Saturday, 7 June 2014

ರೈಲ್ವೆ ಮಂತ್ರಿ ಸ್ಮೈಲ್‍ಗೌಡ್ರಿಗೆ ಸಲಹೆಗಳು


ರೈಲ್ (ಸ್ಮೈಲ್) ಗೌಡ್ರೆ ನಮಸ್ಕಾರ.

ನಿಮ್ಮ ಸ್ಮೈಲ್‍ನಂತೆಯೇ ದೇಶದಲ್ಲಿ ರೈಲುಗಳೂ ಚೆನ್ನಾಗಿಯೇ ಓಡಲಿ ಎಂದು ಆಶಿಸುತ್ತಾ, ಕೆಲವು ಮಾತು ಹಂಚಿಕೊಳ್ಳಲು ಬಯಸುತ್ತೇನೆ.
* ನೀವು ರೈಲು ಪ್ರಯಾಣದ ದರ ಏರಿಸ್ತೀರಿ ಅಂತ ಹೇಳಿದ್ದನ್ನು ಕೇಳಿದ್ದೇನೆ. ಅದಕ್ಕೆ ವಿರೋಧ ಬರಲೂಬಹುದು. ಆಗ ನೀವು ಅದನ್ನು ಹಿಂದಿನ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರ ತಲೆಗೆ ಹಾಕಿ ಕೈತೊಳೆದುಕೊಳ್ಳುತ್ತೀರಿ. ಏಕೆಂದರೆ ಈ ಪ್ರಸ್ತಾವ ಇದ್ದದ್ದು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ. ನಾವು ಅದನ್ನು ಜಾರಿಗೊಳಿಸುತ್ತಿದ್ದೇವೆ ಎಂಬ ಕಾಮನ್ ಸ್ಟೇಟ್‍ಮೆಂಟ್ ಕೊಟ್ಟು ಮತ್ತೆ ಹಿಹಿ ಹಿ... ಅಂತ ಸ್ಮೈಲ್ ಕೊಡ್ತೀರಿ ಅಲ್ವಾ?
* ದರ ಏರಿಸದೇ ರೈಲು ಓಡಿಸಲು ಸಾಧ್ಯವಿಲ್ಲದಿರಬಹುದು. ಆದರೆ, ಶೇ 10ರಷ್ಟು ಏರಿಸಿದರೆ ಕೆಎಸ್‍ಆರ್‍ಟಿಸಿ ಬಸ್‍ಗಳಿಗೂ ರೈಲಿಗೂ ವ್ಯತ್ಯಾಸ ಇರೋದಿಲ್ಲ. ಆದ್ದರಿಂದ ಶೇ 3ರಿಂದ 4ರ ಒಳಗೆ ಇದ್ದರೆ ಸಾಕು. (ಅದೂ ಅಗತ್ಯವಿಲ್ಲ ಎಂಬುದು ನನ್ನ ವಾದ)
* ಗೌಡ್ರೇ ಪ್ರಶ್ನಿಸಿಕೊಳ್ಳಿ, ರೈಲ್ವೆ ಇಲಾಖೆ ನಿಜವಾಗ್ಲೂ ನಷ್ಟದಲ್ಲಿದೆಯಾ? ನಾನೇನೂ ನಿಮ್ಮ ಲೆಕ್ಕ ಪರಿಶೀಲಿಸಿಲ್ಲ. ಆದರೂ ನಷ್ಟದಲ್ಲಿ ಇಲ್ಲ ಎಂದು ಖಚಿತವಾಗಿ ಹೇಳಬಲ್ಲೆ. ಆದರೆ, ಓಡುವ ಎಲ್ಲ ರೈಲುಗಳ ಆದಾಯ ಪೂರ್ತಿಯಾಗಿ ಇಲಾಖೆಗೆ ಬರುತ್ತಿಲ್ಲ ಎಂದಷ್ಟೇ ಹೇಳಿ. ನಷ್ಟದಲ್ಲಿದೆ ಎಂದು ಸುಳ್ಳು ಹೇಳಬೇಡಿ. ಹಿಂದಿನವರೂ ಅದನ್ನೇ ಹೇಳಿದ್ದರು. (ಯಾಕೋ ನಿಮ್ಮ ಸ್ಮೈಲ್‍ನಲ್ಲಿ ಒಮ್ಮೊಮ್ಮೆ ವೀರಪ್ಪ ಮೊಯಿಲಿ ಅವರ ಪಟಾಕಿ ಬಾಯಿ ಕಾಣುವುದೂ ಉಂಟು. ಅದು ಬೇರೆ ವಿಚಾರ). ಬಸ್ಸಿನ ಆದಾಯ ಕಂಡಕ್ಟರ್, ಡ್ರೈವರ್ ಪಾಲಾದಂತೆ ನಿಮ್ಮ ಇಲಾಖೆಯಲ್ಲಿ ಇಡೀ ರೈಲನ್ನೇ ನುಂಗುವ ತಿಮಿಂಗಿಲಗಳೂ ಇದ್ದಾರೆ ಎಂಬುದೂ ನೆನಪಿರಲಿ.
