Saturday, 21 May 2016

ವೇಶ್ಯಾವಾಟಿಕೆ ಅಡ್ಡೆಗಳೂ, ಸಮಾಜ ಕಲ್ಯಾಣವೂ...

ವೇಶ್ಯಾವಾಟಿಕೆ ಅಡ್ಡೆ ಹೇಗೆ ರೂಪುಗೊಳ್ಳುತ್ತದೆ? ಅದಕ್ಕೆ ಬೇಕಾದ ಸಿದ್ಧತೆ, ಮನೋಸ್ಥಿತಿ ಏನು ಎಂಬ ಅಂದಾಜು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿಯೇ ಇದೆ. ಏಕೆಂದರೆ ಈ ಜ್ಞಾನ ಉಳ್ಳ ಕಾರಣದಿಂದಲೇ ಖಾಸಗಿ ಶಾಲೆಗಳನ್ನು ರಾಜ್ಯದ ಸಚಿವರೊಬ್ಬರು ವೇಶ್ಯಾಗೃಹಗಳಿಗೆ ಹೋಲಿಸಿ ಮಾತನಾಡಿದ್ದಾರೆ.
ಒಂದು ವಿಷಯ ಸ್ಪಷ್ಟಪಡಿಸುತ್ತೇನೆ. ಇಲ್ಲಿ ಖಾಸಗಿ ಶಾಲೆಗಳ ಪರ ವಕಾಲತ್ತು ವಹಿಸುತ್ತಿಲ್ಲ. ಆದರೂ ಸದ್ಯದ ಹೇಳಿಕೆಯ ಮೇಲೆ ಒಂದಿಷ್ಟು ಮಾತನಾಡಬೇಕು ಅನಿಸಿತು.  
ಈಗ ಸಚಿವ ಎಚ್‌. ಆಂಜನೇಯ ಅವರ ಹೇಳಿಕೆಯತ್ತಲೇ ಗಮನಿಸೋಣ. 
‘ಖಾಸಗಿ ಶಾಲೆಯವರಿಗೆ ದುಡ್ಡು ಮಾಡುವುದೊಂದನ್ನು ಬಿಟ್ಟು ಬೇರಾವ ಗುರಿಯೂ ಇರುವುದಿಲ್ಲ. ಅಂಥ ಸಂಸ್ಥೆಗಳಿಗೂ ವೇಶ್ಯಾವಾಟಿಕೆ ಅಡ್ಡೆಗಳಿಗೂ ಯಾವ ವ್ಯತ್ಯಾಸವೂ ಇಲ್ಲ’ ಎಂದಿದ್ದಾರೆ. 
ಸಚಿವರ ಹೇಳಿಕೆಯನ್ನು ಅವರು ನೀಡಿರುವ ಹೋಲಿಕೆಯನ್ನು ಹೊರತುಪಡಿಸಿ ನೋಡುವುದಾದರೆ ಅದು ಸರಿಯಾಗಿಯೇ ಇದೆ. ಏಕೆಂದರೆ ದೇಶದಲ್ಲಿ ಶಿಕ್ಷಣ ಮಾಫಿಯಾದ ಬಗ್ಗೆ ಮಾರ್ಮಿಕವಾಗಿಯೇ ನುಡಿದಿದ್ದಾರೆ.
ಆದರೆ...
ನಮ್ಮ ರಾಜ್ಯದಲ್ಲಿಯೂ ಸೇರಿದಂತೆ ಸಚಿವರು ಹೇಳಿದ ‘ವೇಶ್ಯಾವಾಟಿಕೆ ಅಡ್ಡೆ’ಗಳ ಬಹುಪಾಲು ಮಾಲೀಕರು ಯಾರು? ಇದೇ ಖಾದಿಧಾರಿಗಳಲ್ಲವೇ? ಜತೆಗೆ ಕಾವಿಧಾರಿಗಳೂ ಇದ್ದಾರೆ.
ಬೀದಿಬದಿಯ ‘ವೇಶ್ಯಾವಾಟಿಕೆ’ಯಿಂದ ಹಿಡಿದು ಹೈಟೆಕ್‌ (ಎಂಜಿನಿಯರಿಂಗ್‌, ಮೆಡಿಕಲ್‌) ‘ವೇಶ್ಯಾವಾಟಿಕೆ’ಯ ಅಡ್ಡೆಗಳು ಯಾರ ಕೈಯಲ್ಲಿವೆ? ಈ ಅಡ್ಡೆಗಳನ್ನು ಮುಚ್ಚಲು ಸರ್ಕಾರ ಮನಸ್ಸು ಮಾಡಬಹುದಲ್ಲವೇ?
