Wednesday, 15 June 2022

ನನ್ನ ಕೊಡೆಯಲಿ ನಿನ್ನ ಹೆಸರಿದೆ #ಕೊಡೆ #umbrella #umbrellalight writeup #umbrellaname #kode #bannadakode #chathri #ಛತ್ರಿ #ಕೊಡೆಕಥೆ #ಕೊಡೆ ಬರಹ

ಯಾಕೋ ಬಾರದ ಮಳೆಯ ನಡುವೆ ಕೊಡೆ ಕಾಡುತ್ತಿದೆ. ಉರಿ ಬಿಸಿಲಿಗೆ ಅಡ್ಡವಾಗಿರಲೋ ಅಚಾನಕ್ಕಾಗಿ ಆಗಮಿಸುವ ಅತಿಥಿಯಂತೆ ಧುತ್ತನೆ ಬರುವ ಮಳೆಗೋ ಗೊತ್ತಿಲ್ಲ – ಅಂತೂ ಕೈಯಲ್ಲೊಂದು ಕೊಡೆಯಿದ್ದರೆ ಅದೊಂಥರಾ ಆತ್ಮವಿಶ್ವಾಸ.

ಬಣ್ಣಬಣ್ಣದ ಕೊಡೆಗಳು. ಕೆಲವು ಒಂದೇ ರೀತಿಯ ಹಿಡಿಕೆ, ಬಣ್ಣದವು. ಆ ನಮ್ಮ ಚೆಂದದ ಬಾಲ್ಯದಲ್ಲಿ ಬಹುತೇಕರ ಬಳಿ ಇದ್ದದ್ದು ಉದ್ದ ಕೊಡೆಯೇ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಎರಡು ಮಡಿಕೆ (ಡಬಲ್‌ ಫೋಲ್ಡ್‌) ಕೊಡೆ. ಅದು ನಮ್ಮ ಪ್ರಕಾರ ಲೇಡೀಸ್‌ ಕೊಡೆ! ಈ ಕೊಡೆಗಳಿಗೆ ಯಾರು ಲಿಂಗ ನಿರ್ಧರಿಸಿದ್ದೋ ಗೊತ್ತಿಲ್ಲ. 
ಜೋರು ಮಳೆ ಬಂದರೆ ಲೇಡೀಸು ಕೊಡೆಗಳು ಬೇಕಾದಷ್ಟು ಅಗಲವಾಗಿ ಗಂಡಸರನ್ನೂ ಬರಸೆಳೆದುಕೊಳ್ಳುತ್ತಿದ್ದವು. ಹಾಗೆಯೇ ಗಂಡಸರ ಕೊಡೆಗಳೂ ಹೆಂಗಸರ ವಿಷಯದಲ್ಲಿ ತುಂಬಾ ಉದಾರಿ. ಅವೂ ತಮ್ಮ ಕಾಂಡ, ಕಡ್ಡಿಗಳನ್ನು ನೆಟ್ಟಗಾಗಿಸಿ ಗಟ್ಟಿಯಾಗಿ ಒಳ ಸೆಳೆದುಕೊಳ್ಳುತ್ತಿದ್ದವು. ಹಾಗಾಗಿ ಇಲ್ಲಿ ಭಿನ್ನಮತವಿಲ್ಲ. ಈ ಕೊಡೆ, ಬ್ಯಾಗ್‌ಗಳಿಗೂ ‘ಲೇಡೀಸು’ ಎಂಬ ಲಿಂಗ ನಿರ್ಧರಿಸಿದವರನ್ನು ಹುಡುಕಿ ಒಂದು ಪ್ರಶಸ್ತಿ ಕೊಡಬೇಕು!