* ಎಲ್ಲ ರೈಲುಗಳು ತುಂಬಿ ಓಡಾಡುತ್ತಿದ್ದರೂ 'ಇಲಾಖೆ ನಷ್ಟದಲ್ಲಿದೆ', ನೋ ಲಾಸ್ ನೋ ಪ್ರಾಫಿಟ್ (ಲಾಭವೂ ಇಲ್ಲ ನಷ್ಟವೂ ಇಲ್ಲ) ಹೇಗೆ? ಆ ದುಡ್ಡು ಎಲ್ಲಿ ಹೋಯಿತು?
* ರೈಲು ನಿಲ್ದಾಣಗಳ ಆಧುನೀಕರಣ ಘೋಷಿಸಿದ್ದರೂ ಅದು ಸೀಮಿತ ಪ್ರದೇಶಕ್ಕಷ್ಟೇ ಇದೆ. ಉಳಿದಂತೆ ಅಂಥ ಘನಾಂದಾರಿ ನಿರ್ಮಾಣಗಳು ಬಹುತೇಕ ಕಾಗದ ಪತ್ರದಲ್ಲೇ ಇವೆ. ಅತ್ತ ಇಲಾಖೆಯಲ್ಲಿ ದುಡ್ಡಿಲ್ಲ ಎನ್ನುತ್ತಾರೆ ನಿಮ್ಮವರು. ಯಾವುದನ್ನು ನಂಬಬೇಕು?
* ಎಲ್ಲ ಲೈನುಗಳಲ್ಲಿ ಪ್ರಯಾಣಿಕ ರೈಲುಗಳಷ್ಟೇ, ಕೆಲವೆಡೆ ಅದಕ್ಕಿಂತ ಹೆಚ್ಚು ಗೂಡ್ಸ್ ರೈಲುಗಳು ಓಡುತ್ತಿವೆ. ನಿಮ್ಮ ಇಲಾಖೆ ಅದಿಕಾರಿಗಳು ಯಾವ ಮಾರ್ಗವನ್ನೂ ನಷ್ಟದ್ದೆಂದು ಘೋಷಿಸಿಲ್ಲ. ಇಲಾಖೆಗೆ ಪ್ರಯಾಣಿಕ ರೈಲುಗಳ ಎರಡುಪಟ್ಟು ಆದಾಯ ಗೂಡ್ಸ್ ಸೇವೆಯಿಂದ  ಬರುತ್ತಿದೆ. ಹೇಳಿ ಈ ಆದಾಯ ಎಲ್ಲಿ ಹೋಯಿತು?
ದೇಶದ 1,15,000 ಕಿ.ಮೀ ಉದ್ದದ ಹಳಿ, 65,000 ಕಿ.ಮೀ ಮಾರ್ಗಗಳಲ್ಲಿ ರೈಲುಗಳು (ಗೂಡ್ಸ್/ ಪ್ಯಾಸೆಂಜರ್) ತುಂಬಿ ಓಡುತ್ತಿದ್ದರೂ ಇಷ್ಟೊಂದು ಬೃಹತ್ ವ್ಯವಸ್ಥೆಯಲ್ಲಿ ಅದರ ಆದಾಯ ಪಡೆಯಲು ಇಲಾಖೆ ಏಕೆ ವಿಫಲವಾಯಿತು? 2012ರಲ್ಲಿ ರೈಲ್ವೆ ಪ್ರಯಾಣಿಕ ರೈಲುಗಳಿಂದ 282,464.3 ರೂಪಾಯಿ ಆದಾಯ ಗಳಿಸಿತ್ತು. (ಆ ನಂತರದ ಲೆಕ್ಕ ಇಲ್ಲ)

ಗೌಡ್ರೇ ಹೀಗೆ ಮಾಡಿ

* ನಿಮ್ಮ ಇಲಾಖೆಯಲ್ಲಿ ಕೆಲವು ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳಿಗೆ ಅಗತ್ಯಕ್ಕಿಂತ ಜಾಸ್ತಿ ಸೌಲಭ್ಯ ಕೊಟ್ಟಿದ್ದೀರಿ. ವಲಯದ ಮುಖ್ಯ ಅಧಿಕಾರಿಗಳಿಗಾಗಿಯೇ ಪ್ರತ್ಯೇಕ ವಿಶೇಷ ರೈಲು (ಅವರು ರೈಲಿನ ಎಸಿ ಕೊಠಡಿಯೊಳಗೆ ಕುಳಿತು ಹಳಿ ಪರಿಶೀಲನೆ ಮಾಡುತ್ತಾರೆ) ಅವರಿಗೆ ಅದರಲ್ಲಿ ನೂರು ಮಂದಿ ಸಿಬ್ಬಂದಿ. ಅದಕ್ಕಾಗಿ ಇತರ ರೈಲುಗಳ ಓಡಾಟ ವಿಳಂಬ ಮಾಡಿ ಪ್ರಯಾಣಿಕರನ್ನು ಗೋಳಾಡಿಸುವುದು. ಚಿಕ್ಕಾಸಿನ ಪ್ರಯೋಜನವಿಲ್ಲದ ತಪಾಸಣೆಗೆ ಲಕ್ಷಾಂತರ ರೂಪಾಯಿ ವೆಚ್ಚ, ವಿಪರೀತ ಭದ್ರತೆ ಹೆಸರಿನ ಕಿರಿಕಿರಿ (ಇಂಥ 17 ವಲಯಗಳ ಹಿರಿಯ ಅಧಿಕಾರಿಗಳಿದ್ದಾರೆ ಜತೆಗೆ ಮಂಡಳಿಯ ಉನ್ನತಾಧಿಕಾರಿಗಳಿದ್ದಾರೆ). ಒಟ್ಟಿನಲ್ಲಿ ಕೋಟಿ ರೂಪಾಯಿ ಖರ್ಚಿನ ಬಾಬ್ತು ಇಲ್ಲಿಯೇ ಹೋಗುತ್ತದೆ. ಒಂದು ಕಾರಿನಲ್ಲಿ ನಿಲ್ದಾಣ ಭೇಟಿ, ಅಥವಾ ನಿತ್ಯ ಸಂಚಾರದ ರೈಲಿನಲ್ಲೇ ವಿಶೇಷ ಭೋಗಿ, ಹಳಿ ಮೇಲೆ ಓಡುವ ಒಂದು ಟ್ರಾಲಿಯಲ್ಲಿ ಮಾಡಬಹುದಾದ ಕೆಲಸವಿದು. ಇಂಥ ದುಂದುವೆಚ್ಚಕ್ಕೆ ಪೂರ್ತಿ ಕತ್ತರಿ ಹಾಕಿ. ಜನಸಾಮಾನ್ಯನ ದುಡ್ಡಿನಲ್ಲಿ ಇಂಥ ವೇಸ್ಟ್ ಬಾಡಿಗಳ ಪೋಷಣೆ ಬೇಡ.
* ಕೇಂದ್ರ ಸರ್ಕಾರದ ನೌಕರಿ, ಕೈತುಂಬಾ ಸಂಬಳ, ಸೌಲಭ್ಯ ಎಂದುಕೊಂಡು ತಲೆಕೆಡಿಸಿಕೊಳ್ಳದೇ ಕುರ್ಚಿ ಬಿಸಿ ಮಾಡುವ ನೂರಾರು ವ್ಯರ್ಥ ಜೀವಿಗಳನ್ನು ಕಿತ್ತೆಸೆಯಿರಿ (ಅದಕ್ಕೆ ವಿಆರ್‍ಎಸ್ ಯೋಜನೆ ತರಬಹುದು). ಹೊಸಬರನ್ನು ನೇಮಿಸಿ ಪ್ರತಿ ಕೆಲಸದ ಗುರಿ ಹಾಗೂ ಕಾಲಮಿತಿ ನೀಡಿ.
* ರೈಲ್ವೆ ಕಾಮಗಾರಿಗಳ ಸಂದರ್ಭ ಸಾಮಗ್ರಿ ಖರೀದಿ, ತಂತ್ರಜ್ಞಾನ ಅಳವಡಿಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಅಕ್ಷರಶಃ ಕಳ್ಳಕಾಕರ ಪಾಲಾಗುತ್ತಿದೆ. ಇಂದಿಗೂ ನಿಮ್ಮ ಇಲಾಖೆಯಲ್ಲಿ ಅಂಥ ಭಯಂಕರ ತಂತ್ರಾಂಶವೇನೂ ಅಳವಡಿಕೆಯಾಗಿಲ್ಲ. ಸಾಮಾನ್ಯ ರಿಸರ್ವೇಷನ್ ವೆಬ್‍ಸೈಟ್ ತೆರೆಯಲು ತಾಸು ಬೇಕು. ಕೌಂಟರ್‍ಗಳ ಮುಂದಿನ ಉದ್ದನೆಯ ಸರದಿ ಸಾಲು ತಪ್ಪಿಲ್ಲ. ಹೋಗಲಿ ಬ್ರಿಟೀಷರ ಕಾಲದಲ್ಲಾದ ಬ್ರಾಡ್‍ಗೇಜ್ ವಿನ್ಯಾಸವನ್ನು ಒಂದಿಂಚೂ ಬದಲಾವಣೆ ಮಾಡಲು ಇಂದಿಗೂ ಆಗಿಲ್ಲ. ಹಾಗಿದ್ದರೆ  ಇಲಾಖೆ ವೆಚ್ಚ ಮಾಡುವುದು ಯಾವುದಕ್ಕೆ?
