ಕಾಸರಗೋಡಿನಲ್ಲಿ ಕನ್ನಡ ಶಾಲೆ ಉಳಿಸಲು ಮಾಡಿದ ಉಗ್ರ ಹೋರಾಟಕ್ಕೆ ಬೆಂಗಳೂರಿನಲ್ಲೂ ಬೆಲೆ ಸಿಕ್ಕಿತಲ್ಲಾ ಅದು ಬಾರಿ ಮಾರ್ರೆ... ಎನ್ನುತ್ತಾ ಮೆಜೆಸ್ಟಿಕ್ನಲ್ಲಿ ಬಸ್ಸಿಳಿದು ಬೈರಾಸು ಕೊಡವಿದ ಭುಜಂಗಯ್ಯ.
ಕೇರಳ ಸರ್ಕಾರದ ಅಧಿಕಾರಿಗಳ ಧೋರಣೆಯಿಂದ ಮುಚ್ಚಿ ಹೋಗಿದ್ದ ಕರಂದಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತೆರೆಯಲು ಮಕ್ಕಳೊಂದಿಗೆ ಹೋರಾಟ ಮಾಡಿದ್ದ ಭುಜಂಗಯ್ಯ ಹಾಗೂ ಆ ಹೋರಾಟಕ್ಕೆ ಮೈಸೂರಿನಿಂದ ಬಂದ ಪಿ. ಅನಂತಪದ್ಮನಾಭ ಅವರಿಗೆ ರಾಜ್ಯದ ರಾಜಧಾನಿಯಲ್ಲಿ ಕನ್ನಡಾಗ್ರಜ ಪ್ರಶಸ್ತಿ ಘೋಷಿಸಲಾ
ಗಿತ್ತು.
ಎಂತ ಮಾರ್ರೆ ಕನ್ನಡಾಗ್ರಜ ಅಂತ ಸಸಾರ ಮಾಡುದಾ. ನಾನು ಮಾಡಿದ ಹೋರಾಟವೇನು ಕಡಿಮೆಯಾ? ಇವರೆಲ್ಲಾ ಯಾಕೆ ಮಕ್ಕರ್ ಮಾಡಬೇಕು ಎಂದು ತನ್ನ ಊರಿನವರು ಚೇಷ್ಟೆ ಮಾಡಿದ್ದ ಬಗ್ಗೆ ಯೋಚಿಸಿ ತಲೆ ಕೆರೆದುಕೊಂಡ.
ಮೊದಲು 277 ಜನರಿಗೆ ಕನ್ನಡಾಗ್ರಜ ಪ್ರಶಸ್ತಿ ಇತ್ತಂತೆ. ಮೂರನೇ ಬಾರಿಗೆ ಕಾರ್ಯಕ್ರಮ ಮುಂದಕ್ಕೆ ಹೋಯಿತು. ಮೂರನೇ ಬಾರಿಯ ಪಟ್ಟಿಯಲ್ಲಿ ಇವರ ಹೆಸರನ್ನೂ ಸೇರಿಸಿದರಂತೆ. ಐನೂರು ಚಿಲ್ಲರೆ ಪ್ರಶಸ್ತಿ ಪುರಸ್ಕೃತರ ಪೈಕಿ ಚಿಲ್ಲರೆಗಳ ಪಟ್ಟಿಯಲ್ಲಿ ಇವರಿಬ್ಬರ ಹೆಸರು ಮೂಲೆಯಲ್ಲಿತ್ತು.
