ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಹೋರಾಟ ರಾಜ್ಯದ ಗಮನಸೆಳೆದಿದೆ. ಗುರಿ ತಲುಪುವವರೆಗೆ ಮುಂದುವರಿಯುತ್ತೇವೆ ಎಂಬುದು ರೈತರ, ಹೋರಾಟಗಾರರ ಛಲ...
– ಅದಕ್ಕೆ ಕೊಪ್ಪಳ ಜಿಲ್ಲೆಯಿಂದಲೂ ಬೆಂಬಲ ವ್ಯಕ್ತವಾಯಿತು. ಹೌದು ಅದು ಅಗತ್ಯ. ಆದರೆ, ಕಳಸಾ ಬಂಡೂರಿ ಮೂರು (ಕರ್ನಾಟಕ– ಗೋವಾ– ಮಹಾರಾಷ್ಟ್ರ) ರಾಜ್ಯಗಳ ನಡುವಿನ ತಕರಾರು, ನ್ಯಾಯಾಧೀಕರಣದ ಮುಂದಿರುವ ತೀರ್ಮಾನ ಇತ್ಯಾದಿ ಕ್ಲಿಷ್ಟ ಸಂಗತಿಗಳನ್ನು ಒಳಗೊಂಡಿದೆ.
ಕೊಪ್ಪಳದ ಜನ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಪರಿ ಗಮನಿಸಿದಾಗ ಜನ ಮೊದಲು ಇಲ್ಲಿನದೇ ನೀರಾವರಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿ ಭೂಮಿ ಹಸನಾಗಿಸಿಕೊಳ್ಳಲು ಯಾಕೆ ತೀವ್ರವಾದ ಹೋರಾಟ ಮಾಡಬಾರದು? ಎಂಬ ಪ್ರಶ್ನೆ ಕಾಡುತ್ತದೆ.
ಕೊಪ್ಪಳದಲ್ಲಿ ಅಂತರರಾಜ್ಯ, ಜಿಲ್ಲಾ ಸಮಸ್ಯೆಗಳು ಇಲ್ಲ. ಹಾಗಿದ್ದರೂ ತುಂಗಭದ್ರಾ ದಂಡೆಯಲ್ಲಿರುವ ಮಂದಿಗೆ ಇನ್ನೂ ಸರಿಯಾಗಿ ನೀರು ಸಿಕ್ಕಿಲ್ಲ. ಇರುವ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸಿ ಎಂದು ಜನಪ್ರತಿನಿಧಿಗಳಿಗೆ ಹೇಳುವ ತಾಕತ್ತು ಇಲ್ಲಿನ ಜನರಿಗೆ ಬರಬೇಕಿದೆ.
ದಶಕದಿಂದ ಜನರ ಮೂಗಿಗೆ ತುಪ್ಪ ಹಚ್ಚುತ್ತಲೇ ಬಂದಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆ 2015ರ ಒಳಗಾದರೂ ಕೊಪ್ಪಳ – ಯಲಬುರ್ಗಾ ತಾಲ್ಲೂಕಿಗೆ ನೀರು ಹರಿಸೀತು ಎಂಬ ನಿರೀಕ್ಷೆ ಇತ್ತು. ಅದು ಸಚಿವರು, ಬೆಂಬಲಿಗರು ಕಾಮಗಾರಿ ಪರಿಶೀಲಿಸಿ ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಳ್ಳಲಿಕ್ಕಷ್ಟೇ ಸೀಮಿತವಾಯಿತು.