* ಎಲ್ಲ ರೈಲು ನಿಲ್ದಾಣಗಳಲ್ಲಿ ಕನಿಷ್ಟ ಒಂದು ಗೂಡ್ಸ್ ಷೆಡ್ ಹೆಸರಿನ ತಗಡು ಮಾಡು ಆದರೂ ನಿರ್ಮಿಸಿ. ಖಂಡಿತ ಆದಾಯ ಹೆಚ್ಚಳವಾಗುತ್ತದೆ. ಸಣ್ಣ ಹಳ್ಳಿಗಳಿಗೂ ಸಿಮೆಂಟ್, ಗೊಬ್ಬರ, ತೈಲ, ಲಾರಿಗಳ ಬದಲು ರೈಲಿನಲ್ಲಿ ಹೋಗುತ್ತದೆ. ಮಂಗಳೂರಿನ ಸುರತ್ಕಲ್‍ನಿಂದ ಮುಂಬಯಿಗೆ ಆರಂಭಿಸಿದಂತೆ ಎಲ್ಲ ಮಾರ್ಗಗಳಲ್ಲಿಯೂ ಲಾರಿಗಳ ರೋಲ್ ಆನ್ ರೋಲ್ ಆಫ್ ಸೇವೆ ಆರಂಭಿಸಿ. ರಸ್ತೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇಲಾಖೆಯ ಆದಾಯ ಹೆಚ್ಚುತ್ತದೆ.
* ಸಾಧ್ಯತೆ ಇರುವಲ್ಲೆಲ್ಲಾ ರೈಲ್ವೆ ಕೊರಿಯರ್ ಸೇವೆ ಆರಂಭಿಸಿ. ಪ್ರತಿ ರೈಲಿನಲ್ಲೂ ಗಂಟೆಗೊಮ್ಮೆ ಟಪಾಲು ಸೇವೆ ಹೋಗಲಿ. ಸಣ್ಣಪುಟ್ಟ ಟಪಾಲು ಪತ್ರಗಳು ಈ ಮೂಲಕ ಹಾಲಿ ಇರುವ ಕೊರಿಯರ್ ವ್ಯವಸ್ಥೆಗಿಂತಲೂ ವೇಗವಾಗಿ ಗಮ್ಯ ತಲುಪುತ್ತವೆ.
* ಪಾರ್ಸೆಲ್ ಅಥವಾ ಗೂಡ್ಸ್ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಲು ಏಜೆಂಟರ ಬದಲು ಕಾರ್ಪೋರೇಟ್ ಸ್ವರೂಪದ ಪ್ರತಿನಿಧಿಗಳನ್ನು (ಪ್ರಮೋಟರ್ಸ್) ನೇಮಿಸಿ. ಅವರಿಗೆ ಆದಾಯ ಗುರಿ ನೀಡಿ.
* ಇಲಾಖೆ ಸಿಬ್ಬಂದಿಗೆ ಕನಿಷ್ಠ ಸೌಜನ್ಯದ ತರಬೇತಿ ಕೊಡಿಸಿ. ಹಾ ಇಲಾಖೆಯಲ್ಲಿರುವ ಅತ್ಯಂತ ಅಗತ್ಯದ ಸ್ಟೇಷನ್ ಮಾಸ್ಟರ್, ಮ್ಯಾನೇಜರ್, ಟಿಕೆಟ್ ಕೌಂಟರ್ ಸಿಬ್ಬಂದಿ, ಗಾರ್ಡ್‍ಗಳನ್ನು ತಕ್ಷಣ ನೇಮಿಸಿ.
