್ತು. ಹೀಗೆ ಒಂದಾ ಎರಡಾ... ಎಲ್ಲರಿಗೂ ಇರುವಂತೆ ನನಗೂ ನೂರಾರು ಆಸೆ, ಕನಸು. ಒಮ್ಮೊಮ್ಮೆ ಯಾವುದೂ ಕೈಗೂಡಲಿಲ್ಲ ಎಂಬ ಕೊರಗು.
ಒಂದು ನಿರ್ಧಾರಕ್ಕೆ ಬಂದೆ. ಇದು ನನ್ನ ಆಟದ ಮೈದಾನ. ಇಲ್ಲಿರುವಷ್ಟು ಕಾಲ ಚೆನ್ನಾಗಿ ಆಡಬೇಕು. ಕೊನೆಗೊಮ್ಮೆ ನನಗೇ ಸಾಕೆನಿಸಬಹುದು. ಎದುರಾಳಿ ಸೋಲಿಸಲೂಬಹುದು. ಆಗ ಹೊರನಡೆದಾಗ ಇನ್ನೊಂದು ದಾರಿ ಕಾಣುತ್ತದೆ. ಹೀಗೆ ಬಂದ ಬದುಕನ್ನು ಹಾಗೇ ಸ್ವೀಕರಿಸಬೇಕು. ಆಟದ ಮೈದಾನದಲ್ಲಿರುವಾಗ ಈಜುಕೊಳದ ಚಿಂತೆಯೇಕೆ? ಹೀಗೆ ಗಟ್ಟಿ ನಿರ್ಧಾರದ ಕಲ್ಲು ಹೊತ್ತು ಕನಸುಗಳನ್ನು ತಾತ್ಕಾಲಿಕ ಸಮಾಧಿ ಮಾಡಿದ್ದೇನೆ.
 ನಕ್ಷೆಯಲ್ಲೇ ನೋಡದ ದಾವಣಗೆರೆಯಲ್ಲಿ ನಾಲ್ಕು ವರ್ಷ ಕಳೆದೆ. ಮತ್ತೂ ಅದರಾಚೆ ನೋಡದ ನನ್ನನ್ನು ಉತ್ತರ ಕರ್ನಾಟಕ ಕರೆದಿದೆ. ನೋಡೋಣ ಮುಂದಿನ ದಾರಿ ಎಲ್ಲಿಗೆ?
 ಈ ಅವಧಿಯಲ್ಲಿ ನೂರಾರು ಜನ ಸಿಕ್ಕಿದ್ದಾರೆ. ಗುರುಗುರು ಎನ್ನುತ್ತಲೇ ಎಲ್ಲವನ್ನೂ ಕಲಿಸಿದ್ದಾರೆ. ಬಯಲು ಸೀಮೆಯ ಹಳ್ಳಿ ಹಳ್ಳಿ ಸುತ್ತಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೂ ಚುನಾವಣೆ, ರಾಜಕೀಯ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಾಲ್ಕು ವರ್ಷ ಕಲಿಸಿದ ಹಿರಿಯರಿದ್ದಾರೆ. ಮುಂಗೋಪ ಸ್ವಭಾವದ ನಾನು ಎಷ್ಟೋ ಬಾರಿ ಅವರನ್ನೂ ಬೈದದ್ದಿದೆ. ಮುನಿಸಿಕೊಂಡದ್ದಿದೆ. ಅವರಿಂದ ಸಾಕಷ್ಟು ಬಾರಿ ಬೈಸಿಕೊಂಡದ್ದಿದೆ (ಅವರ ಕೆಲವು ತಿಕ್ಕಲುತನಗಳೂ ಹಾಗೇ ಇದ್ದವು ಎಂಬುದೂ ಉಲ್ಲೇಖಾರ್ಹ). ಆ ಕಠಿಣ ತರಬೇತಿಯ ಫಲಿತಾಂಶ ಈಗ ಸಿಗುತ್ತಿದೆ. ಹೌದು ಅಂಥ ತರಬೇತಿ ಕೊಟ್ಟ ಸಂಸ್ಥೆಯ ಹಿರಿಯರು ಮತ್ತೂ ಬೆಳೆದು ತಮ್ಮೂರು ಸೇರಿದ್ದಾರೆ. ಅವರಿಗೆ ಕೃತಜ್ಞತೆಯ ನಮಸ್ಕಾರ ಸಲ್ಲಿಸುತ್ತಿದ್ದೇನೆ. ನನ್ನ ಆಫೀಸಿನ ನಾಲ್ಕು ಗೋಡೆಗಳ ನಡುವೆ ಅವರ ಮೇಲೆ ಕೋಪ ಕಾರಿದ್ದಕ್ಕೆ ಕ್ಷಮೆ ಕೋರುವ ಸಹಿತ.