ಬದಲಾಗಿ ‘ವೇಶ್ಯಾಗೃಹ’ಗಳನ್ನು ಸ್ಥಾಪಿಸಲು ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವುದು ಸರ್ಕಾರಗಳೇ ಅಲ್ಲವೇ? 
ಹೇಗೆಂದು ವಿಶ್ಲೇಷಿಸೋಣ
ಶಿಕ್ಷಣ ಮಾಫಿಯಾ ಏಕೆ ಬಂತು?
ಒಂದಾನೊಂದು ಕಾಲದಲ್ಲಿ ಅಂತಿಟ್ಟುಕೊಳ್ಳಿ. ಏಕೆಂದರೆ ಇವೆಲ್ಲ ಆಗಿರುವುದು ನಾವು ಹುಟ್ಟುವ ಮುಂಚೆ...
ಕರಾವಳಿ ಪ್ರದೇಶದಲ್ಲಿ ಗೋವಾದಿಂದ ಕೇರಳ ತೀರದವರೆಗೆ ಕ್ರೈಸ್ತ ಮಿಷನರಿಗಳು ಧರ್ಮ ಪ್ರಚಾರದ ಉದ್ದೇಶದಿಂದ ಬಂದು ಶಿಕ್ಷಣ ಸಂಸ್ಥೆಗಳನ್ನು ತೆರೆದವು. ಮುಂದೆ ಅವು ಪೂರ್ಣ ಪ್ರಮಾಣದಲ್ಲಿ ಶಿಕ್ಷಣ, ಆರೋಗ್ಯ ಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡವು. ಇತ್ತೀಚೆಗೆ ಜೈನರು, ಮುಸ್ಲಿಮರಿಗೆ ಸೇರಿದ ಶಿಕ್ಷಣ ಸಂಸ್ಥೆಗಳೂ ಇವೆ. 
ಮಲೆನಾಡಿನ ಭಾಗಗಳಲ್ಲಿ ಐನೋರ ಮಠಗಳು, ಬ್ರಾಹ್ಮಣರ ಗುರುಮಠಗಳು ಅಷ್ಟೋ ಇಷ್ಟೋ ಓದುಬರಹ ಕಲಿಸಿದವು. ಮಧ್ಯ, ಉತ್ತರ ಕರ್ನಾಟಕ ಭಾಗಗಳಲ್ಲಿ ಲಿಂಗಾಯತ ಸಮುದಾಯದ ಶಿಕ್ಷಣ ಸಂಸ್ಥೆಗಳು ಅಗಾಧ ಪ್ರಮಾಣದಲ್ಲಿ ಅಕ್ಷರ ದಾಸೋಹದಲ್ಲಿ ತೊಡಗಿದವು. 
ಈ ಎಲ್ಲ ಖಾಸಗಿ ಸಂಘ ಸಂಸ್ಥೆಗಳ ಸೇವಾ ಫಲದಿಂದಲೇ ರಾಜ್ಯದಲ್ಲಿ ಸುಶಿಕ್ಷಿತರ ಪ್ರಮಾಣ ಏರಿತು. ಬಳಿಕ ನಿಧಾನವಾಗಿ ಸರ್ಕಾರಿ ಶಾಲೆಗಳು ತೆರೆಯಲ್ಪಟ್ಟವು. ಒಂದು ವೇಳೆ ಸರ್ಕಾರವೊಂದನ್ನೇ ನಂಬಿ ಕುಳಿತಿದ್ದರೆ ಈ ಮಟ್ಟದ ಶಿಕ್ಷಣ ಪ್ರಸಾರಕ್ಕೆ ಇನ್ನೂ ಒಂದು ಶತಮಾನ ಕಳೆಯಬೇಕಿತ್ತು. 
ಆಗ ಈ ಶಿಕ್ಷಣ ಸಂಸ್ಥೆಗಳ ಆಡಳಿತದವರಿಗೆ ಸಮಾಜದ ನೈಜ ಕಾಳಜಿ ಇತ್ತು. ಹಣದಾಹ ಇಲ್ಲದ ನಿಜವಾದ ಸೇವೆ ಅಲ್ಲಿ ನಡೆಯಿತು. ಲಿಂಗಾಯತ ಸಂಸ್ಥೆ ಸ್ಥಾಪಿಸಿದವರಂತೂ ಹಿಡಿಗಾಳು ಬಿಕ್ಷೆ ತಂದು ವಿದ್ಯಾರ್ಥಿಗಳಿಗೆ ಅನ್ನ ಬಡಿಸಿದ ದಿನಗಳನ್ನೂ ಈ ನಾಡು ಕಂಡಿತ್ತು.