ಭುಜಂಗಯ್ಯನಿಗೆ ತನ್ನ ಹೋರಾಟ ನೆನಪಾಯಿತು. ಪೊಲೀಸ್ ಸ್ಟೆಷನ್ಗೆ ಹೋದದ್ದು, ಏಟು ತಿಂದದ್ದು, ಶಿಕ್ಷಣಾಧಿಕಾರಿ ಮನೆಯಿಂದ ಕದ್ದ ಕೋಳಿಯನ್ನು ಶಾಲಾ ಮಕ್ಕಳು ನನಗೆ ಕೊಟ್ಟದ್ದು. ಶಾಂತಾರಾಮ ಉಪಾಧ್ಯಾಯರು ಹಿತ್ತಾಳೆ ಚೊಂಬನ್ನು ನನ್ನ ಮಂಡೆಗೆ ಬಿಸಾಡಿದ್ದು.... ಒಂದಾ ಎರಡಾ... ಹೋರಾಟ ಎಂದರೆ ಹಾಗೆಯೇ ಪೆಟ್ಟು ತಿನ್ನಬೇಕು, ಜೈಲಿಗೆ ಹೋಗಬೇಕು. ಹೀಗಾಗಿಯೇ ನಮ್ಮ ಹೋರಾಟಗಾರರೆಲ್ಲಾ ದೊಡ್ಡ ಜನ ಆದದ್ದಲ್ಲವಾ, ಹೋರಾಟದಲ್ಲೂ ನನ್ನದು ದಶಾವತಾರವೇ ಎಂದು ಹೆಮ್ಮೆಪಟ್ಟುಕೊಂಡ.
ತನಗೆ ಕನ್ನಡಾಗ್ರಜ ಪ್ರಶಸ್ತಿ ಕೊಡುವುದು ಪೇಪರಿನಲ್ಲಿ ಫೋಟೋ ಸಮೇತ ಬರುತ್ತದಲ್ಲವೇ. ಟೀವಿಯವರು ನನ್ನ ಸಂದರ್ಶನ ತೆಗೆದುಕೊಳ್ಳುತ್ತಾರೆ. ತೆಗೆದುಕೊಳ್ಳಲೇಬೇಕು. ಏಕೆಂದರೆ ಹೋರಾಟದ ಮಾಹಿತಿ ಪೇಪರಿನವರಿಗೆ ಕೊಟ್ಟದ್ದು ನಾನೇ ಅಲ್ಲವೇ. ಆ ಋಣ ಇದ್ದರೆ ಅವರು ಮಾತನಾಡಿಸಲೇಬೇಕು ಎಂದುಕೊಂಡ.
ಸಮಾರಂಭಕ್ಕೆ ಪಿ. ಅನಂತಪದ್ಮನಾಭರು ಮೈಸೂರು ಪೇಟ ಮಾತ್ರ ಬಿಟ್ಟು ಬಂದಿದ್ದರು. ಪ್ರಶಸ್ತಿಯ ಜತೆ ಪೇಟ ಸಿಗುತ್ತದಲ್ಲಾ ಎಂಬ ವಿಶ್ವಾಸ ಅವರದ್ದು. ಭುಜಂಗಯ್ಯ ತಾನೂ ಬೈರಾಸು ಬೀಸುತ್ತಾ ಹತ್ತಿರ ಹೋದ. ‘ಎಂತ ಮಾರ್ರೆ ಶಾಲೆಗೆ ಫುಲ್ ಮಕ್ಕಳು. ನೀವು ಬಂದದ್ದೇ ಬಂದದ್ದು. ನೀವು ಮಾತಾಡಿದ್ದ ಬಗ್ಗೆಯೇ ಜನ ಈಗ ಹೇಳುದು ಗೊತ್ತುಂಟಾ ಎಂದ’. ‘ನನ್ನದೇನಿಲ್ಲ ಭುಜಂಗಯ್ಯ. ನಿಮ್ಮ ಶಾಲೇನ ನೀವೇ ಉಳಿಸಿಕೊಂಡಿದ್ರಿ. ನಾನು ಸುಮ್ಮನೆ ಬಂದೆ ಅಷ್ಟೇ’ ಎಂದು ದೇಶಾವರಿ ನಗೆ ಬೀರಿದರು.