ಕೊಡೆಗಳೂ ಹುಡುಗಿಯರ ಲಂಗವೂ ಹೆಚ್ಚೂ ಕಡಿಮೆ ಒಂದೇ ಟ್ರೆಂಡ್‌ನಲ್ಲಿ ಬೆಳೆದುಬಂದಿವೆ. ಈ ಹಿಂದೆ ಶಾಲೆ–ಕಾಲೇಜುಗಳ ಹುಡುಗಿಯರ ಲಂಗವೂ ಉದ್ದವಾಗಿ ಇತ್ತು. ಹಾಗೆಯೇ ಕೊಡೆಯ ಆಕಾರ, ಗಾತ್ರವೂ ಉದ್ದ ಮತ್ತು ದಪ್ಪ ಬಟ್ಟೆಯಿಂದ ಕೂಡಿತ್ತು. ಬರಬರುತ್ತಾ ಲಂಗ ಗಿಡ್ಡವಾಗುತ್ತಾ ಬಂತು. ಹಾಗೆಯೇ ಕೊಡೆಗಳೂ ಎರಡು ಮಡಿಕೆ (ಡಬಲ್‌ ಫೋಲ್ಡ್‌), ಮೂರು ಮಡಿಕೆ (ಟ್ರಿಪಲ್‌ ಫೋಲ್ಡ್‌), ಪಾಕೆಟ್‌ ಸೈಜ್‌, ವ್ಯಾನಿಟಿ ಬ್ಯಾಗ್‌ ಸೈಜ್‌ ಹೀಗೆಲ್ಲಾ ಗಾತ್ರ ಕಿರಿದಾಗಿಸಿಕೊಳ್ಳುತ್ತಾ ಬಂದವು. ಈಗಂತೂ ಸ್ಲಿಮ್‌ ಫಿಟ್‌, ಝೀರೋ ಸೈಜಿನ ಗಾತ್ರಕ್ಕೆ ಬಂದು ಬಿಟ್ಟಿವೆ.

ಜೀರೋ ಸೈಜಿನ ಹುಡುಗಿಗೆ ಸಪುರವಾದ ತನ್ನ ಸೊಂಟವನ್ನೂ ಅದರ ಮೇಲ್ಭಾಗದ ಹೊಕ್ಕಳನ್ನೂ ಕಾಣಿಸುವ ತವಕವಿದ್ದಂತೆ, ಈ ಲೇಡೀಸು ಕೊಡೆಯೂ ಕೆಳಭಾಗದ ತುಂಡು ಬಟ್ಟೆಯನ್ನು ಆಕರ್ಷಕ ಮಡಿಕೆಯಾಗಿಸಿ ಮೇಲ್ಭಾಗದಲ್ಲಿ ಹೊಳೆಯುವ ಬಟನ್‌ನ್ನಷ್ಟೇ ಕಾಣಿಸುತ್ತದೆ. ಬಟನ್‌ ಮುಟ್ಟಿದರೆ ಟಕ್ಕನೆ ರಾಕೆಟ್‌ನಂತೆ ಸಿಡಿದು ಕಾಂಡ ಸೆಟೆಸಿ ಬಟ್ಟೆ ಅಗಲವಾಗಿ ಹರಡಿಸಿ ತನ್ನೊಡಲೊಳಗೆ ಆಸರೆ ಬಯಸಿದವರನ್ನು ಸೇರಿಸಿಕೊಳ್ಳುತ್ತದೆ. ಇದು ಬಟನ್‌ ಮುಟ್ಟಿದರೆ ಆಗುವ ಪರಿಣಾಮ. ಇನ್ನು ಸಪುರ ಸೊಂಟದ ಹುಡುಗಿ ತೋರಿಸುವ ಹೊಕ್ಕಳು ಮುಟ್ಟಿದರೆ ಆಗುವ ಪರಿಣಾಮವೂ ಹೆಚ್ಚೂ ಕಡಿಮೆ ಇದೇ. ಆದರೆ ಮುಟ್ಟಿದವರೂ – ಮುಟ್ಟಿಸಿಕೊಂಡವರ ಮೇಲೆ ಪರಿಣಾಮ ನಿರ್ಧಾರವಾಗುತ್ತದೆ.
ಹೀಗೆ ಜಟ್ಟಿ ಕಾಳಗದಲ್ಲಿ ತೊಡೆ ತಟ್ಟಿ ಹೊರಟಂತೆ ಗಟ್ಟಿ ಮಳೆಗಾಲದಲ್ಲಿ ಕೊಡೆ ಕಟ್ಟಿಕೊಂಡು ಹೊರಡಲೇಬೇಕು.