ಆಗ ಸಂಸ್ಥೆಗಳ ಸೇವೆ ಮೆಚ್ಚಿದ ಸರ್ಕಾರ ಅವುಗಳಿಗೆ ವೇತನಾನುದಾನ ಒದಗಿಸಿ ಒಂದು ಆರ್ಥಿಕ ಬೆಂಬಲ ನೀಡಿತು.  
ಸುಲಿಗೆ ಆರಂಭವಾದದ್ದು ಎಲ್ಲಿ?
ಸರ್ಕಾರ ಹೊಸ ಶಿಕ್ಷಣ ಸಂಸ್ಥೆಗಳಿಗೆ ವೇತನಾನುದಾನವನ್ನು ಸಂಪೂರ್ಣ ನಿಲ್ಲಿಸಿತೋ ಅಲ್ಲಿಂದ ಸುಲಿಗೆಯ ಹೊಸ ರಾಜ ಮಾರ್ಗ ತೆರೆಯಿತು. ಅಲ್ಲಿಂದಲೇ ಡೊನೇಷನ್‌ ಹಾವಳಿ ಆರಂಭವಾಯಿತು. 
ಈ ಬಗ್ಗೆ ಪ್ರಶ್ನಿಸಿದರೆ ಶಿಕ್ಷಣ ಸಂಸ್ಥೆಯ ನಿರ್ವಹಣೆ ಸುಲಭವೇ? ಸಿಬ್ಬಂದಿಯ ವೇತನ, ಮೂಲಸೌಕರ್ಯ, ಬಸ್‌, ವ್ಯಾನ್‌, ಯೂನಿಫಾರಮ್‌ ಇತ್ಯಾದಿ ಅಗತ್ಯ – ಅನಗತ್ಯ ವ್ಯವಸ್ಥೆಗಳನ್ನು ಒದಗಿಸುವ ಮೆನುಕಾರ್ಡನ್ನು ಈ ಸಂಸ್ಥೆಗಳ ಮುಖ್ಯಸ್ಥರು ಪೋಷಕರ, ಸರ್ಕಾರದ ಮುಂದಿಟ್ಟರು. 
– ಇದೇ ಡೊನೇಷನ್‌ ಎಂಬ ಭೂತನೃತ್ಯಕ್ಕೆ ವೇದಿಕೆಯಾಯಿತು. ಜತೆಗೆ ಬದಲಾದ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಪ್ರತಿಷ್ಠೆ, ವಿಚಿತ್ರ ಆಕರ್ಷಣೆಗಳೂ ಖಾಸಗಿ ಶಾಲೆಗಳತ್ತ ಸಾವಿರಾರು ‘ಗಿರಾಕಿಗಳನ್ನು’ ಸೆಳೆಯುವಲ್ಲಿ ಯಶಸ್ವಿಯಾದವು.
ಇನ್ನೊಂದು ಮಗ್ಗುಲನ್ನು ನೋಡಬೇಕು. ಇವು ಸಾವಿರಾರು ಶಿಕ್ಷಕರಿಗೆ ಅನ್ನದ ದಾರಿಯನ್ನು ಮಾಡಿಕೊಟ್ಟಿಯಾದರೂ ಅವರು ಶೋಷಣೆಮುಕ್ತರಲ್ಲ ಎಂಬುದೂ ಗಮನಾರ್ಹ.
ಈ ಮೆನುಕಾರ್ಡ್‌ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಲಾಭ ತೆರಿಗೆರಹಿತವಾಗಿ ಬರುತ್ತದೆಂದು ಗೊತ್ತಾಗಿದ್ದೇ ತಡ, ಯಾರೂ ಕೂಡಾ ಸರ್ಕಾರದ ವೇತನಾನುದಾನ ಪಡೆಯುವ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಒಂದು ವೇಳೆ ಸರ್ಕಾರದ ವೇತನಾನುದಾನ ಬಂದರೆ ತಾವು ಪಡೆಯುವ ಶುಲ್ಕಕ್ಕೂ ಇತಿಮಿತಿ ಹಾಕಿಕೊಳ್ಳಬೇಕಾಗುತ್ತದೆ. ಆಗ ಮೆನುಕಾರ್ಡ್‌ನಿಂದ ಬರುವ ಲಾಭವನ್ನೂ ತೋರಿಸಲೇಬೇಕಾಗುತ್ತದೆ. ಆದ್ದರಿಂದ ಇಂದಿಗೂ ವೇತನಾನುದಾನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸರ್ಕಾರ ಕೇಳುವ ಶೇ 25ರಷ್ಟು ಆರ್‌ಟಿಇ ಸೀಟು ಕೊಟ್ಟು ಕೈತೊಳೆದುಕೊಂಡರೆ ಮುಗಿಯಿತು ಎಂಬ ಭಾವನೆ ಸಂಸ್ಥೆಗಳದ್ದು.