ಕೆಂಪೇಗೌಡ ವೃತ್ತದ ಬಳಿಯ ರಾಜ್ಕುಮಾರ್ ಗಾಜಿನ ಮನೆ ಕಡೆ ಇಬ್ಬರೂ ಹೆಜ್ಜೆ ಹಾಕಿದರು. ಸಭಾಂಗಣದ ಪಕ್ಕದ ಶಾಮಿಯಾನದ ಅಡಿ ಅದೇನೋ ಘಮ್ಮನೆ ಪರಿಮಳ ಬಂತು. ಹಾ ಸಜ್ಜಿಗೆ ಮತ್ತು ಶೀರ ಮಾರಾಯ್ರೆ. ಅದನ್ನು ಇಲ್ಲಿ ಉಪ್ಪಿಟ್ಟು ಕೇಸರಿ ಬಾತ್ ಅಂತ ಕರೆಯುತ್ತಾರಂತೆ. ಒಮ್ಮೆ ನೆಕ್ಕಿ ನೋಡುವ ಅಂತ ಅನಿಸಿತು. ಆದರೆ ಪ್ರಶಸ್ತಿಯ ಮುಂದೆ ಅದೆಂತದ್ದು. ಪ್ರಶಸ್ತಿ ಸಿಕ್ಕಿದ ಮೇಲೆ ಎರಡು ಪ್ಲೇಟ್ ತಿಂದರಾಯಿತು ಎಂದುಕೊಂಡು ಸುಮ್ಮನಾದ.
ಗಾಜಿನ ಮನೆಯೊಳಗೆ ಹೋಗುತ್ತಿದ್ದಂತೆಯೇ ಪೊಲೀಸರು ತಡೆದರು. ‘ಓಯ್ ನಾನು ಮಾರ್ರೆ. ಭುಜಂಗಯ್ಯ. ಕಾಸರಗೋಡಿನವನು. ನನಗೂ ಪ್ರಶಸ್ತಿ ಇದೆ. ಒಳಗೆ ಬಿಡಿ’ ಎಂದ. ನಾನು ಪಿ. ಅನಂತಪದ್ಮನಾಭ. ಪಿ ಫಾರ್ ಪಿಕಾಕ್. ಆ ಶಾಲೆ ಉಳಿಸುವ ಹೋರಾಟದಲ್ಲಿ ನಾನೂ ಇದ್ದೆ. ದಯವಿಟ್ಟು ಒಳಗೆ ಬಿಡಿ’ ಎಂದರು ಪಿ. ಅನಂತಪದ್ಮನಾಭ.
ಭುಜಂಗಯ್ಯ ಮತ್ತೊಮ್ಮೆ ಹೇಳಲು ಮುಂದಾಗಲಿಲ್ಲ. ಎಷ್ಟೆಂದರೂ ಅವರು ಪೊಲೀಸರು. ಅಂದು ಶಾಲೆಯ ಹೋರಾಟದ ಸಂದರ್ಭ ಹೊಡೆದಂತೆ ಇಲ್ಲಿಯೂ ಕೆಪ್ಪೆಗೆ ಎರಡು ಬಿಟ್ಟರೆ ಈ ಬೆಂಗಳೂರಿನಲ್ಲಿ ಕೇಳುವವರು ಯಾರು? ಪ್ರಶಸ್ತಿಯ ಬದಲು ಪೆಟ್ಟು ತಿಂದ ಭುಜಂಗಯ್ಯ ಎಂದು ಪೇಪರಿನಲ್ಲಿ ಬಂದರೆ... ಕಷ್ಟ ಕಷ್ಟ ಎಂದು ಬೈರಾಸಿನಲ್ಲಿ ಕೆನ್ನೆ ಒರೆಸಿಕೊಂಡ. ಕೊನೆಗೂ ಅನಂತಪದ್ಮನಾಭರ ನೆರವಿನಿಂದ ಗಾಜಿನ ಮನೆಯೊಳಗೆ ಹೋದ.