* ಹಗಲು ಹೊತ್ತಿನಲ್ಲಿ ರಿಸರ್ವೇಷನ್ ಭೋಗಿಗೆ ಹತ್ತಿದ ಪ್ರಯಾಣಿಕರಿಂದ ಟಿಕೆಟ್ ತಪಾಸಣೆ ಮಾಡುವವರು ಹೆಚ್ಚುವರಿ ಮೊತ್ತ ವಸೂಲು ಮಾಡಿ ರಸೀದಿ ನೀಡುವ ಬದಲು ಸ್ವಲ್ಪ ಮೊತ್ತ ಪಡೆದು ಜೇಬಿಗಿಳಿಸುತ್ತಾರೆ. ಏನಿಲ್ಲವೆಂದರೂ ಒಬ್ಬ ಟಿಸಿ ಕನಿಷ್ಠ 1ರಿಂದ 2 ಸಾವಿರ ಕಮಾಯಿಸುತ್ತಾನೆ. ಅದಕ್ಕಾಗಿ ಹಗಲು ವೇಳೆ ಪ್ರಯಾಣಿಸುವವರಿಗೆ ವಿಧಿಸುವ ಹೆಚ್ಚುವರಿ ಮೊತ್ತದ ಪ್ರಮಾಣ ಇಳಿಸಿ. ಪ್ರಾಮಾಣಿಕವಾಗಿ ಹಣ ಪಾವತಿಸುವ ಮನೋಭಾವ ಪ್ರಯಾಣಿಕರಲ್ಲೂ ಮೂಡಲಿ. ಟಿಕೆಟ್ ತಪಾಸಣೆಕಾರರ ಮೇಲೆ ಹದ್ದಿನ ಕಣ್ಣಿಡಿ. ಇಂಥವರಿಂದ ದೊಡ್ಡ ಪ್ರಮಾಣದ ಆದಾಯ ಸೋರಿ ಹೋಗುತ್ತಿದೆ. ಇನ್ನು ಬೆಂಗಳೂರು- ಮೈಸೂರು ಮಾರ್ಗದಲ್ಲಂತೂ ಯಾವ ತಪಾಸಣೆಯೂ ಇರುವುದಿಲ್ಲ.
* ರೈಲುಗಳು, ನಿಲ್ದಾಣದಲ್ಲಿ ಹಾಕಿರುವ ಬೃಹತ್ ಜಾಹೀರಾತುಗಳ ಕೋಟ್ಯಂತರ ರೂಪಾಯಿ ಮೊತ್ತ, ಸ್ಟಾಲ್, ಕೆಟರಿಂಗ್ ಸರ್ವೀಸ್, ವಸತಿ ಕೊಠಡಿಗಳಿಂದ ಬಂದ ಆದಾಯವನ್ನೂ ಬಜೆಟ್‍ನಲ್ಲಿ ಪ್ರಕಟಿಸಿ.
* ನೀವು ನಾಲ್ಕು ಎಸ್‍ಗಳ ಬಗ್ಗೆ ಹೇಳಿದ್ದೀರಿ. ಸ್ಪೀಡ್(ವೇಗ), ಸರ್ವೀಸ್(ಸೇವೆ), ಸೆಕ್ಯೂರಿಟಿ(ಭದ್ರತೆ) ಮತ್ತು ಸೇಫ್ಟಿ (ಸುರಕ್ಷತೆ) ಅದಕ್ಕೆ ಇನ್ನೊಂದು ಎಸ್ (ಸ್ಯಾನಿಟೇಷನ್ (ನೈರ್ಮಲ್ಯ)) ಸೇರಿಸಿ. ರೈಲಿನ ಮೇಲೆ ಉಗಿಯುವ, ಮೂತ್ರ ಮಾಡುವ, ಗಲೀಜು ನರಪ್ರಾಣಿಗಳಿಗೆ ನಿರ್ದಾಕ್ಷಿಣ್ಯ ಹಿಂಸೆ ಕೊಡಲೇಬೇಕು. ನಿಲ್ದಾಣ, ರೈಲಿನ ಪಾವಿತ್ರ್ಯತೆ ಅರಿವಾಗಬೇಕು.
* ಇನ್ನು ರೈಲಿನಲ್ಲಿ ಯಾರು ಬೇಕಾದರೂ ಆಹಾರ ಪೂರೈಸುವಂತಿಲ್ಲ. ನಿಗದಿತ ಗುಣಮಟ್ಟ ಇದ್ದರೆ ಮಾತ್ರ ಅವಕಾಶ ಕೊಡಿ ( ಈಗಾಗಲೇ ಈ ಗುತ್ತಿಗೆ ನೀಡಿರುವುದರಲ್ಲಿಯೂ ಭ್ರಷ್ಟಾಚಾರದ ವಾಸನೆಯಿದೆ).