ಇನ್ನು ಜಡಿಮಳೆಯಲ್ಲಿ ಒಂದಿಷ್ಟು ಕೊಡೆ ಹಿಡಿದ ಪುಡಿ ನೆನಪುಗಳು ಇಲ್ಲೊಂದಿದೆ. ಅದು ಕೊಡೆಗಳಿಗೆ ಹೆಸರು ಬರೆಯುವುದು.
ಕೊಡೆ ಕಳೆದು ಹೋಗುವುದು, ಮರೆತುಬಿಡುವುದು, ಯಾರೋ ಕದ್ದು ಹೋಗುವುದು ಇತ್ಯಾದಿಗಳೆಲ್ಲಾ ನಮ್ಮ ಬಾಲ್ಯದ ಮಳೆಗಾಲದ ಇಂಟರ್‌ನ್ಯಾಷನಲ್‌ ಅಪರಾಧಗಳು. ವಾರಗಟ್ಟಲೆ ನಮ್ಮ ಕೊಡೆ ಯಾರದಾದರೂ ಕೈಯಲ್ಲಿದೆಯೇ ಎಂದು ಪತ್ತೆ ಮಾಡುವುದೂ ದೊಡ್ಡ ಕಾಯಕವೇ. ಆ ಕಾಲದಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಸಣ್ಣ ವ್ಯಾಪಾರವೊಂದು ಹುಟ್ಟಿಕೊಂಡಿತ್ತು.

ನನ್ನ ಕೊಡೆಯಲಿ ನಿನ್ನ ಹೆಸರಿದೆ... ಸುರಿವ ಮಳೆಯಲಿ ನಿನ್ನ ನೆನಪಿದೆ ಎನ್ನುತ್ತಾ ಕೊಡೆಯನ್ನು ಡಿಷ್‌ ಆ್ಯಂಟೆನಾದಂತೆ ಹಾರಾಡಿಸಿ ಮಳೆಯಲ್ಲಿ ತೋಯ್ದದ್ದೂ ಇದೆ. ಹೌದು, ಕೊಡೆಗಳಿಗೆ ಹೆಸರು ಬರೆಸುವುದು ನಮ್ಮ ಬಾಲ್ಯ ಕಾಲದ ದೊಡ್ಡ ಟ್ರೆಂಡ್‌.

ವಾಹನ ಕೊಂಡಾಗ ನೋಂದಣಿಗಾಗಿ ಆರ್‌ಟಿಒ ಆಫೀಸಿಗೆ ಹೋದಂತೆ ನಾವು ಕೊಡೆ ಕೊಂಡ ಮರುದಿನ ಹೆಸರು ಬರೆಸುವವರ ಬಳಿ ಹೋಗುತ್ತಿದ್ದೆವು. ಆಗ ಹೆಸರು ಬರೆಯುವವರು ನಮ್ಮ ಪಾಲಿಗೆ ದೊಡ್ಡ ಮೋಡಿಗಾರರು. ಕೊಡೆಯ ಒಳಭಾಗದಲ್ಲಿ ಹೆಸರಿರಬೇಕೇ ಅಥವಾ ಹೊರಭಾಗದಲ್ಲಿದ್ದರೆ ಗುರುತು ಹಿಡಿಯುವುದು ಸುಲಭವಲ್ಲವೇ... ಹೀಗೆಲ್ಲಾ ದೊಡ್ಡ ಚರ್ಚೆಗಳು ನಮ್ಮ ನಮ್ಮ ‘ಗೃಹ ಸಚಿವಾಲಯ’ದಲ್ಲಿ ನಡೆದು ಘನ ನಿರ್ಧಾರದೊಂದಿಗೆ ಹೆಸರು ಬರೆಯುವವರ ಬಳಿ ಹೋಗುತ್ತಿದ್ದೆವು.