ಇನ್ನೂ ಕೆಲವು ಹಿರಿಯರ ಬಗ್ಗೆ ಹೇಳಬೇಕೆನಿಸುತ್ತದೆ. ಆದರೆ, ಅವರು ಇವೆರಡಕ್ಕೂ ಅರ್ಹರಲ್ಲ. ಬಹುಶಃ ಆ ಕಾಲ ಮುಂದುವರಿಯುತ್ತಿದ್ದರೆ ನಾನು ಕ್ಷೇತ್ರದಲ್ಲಿ ಇರುತ್ತಿರಲಿಲ್ಲ ಎಂದಷ್ಟೇ ಹೇಳಿ ಮುಗಿಸುತ್ತೇನೆ.
ದಾವಣಗೆರೆಯಲ್ಲಿ ವೃತ್ತಿಗೆಳೆಯರ ನಡುವೆ ಮಧುರ ಪ್ರೀತಿ ಅನುಭವಿಸಿದ್ದೇನೆ. ಮಾನವೀಯ ಹೃದಯ ಕಂಡಿದ್ದೇನೆ. ಬಂದ ಆರು ತಿಂಗಳಲ್ಲೇ ತಂದೆ ಅಸ್ವಸ್ಥರಾದಾಗ ದುಡ್ಡುಕೊಟ್ಟು ಬಸ್ಸು ಹತ್ತಿಸಿದ ಸಹೋದ್ಯೋಗಿಗಳು, ಹುಷಾರಿಲ್ಲದೇ ಬಿದ್ದುಕೊಂಡಿದ್ದಾಗ ಡಾಕ್ಟ್ರಬಳಿ ಕರೆದೊಯ್ದ ಹಿರಿಯ ಗೆಳೆಯ ಚಂದ್ರ,  ಒಂದಿಷ್ಟು ಗಂಜಿ ತಂದು ಕೊಟ್ಟ ಸಹೋದ್ಯೋಗಿ, ಸೋಂಬೇರಿಯಾಗಿದ್ದವನಿಗೆ ಪ್ರೀತಿಯಿಂದ ಊಟ ಹಾಕುತ್ತಿದ್ದ ಭಗತ್‌ಸಿಂಗ್‌ ನಗರದ ನನ್ನ ಪಕ್ಕದಮನೆಯ ಅಮ್ಮ. ಕೊನೆಗೂ ಪ್ರೀತಿಯ ನೋಟ ಬೀರಿದ ಹುಡುಗಿ, ಮನೆತುಂಬಾ ಓಡಾಡಿಕೊಂಡು ಗದ್ದಲ ಎಬ್ಬಿಸುತ್ತಿದ್ದ ತುಂಟ ಮಕ್ಕಳು... ಹೀಗೆ ಬಯಲು ಸೀಮೆಯ ಹೃದಯ ತುಂಬಿದ ಮುಗ್ದ ಪ್ರೀತಿಯ ಮುಖಗಳು ಸಾವಿರಾರು ಇವೆ.
