![]() | |
| ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ ಚಾಲನೆ, ಆಶೀರ್ವಚನ |

ಒಂದು ಸುಂದರವಾದ ಆಘಾತ (Pleasant Shock) ಅನುಭವಿಸಿದ್ದನ್ನು ಹಂಚಿಕೊಳ್ಳಲೇಬೇಕು ಅನಿಸುತ್ತಿದೆ.
ನನ್ನ ಸಾಂಸ್ಕೃತಿಕ ಲೋಕ ಮುಗಿದೇ ಹೋಯಿತು. ಸುದ್ದಿ ಜಗತ್ತಿನೊಳಗಷ್ಟೇ ಪರಿಭ್ರಮಣೆ ಎಂದೇ ಭಾವಿಸಿ ಹತಾಶನಾಗಿದ್ದೆ. ಹೌದು ಹೊಟ್ಟೆಪಾಡಿನ ನೌಕರಿಯೊಳಗೇ ಗಿರಕಿ ಹೊಡೆಯುತಿದ್ದೆ. ಹಾಗೆಂದು ಒಳಗಿನ ತುಡಿತ ಸುಮ್ಮನಿರಲಿಲ್ಲ. ಆಗಾಗ ಕುಟುಕುತ್ತಲೇ ಇತ್ತು. ಏನೋ ಒಂದಿಷ್ಟು ಬರೆಸಿತು. ಬರೆದಿದ್ದು ಬೆಳಕಿಗೆ ಬರುತ್ತದೆ ಎಂಬ ಸಣ್ಣ ಆಸೆ, ಕನಸೂ ಕೂಡಾ ಇರಲಿಲ್ಲ. ಕೊನೆಗೂ ಅದು ಬೆಳಕಿಗೆ ಬಂದದ್ದು, ಒಂದಿಷ್ಟು ಜನ ಅದರೊಂದಿಗೆ ಬೆರೆತದ್ದು ಆಡಿದ್ದು, ಕುಣಿದದ್ದು ನನಗೇ ನಂಬಲಾಗುತ್ತಿಲ್ಲ... ಹೌದು ಇದು ನನ್ನ ಪಾಲಿಗೆ Pleasant Shock. ಜೀವನದಲ್ಲಿ ಮರೆಯುವುದಿಲ್ಲ.
‘ಅಶೋಕ ಸರ್ಕಲ್’ ನಾಟಕ ಜೂನ್ 13, 14ರಂದು ಎರಡು ದಿನಗಳ ಕಾಲ ಕೊಪ್ಪಳದ ಸಾಹಿತ್ಯ ಭವನದಲ್ಲಿ ಅದ್ಭುತವಾಗಿ ಪ್ರದರ್ಶನಗೊಂಡಿತು. ನಾನು ಬರೆದ ಕಾರಣಕ್ಕೆ ಅದ್ಭುತ ಎಂದು ಹೇಳಿದರೆ ಅದು ಸ್ವಪ್ರಶಂಸೆ ಮತ್ತು ಅಹಂಕಾರವೆನಿಸುತ್ತದೆ. ಇಲ್ಲಿ ಆಡಿದವರು, ಅದಕ್ಕೊಂದು ರೂಪಕೊಟ್ಟು ಅರಳಿಸಿದವರ ಕುಸುರಿಯಿಂದ ಅದು ಮೂಡಿ ಬಂದಿದೆ. ಆ ಕಾರಣಕ್ಕೆ ಅದು ಅದ್ಭುತ ಎಂದು ವಿಶ್ವಾಸದಿಂದ ಹೇಳುತ್ತೇನೆ.
ಹಿರಿಯ ಗೆಳೆಯ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ನಾಟಕವನ್ನು ಅರಳಿಸಿದರು. ಮಾತ್ರವಲ್ಲ ಕೊಪ್ಪಳದ ಎಲ್ಲೋ ಮೂಲೆಯಲ್ಲಿದ್ದ
, ಕಮರುತ್ತಿದ್ದವೇನೋ ಎಂದು ಭಾವಿಸಿದ್ದ ಪ್ರತಿಭೆಗಳನ್ನೆಲ್ಲಾ ತಂದು ಜೋಡಿಸಿ ತಂಡ ಕಟ್ಟಿದರು. ಹಾಲ್ಕುರಿಕೆ ಥಿಯೇಟರ್ ಬ್ಯಾನರ್ ಅಡಿ ಕೊಪ್ಪಳದ ‘ಅಶೋಕ ಸರ್ಕಲ್’ ಯಥಾವತ್ತಾಗಿ ರಂಗದ ಮೇಲೆ ಬಂದಿತು.