ಈ ನಡುವೆ ಬಹಳ ಹಿಂದೆ ವೇತನಾನುದಾನಕ್ಕೆ ಅರ್ಜಿ ಸಲ್ಲಿಸಿದ ಬೆರಳೆಣಿಕೆಯ ಸಂಸ್ಥೆಗಳಿಗೆ ಅನುದಾನ ಮಂಜೂರಾಯಿತು. ಆಗ ನೋಡಿ ಅಲ್ಲಿ ಶಿಕ್ಷಕರ ಸುಲಿಗೆ ನಡೆಯಿತು. ‘ವೇತನಾನುದಾನ ಬರುತ್ತದೆ ನಿಮ್ಮನ್ನು ಪರ್ಮನೆಂಟ್‌ ಮಾಡುತ್ತೇವೆ. ನೀವು ಇದಕ್ಕಾಗಿ 5 ಲಕ್ಷ ಕೊಡಿ’ ಎಂದು ಶಿಕ್ಷಕರಿಂದಲೇ ಸುಲಿಗೆ ಮಾಡಿದ, ಅವರು ಕಣ್ಣೀರು ಹಾಕಿದ ಉದಾಹರಣೆಗಳನ್ನು ದಾವಣಗೆರೆಯಲ್ಲಿ ನಾನು ನೋಡಿದ್ದೇನೆ. ಸಾಲ ಮಾಡಿ ಹಣ ಜೋಡಿಸಿಕೊಟ್ಟದ್ದೂ ಇದೆ. ಅತ್ತ ಪೋಷಕರಿಂದಲೂ ಇತ್ತ ಶಿಕ್ಷಕರಿಂದಲೂ ಅನಾಯಾಸವಾದ ಸುಲಿಗೆಯನ್ನು ನೂರಾರು ಆಡಳಿತ ಮಂಡಳಿಯವರು ಮಾಡಿದರು. ಮಾತ್ರವಲ್ಲ ನಿರ್ದಿಷ್ಟ ಜಾತಿ, ಪಂಗಡದ ಹೆಸರಿನಲ್ಲಿಶಿಕ್ಷಣ ಸಂಸ್ಥೆ ತೆರೆದು, ಬರಬೇಕಾದ ಅನುದಾನವೆಲ್ಲಾ ಕೈ ಸೇರಿದ ಮೇಲೆ ಸಂಸ್ಥೆಯನ್ನು ಮುಚ್ಚಿ ಶಿಕ್ಷಕರಿಗೆ ಬಿಡಿಗಾಸೂ ಕೊಡದೆ ಮನೆಗೆ ಕಳುಹಿಸಿದ ರಾಜ್ಯದ ಪ್ರಮುಖ ಶಾಸಕರೂ ಇದ್ದಾರೆ.
ಮತ್ತೆ ಅದೇ ವಿಷಯ ನೆನಪಿಸುತ್ತೇನೆ. ಸಚಿವರು ಹೇಳಿದ ‘ವೇಶ್ಯಾಗೃಹ’ಗಳ ಮಾಲೀಕರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು.
ಇದೇ ವೇಳೆ ಎಲ್ಲ ಸೌಲಭ್ಯ, ನುರಿತ ಶಿಕ್ಷಕರನ್ನು ಹೊಂದಿದ್ದೂ ಸರ್ಕಾರಿ ಶಾಲೆಗಳೇಕೆ ಸೊರಗಿದವು? ಅವುಗಳೇಕೆ ಮಕ್ಕಳನ್ನು ಸೆಳೆಯುವಲ್ಲಿ ವಿಫಲವಾದವು?