ಹೀಗೆ ನೋಡಿದ. ಎಂತ ಜನ ಮಾರ್ರೆ. ಹಾಲ್ ಸಾಲದೇ ಮೇಲೆ ಎರಡು ಅಟ್ಟಳಿಗೆ ಮಾಡಿ ಅದರ ಮೇಲೂ ಕುಳಿತುಕೊಂಡಿದ್ದಾರೆ. ಅಬ್ಬಬ್ಬಬ್ಬ ರಾಜ ವೈಭವವೇ ಎಂದು ಖುಷಿಪಟ್ಟ. ಆದರೆ, ಎರಡು ಅಟ್ಟಳಿಗೆಯ ಮೇಲೆ ಎಲ್ಲಿ ಓಡಾಡಿದರೂ ಒಂದೂ ಕುರ್ಚಿ ಸಿಗಲಿಲ್ಲ. ಪಾಪ ಪಿ ಫಾರ್ ಪಿಕಾಕ್ ಅನಂತ ಪದ್ಮನಾಭರು ಸುಸ್ತಾಗಿಬಿಟ್ಟಿದ್ದರು.
ಭುಜಂಗಯ್ಯನಿಗಂತೂ ತಾಳ್ಮೆ ಕೆಟ್ಟು ಹೋಯಿತು. ಇದೆಂತ ಮಾರ್ರೆ. ಕರೆದವರಿಗೆ ಒಂದು ಮರ್ಯಾದೆ ಕೊಡಬೇಕು ಅಂತ ಗೊತ್ತಿಲ್ಲವಾ? ಅತ್ತಿತ್ತ ಜನ ನೋಡಿದರೆ ಏನು ಕೋರ್ದಟ್ಟ (ಕೋಳಿ ಅಂಕ) ನೋಡುವವರ ಹಾಗೆ ಕುಳಿತಿದ್ದಾರೆ. ಎಂತ ಸಾವು ಮಾರ್ರೆ. ಇಂಥ ಪ್ರಶಸ್ತಿ ಎಂತ ಬೊಜ್ಜಕ್ಕೆ ಕೊಡುವುದಾ? ಎಂದು ಬೈದುಕೊಂಡ.
ಅದಕ್ಕೆ ತಕ್ಕ ಹಾಗೆ ಉಪಮುಖ್ಯಮಂತ್ರಿ ಮಾತಾಡಿದ್ದು ಅವನಿಗೆ ಬಾರೀ ಬೆಚ್ಚ ಆಯಿತು. ನೀವೆಲ್ಲಾ ಹೊಸ ಬಟ್ಟೆ ಹಾಕಿಕೊಂಡು ಸ್ಮಾರ್ಟ್ ಆಗಿ ಬಂದಿದ್ದೀರಿ. ನೀವೆಲ್ಲಾ ಏನು ಸಾಧನೆ ಮಾಡಿದ್ದೀರಿ ಅಂತ ಗೊತ್ತಿಲ್ಲ...’ ಎಂದಾಗ ಭುಜಂಗಯ್ಯನ ಸ್ವಗತ ಹೀಗೆ ಸಾಗಿತು. ಪ್ರಶಸ್ತಿ ಪಡೆಯಲು ಒಟ್ರಾಶಿ (ಒಟ್ಟಾರೆ) ಬರ್ಲಿಕ್ಕೆ ಆಗ್ತದಾ. ಸ್ವಲ್ಪ ಚಂದ ಮಾಡಿಕೊಂಡು ಬಂದಿದ್ದೇವೆ. ಈ ಜನಕ್ಕೆ ನಂಜಿ ಮಾರ್ರೆ. ಏನು ಸಾಧನೆ ಅಂತ ಗೊತ್ತಿಲ್ಲದೆ ಇವರು ಕರೆದದ್ದು ಯಾಕೆ? ಮಂಡೆ ಸಮ ಇಲ್ವಾ. ಹೀಗೆಲ್ಲಾ ಹೇಳಿದ ಮಂತ್ರಿ ಪ್ರಶಸ್ತಿ ಕೊಡುವ ವೇಳೆ ಎಲ್ಲಿಗೆ ಓಡಿದ್ದು ಅಂತ ಗೊಣಗಿಕೊಂಡ.