ನಮ್ಮ  ಜಿಲ್ಲೆಯ ‘ಬುದ್ಧಿವಂತ’ರೆನಿಸಿಕೊಂಡವರು ಕಲಿಯಲೇಬೇಕಾದ ಪಾಠವಿದು.
ಈ ನಡುವೆ ವೃತ್ತಿಬದುಕಿನಲ್ಲಿ ಗದ್ದಲಗಳು ಇಲ್ಲದಿಲ್ಲ. ಸ್ವಲ್ಪ ಕೆಲಸ ಮಾಡಿದೆ ಅಷ್ಟೇ. ಸಂಸ್ಥೆ ಎಲ್ಲವನ್ನೂ ಕೊಟ್ಟಿತು. ಅದೂ ಅಲ್ಪ ಅವಧಿಯಲ್ಲೇ. ಇದೆಲ್ಲಾ ಏನು ಮಾಡಿತೋ ಗೊತ್ತಿಲ್ಲ. ಒಂದು ಹಂತದಲ್ಲಿ ಎಲ್ಲವೂ ವಿಕೋಪಕ್ಕೇರಿ ಇನ್ನೇನು ಈ ಸಂಸ್ಥೆಯಲ್ಲ ಯಾವ ಸಂಸ್ಥೆ, ಕ್ಷೇತ್ರದಲ್ಲಿಯೂ ಕೆಲಸ ಸಿಗಬಾರದಂಥ ಸನ್ನಿವೇಶ ನಿರ್ಮಿಸುವ ಘಟನೆ ನಡೆಯಿತು. ನಾನೂ ಮಾನಸಿಕವಾಗಿ ಒಂದು ಕಾಲು ಹೊರಗಿಟ್ಟಿದ್ದೆ. ಆದರೆ, ಹಾಗೆ ಮಾಡಿದವರನ್ನೂ ಸುಮ್ಮನೆ ಬಿಡುವುದಿಲ್ಲ ಎಂಬ ಸೇಡಿನ ಸಹಿತ. (ಈ ಘಟನೆಯಲ್ಲಿ ನನ್ನ ತಪ್ಪಿಲ್ಲವಾದರೂ ಮುಂಗೋಪದ ಪಾಲು ಇದೆ ಎಂದು ಹೇಳಲು ವಿಷಾದವಿದೆ)
ನನಗೊಂದು ವಿಶ್ವಾಸವಿತ್ತು. ತಪ್ಪಿ ನಡೆದಿಲ್ಲ. ತಲೆ ಬಾಗಿಸಿದ್ದೇನೆ. ಆದರೆ, ತಲೆತಗ್ಗಿಸಿಲ್ಲ. ವಾಸ್ತವ ನನ್ನಪರ ಇತ್ತು. ಘಟನೆಗೆ ಸಾಕ್ಷಿಯಾದ ಸಹೋದ್ಯೋಗಿಗಳು ನನ್ನಪರ ಏನೂ ಹೇಳಲಿಲ್ಲ. ಆದರೆ, ವಾಸ್ತವದ ಪರ ನಿಂತರು. ನನಗೆ, ಸಂಸ್ಥೆಗೆ ಅಷ್ಟೇ ಸಾಕಿತ್ತು. ಅಂಥದ್ದೊಂದು ಸನ್ನಿವೇಶ ತಪ್ಪಿಹೋಯಿತು. ಆದರೆ, ಕೊನೆಗೂ ಅದಕ್ಕೆ ಕಾರಣರಾದವರಿಗೆ ಮನವರಿಕೆಯಾಯಿತು. ತಾನು ಹೀಗೆ ಮಾಡಬಾರದಿತ್ತು. ಮುಂದೊಂದು ದಿನ ಅವರದೇ ವೃತ್ತಿಬದುಕಿಗೆ ಕಲ್ಲು ಬೀಳುವ ಅಥವಾ ಕಪ್ಪು ಚುಕ್ಕೆ ಮೂಡಿಸುವ ಎಲ್ಲ ಸನ್ನಿವೇಶ ನಿರ್ಮಾಣವಾಗಿ ಎಲ್ಲವೂ ಮುಗಿದೇ ಹೋಯಿತು ಎಂದಾದಾಗ ಎಲ್ಲರನ್ನೂ ಎದುರುಹಾಕಿಕೊಂಡು ನಾನೇ ತಡೆದಿದ್ದೆ. ಇದಕ್ಕೆ ಹಲವು ಟೀಕೆ, ಅಪಹಾಸ್ಯಗಳನ್ನೂ ಎದುರಿಸಬೇಕಾಯಿತು. ಹೌದು ನಿಸರ್ಗ ಎಲ್ಲವನ್ನೂ ಸರಿಪಡಿಸುತ್ತದೆ (Belive the nature. Nature heels everything) ಎಂಬ ನಂಬಿಕೆ ನನ್ನದು. ನಾವು ಯಾರೂ ಏನೂ ಮಾಡಬೇಕಿಲ್ಲ. ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ. ನನ್ನ ಬದುಕಿನುದ್ದಕ್ಕೂ ಆಗಿದ್ದೂ ಅದೇ. ಇರುವ ನಾಲ್ಕು ದಿನ ಚೆನ್ನಾಗಿಯೇ ಇರೋಣ ಅಲ್ವಾ?
ಹಾಗೆಂದ ಮಾತ್ರಕ್ಕೆ ನಾನು ನೂರಕ್ಕೆ ನೂರು ಪ್ರಾಮಾಣಿಕ ಎಂದೇನೂ ಭಾವಿಸಬೇಕಿಲ್ಲ. ನನ್ನಲ್ಲೂ ನೂರಾರು ತಿಕ್ಕಲುತನ, ಕೀಟಲೆಬುದ್ದಿ ಒಮ್ಮೊಮ್ಮೆ ಕಿಡಿಗೇಡಿತನವೂ ಇಣುಕಿದ್ದಿದೆ. ವ್ಯಕ್ತಿಗತ ದೌರ್ಬಲ್ಯಗಳೂ ಇವೆ. ಆದರೆ, ಅದು ನನ್ನ ವೃತ್ತಿ, ಬದುಕು, ಯಾವುದೇ ವ್ಯಕ್ತಿ, ಸಂಸ್ಥೆಗೆ ತೊಂದರೆ ಉಂಟು ಮಾಡಿಲ್ಲ ಅಷ್ಟೇ.
ಅಡ್ಡದಾರಿ ಹಿಡಿದು ದುಡ್ಡು ಮಾಡುವ ಚಾಲಾಕಿತನ ನನ್ನಲ್ಲಿಲ್ಲ. ಯಾವುದೋ ವಿಷಯ, ವಸ್ತುವಿಗಾಗಿ ಕೈಚಾಚಿದ್ದೂ ಇಲ್ಲ. ಮುಖ್ಯವಾಗಿ ದುಡ್ಡು ಕಾಸಿನ ಕೊರತೆಯೂ ಕಾಡಿಲ್ಲ. ವೇತನ ಸಾಲದಿದ್ದರೆ ವೃತ್ತಿಯಲ್ಲಿ ಗೆಳೆಯರೆಂಬ ಕುಬೇರರು ಇರಬೇಕಾದರೆ ಚಿಂತೆಯೇಕೆ? ಚಟ ಚಾಳಿಗಳೂ ಇಲ್ಲ. ಹಾಗಿದ್ದರೆ ಮತ್ತೇನು?