ನಮ್ಮ ಊರಿನ ಶಾಲೆಯಲ್ಲಿ 250ರಷ್ಟಿದ್ದ ಮಕ್ಕಳ ಸಂಖ್ಯೆ ಅರ್ಧಕ್ಕಿಂತಲೂ ಕಡಿಮೆಯಾಗಿದೆ. ನಾನು ಓದಿದ ಪಕ್ಕದೂರಿನ ಶಾಲೆಯಲ್ಲಿ ಒಂದೂವರೆ ದಶಕದ ಹಿಂದೆ 450ರಷ್ಟಿದ್ದ ಮಕ್ಕಳ ಸಂಖ್ಯೆ 125ಕ್ಕೆ ಇಳಿದಿದೆ. ಅದೇ ಶಾಲೆಯಿಂದ ಒಂದೂವರೆ ಪರ್ಲಾಂಗ್‌ ದೂರದಲ್ಲಿರುವ ಖಾಸಗಿ ಶಾಲೆ ಮಕ್ಕಳಿಂದ ತುಂಬಿ ತುಳುಕುತ್ತಿದೆ. ಸುಶಿಕ್ಷಿತರ ಪ್ರದೇಶವೆನಿಸಿರುವ ಕರಾವಳಿ ಪ್ರದೇಶದ ಉತ್ತಮವೆನಿಸಿಕೊಂಡ ಸರ್ಕಾರಿ ಶಾಲೆಗಳ ಸ್ಥಿತಿಗತಿಯೇ ಹೀಗಾದರೆ ರಾಜ್ಯದ ಹಿಂದುಳಿದ ಜಿಲ್ಲೆ, ತಾಲ್ಲೂಕುಗಳ ಪರಿಸ್ಥಿತಿಗೆ ಪ್ರತ್ಯೇಕ ವಿವರಣೆ ಬೇಡ. 
ಹಳ್ಳಿ ಹಳ್ಳಿಗಳಲ್ಲಿ ಖಾಸಗಿ ಶಾಲೆಗಳ ವ್ಯಾನ್‌ಗಳ ಹಾರನ್‌ ಕೇಳಿಬರುತ್ತಿದೆ. ಆಟೋರಿಕ್ಷಾದವರಿಗೆ ಅದೊಂದು ಆದಾಯ ಮೂಲವಾಗಿದೆ. ಯಾಕೆ ಹೀಗೆ?
ಹೌದು ಇಲ್ಲಿ ಲೋಪ ಇದೆ. 
ಒಂದು ಉದಾಹರಣೆ ಹೇಳುತ್ತೇನೆ. ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದಾಗ ಆದ ಅನುಭವವಿದು. ವರ್ಷದ ಅಂತ್ಯದಲ್ಲಿ ನಾವು (ಉಪನ್ಯಾಸಕರು) ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ಗಳಾಗಬೇಕಾದ ಪರಿಸ್ಥಿತಿ. ಕರಾವಳಿ ಭಾಷೆಯಲ್ಲಿ ಹೇಳಬೇಕಾದರೆ ಮಾರುಕಟ್ಟೆಯಲ್ಲಿ ಮೀನು ಮಾರುವವರಂತಾಗಿದ್ದೆವು. ಸಂಸ್ಥೆ ಹೇಳಿದ್ದಿಷ್ಟೇ. ನೀವು ಉಳಿಯಬೇಕಾದರೆ ಕೋರ್ಸ್‌ ಉಳಿಯಬೇಕು. ಅದು ಉಳಿಯಬೇಕಾದರೆ ವಿದ್ಯಾರ್ಥಿಗಳು ಬರಬೇಕು. ಅವರು ಬರುವಂತೆ ನೀವು ಮಾಡಬೇಕು. ಅಂತೂ 15 ವಿದ್ಯಾರ್ಥಿಗಳನ್ನು ಸೇರಿಸುವಷ್ಟರಲ್ಲಿ ಹೈರಾಣವಾಗಿದ್ದೆವು. ಕೋರ್ಸ್‌ ಉಳಿಯಿತು. ನಮ್ಮ ಉದ್ಯೋಗವೂ. 
ಅಂದರೆ ಇಲ್ಲಿ ಗಮನಿಸಿ, ಮಾರುಕಟ್ಟೆ ಪರಿಭಾಷೆಯಲ್ಲಿ ಹೇಳಬೇಕಾದರೆ  ನಮಗಿದ್ದದ್ದು ಟಾರ್ಗೆಟ್‌(ಗುರಿ). ಟಾರ್ಗೆಟ್‌ ತಲುಪಿದರೆ ನಮ್ಮ ಉಳಿವು ಮತ್ತು ಸೌಲಭ್ಯಗಳು. ಇಲ್ಲವಾದರೆ ನಾವು ಮನೆಗೆ. ಆ ಟಾರ್ಗೆಟ್‌ನ್ನು ಮುಂದಿನ ಬಾರಿಗೆ ವಿಸ್ತರಿಸುವ ಕೆಲಸ. ಅಂದರೆ ನಾವು ಅಲ್ಲಿ ಗುಣಮಟ್ಟ ಕಾಪಾಡಿಕೊಂಡು ಒಳ್ಳೆಯ ಫಲಿತಾಂಶ ಕೊಟ್ಟರೆ ಮಾತ್ರ ಮತ್ತೆ ವಿದ್ಯಾರ್ಥಿಗಳನ್ನು ಸೆಳೆಯಬಹುದು. ಅಂದರೆ ವರ್ಷವಿಡೀ ಜಾಗೃತ ಮನೋಸ್ಥಿತಿ. ಇದು ಖಾಸಗಿ ವಲಯದಲ್ಲಿ ನಡೆಯುವ ಎಚ್ಚರಿಕೆಯ ಕೆಲಸಗಳು. ಅತಂತ್ರತೆ ಅಥವಾ ಅಭದ್ರತೆ ನಮ್ಮನ್ನು ಜಾಗೃತ ಸ್ಥಿತಿಯಲ್ಲಿಡುತ್ತದೆ. ಅದಕ್ಕೆ ತಕ್ಕಷ್ಟು ಮಾನವ ಸಂಪನ್ಮೂಲವನ್ನೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಂದಿವೆ ಎಂಬುದೂ ಗಮನಾರ್ಹ. 