ಕರ್ನಾಟಕದ ಬಗ್ಗೆ ಮಾತು

* ಕರ್ನಾಟಕದಲ್ಲಿ ರೈಲು ಸೇವೆಯ ಮಹತ್ವ ಇನ್ನೂ ಪೂರ್ತಿಯಾಗಿ ಅರಿವಾಗಿಲ್ಲ. ಎಲ್ಲಿಗಾದರೂ ಪ್ರಯಾಣಿಸುವಾಗ ಮಾತ್ರ ರೈಲು ಇದೆಯೇ ಎಂದು ಕೇಳುತ್ತೇವೆ. ಅದರ ಮಹತ್ವ ಉತ್ತರ ಭಾರತದವರಿಗೆ, ಮುಂಬೈ, ತಮಿಳುನಾಡು ಅಥವಾ ಕೇರಳದವರಿಗೆ ಚೆನ್ನಾಗಿ ಗೊತ್ತು. ಅವರಿಗೆ ರೈಲು ಕೇವಲ ವಾಹನವಲ್ಲ. ಜೀವನದ ಒಂದು ಭಾಗ. ಅದು ನಮ್ಮಲ್ಲಿಯೂ ಬರಬೇಕಾದರೆ ಆ ಪ್ರಮಾಣದಲ್ಲಿ ರೈಲು ಸೇವೆ ವಿಸ್ತರಣೆಗೊಳ್ಳಬೇಕು. ಅದು ನಿಮ್ಮ ಅವಧಿಯಲ್ಲಿ ಆಗಲಿ. ತವರು ರಾಜ್ಯದ ಪ್ರೇಮ ಹೆಚ್ಚು ಇರಲಿ. ಅದನ್ನು ಬೇಕಿದ್ದರೆ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಂದ ಕಲಿಯಿರಿ.
* ನೀವು (ಅಥವಾ ಯಾರೇ ಮಂತ್ರಿಗಳು ಬಂದರೂ) ಬಜೆಟ್ ಮಾಡುವ ಮುನ್ನ ಪ್ರಯಾಣಿಕರ ಜತೆ ಚರ್ಚಿಸಿದ್ದೀರಾ? ಅಂಥದ್ದೊಂದು ಪ್ರಯತ್ನ ಯಾರೂ ಮಾಡಿದಂತಿಲ್ಲ. ಎಲ್ಲ ಸಂಸದರು ತಮ್ಮ ಕ್ಷೇತ್ರದ ರೈಲ್ವೆ ಸಲಹಾ ಸಮಿತಿಯ ಅಧ್ಯಕ್ಷರು/ ಸದಸ್ಯರು ಆಗಿರುತ್ತಾರೆ. ಆದರೆ, ಬಹುತೇಕವು ಕಾಟಾಚಾರದ ಸಭೆಗಳಾಗಿರುತ್ತವೆ. ಅಥವಾ ಶಿಷ್ಟಾಚಾರ ಪಾಲನೆ ಆಗುತ್ತವೆ.
ಗೌಡ್ರೇ. ಸಾಧ್ಯವಾದಷ್ಟು ರೈಲ್ವೆ ಸಲಹಾ ಸಮಿತಿಯಲ್ಲಿ ಕೇವಲ ಉದ್ಯಮಿಗಳು, ಗಣ್ಯರು, ಆಯಾ ಕ್ಷೇತ್ರದ ಸಂಸದರಿಗೆ ರೈಲ್ವೆ ಅಧಿಕಾರಿಗಳಿಗೆ ಬೇಕಾದವರು ಇರುತ್ತಾರೆ. ಬದಲಾಗಿ ನಿತ್ಯ ಬಳಕೆದಾರರು, ಜನಸಾಮಾನ್ಯರನ್ನು ಸೇರಿಸಿ. ದೇಶದ ಎಲ್ಲ ಭಾಗಗಳಲ್ಲಿ ಪ್ರಯಾಣಿಕರೇ ಕಟ್ಟಿಕೊಂಡ ಪರಿಣಾಮಕಾರಿ ಪ್ರಯಾಣಿಕರ ಸಂಘಟನೆಗಳಿವೆ. ನೀವು ಅವರ ಸಭೆಯನ್ನೂ ಕರೆದು ಸಲಹೆ ಸ್ವೀಕರಿಸಿ. ಅಥವಾ ನಿಮ್ಮ ಪ್ರತಿನಿಧಿಗಳು ಆ ಕೆಲಸ ಮಾಡಲಿ. ಪ್ರಯಾಣಿಕರ ಸಂಘಟನೆ/ ಹೋರಾಟ ಸಮಿತಿಗಳು ಕೇವಲ ದೂರು ನೀಡಲು, ಮನವಿ ಸಲ್ಲಿಸಲಷ್ಟೇ ಸೀಮಿತವಾಗುತ್ತಿವೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಖಂಡಿತ ನಿಮಗೇನೂ ನಷ್ಟವಿಲ್ಲ. ಬದಲಾಗಿ ಇಲಾಖೆಗೇ ಲಾಭವಿದೆ.
* ಕರ್ನಾಟಕದಲ್ಲಿ ರೈಲು ಸೇವೆ ವಿಸ್ತರಣೆಗೆ ವಿಪುಲ ಅವಕಾಶ ಇದೆ. ಮೊದಲು ಎಲ್ಲ ಹಳಿಗಳನ್ನು ದ್ವಿಪಥಗೊಳಿಸಿ. ಹೊಸ ಮಾರ್ಗ ರೂಪಿಸುವಾಗ ದ್ವಿಪಥ ವಿನ್ಯಾಸದಲ್ಲೇ ಘೋಷಣೆ ಹೊರಡಿಸಿ. ಭೂಸ್ವಾಧೀನಕ್ಕೆ ಅನುಕೂಲ. ಇಲ್ಲವಾದರೆ ಮತ್ತೊಮ್ಮೆ ಭೂಸ್ವಾಧೀನ ಮಾಡಬೇಕಾಗುತ್ತದೆ. ಈಗಾಗಲೇ ದ್ವಿಪಥ ಘೋಷಣೆ ಮಾಡಿರುವ, ನನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳು ( ಕಾರಣ ಹುಡುಕಿದರೆ ಕ್ಷುಲ್ಲಕವಾದವುಗಳೂ ಇವೆ) ನಿಮ್ಮ ಅವಧಿಯಲ್ಲಿ ಪೂರ್ಣಗೊಳ್ಳಲಿ. (ಉದಾಹರಣೆಗೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್ -ಆಂಧ್ರಪ್ರದೇಶದ ಮೆಹಬೂಬ್‍ನಗರದ 280 ಕಿ.ಮೀ ಅಂತರದ ರೈಲು ಮಾರ್ಗ ಕಾಮಗಾರಿ ಆರಂಭವಾಗಿ ಕೇವಲ 17 ವರ್ಷಗಳಷ್ಟೇ ಆಗಿವೆ!! ಬಹುಶಃ ಮುಂದಿನ ತಲೆಮಾರಿನ ವೇಳೆಗೆ ಪೂರ್ಣವಾದೀತು. ಬೆಂಗಳೂರು-ಮೈಸೂರು ಕ್ರಮಿಸಲು ಈಗ 4 ಗಂಟೆ ಆಗುತ್ತದೆ. ಬಸ್‍ನಲ್ಲಿ ಎರಡೂವರೆ ಗಂಟೆ ದಾರಿ. ಈ ಮಾರ್ಗ ದ್ವಿಪಥವಾಗಲು ಟಿಪ್ಪುವಿನ ಶಸ್ತ್ರಾಗಾರ ಅಡ್ಡಿಯಾಗಿದೆ. ಇದರ ಹಿಂದೆ ಹಲವಾರು ಮುಖಗಳಿವೆ. ದಾವಣಗೆರೆ- ತುಮಕೂರು ನೇರ ರೈಲು ಮಾರ್ಗ ದ್ವಿಪಥ ಕಾಮಗಾರಿಯೇನೋ ನಡೆಯುತ್ತಿದೆ. ನಿಮ್ಮ ಅವಧಿಯಲ್ಲಿ ಪೂರ್ಣವಾಗಲಿ) ಹೊಸಪೇಟೆ- ಹರಪನಹಳ್ಳಿ- ಹರಿಹರ ಲಿಂಕ್ ಮಾಡುವ ಕೆಲಸವಾಗಲಿ. ಆಗ ಬಳ್ಳಾರಿ- ಕೊಪ್ಪಳದಿಂದ ಬೆಂಗಳೂರಿಗೆ ಹೋಗುವ ಪ್ರಯಾಣದ ಅವಧಿ ಸುಮಾರು 3 ಗಂಟೆ ಕಡಿಮೆಯಾಗಲಿದೆ. ಇಲ್ಲಿ ಹರಿಹರ ಕೊಟ್ಟೂರು ರೈಲು ಓಡುತ್ತಿದೆ. ಹೊಸಪೇಟೆಗೆ ಹಳಿ ಹಾಕಬೇಕು.

ಸಮೀಕ್ಷೆ ನಡೆದ ಮಾರ್ಗಗಳು...