ಒಟ್ಟಾರೆ ಬದುಕಿನಲ್ಲಿ ಕೆಲವೊಮ್ಮೆ ಮಾನಸಿಕವಾಗಿ ಭ್ರಷ್ಟನಾದದ್ದಿದೆ. ಅದೂ ಯಾವುದೋ ಒತ್ತಡಕ್ಕೆ ಬಿದ್ದು. ಇನ್ಯಾವನೋ ಅಯೋಗ್ಯನನ್ನು ಸತ್ಯಹರಿಶ್ಚಂದ್ರ ಎಂದು ಬಿಂಬಿಸಬೇಕಾಗಿ ಬಂದದ್ದು, ಸತ್ಯ ಮರೆಮಾಚಬೇಕಾಗಿ ಬಂದದ್ದು ಹೀಗೆ ಹಲವು ಸಂದರ್ಭಗಳಿವೆ. ಈಗ ಎಲ್ಲವೂ ನೆನಪಾಗುತ್ತಿಲ್ಲ.
ಅಪಾಯಕಾರಿ ಸ್ಥಳಗಳಿಗೆ ಹೋಗಿ ಫೋಟೋ ತೆಗೆದದ್ದು, ನಡುರಾತ್ರಿಯಲ್ಲಿ ಹೋಗಿ ಬೆಂಕಿ ದುರಂತದ ಫೋಟೋ ತೆಗೆದು ವರದಿ ಪ್ರಕಟಿಸಿಯೂ ಬೈಸಿಕೊಂಡದ್ದು, ದುರ್ಗಮ್ಮನ ಜಾತ್ರೆಯಲ್ಲಿ ಗಲಾಟೆಯ ಫೋಟೋ ತೆಗೆದು ಹೊಡೆಸಿಕೊಂಡು, ಕ್ಯಾಮೆರಾ ಕಳೆದುಕೊಂಡದ್ದು. (ಕೊನೆಗೂ ಸಿಕ್ಕಿತು) ಆದರೆ, ಕನಿಷ್ಠ ದೂರುಕೊಡಲೂ ಅಸಹಾಯಕನಾಗಿ ಮೋಸ ಹೋದದ್ದು, ಬೆಳಗಿನ ಜಾವ ಮೂರು ಗಂಟೆಯವರೆಗೆ ಸೂಕ್ತ ಯೋಜನೆಯಿಲ್ಲದ ಹಿರಿಯರ ‘ಮಂತ್ರೋಚ್ಛಾರಣೆ’ಯ ಸಹಿತ ಪತ್ರಿಕೆಯ ಪುಟ ಸಿದ್ಧಪಡಿಸುತ್ತಿದ್ದದ್ದು. ಎಲ್ಲವನ್ನು ಮಾಡಿಯೂ ಮರುದಿನ ತಪ್ಪು ಹುಡುಕುವ ನಮ್ಮವರದೇ ‘ಫಿಟ್ಟಿಂಗ್‌’ಗಳಿಗೆ ನೊಂದುಕೊಂಡದ್ದು... ಇವೆಲ್ಲಾ ನೋಡುವಾಗ ಇದು ಪತ್ರಿಕೋದ್ಯಮವೇ ಅಥವಾ ವೇಶ್ಯಾವಾಟಿಕೆಯೇ? ಎಂದು ಎಷ್ಟೋ ಬಾರಿ ನನ್ನನ್ನೇ ಪ್ರಶ್ನಿಸಿಕೊಂಡದ್ದಿದೆ.
ವೇಶ್ಯೆಗಾದರೂ ತಾನು ಯಾರ ಜತೆ ಮಲಗಬೇಕು ಎಂಬ ಆಯ್ಕೆ ಇರುತ್ತದೆ. ಆದರೆ, ಪತ್ರಕರ್ತರಿಗಿರುವುದಿಲ್ಲ. ವ್ಯಕ್ತಿ/ ಘಟನೆ ಒಳ್ಳೆಯದೋ ಕೆಟ್ಟದ್ದೋ... ಬರೆಯಲೇಬೇಕು. ಬೇಡವೆಂದರೂ ಸ್ಪಂದಿಸಲೇಬೇಕು. ಕೊನೆಗೆರಡು ಬೈಗುಳ ಸ್ವೀಕರಿಸಲೇಬೇಕು.