ಒಂದು ರಂಗ ತಂಡ ಕಟ್ಟಬೇಕು ಎಂಬ ಸುಮಾರು 6 ವರ್ಷಗಳ ಕನವರಿಕೆ ಕೊನೆಗೂ ಭಾಗಶಃ ಕೈಗೂಡಿದೆ. ಅದೂ ನಿರ್ದೇಶಕರ ಕಾಳಜಿ ಮತ್ತು ಪ್ರೀತಿಯಿಂದ.
ನನಗಿದು ಆಘಾತ ಏಕೆಂದರೆ...

ತುಳು ಹಾಸ್ಯ ರಂಗಭೂಮಿಯ ಸರಳ ಸೂತ್ರಗಳನ್ನಷ್ಟೇ ನೋಡಿಕೊಂಡು ಬರೆದ ನಾಟಕವಿದು. ಅದೇ ಮಟ್ಟಕ್ಕೆ (ರೆಡಿಮೇಡ್ ವಿನ್ಯಾಸ, ಸಂಗೀತ, ಒಂದಿಷ್ಟು ಬೆಳಕು, ಅದ್ದೂರಿತನ, ಮಸಾಲೆಯುಕ್ತ ಮನೋರಂಜನೆ ಕೇಂದ್ರಿತ ಸಂಭಾಷಣೆ, ಒಂದು ಸಾಲಿನ ಗಂಭೀರ ಸಂದೇಶ) ಮಾಡಿದರಾಯಿತು ಅಂದುಕೊಂಡಿದ್ದೆ. ಆದರೆ ಅಷ್ಟು ಸುಲಭವಾಗಿರಲಿಲ್ಲ. ತುಳು ರಂಗಭೂಮಿಯೂ ಸರಳವಲ್ಲ ಎಂಬುದೂ ಗೊತ್ತಿದೆ. ಇಲ್ಲಿ ನಿರ್ದೇಶಕ ಹಾಲ್ಕುರಿಕೆ ಶಿವಶಂಕರ್ ನೀನಾಸಂ ಪದವೀಧರರು. ಪಕ್ಕಾ ವೃತ್ತಿಪರ ಸೃಜನಶೀಲ ನಿರ್ದೇಶಕ. ಮಾತ್ರವಲ್ಲ ನಿರ್ಮಾಪಕ. ಹಾಗಾಗಿಯೇ ಒಟ್ಟಾರೆ ನಾಟಕ ನಿರ್ಮಾಣವನ್ನು ಅವರು production ಎಂದು ಕರೆದರು. ಅಂಥ ಪಕ್ಕಾ ಕಸುಬುಗಾರ ನಟರನ್ನು ರೂಪಿಸಿದ ಪರಿಯೇ ರೋಚಕ. ಎಷ್ಟೋ ಬಾರಿ ನಾನೂ ಭಯಪಟ್ಟಿದ್ದೆ. ಅಂಥವರಿಗೆ ನನ್ನ ಬಾಲಿಶ ಕೃತಿ ಯಾವ ಲೆಕ್ಕ? ಅದನ್ನು ನೀನಾಸಂ ಪದವೀಧರರು ಆಡಿಸಲು ಒಪ್ಪುವುದು ಬಿಡಿ. ಕೃತಿಯನ್ನು ಓದಲು ಮುಂದಾಗುವುದೂ ಅಸಾಧ್ಯ ಎಂಬುದು ನನ್ನ ಗ್ರಹಿಕೆಯಾಗಿತ್ತು. ಆದರೆ, ಶಿವಶಂಕರ್ ನನ್ನ ಕಚೇರಿಗೆ ಬಂದು ಕೃತಿ ಪಡೆದು ಓದಿ, ಕೂಡಲೇ ಪ್ರತಿಕ್ರಿಯಿಸಿದ್ದೇ ಆಶ್ಚರ್ಯ ತಂದಿತ್ತು.