* ಬೈಂದೂರು- ಮಂಗಳೂರಿಗೆ ದ್ವಿಪಥವಾಗುವ ಪ್ರಸ್ತಾವ ಎಲ್ಲಿವರೆಗೆ ಬಂದಿದೆಯೋ ಗೊತ್ತಿಲ್ಲ. ಉಡುಪಿ ರೈಲು ನಿಲ್ದಾಣ ನಗರದ ಹೃದಯ ಭಾಗಕ್ಕೆ ಹತ್ತಿರವಾಗಬೇಕು. ಹೀಗಾದರೆ ಮಂಗಳೂರು- ಉಡುಪಿ- ಕುಂದಾಪುರಕ್ಕೆ ಎಕ್ಸ್‍ಪ್ರೆಸ್ ಬಸ್‍ಗಳ ಅವಲಂಬನೆ ತಪ್ಪುತ್ತದೆ. ಬಹು ಬೇಡಿಕೆಯ ಮುಂಬೈ- ಕನ್ಯಾಕುಮಾರಿಗೆ ಇನ್ನಷ್ಟು ರೈಲು ಓಡಿಸಬಹುದು.
* ಬೈಂದೂರು- ಕೊಲ್ಲೂರು- ಕುಂದಾಪುರ- ಹೆಬ್ರಿ- ಕಾರ್ಕಳ- ಮೂಡಬಿದ್ರೆ- ಬಿ.ಸಿ. ರಸ್ತೆ ಹೊಸ ಮಾರ್ಗ ಸಮೀಕ್ಷೆ ಆಗಿದೆ. ಕಾಮಗಾರಿ ಆರಂಭಿಸಿ.
* ಶಿವಮೊಗ್ಗ - ಹೊನ್ನಾಳಿ- ಹರಿಹರ ಮಾರ್ಗ ಬೇಗನೆ ಆಗಲೇಬೇಕು. ಹಾಗೆಯೇ ತಾಳಗುಪ್ಪದಿಂದ ಮುಂದೆ ಉತ್ತರ ಕನ್ನಡಕ್ಕೆ ಸಂಪರ್ಕ ಒದಗಿಸುವ ಯೋಜನೆ ಮಾಡಿದರೆ ಒಳ್ಳೆಯದು. ಮಧ್ಯಕರ್ನಾಟಕವೇನೋ ಪರ್ವಾಗಿಲ್ಲ. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ರೈಲು ಸೇವೆಗೆ ಹೆಚ್ಚು ಒತ್ತು ಬೇಕು.

ಮುಗಿಸುವ ಮುನ್ನ...

ಗೌಡ್ರೆ, ರಾಜಕೀಯ, ಆಡಳಿತದಲ್ಲಿ ಮುತ್ಸದ್ದಿತನ ಇದೆ ಎಂದು ಭಾವಿಸಿ ಈ ಸಲಹೆ ಕೊಟ್ಟಿದ್ದೇನೆ. ಇನ್ನು ರೈಲ್ವೆ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದ ನಿಮಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಮೋದಿಯವರ ವೇಗದ ಜತೆಗೆ ನಿಜವಾದ ಕಾಳಜಿಯುಳ್ಳ ಜನಪ್ರತಿನಿಧಿಗೆ ಇದೇನೂ ಕಷ್ಟವಾಗಲಿಕ್ಕಿಲ್ಲ. ಆದಾಯ ಸೋರಿಕೆ ತಡೆಗಟ್ಟಲು ಹಣಕಾಸು ಬೇಕಾಗಿಲ್ಲ. ಮೇಲೆ ಹೇಳಿದವುಗಳಲ್ಲಿ ಎಲ್ಲವನ್ನೂ ಮಾಡುತ್ತೀರಿ ಎಂದೂ ನಾನು ನಂಬಿಲ್ಲ. ಆದರೆ, ಇಚ್ಛಾಶಕ್ತಿಯಿದ್ದರೆ ಕೆಲವನ್ನಾದರೂ ಈಡೇರಿಸಬಹುದು. ಅದರಲ್ಲೂ ದರ ಏರಿಕೆ ಮಾಡದೇ ಇರಬಹುದು. ಒಬ್ಬ ಸಾಮಾನ್ಯ ಪ್ರಯಾಣಿಕನಾಗಿ ಕಂಡದ್ದು, ಕೇಳಿದ್ದನ್ನು ಬರೆದಿದ್ದೇನೆ. ಒಂದಿಷ್ಟು ನಿಮ್ಮ ಕಿವಿಗೆ/ ಮನಸ್ಸಿಗೆ ಬಿದ್ದೀತು ಎಂದು ಭಾವಿಸಿದ್ದೇನೆ.
                                             ತಮ್ಮ ವಿಶ್ವಾಸಿ
                                         ಶರತ್ ಹೆಗ್ಡೆ, ಕಡ್ತಲ