ಹಿರಿಯರೇ ಒಂದು ಮಾತು ನೆನಪಿಡಿ. ನಮ್ಮದು ಪತ್ರಿಕಾ ಕಚೇರಿ. ಪೊಲೀಸ್‌ ಠಾಣೆ ಅಲ್ಲ.
ಒಟ್ಟಾರೆ ಬದುಕಿನಲ್ಲಿ ಹಲವು ಮುಖಗಳನ್ನು ನೋಡಿದ್ದೆ ಎಂದೆನಲ್ಲಾ 2006ರಿಂದ ಇಲ್ಲಿವರೆಗೆ ಕೆಲವನ್ನು ಹೇಳುತ್ತೇನೆ.
* ಯಾವುದೋ ತನಿಖಾ ವರದಿ ಬರೆಸಿ ಪ್ರಕಟಿಸಿದ ಸ್ಥಾನಿಕ ಸಂಪಾದಕರನ್ನು ನೋಡಿದ್ದೇನೆ. ಎಲ್ಲವೂ ಸರಿಯಿದ್ದರೂ ಮರುದಿನ ಪತ್ರಿಕಾ ಸಂಸ್ಥೆ ಹಾಗೂ ವರದಿಯಲ್ಲಿ ಒಳಗೊಂಡ ವ್ಯವಸ್ಥೆಯ ಒತ್ತಡಕ್ಕೊಳಗಾಗಿ ತಾವೇ ಸ್ಪಷ್ಟನೆ ಬರೆದ ಅವರನ್ನೂ ನೋಡಿದ್ದೇನೆ.
*ಅದ್ಯಾರೋ ಅಯೋಗ್ಯ ಫೋನ್‌ನಲ್ಲಿ ಗುರ್‌ ಎಂದರೂ ಗಡಗಡ ನಡುಗುವ ಸಂಪಾದಕರನ್ನೂ ನೋಡಿದ್ದೇನೆ.
* ಪತ್ರಿಕಾ ಕಚೇರಿಯನ್ನು ಜೈಲಿನಥರ ಇಟ್ಟುಕೊಂಡ ವ್ಯವಸ್ಥೆಯನ್ನೂ ನೋಡಿದ್ದೇನೆ. * ಅಪರೂಪಕ್ಕೊಮ್ಮೆ ಮಾನವೀಯ ಮುಖಗಳನ್ನೂ ನೋಡಿದ್ದೇನೆ.
* ಪತ್ರಕರ್ತ ಎನ್ನುವುದಕ್ಕೆ ದೊಡ್ಡ ಅರ್ಥ ಹಾಗೂ ವ್ಯಾಖ್ಯೆಯಿದೆ. ಆದರೆ, ನಾನೊಬ್ಬ ವರದಿಗಾರ ಅನಿಸಿಕೊಳ್ಳಬಹುದು ಅಷ್ಟೆ. ಪತ್ರಕರ್ತ ಅನಿಸಿಕೊಳ್ಳಲು ಇನ್ನೂ ದಾರಿ ದೂರವಿದೆ.

ಒಟ್ಟಾರೆ ನನ್ನದೂ ಒಂದು ನೌಕರಿ ಅಷ್ಟೆ. ಅದರಾಚೆ ಏನೂ ಇಲ್ಲ. ಬರೆದು ಸಮಾಜ ಸುಧಾರಣೆ ಮಾಡುತ್ತೇನೆ ಎಂಬ ಕಾಲ ಸಂಪೂರ್ಣ ಹೋಯಿತು. ಒಂದಿಷ್ಟು ಸಂದೇಶ ಕೊಟ್ಟು ಸುಮ್ಮನಾಗಬಹುದು ಅಷ್ಟೆ. ನಮಗಿರುವ ಇತಿಮಿತಿ, ಚೌಕಟ್ಟು ಹಾಗಿದೆ. ಇದು ಈ ಕ್ಷೇತ್ರದಲ್ಲಿ ಬಹುತೇಕರಿಗೆ ಅನ್ವಯಿಸುವ ಮಾತು.