* ಈ ಷಾಕ್‌ಗೆ ಇನ್ನೂ ಒಂದು ಕಾರಣವಿದೆ. ತುಳು ರಂಗ ಭೂಮಿಯ ‘ನಿರ್ದೇಶಕರ’ ಬಳಿ ಹೋಗಿ ನನ್ನ ಕೃತಿ ನೀಡಿದಾಗ ಕನಿಷ್ಠ ಪಕ್ಷ ಅದನ್ನು ನೋಡುವ ಸೌಜನ್ಯವನ್ನೂ ತೋರದವರಿದ್ದರು. ಕೇವಲ ಪಾತ್ರಗಳ ಪಟ್ಟಿಯನ್ನು ನೋಡಿಯೇ ಇಷ್ಟೊಂದು ಪಾತ್ರಗಳನ್ನು ಹೊಂದಿಸುವುದೇ ಅಸಾಧ್ಯ ಎಂದವರಿದ್ದರು. ಮೂರನೆಯದಾಗಿ ಶರತ್ ಬರೆದದ್ದು ಎಂಬ ಕಾರಣಕ್ಕಾಗಿ
ಯೇ ಕೃತಿಯನ್ನು ಮೂಲೆಗುಂಪು ಮಾಡಿದವರೂ ಇದ್ದರು. ನನ್ನ ನೆಲದಲ್ಲಿಯೇ ಈ ರೀತಿ ಆಗಿರಬೇಕಾದರೆ ಗೊತ್ತುಗುರಿ, ಪರಿಚಯ ಇಲ್ಲದ ಊರಿನಲ್ಲಿ ಇದು ಸಾಧ್ಯವೇ? ಎಂಬ ಪ್ರಶ್ನೆ ಕಾಡಿತ್ತು. ಮಾತ್ರವಲ್ಲ ಅಂಥದ್ದೊಂದು ಆಸೆಯನ್ನೂ ಹುಟ್ಟಿಸಿರಲಿಲ್ಲ. ಗೆಳೆಯರೇ ಕೇವಲ 10 ಪಾತ್ರಗಳ ನಾಟಕವನ್ನು 15 ಮಂದಿಯ ಕೈಯಲ್ಲಿ 20ಕ್ಕೂ ಹೆಚ್ಚು ಪಾತ್ರಗಳನ್ನು ಶಿವಶಂಕರ್ ಅರಳಿಸಿದರು.
ಸ್ಕ್ರಿಪ್ಟ್ ಕೊಟ್ಟು ಸುಮ್ಮನಿದ್ದರಾಯಿತು ಎಂದುಕೊಂಡವನ ಕೈಯಲ್ಲಿ ನಿರ್ದೇಶಕರು ಮತ್ತಷ್ಟು ಹಾಡು, ಸಂಭಾಷಣೆ ಬರೆಸಿದರು. ತಾಂತ್ರಿಕವಾಗಿ ಶೋಧಿಸಲು ಪ್ರೇರೇಪಿಸಿದರು. ಅಂದುಕೊಳ್ಳದ ಆಲೋಚನೆ, ಕೆಲಸಗಳನ್ನು ಮಾಡಿಸಿದರು. ಇದೂ ನನ್ನಿಂದ ಸಾಧ್ಯವಾಯಿತೇ ಎಂಬ ಪ್ರಶ್ನೆಯನ್ನು ಈಗಲೂ ಕೇಳಿಕೊಳ್ಳುತ್ತೇನೆ.
ಈಗ ಶುರುವಾಯಿತು ಕಟ್ಟುವ ಕ್ರಿಯೆ...