ಸರ್ಕಾರಿ ಶಾಲೆಗಳಲ್ಲಿ ಮೇಲೆ ಹೇಳಿದ್ದಕ್ಕಿಂತ ತದ್ವಿರುದ್ಧ ಪರಿಸ್ಥಿತಿ. ಈ ಶಾಲೆಗಳ ಗುರುಗಳಿಗೆ ಗುರಿಯೂ ಇಲ್ಲ. ಜವಾಬ್ದಾರಿ ಮೊದಲೇ ಇಲ್ಲ. ಸಾಲದ್ದಕ್ಕೆ ಪಾಠ ಹೇಳುವುದೊಂದನ್ನು ಬಿಟ್ಟು ಎಲ್ಲ ಒತ್ತಡಗಳನ್ನು ನಿಭಾಯಿಸಬೇಕಾದ ಅನಿವಾರ್ಯ ಪರಿಸ್ಥಿತಿ. ಈ ಮಟ್ಟದಲ್ಲಿ ಶಿಕ್ಷಕರದ್ದು ಸರ್ಕಾರಿ ಜೀತ. ಅದಕ್ಕೆ ತಕ್ಕಂತೆ ಶಿಕ್ಷಕರ ತೀವ್ರ ಕೊರತೆ. ಎಲ್ಲೆಲ್ಲೋ ನೇಮಿಸಿ ಅವರನ್ನು ಮಾನಸಿಕವಾಗಿ ನಿತ್ಯ ನರಕಯಾತನೆ ಮಾಡಿಸಿ ಸಾಯಿಸುತ್ತಿದೆ ಈ ಸರ್ಕಾರ. ಮುಖ್ಯ ಶಿಕ್ಷಕನೊಬ್ಬ ಸರಿಯಾದ ನಿರ್ಧಾರ ಕೈಗೊಳ್ಳಲು ಸಾವಿರ ನಿರ್ಬಂಧಗಳ ಅಡ್ಡಿ. ಇದೊಂದೇ ಸಾಲದೇ ಸರ್ಕಾರಿ ಶಾಲೆಗಳ ಸಾವಿಗೆ. ಸರ್ಕಾರದ ಆದಾಯ ಮೂಲವೆಲ್ಲಾ ಕಂಡವರಿಗೆ ಕೊಡಲು, ಬಿಟ್ಟಿ ಬಿಕ್ಷೆ ಸೌಲಭ್ಯಗಳನ್ನು ಕೊಟ್ಟು, ಅವರನ್ನು ಸ್ವಾಭಿಮಾನರಹಿತ ಶಾಶ್ವತ ಬಿಕ್ಷುಕರನ್ನಾಗಿಸಲು ವ್ಯಯವಾಗುತ್ತಿದೆ ಎಂಬುದನ್ನು ಬೇರೆ ಹೇಳಬೇಕಿಲ್ಲ. 
ಹಾಗಿದ್ದರೆ ಸಚಿವರು ಹೇಳಿದ ‘ವೇಶ್ಯಾವಾಟಿಕೆ’ ತಡೆಗಟ್ಟಲು ಏನು ಮಾಡಬಹುದು?
* ಮೊದಲು ಬಿಟ್ಟಿ ಯೋಜನೆಗಳ ಧನ ಅಪವ್ಯಯ ತಡೆಗಟ್ಟಿ ಅದನ್ನು ಶಿಕ್ಷಣ ಕ್ಷೇತ್ರಕ್ಕೆ ತಿರುಗಿಸಿ.