ಕಂಡದ್ದು/ ಗಳಿಸಿದ್ದು

* ಒಂದು ನೌಕರಿ, ಕರ್ನಾಟಕದ ಮಾನವೀಯ ಮುಖ, ಭೌಗೋಳಿಕ ಪರಿಸರ, ಸಂಸ್ಕೃತಿಯ ಅಧ್ಯಯನ. ಕರ್ನಾಟಕದ ಹಲವು ಮುಖಗಳನ್ನು ನೋಡಿದೆ. ಹಾ ಓಡಾಡಿದ್ದಕ್ಕೆ ಗೌರವದ ಸಂಬಳ. ಒಂದಿಷ್ಟು ಪ್ರಶಂಸೆ. ಮಲ್ಲಿಗೆಯ ಜತೆಗೆ ನಾರಿಗೂ ಗೌರವ ಅಷ್ಟೆ.

ಕಳೆದುಕೊಂಡದ್ದು

* ನನ್ನೂರು. ಜನ. ಊರಿನ ಸುಖ–ದುಃಖ, ನಮ್ಮವರ ಒಡನಾಟ. ಆಟ, ಜಾತ್ರೆ, ನಾಟಕ, ಸಂಬಂಧಗಳು, ನನ್ನ ಕುಟುಂಬ, ಭಾವನೆಗಳು, ಹಲವಾರು ಬಾರಿ ನೆಮ್ಮದಿ.

ಕೃತಜ್ಞ

ಇರಲಿ ಬಿಡಿ ಸುಖದುಃಖ ಎಲ್ಲೆಡೆಯೂ ಇದ್ದದ್ದೆ. ಒಂದು ಗಳಿಸಿದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು. ಹಾಗಾಗಿ ಅದು ಯಾವ ಕ್ಷೇತ್ರದಲ್ಲಿಯೂ ಅನಿವಾರ್ಯವೇ. ಒಂದು ಗೌರವದ ಬದುಕುಕೊಟ್ಟ ಕ್ಷೇತ್ರ ಹಾಗೂ ವ್ಯವಸ್ಥೆಗೆ ಕೃತಜ್ಞ.

ಕಡ್ತಲವೊಂದನ್ನು ಬಿಟ್ಟು....

ಗೆಳೆಯರೇ ವೃತ್ತಿಬದುಕು ಉತ್ತರ ಕರ್ನಾಟಕದವರೆಗೂ ನನ್ನನ್ನು ಕರೆದುತಂದಿದೆ. ನಾನು ಈ ನಾಡನ್ನು ಪ್ರೀತಿಸುತ್ತೇನೆ. ವೃತ್ತಿ ಬದುಕಿನಲ್ಲಿ ಕರೆದುತಂದ ಎಲ್ಲ ಊರುಗಳೂ, ಸಂಸ್ಥೆ, ವ್ಯವಸ್ಥೆ ನನ್ನನ್ನು ಪ್ರೀತಿಸಿವೆ. ಆದರಿಸಿವೆ. ಪ್ರೋತ್ಸಾಹಿಸಿವೆ, ತಪ್ಪಿದಾಗ ಆರೋಗ್ಯಕರವಾಗಿ ತಿದ್ದಿ ತೀಡಿವೆ.  
ಆದರೆ....
ಕಡ್ತಲವೊಂದನ್ನು ಬಿಟ್ಟು.