ರಂಗಭೂಮಿ ಎಂದರೆ ಕಟ್ಟುವುದು ಎನ್ನುತ್ತಾರೆ. ನಮ್ಮ ತಂಡದ ವಿಷಯದಲ್ಲಿ ಹಾಗೇ ಆಯಿತು ನೋಡಿ ವಿಷಯ ವಸ್ತು ಕೊಪ್ಪಳದ್ದು. ಬರೆದವನು ಉಡುಪಿ ಜಿಲ್ಲೆಯ ಕಡ್ತಲದವನು. ನಿರ್ದೇಶಿಸಿದವರು ತುಮಕೂರು ಜಿಲ್ಲೆಯ ಹಾಲ್ಕುರಿಕೆಯವರು. ಸಂಗೀತ ಅಳವಡಿಸಿದವರು ಉತ್ತರ ಕನ್ನಡದ ಕುಮಟಾದ ಅರುಣ್ ಭಟ್. ಅಶೋಕ ಸರ್ಕಲ್ ಸೆಟ್ ಹಾಗೂ ರಂಗ ವಿನ್ಯಾಸ, ಪರಿಕರ ಮಾಡಿಕೊಟ್ಟವರು ಕಲಬುರ್ಗಿಯ ಸುರೇಶ್ ಖೂಲಿ ಮತ್ತು ವಿಠಲ್, ಬೆಳಕಿನ ವಿನ್ಯಾಸ ಮಾಡಿದವರು ಕಲಬುರ್ಗಿ, ಧಾರವಾಡ ಹಾಗೂ ಬೆಂಗಳೂರಿನ ಮಧ್ಯೆ ಸುತ್ತು ಹಾಕುತ್ತಿರುವ ಸಾಜಿದ್ ಅವರು. ತಾಂತ್ರಿಕ ನೆರವು ನೀಡಿದ್ದು, ಅದ್ದೂರಿ ಪ್ರಚಾರ ಕೊಟ್ಟದ್ದು ಹೊಸಪೇಟೆ (ಬಳ್ಳಾರಿ ಜಿಲ್ಲೆ) ಆಕಾಶವಾಣಿಯವರು. ಒಂದಿಷ್ಟು ಪರದೆ, ರಂಗ ಪರಿಕರ ಕೊಟ್ಟವರೂ ಹೊಸಪೇಟೆಯ ಕನ್ನಡ ಕಲಾ ಸಂಘದವರು. ಆಡಿದವರು ಕೊಪ್ಪಳದ ಅಪ್ಪಟ ಕಲಾವಿದರು. ತಾಂತ್ರಿಕ ವಿಭಾಗದಲ್ಲಿ ಎಲ್ಲರೂ ಆಯಾ ವಿಷಯದಲ್ಲಿ ಶಿಕ್ಷಣ ಪಡೆದವರು.ಒಟ್ಟಾರೆ ಪ್ರಯೋಗದಲ್ಲಿ ಕರ್ನಾಟಕದ ಬಹುಪಾಲು ಜಿಲ್ಲೆಗಳ ಪ್ರತಿನಿಧಿಗಳು ಒಟ್ಟಾದರು. ಹೇಳಿ ಕಟ್ಟುವುದು ಎಂದರೆ ಇದೇ ಅಲ್ಲವೇ?
ಎಲ್ಲಿದ್ದರು ಕಲಾವಿದರು?
![]() |
| ಅಶೋಕ ಸರ್ಕಲ್‍ನಲ್ಲಿ ಒಂದು ಎಳೆಯ ಪ್ರೇಮ ಪ್ರಸಂಗ |
ಎಲ್ಲರೂ ರಂಗದ ಮೇಲೆ ಒಂದೇ. ಪ್ರದರ್ಶನ ಮುಗಿಯುವ ವೇಳೆಗೆ ನಾವೆಲ್ಲರೂ ಒಂದೇ ಮನೆಯ ಸದಸ್ಯರಾಗಿದ್ದೆವು. ತಂಡದಲ್ಲಿದ್ದ ಏಕೈಕ ಹೆಣ್ಣುಮಗಳು ಗಂಗಾ. ಎಲ್ಲರ ಪಾಲಿಗೆ ಪ್ರೀತಿಯ ಮಗಳು, ತಂಗಿ ಆಗಿಬಿಟ್ಟಿದ್ದಳು. ಎಲ್ಲ ಕೀಳರಿಮೆ, ಅಭಿಪ್ರಾಯಬೇಧ, ಗೊಂದಲ, ಅಳುಕು ನಿವಾರಣೆಯಾಗಿ ಹೊಸ ಜಗತ್ತಿಗೆ ಪದಾರ್ಪಣೆ ಮಾಡಿದ್ದೆವು.