* ಒಂದು ಪ್ರಾಮಾಣಿಕ, ಪರಿಣತರ ತಂಡ ರಚಿಸಿ ರಾಜ್ಯದ ಶಿಕ್ಷಣ ಸಂಸ್ಥೆಗಳ ಸಮೀಕ್ಷೆ ನಡೆಸಿ ನಿಜವಾಗಿಯೂ ಅರ್ಹತೆ ಉಳ್ಳ ಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸಿ.
* ಈ ರೀತಿ ವೇತನಾನುದಾನಕ್ಕೆ ಒಳಪಟ್ಟ ಸಂಸ್ಥೆಗಳು ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಒಂದು ರೂಪಾಯಿಯನ್ನೂ ಹೆಚ್ಚುವರಿಯಾಗಿ ಪಡೆಯುವಂತಿಲ್ಲ. ಇವುಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇರಲಿ. 
* ಅನುದಾನದ ವೇತನ ನೀಡುವ ಮೊದಲು ಈ ಸಂಸ್ಥೆಗಳ ಶಿಕ್ಷಕರಿಗಾಗಿ ಅರ್ಹತಾ ಪರೀಕ್ಷೆ ನಡೆಯಲಿ. ಅರ್ಹತೆ ಉಳ್ಳವರಿಗಷ್ಟೇ ಕೆಲಸ ಸಿಗಲಿ. (ಇಲ್ಲವಾದರೆ ಶಾಶ್ವತ ಉದ್ಯೋಗ ಕೊಡುವ ಹೆಸರಿನಲ್ಲಿ ಅವರ ಸುಲಿಗೆ ನಡೆಯುವ ಸಾಧ್ಯತೆಯಿದೆ.)
* ಇವೆಲ್ಲವೂ ನರ್ಸರಿಯಿಂದ ಹಿಡಿದು ವೃತ್ತಿ ಶಿಕ್ಷಣದವರೆಗೂ ಒಂದೇ ನಿಯಮ ಅನ್ವಯಿಸಬೇಕು. 
* ನಿಯಮ ಪಾಲಿಸದ, ಮೂಲಸೌಲಭ್ಯ ಇಲ್ಲದ, ಕಿಷ್ಕಿಂಧೆಯಂಥ ಅಸುರಕ್ಷಿತ ಖಾಸಗಿ ಶಾಲೆಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಬಿಡಿ. ಅಲ್ಲಿನ ಶಿಕ್ಷಕರನ್ನು ಅರ್ಹತಾ ಪರೀಕ್ಷೆ ಮೂಲಕ ಸರ್ಕಾರಿ ಶಾಲೆಗಳಿಗೆ ವರ್ಗಾಯಿಸಿ.
* ಸಹಜವಾಗಿ ಸಚಿವರು ಹೇಳಿದ ‘ವೇಶ್ಯಾವಾಟಿಕೆ ಅಡ್ಡೆ’ಯವರು ತಣ್ಣಗಾಗುತ್ತಾರೆ
* ಇನ್ನು ಸರ್ಕಾರಿ ಶಾಲೆಗಳನ್ನು ಬಲಪಡಿಸಲೇಬೇಕು. ಶಿಕ್ಷಕರಿಗೆ ಸರ್ಕಾರಿ ನೌಕರಿ ಎಂಬ ಒಂದೇ ಕಾರಣಕ್ಕೆ ನೀಡುವ ಮಾನಸಿಕ ಹಿಂಸೆ ( ವರ್ಗಾವಣೆ ಸಮಸ್ಯೆ, ಎಲ್ಲೆಲ್ಲೋ ನೇಮಕಾತಿ ಮಾಡುವುದು, ವೇತನ ವಿಳಂಬ....), ಪಠ್ಯೇತರ ಹೊರೆ ( ಬಿಸಿಯೂಟ, ಅನಗತ್ಯ ಸಮೀಕ್ಷೆಗಳು... ಗುಮಾಸ್ತಗಿರಿ) ಸಂಪೂರ್ಣ ನಿಲ್ಲಿಸಿ. 