ಆಗ ಕೊಡೆಗಳಿಗೆ ಹೆಸರು ಬರೆಯುವುದರಿಂದಲೇ ಮಳೆಗಾಲದ ದುಡಿಮೆ ಅದೆಷ್ಟೋ ಕಲಾವಿದರದಾಗಿತ್ತು. ನಮ್ಮ ಶಾಲೆಯ ದಾರಿಯಲ್ಲಿದ್ದ ಬಾಬುರಾಯ ಮಾಷ್ಟ್ರು ಮಳೆಗಾಲದಲ್ಲಿ ಕೊಡೆಗಳಿಗೆ ಹೆಸರು ಬರೆಯಲೆಂದೇ ಬಣ್ಣ, ಬ್ರಷ್‌ಗಳನ್ನು ಸಜ್ಜುಗೊಳಿಸಿ ಇಡುತ್ತಿದ್ದರು. ಈ ಹೆಸರು ಬರೆಯಲೆಂದೇ ಸಿಲ್ವರ್‌ ಬಣ್ಣ, ಪ್ರಖರ ಬಿಳಿ ಬಣ್ಣ ಅವರ ಡಬ್ಬಿಗಳಲ್ಲಿ ಇರುತ್ತಿತ್ತು. ದಪ್ಪ, ಸಪೂರ, ಮುದ್ರಣ ಮಾದರಿಯ ಬರಹಗಳಿಗೂ ಅವರ ಕುಂಚದ ಕೈ ಯಾವತ್ತೂ ಸೈ. ಅಕ್ಷರ ಗಾತ್ರ ಸ್ವಲ್ಪ ದೊಡ್ಡದಿರಬೇಕು. ಪಕ್ಕದಲ್ಲಿ ಹೂವಿನ ಚಿತ್ತಾರ ಇರಬೇಕು. ಸಾಧ್ಯವಾದರೆ ಕಲರ್‌ ಇರಬೇಕು. ಹೀಗೆಲ್ಲಾ ಅವರವರ ಅಭಿರುಚಿಗೆ ತಕ್ಕಂತೆ ಬೇಡಿಕೆಗಳ ಪಟ್ಟಿ ಮಾಷ್ಟ್ರ ಮುಂದೆ ಇಡುತ್ತಿದ್ದರು. ನನಗಿಂತ ಅವನ/ ಅವಳ ಕೊಡೆಯಲ್ಲಿ ಬರೆದ ಹೆಸರು, ವಿನ್ಯಾಸ ಚೆನ್ನಾಗಿದ್ದರೆ.... ಹೊಕ್ಕುಳ ಕೆಳಗೊಂದು ಸಣ್ಣ ಅಸೂಯೆಯ ಹೊಗೆ ಹಾಗೇ ಹರಿದಾಡುತ್ತಿತ್ತು. ಗುಡ್ಡೆ ಅಂಗಡಿಯ ಸ್ನೇಹಾ ಆರ್ಟ್ಸ್‌ನ ಗೋಪಾಲಕೃಷ್ಣ, ಜೋಡು ರಸ್ತೆ ದುರ್ಗಾ ಆರ್ಟ್ಸ್‌ನ ರಮೇಶಣ್ಣ, ಅಪರೂಪಕ್ಕೆ ಕುಕ್ಕುಜೆಯ ಲಕ್ಷ್ಮಣ ಮಾಷ್ಟ್ರು... ಇವರಿಗೆಲ್ಲಾ ಕೊಡೆಗಳಿಗೆ ಹೆಸರು ಬರೆಯುವ ಬೇಡಿಕೆಗಳು ಮಳೆಗಾಲದುದ್ದಕ್ಕೂ ಇರುತ್ತಿದ್ದವು. ಮೂರು ರೂಪಾಯಿಯಿಂದ ಐದು ರೂಪಾಯಿಯವರೆಗೆ ಈ ಕೆಲಸದ ದರವಿತ್ತು.