ಕೊಪ್ಪಳ ಏತ ನೀರಾವರಿ ಯೋಜನೆಯು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-–3 ರ ಅಡಿ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಹಾಗೂ ಗಂಗಾವತಿ ತಾಲ್ಲೂಕಿನ ಕನಕಗಿರಿ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಕಾಮಗಾರಿಯೂ ಇತ್ತೀಚೆಗೆ ನಿಧಾನಗತಿಯಲ್ಲಿದೆ. ಈ ಯೋಜನೆಯಡಿ 12.815 ಟಿಎಂಸಿ ನೀರನ್ನು ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿ 2.85 ಲಕ್ಷ ಎಕರೆ ಅಚ್ಚುಕಟ್ಟು ಕ್ಷೇತ್ರಕ್ಕೆ ನೀರು ಪೂರೈಸುವ ಯೋಜನೆಯಿದೆ. ಆದರೆ, ಕುಷ್ಟಗಿ, ಕೊಪ್ಪಳ ಮತ್ತು ಗಂಗಾವತಿ ತಾಲ್ಲೂಕಿನ ಕಾಮಗಾರಿಗೆ ಸಮೀಕ್ಷೆ ಆಗಬೇಕಿತ್ತು. ಅದಿನ್ನೂ ಸರಿಯಾಗಿ ಆಗಿಲ್ಲ ಎಂಬುದು ಜನರ ತಕರಾರು.
ಒಟ್ಟಾರೆ ಕೊಪ್ಪಳ ಏತ ನೀರಾವರಿ ಯೋಜನೆಯನ್ನು ನಾಲ್ಕು ವರ್ಷದೊಳಗೆ ಪೂರ್ಣಗೊಳಿಸುವ ಭರವಸೆಯಷ್ಟೇ ಸಿಕ್ಕಿದೆ. ಅದಾಗಲೇ ಒಂದೂವರೆ ವರ್ಷ ಕಳೆದುಹೋಗಿದೆ.
ಇನ್ನು ಕೊಪ್ಪಳ ತಾಲ್ಲೂಕೊಂದರಲ್ಲೇ ಇರುವ 12 ಏತನೀರಾವರಿ ಯೋಜನೆಗಳ ಸ್ಥಿತಿಗತಿ ದೇವರಿಗೇ ಪ್ರೀತಿ. ಇವುಗಳ ಪೈಕಿ ಒಂದೆರಡು ಮಾತ್ರ ಚಾಲನೆಯಲ್ಲಿವೆ.
ಸಣ್ಣ ನೀರಾವರಿ ಸಚಿವರ ತವರು ಜಿಲ್ಲೆಯಲ್ಲೇ 112 ಕೆರೆಗಳಿವೆ. ಅವುಗಳಲ್ಲಿ 2014ರಲ್ಲಿ ಕೇವಲ 30 ಕೆರೆಗಳು ತುಂಬಿದ್ದವು. ಬೆರಳೆಣಿಕೆಯ ಕೆರೆಗಳ ಹೂಳು ಅಷ್ಟಿಷ್ಟು ತೆಗೆಯಲಾಗಿದೆ. ಉಳಿದ ಕೆರೆಗಳು ‘ಹೂಳು ತೆಗೆಸಿಕೊಂಡು’ ಗುತ್ತಿಗೆದಾರರ ಜೇಬು ತುಂಬಿವೆ. ಕುಷ್ಟಗಿ ತಾಲ್ಲೂಕಿನ ನೀಡಸೇಸಿ ಕೆರೆ ಒತ್ತುವರಿಗೆ ಒಳಗಾಗಿದೆ. ಹನುಮಸಾಗರ ಸಮೀಪದ ಸುಮಾರು ಸಾವಿರ ಎಕರೆಗೂ ಅಧಿಕ ವಿಸ್ತಾರದ ಕಡೂರು ಕೆರೆ ಗ್ರಾನೈಟ್ ತ್ಯಾಜ್ಯ ಸಂಗ್ರಹಕ್ಕೆ ಬಲಿಯಾಗಿದೆ. ಕನಕನಾಲಾ ಯೋಜನೆ, ಪುರ ಯೋಜನೆ ಕಾಗದದಲ್ಲಷ್ಟೇ ಉಳಿದಿವೆ. ಸಾಲದ್ದಕ್ಕೆ ಪ್ರವಾಹ ಹರಿವು ಕಾಲುವೆ, ಇನ್ನೊಂದು, ಮತ್ತೊಂದು ಹೆಸರಿನ ಯೋಜನೆಗಳು ಪ್ರಕಟವಾಗುತ್ತಲೇ ಇವೆ. ಇಲ್ಲಿ ಸಾಧಾರಣ ಮಳೆಯಾದರೂ ಕೆರೆಗಳ ದಂಡೆ ಒಡೆಯುತ್ತವೆ. ಏಕೆ ಎಂದು ನೋಡಿದರೆ ಸರಿಯಾಗಿ ಹೂಳು ತೆಗೆದು ದುರಸ್ತಿ ಮಾಡಿರುವುದಿಲ್ಲ. ಕೆರೆಯೊಳಗೆ ಸರಿಯಾಗಿ ಸಂಗ್ರಹವಾದ ನೀರು ಹೊರ ಹರಿಯುವ ಪ್ರಶ್ನೆಯೇ ಇಲ್ಲ.