ನಾಟಕಕ್ಕೆ ಬಂದದ್ದು ಸೀಮಿತ ಸಂಖ್ಯೆಯ ಜನ. ಆದರೆ, ಯಾರನ್ನು ಯಾವ ಸಂದೇಶ ತಲುಪಬೇಕೋ ಅದೆಲ್ಲವೂ ಯಶಸ್ವಿಯಾಗಿ ತಲುಪಿದೆ. ಮುಂದೆಯೂ ತಲುಪುತ್ತದೆ. ಪ್ರಯೋಗ ಇಲ್ಲಿಗೇ ನಿಲ್ಲುವುದಿಲ್ಲ. ಮುಂದುವರಿಯುತ್ತಲೇ ಇರುತ್ತದೆ ಎಂಬುದು ನಿರ್ದೇಶಕರ ಹಾಗೂ ಕಲಾವಿದರ ಆತ್ಮವಿಶ್ವಾಸ. ಈ ಗೆಳೆಯರು ಇನ್ನಷ್ಟು ಬಲಗೊಳ್ಳಬೇಕು. ತಂಡ ಇನ್ನೂ ದೊಡ್ಡದಾಗಬೇಕು. ಅದು ‘ಅಶೋಕ ಸರ್ಕಲ್’ ತಂಡವೇ ಆಗಬೇಕು ಎಂಬುದು ನನ್ನ ಸ್ವಾರ್ಥ. ಕೊಪ್ಪಳದಲ್ಲಿ ಬಲವಾದ ರಂಗ ಪ್ರೀತಿ ಬೆಳೆಯಬೇಕು. ಇಲ್ಲಿ ಬೇಕಿರುವುದು ಸದಭಿರುಚಿಯ ಸಹೃದಯಿ ಪ್ರೇಕ್ಷಕರು. ಇನ್ನು ಅವರನ್ನು ರಂಗಮಂದಿರಕ್ಕೆ ಕರೆತರಬೇಕಿದೆ.
ಕೈಜೋಡಿಸಿದ ರಂಗಹೃದಯಿಗಳನ್ನು ನೆನೆಯಲೇಬೇಕು
ವಕೀಲರ ಸಂಘ, ಶಿಕ್ಷಕರು, ಉಪನ್ಯಾಸಕರು, ಉದ್ಯಮಿಗಳು, ಸಂಘ ಸಂಸ್ಥೆಗಳ ಬಂಧುಗಳು, ವೃತ್ತಿ ಬಾಂಧವರಾದ ಮಾಧ್ಯಮದವರು... ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಇವರು ಕೇವಲ ದುಡ್ಡುಕೊಟ್ಟದ್ದಷ್ಟೇ ಅಲ್ಲ. ವೇದಿಕೆ, ಬೆಳಕು, ಮೈಕ್, ಮೇಕಪ್ ಎಲ್ಲದರ ಅಚ್ಚುಕಟ್ಟುತನ ಮೂಡುವಲ್ಲಿ ಕಣ್ಣಾಗಿ ನಿಂತಿದ್ದರು.
ಜನರನ್ನು ನಗಿಸಿದ್ದೇವೆ. ತುಂಟತನದ ಮೂಲಕ ಒಂದಿಷ್ಟು ಚಿಂತನೆಯ ಹುಳಬಿಟ್ಟಿದ್ದೇವೆ. ಅದು ಹರಿದಾಡುತ್ತಲೇ ಇರಲಿ. ಕೇವಲ ಸಂತೋಷವನ್ನು ಹಂಚಿಕೊಳ್ಳುವುದಷ್ಟೇ ಈಗಿನ ಕೆಲಸ. ಉಳಿದದ್ದು ನಮ್ಮೊಳಗೇ ಇದೆ. ಅದು ಅಲ್ಲಿಯೇ ಇರಲಿ.
ಪ್ರೀತಿಯಿಂದ
–ಶರತ್ ಹೆಗ್ಡೆ, ಕಡ್ತಲ