ಈ ಬಗೆಯ ಹೆಸರಿನ ನೋಂದಣಿ ಆದ ಬಳಿಕ ಅದೊಂದು ಬ್ರಹ್ಮಲಿಖಿತ ಇದ್ದಂತೆ. ಬದಲಿಸಲಾಗದು. ಬಸ್ಸಿನಲ್ಲಿ ಕೊಡೆ ಮರೆತರೆ ಕಂಡಕ್ಟರ್‌ ಬಳಿ ನಮ್ಮ ಕೊಡೆಯ ನೋಂದಣಿ ವಿಳಾಸ ಎಲ್ಲವನ್ನೂ ಹೇಳಿಯೇ ಬರುತ್ತಿದ್ದೆವು. ಅಂಗಡಿ, ಹೋಟೆಲ್‌, ಸಂತೆ ಹೀಗೆ ಎಲ್ಲಿಯಾದರೂ ಸೈ. ನಮ್ಮ ಕೊಡೆ ಯಾವತ್ತೂ ‘ರಿಜಿಸ್ಟರ್ಡ್‌’. ಕಳೆದು ಹೋದರೂ ಸರಿ ಕೊನೇ ಪಕ್ಷ ಹೆಸರು ಬರೆದ ತುಂಡು ಬಟ್ಟೆಯಾದರೂ ವಾಪಸಾದೀತೆಂಬ ನಿರೀಕ್ಷೆ ನಮ್ಮದಿತ್ತು. ಅವಳ ಹೆಸರಿದ್ದ ಕೊಡೆಯನ್ನು ಅವನು ಹಿಡಿದು ಜಗಲಿಯಲ್ಲೊಂದು ಜಂಬದ ಸುತ್ತು ಹಾಕಿ ತಣ್ಣಗೆ ಕೊಡೆ ಬುಟ್ಟಿಯೊಳಗೆ ಇಟ್ಟು ಕ್ಲಾಸ್‌ ರೂಮಿನೊಳಗೆ ಬರುವುದಿದೆಯಲ್ಲಾ ಅದೊಂದು ಆ ಕಾಲದ ಸಾಧನೆಯೂ ಆಗಿತ್ತೆನ್ನಿ. ಕೊಡೆಯ ಹಿಡಿಯಲ್ಲೇ ಅವಳ ಕೈ ಹಿಡಿದು ನಡೆದ ಭಾವ ಅನುಭವಿಸುತ್ತಿದ್ದ ಅವನ ಸಂಭ್ರಮ ಯಾರೂ ಅಳೆದವರಿಲ್ಲ.

ಹೆಸರು ಬರೆದ ಮಾತ್ರಕ್ಕೆ ಕೊಡೆಗಳು ಕಳೆದು ಹೋಗುವುದೂ ನಿಲ್ಲಲಿಲ್ಲ. ಕೊಡೆಗೆ ಹೆಸರು ಬರೆಸುವ ತವಕವೂ ಒಂದೂವರೆ ದಶಕದ ಬಳಿಕ ಉಳಿಯಲೇ ಇಲ್ಲ. ಆ ಸ್ವಾರಸ್ಯ, ಅಭಿರುಚಿ, ಕಲೆಗಾರಿಕೆ ಕಳೆದೇ ಹೋಗಿಬಿಟ್ಟಿದೆ. ಕೊಡೆಗಳನ್ನು ದೀರ್ಘಕಾಲ ಕಾಪಿಟ್ಟುಕೊಳ್ಳುವ ಪ್ರೀತಿಯೂ ಜಡಿಮಳೆ ಇಳಿದ ಹಾಗೆ ಕಳೆದೇ ಹೋಗಿದೆ. ಪ್ರಿಯತಮ ಕೊಟ್ಟ ಕೊಡೆಯ ಕಡ್ಡಿ ತುಂಡಾದಾಗ ಅವಳು ಪ್ರೀತಿಯೇ ಕಳೆದುಕೊಂಡಂತಾಗಿ ಅತ್ತಂತೆ... ಬಣ್ಣದ ಕೊಡೆ ಹಿಡಿದು ಕಾಡಿದ ಹುಡುಗಿ ಬಸ್ಸಿಳಿದು ತಣ್ಣಗೆ ಹೋದಂತೆ... ಅಲ್ಲಲ್ಲ ಒಂದು ದೀರ್ಘ ಬರಗಾಲದಂತೆ...

ಕೊಡೆ ನೆನಪಿನ ಆರು ಸಾಲು


ಬಾ... ಕೊಡೆಯೇ ಬಾ...
ನಾ ನಿನ್ನ ಕೈ ಹಿಡಿವೆ
ನೀ ನನಗೆ ನೆರಳಿರುವೆ
ಅಂಬರದ ಕೆಳಗೆ ಹಂದರದ ರೀತಿ
ಹರಡಿ ಕಾಯೇ ನಿನ್ನ ಅಕ್ಷಯಾಂಬರದಡಿ...
ಬಾ... ಕೊಡೆಯೇ ಬಾ...

ಪ್ರೀತಿಯಿಂದ
ಶರತ್‌ ಹೆಗ್ಡೆ, ಕಡ್ತಲ