ನನ್ನ ಸಂಸ್ಥೆ ಶರತ್‌ ಹೆಗ್ಡೆ, ಕಡ್ತಲ ಎಂಬ ಹೆಸರಿನಲ್ಲಿ ಕಡ್ತಲವನ್ನು ಕತ್ತರಿಸಿ ಹಾಕಿದಾಗ ಒಂಥರಾ ಬಾಲ ಕಟ್‌ ಮಾಡಿದ ಹಾಗಾಗಿತ್ತು. ಕೆಲಕಾಲ ಬೇಸರಿಸಿಕೊಂಡಿದ್ದೆ. ಪ್ರೀತಿಯ ಹೆಸರದು.
ಆದರೆ, ಪತ್ರಿಕಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದವನನ್ನು ತುಳಿದು ಹಾಕಲು ಶತಪ್ರಯತ್ನ ಮಾಡಿದ ನನ್ನೂರು ಕಡ್ತಲದ ಕೆಲವು ‘ಕೊಳಕುಮಂಡಲ’, ‘ಕನ್ನಡಿ ಹಾವು’ಗಳಿಗೆ ಕೃತಜ್ಞತೆಯ ಹಾಲು ಎರೆಯುತ್ತೇನೆ. (ಹಾಗಿದ್ದರೂ
ಅಲ್ಲಿನ ಒಳ್ಳೆಯ ಮನಸ್ಸುಗಳಿಗೆ ಬೆನ್ನುತಟ್ಟಿದ ಕೈಗಳಗೆ ನಮಸ್ಕರಿಸುತ್ತೇನೆ)
ಅವು ಭುಸುಗುಟ್ಟಿದವು. ಕಚ್ಚಲು ಬಂದವು. ಹಲವಾರು ಬಾರಿ ಥೇಟ್‌ ನಾಯಿಗಳಂತೆ ಅರಚಿದವು. ತಿರುಗಿಬಿದ್ದಾಗಲೂ ಸುಮ್ಮನಾಗಲಿಲ್ಲ. ಆದರೆ, ಅವುಗಳ ಭುಸುಗುಡುವಿಕೆ ಹೆಸರಿನಲ್ಲಿ ನೀಡಿದ ಮಾನಸಿಕ ಹಿಂಸೆಯೇ ಇಂದು ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು ನಿಭಾಯಿಸಲು ಸಾಧ್ಯವಾಯಿತು. ಸಮಾಜಸೇವಕರ ಸೋಗಿನಲ್ಲಿರುವ ಈ ವಿಷಜಂತುಗಳಿಗೆ ಸೊಪ್ಪುಹಾಕಲಿಲ್ಲ. ಹಿಂಬಾಲಕನಾಗಲಿಲ್ಲ. ನನಗೆ ವಿನಾಕಾರಣ ಹೊಗಳಲು ಬರುವುದಿಲ್ಲ
. ಇದೇ ಸಮಸ್ಯೆ. ಹೋಗಲಿ ಇದೆಲ್ಲಾ ಆದಾಗ ಮನೆಯಲ್ಲೊಂದು ಧೈರ್ಯದ ಮಾತೂ ಸಿಗಲಿಲ್ಲ. ಕೊನೆಗೂ ಧೈರ್ಯಮಾಡಿದೆ. ಇವು ಬೌಗುಡುತ್ತಿದ್ದಂತೆಯೇ ಸ್ಥಿರವಾಗಿ ನಿಂತೆ. ಮುಂದೆಯೂ ನಿಲ್ಲುತ್ತೇನೆ. ಹಾವುಗಳು ಮಾತ್ರ ಹುತ್ತಬಿಟ್ಟು ಹೊರಬಂದಿಲ್ಲ.
ಗಾಳಿ ಸ್ವಚ್ಛವಾಗಿರುವಷ್ಟು ಕಾಲ ಹಕ್ಕಿ ಸ್ವತಂತ್ರವಾಗಿ ಹಾರುತ್ತಿದೆ. ಹಾಡುತ್ತಿದೆ. ಮುಂದೆಯೂ ಹಾಡುತ್ತಿರುತ್ತದೆ.