ಜಿಲ್ಲೆಯ ಜನ ಹೊಸದೇನನ್ನೂ ಕೇಳುತ್ತಿಲ್ಲ. ಇರುವುದನ್ನು ಸರಿಯಾಗಿ, ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಎಂದಷ್ಟೇ ಕೇಳುತ್ತಿದ್ದಾರೆ. ಆದರೆ, ಇವು ಸಭೆ, ಸಮಾರಂಭ, ವಿಚಾರಗೋಷ್ಠಿಗಳಲ್ಲಿ ಭಾಷಣಕ್ಕಷ್ಟೇ ಸೀಮಿತವಾಗುತ್ತಿವೆ. ಪ್ರಶ್ನಿಸಬೇಕಾದವರು ಪ್ರಶ್ನಿಸುತ್ತಿಲ್ಲ. ಅಥವಾ ಇಂಥದ್ದನ್ನು ಇಂಥವರ ಬಳಿ ಪ್ರಶ್ನಿಸಬೇಕು ಎಂಬ ದಾರ್ಷ್ಟ್ಯತನವೂ ಇಲ್ಲಿನ ಜನರಿಗಿಲ್ಲ. ಸ್ಪಂದಿಸಬೇಕಾದವರು ಗೊತ್ತಿದ್ದೂ ಜಾಣ ಮೌನಿಯಾಗಿದ್ದಾರೆ. ಒಂದೊಮ್ಮೆ ಪ್ರಶ್ನಿಸಿದರೂ ಭರವಸೆ ನೀಡಿ ಬಾಯಿ ಮುಚ್ಚಿಸುವ ಕೌಶಲ ಜನಪ್ರತಿನಿಧಿಗಳಿಗೆ ಹೊಸದೇನೂ ಅಲ್ಲ. ಗ್ರಾಮೀಣ ಪ್ರದೇಶದ ಜನರಂತೂ ತಮ್ಮೂರ ದೇವರಿಗೆ ಗುಡಿ ಗುಂಡಾರ ನಿರ್ಮಿಸಿದರೆ ಸಾಕು ಎಂದುಕೊಂಡು ತೆಪ್ಪಗಿರುತ್ತಾರೆ. ಪ್ರಶ್ನಿಸುವವರಾದರೂ ಯಾರು? ಒಂದೋ ಅವರ ಬೆಂಬಲಿಗರು, ಇವರ ವಿರೋಧಿಗಳು... ಇವರಿಬ್ಬರೂ ಪ್ರಶ್ನಿಸುವ ಕೆಲಸ ಮಾಡುವುದಿಲ್ಲ. ಸಂದರ್ಭಾನುಸಾರ ಕೆಸರೆರಚಾಟ ನಡೆಸುತ್ತಾರೆ ಅಷ್ಟೆ. ತಮ್ಮದೇ ಭೂಮಿ ಹಸಿರಾಗಿಸಲು ಕಾಲುವೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಲು ರೈತರೇ ಅಡ್ಡಗಾಲಾಗಿರುವುದೂ ಇನ್ನೊಂದು ವೈರುಧ್ಯ.
ಮೇಲಿನ ಎಲ್ಲ ಯೋಜನೆಗಳಿಗೆ ನೀರಿನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅಕ್ಷರಶಃ ನೀರುಪಾಲಾಗಿದೆ.
ಈ ಮಧ್ಯೆ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ ಹೆಸರಿನ ಶಂಕುಸ್ಥಾಪನೆ, ಚಾಲನಾ ಸಮಾರಂಭ ಎಂಬ ನಾಟಕಗಳಿಗೆ ಲಕ್ಷಾಂತರ ರೂಪಾಯಿ ಪೋಲಾಗಿದೆ.