* ಶಿಕ್ಷಕರು ತಮ್ಮ ಪ್ರದೇಶದ ಮಕ್ಕಳ ಸಂಖ್ಯೆ ಹಾಗೂ ತಮ್ಮ ಶಾಲಾ ಸಾಮರ್ಥ್ಯಕ್ಕನುಗುಣವಾಗಿ ಮಕ್ಕಳನ್ನು ಕರೆತರಲೇಬೇಕು. ಪ್ರತಿ ಶಿಕ್ಷಕನಿಗೂ ಗುರಿ ಕೊಡಲೇಬೇಕು. ಇಲ್ಲವಾದರೆ ಅವನ ಕೆಲಸಕ್ಕೇ ಸಂಚಕಾರದ ಆತಂಕವೂ ಇರಬೇಕು. ಅದೇ ರೀತಿ ಒಳ್ಳೆಯ ಫಲಿತಾಂಶ ತರದಿದ್ದರೂ ಅವನ ವೇತನ, ವೇತನ ಹೆಚ್ಚಳ, ಬಡ್ತಿಗೆ ಕತ್ತರಿ ಹಾಕುವ ಕ್ರಮಕ್ಕೂ ಹಿಂಜರಿಯಬಾರದು. ಸದ್ಯದ ಅಗತ್ಯ ಇದು. ಕ್ರಿಯಾಶೀಲ ಚಟುವಟಿಕೆ ಮೂಲಕ ಪ್ರಾಮಾಣಿಕವಾಗಿ ತೊಡಗಿಸಿಕೊಂಡವರನ್ನು ಪ್ರೋತ್ಸಾಹಿಸಲು ಮರೆಯಬಾರದು.
* ಮುಖ್ಯವಾಗಿ ಸರ್ಕಾರಿ ಶಾಲೆಗಳು ಜನರ ಪ್ರೀತಿ ವಿಶ್ವಾಸ ಗಳಿಸಲು ಮತ್ತೆ ಮುಂದಾಗಬೇಕಿದೆ. ಈ ಮೊದಲು ಊರಿನದೇ ಮೇಷ್ಟ್ರು, ಆ ಭಾವನಾತ್ಮಕ ಸಂಬಂಧ ಬೆಸುಗೆ ಇದ್ದವು. ಒಂದು ತಲೆಮಾರಿನವರೆಗೂ ಬೆಳೆಯುತ್ತಿರುವ ಶಿಷ್ಯರನ್ನು ಮೇಷ್ಟ್ರುಗಳು ನೋಡುತ್ತಲೇ ಇದ್ದರು. ಊರಿನ ಹಿರಿಯರ ಸ್ಥಾನದಲ್ಲಿದ್ದರು.  ಈಗ ಎಲ್ಲಿನದೋ ಶಿಕ್ಷಕರು ಎಲ್ಲೋ ಕೆಲಸ ಮಾಡುತ್ತಾರೆ. ಅವರು ಪಾಠವಲ್ಲ. ತಮ್ಮ ನೌಕರಿ ಮಾಡುತ್ತಿದ್ದಾರೆ ಅಷ್ಟೆ. ತಾವಾಯಿತು ತಮ್ಮ ಕೆಲಸವಾಯಿತು, ವರ್ಗಾವಣೆ ಮಾಡಿಸಿಕೊಂಡು ಊರು ಬಿಡುವುದು ಯಾವಾಗ ಎಂದೇ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಿರುವಾಗ ವೃತ್ತಿ, ಮಕ್ಕಳ ಮೇಲೆ ಪ್ರೀತಿ ಬೆಳೆಯುವುದು ಹೇಗೆ? 
* ಸಚಿವರೇ ಈ ಎಲ್ಲ ಅಂಶಗಳನ್ನು ಗಮನಿಸಿ ‘ವೇಶ್ಯಾವಾಟಿಕೆ ಅಡ್ಡೆ’ಗಳನ್ನು ಕಟ್ಟಿದವರೂ ನಿಮ್ಮವರೇ. ಅವುಗಳನ್ನು ಕೆಡವಿ ಮುಖ್ಯವಾಹಿನಿಗೆ ತರಬೇಕಾದವರು ನೀವು, ನಿಮ್ಮವರೇ. ಇದು ಸಾಧ್ಯವೇ? ಏಕೆಂದರೆ ನಿಮ್ಮದು ಸಮಾಜ ಕಲ್ಯಾಣದ ಜವಾಬ್ದಾರಿ ಅಲ್ಲವೇ? 
ಬಹುಶಃ ನಿಮ್ಮಿಂದ ಅಥವಾ ಸದ್ಯದ ವ್ಯವಸ್ಥೆಯಲ್ಲಿ ಮೇಲಿನ ಸುಧಾರಣೆ ಆಗುವುದು ಸಂಶಯ. ಅಲ್ಲಿವರೆಗೆ ಸದ್ಯ ನೀವು ಹೇಳಿದ ‘ವೇಶ್ಯಾವಾಟಿಕೆ ಅಡ್ಡೆಗಳು’ ಕಾನೂನುಬದ್ದ ಎಂದೇ ಭಾವಿಸಬೇಕಾಗುತ್ತದೆ. 
–ಶರತ್‌ ಹೆಗ್ಡೆ, ಕೊಪ್ಪಳ