ಹಾಗೆ ಯೋಚಿಸುತ್ತಿದ್ದಂತೆಯೇ ಪ್ರಶಸ್ತಿ ಪ್ರದಾನದ ಹೆಸರಿನಲ್ಲಿ ಸಾಮೂಹಿಕ ಮಾನಭಂಗ ಆಗತೊಡಗಿತು. ಯಾರು ಯಾರಿಗೆ ಪ್ರಶಸ್ತಿ ಕೊಡುತ್ತಾರೆ ಎಂಬುದೇ ಗೊತ್ತಾಗಲಿಲ್ಲ. ಕನ್ನಡಾಗ್ರಜ ಸ್ಮರಣಿಕೆಯೂ ಮೇಲೆ ಕೆಳಗೆ ಓಡಾಡತೊಡಗಿತು. ಇದು ಎಂತ ಭೂತಗಳಿಗೆ ತಂಬಿಲ ಮಾಡುವುದಾ ಎಂದು ತನ್ನನ್ನೇ ಕೇಳಿಕೊಂಡ.
ಕೊನೆಗೆ ಪೇಪರಿನಲ್ಲಾದರೂ ಬರುತ್ತದಲ್ಲಾ ಎಂದು ಕ್ಯಾಮೆರಾಗಳತ್ತ ಆಸೆಗಣ್ಣಿನಿಂದ ನೋಡಲಾರಂಭಿಸಿದ. ಆದರೆ, ಜಾತ್ರೆ ಜೋರಾಗುತ್ತಿದ್ದಂತೆಯೇ ಕ್ಯಾಮೆರಾ ಕಣ್ಣುಗಳು ವೇದಿಕೆಯಿಂದ ಬೇರೆಡೆಗೆ ತಿರುಗಿದವು. ಪ್ರಶಸ್ತಿ ಪಡೆದೂ ಹಿಂದಿರುಗಿಸಿದ ತಿಪ್ಪಣ್ಣ ಬೆಚ್ಚ ಆಗಿ ವಾಪಸ್ ಬರುತ್ತಿದ್ದರು. ಪಿ. ಅನಂತಪದ್ಮನಾಭರು ಮೆಲ್ಲನೆ ಭುಜ ತಟ್ಟಿ, ಭುಜಂಗಯ್ಯ ಇದು ನಮ್ಮಂಥವರಿಗಲ್ಲ. ಆ ಹೋಗೋಣ ಎಂದು ಹೆಜ್ಜೆ ಹಾಕಿದರು. ಭುಜಂಗಯ್ಯನ ಸಿಟ್ಟು, ಆಕ್ರೋಶದ ಕಟ್ಟೆ ಒಡೆದಿತ್ತು. ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಹೋಗಲು ಉಪಾಧ್ಯಾಯರಿಂದ ಸಾಲ ಪಡೆದದ್ದು. ಇಸ್ತ್ರಿ ಅಂಗಡಿಯಿಂದ ಬಾಡಿಗೆ ಬಟ್ಟೆ ತಂದದ್ದು, ದಡ್ಡ ಪ್ರವೀಣ ಪಿಗ್ಮಿಯ ದುಡ್ಡನ್ನು ದಾರಿ ಖರ್ಚಿಗೆ ಕೊಟ್ಟದ್ದು ನೆನೆದು ಕಣ್ಣೀರಾದ. ಕೊನೆಗೂ ಅಸಹಾಯಕ ನಿರೂಪಕರ ಘೋಷಣೆ ಕೇಳಿ ಬಂದಿತು. ಉಳಿದ ನೂರೈವತ್ತು ಚಿಲ್ಲರೆ ಮಂದಿಗೆ ಮುಂದೆ ಪ್ರಶಸ್ತಿ ನೀಡಲಾಗುವುದು. ಈಗ ಪ್ರಶಸ್ತಿ ಖಾಲಿಯಾಗಿದೆ.