ಕಳಸಾ– ಬಂಡೂರಿ, ಗದಗದಲ್ಲಿ ಪೋಸ್ಕೋ ಕಂಪೆನಿ ವಿರುದ್ಧ, ದಾವಣಗೆರೆ ಭಾಗದಲ್ಲಿ ರೈತ ಹೋರಾಟಗಳನ್ನು ಗಮನಿಸಿದಾಗ ಆ ಹೋರಾಟಕ್ಕೆ ಮಠಾಧೀಶರು ಚಾಲನಾ ಶಕ್ತಿಯಾಗಿದ್ದರು ಎಂಬುದು ಗಮನಾರ್ಹ. ಅವರಿಂದಲಾದರೂ ಇಲ್ಲಿಯೂ ಹೋರಾಟಕ್ಕೆ ಚಾಲನೆ ಸಿಗಬೇಕು. ಇಲ್ಲಿ ಇಡೀ ಜಿಲ್ಲೆಗೆ ಯಜಮಾನನ ಸ್ಥಾನದಲ್ಲಿರುವ ಇಲ್ಲಿನ ಪ್ರಭಾವಿ ಮಠಾಧೀಶರು ಜನಪರ ಹೋರಾಟಕ್ಕೆ ಮನಸ್ಸು ಮಾಡಬೇಕು ಎಂಬುದು ಜನರ ಬಹುಕಾಲದ ಬೇಡಿಕೆ. ಆದರೆ, ಹೈ–ಕ ಮೀಸಲಾತಿ ಸಂಬಂಧಿಸಿದಂತೆ ಸಂವಿಧಾನದ ಕಲಂ – 371(ಜೆ) ಅನುಷ್ಠಾನದ ಹೋರಾಟಕ್ಕೆ ಮಠಾಧೀಶರನ್ನು ಒತ್ತಾಯದಿಂದ ಕರೆತರಬೇಕಾಯಿತು ಎಂದು ಈ ಭಾಗದ ಹೋರಾಟಗಾರರು ಸ್ಮರಿಸುತ್ತಾರೆ.
ತಮ್ಮ ಭೂಮಿ ಹಸನಾದರೆ ಮಠದ ಭಂಡಾರ ಇನ್ನಷ್ಟು ಸಮೃದ್ಧಗೊಳಿಸುತ್ತೇವೆ ಎಂಬ ಚಿಂತನೆ ಭಕ್ತರದ್ದು. ಹೀಗಾದಾಗ ಮಠ ಮತ್ತು ಭಕ್ತರ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬುದು ಭಕ್ತರ ಮನದಾಳ.
ಜನ ಮೌನವಾಗಿರಬೇಕು ಎಂದು ಬಯಸುವ ಜನಪ್ರತಿನಿಧಿಗಳು, ತಾತ್ಕಾಲಿಕ ತೃಪ್ತಿಗಳಲ್ಲೇ ಸುಮ್ಮನಾಗುವ ಜನರು. ಮನೋಭಾವ ಬದಲಾಗದ ವಾತಾವರಣ. ಇದೇ ರೀತಿಯ ವ್ಯವಸ್ಥೆಯನ್ನು ಕಾಪಾಡಿಕೊಂಡು ಮುಂದುವರಿಯುವ ತಂತ್ರಗಾರಿಕೆ ಇರುವಷ್ಟು ಕಾಲ ಇಲ್ಲಿಗೆ ಹಿಂದುಳಿದ, ಬರಪೀಡಿತ ಪ್ರದೇಶ, ದಾರಿದ್ರ್ಯ ಎಂಬುದು ಶಾಶ್ವತ ಹಣೆಪಟ್ಟಿ. ಅದೂ ಇಲ್ಲಿನವರ ಶಾಶ್ವತ ಬಂಡವಾಳವಾಗುತ್ತಿರುವುದೂ ಇನ್ನೊಂದು ವಿಪರ್ಯಾಸ.
–ಶರತ್ ಹೆಗ್ಡೆ ಕಡ್ತಲ














