Sunday, 11 January 2015

ಅಳಿವಿನಂಚಿನ ಕಂಬಳವೂ ಸಿರಿಬೈಲಿನ ಡ್ರೈರೇಸೂ....

ಶೀರ್ಷಿಕೆ ವಿಚಿತ್ರವೆನಿಸಬಹುದು. ಆದರೂ ಅನಿಸಿದ್ದನ್ನು ಚರ್ಚಿಸುವುದರಲ್ಲಿ ತಪ್ಪಿಲ್ಲ. ನನ್ನ ಚರ್ಚೆ ಏನಿದ್ದರೂ ನಂಬಿದ ಬೊಬ್ಬರ್ಯನ ಬಳಿ ಅಷ್ಟೆ. ಅವನ ಮಧ್ಯವರ್ತಿಗಳು ಏಜೆಂಟರು, ಗುತ್ತಿಗೆದಾರರು ಮೂಗು ತೂರಿಸುವುದು ಬೇಡ.
ಕರಾವಳಿಯ ಕಂಬಳ ಕಾನೂನು ತೂಗುಗತ್ತಿ ಅಡಿ ನಡೆಯುತ್ತಿದೆ. ಒಂದೆಡೆ ನಿಷೇಧಿಸಬೇಕು ಎಂಬ ಧ್ವನಿ. ಇನ್ನೊಂದೆಡೆ ಉಳಿಸಬೇಕು ಎಂಬ ಕೂಗು. ಇರಲಿ, ಕಂಬಳ ಮೂಲ ಸ್ವರೂಪದಲ್ಲಿ ಜೂಜು ಹೊರತಾಗಿ ನಡೆಯಬೇಕು ಎಂಬ ಧ್ವನಿಗೆ ಸಹಮತವಿದೆ. ಉಳಿದಂತೆ ಕಂಬಳದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ನಡೆಯುತ್ತಲೂ ಇವೆ. ಅದರ ಬಗ್ಗೆ ಚರ್ಚಿಸುವಷ್ಟು ಜ್ಞಾನವಾಗಲಿ, ಪರಿಣತಿಯಾಗಲಿ ನನಗಿಲ್ಲ.
ಇಲ್ಲಿ ಹೇಳ ಹೊರಟಿರುವುದು ನಮ್ಮೂರಿನ ದೈವಗಳ ಡ್ರೈ ರೇಸ್‌ ಬಗ್ಗೆ.
ಸಿರಿಬೈಲಿನಲ್ಲಿ ಮಿಡ್‍ನೈಟ್‍ ಡ್ರೈರೇಸ್‍ ನಡೆಯುವ ಗದ್ದೆ
ನಮ್ಮೂರಿನಲ್ಲಿ ಪ್ರತಿ ವರ್ಷ ಜನವರಿ ಆಸುಪಾಸಿನಲ್ಲಿ ಒಂದು ಹುಣ್ಣಿಮೆಯ ದಿನ ಬೊಬ್ಬರ್ಯ ದೇವರ ಜಾತ್ರೆ ನಡೆಯುತ್ತದೆ. ಒಂದು ದಿನ ದೈವಗಳ ಕೋಲವೂ, ಮರುದಿನ ಮಾರಿಹಬ್ಬವೂ ನಡೆಯುತ್ತದೆ. ಕೋಲದ ದಿನ ಮಧ್ಯರಾತ್ರಿ 12ರ ಸುಮಾರಿಗೆ ಕೋಲ ಕಟ್ಟಿದ ದೇವರುಗಳು ಸೀದಾ ಮಾರಿದೇವರ ಗುಡಿ ದಾಟಿ ಇರುವ ಗದ್ದೆ(!?)ಯ ಕಡೆಗೆ ನಡೆಯುತ್ತವೆ. ಡೊಳ್ಳು, ದಿವಟಿಗೆ, ವಾದ್ಯ ಮೇಳಗಳ ಗದ್ದಲ ಅಲ್ಲಿ ಜೋರಾಗಿಯೇ ಇರುತ್ತದೆ. ಇದನ್ನು ದೇವರು ಕೆಳಗಿಳಿಯುವುದು ಅಥವಾ ಕಂಬಳಕ್ಕೆ ತೆರಳುವುದು ಎಂದು ಕರೆಯಲಾಗುತ್ತದೆ.
ಇನ್ನು ಈ ಗದ್ದೆಯೋ ಪೂರ್ಣ ಒಣಗಿದೆ. ಅದರ ಮೇಲೊಂದಿಷ್ಟು ಮಣ್ಣು ಕೊಚ್ಚಿ ಹಾಕಿ ಮಣ್ಣಿನ ಒಣ ಹೆಂಟೆ ರಚನೆ ಮಾಡಲಾಗಿರುತ್ತದೆ. ಇದರ ಮೇಲೆ ಎರಡು ಜೋಡಿ (ಲಭ್ಯತೆಯ ಆಧಾರದ ಮೇಲೆ) ಕೋಣಗಳನ್ನು ಒಂದೆರಡು ಸುತ್ತು ನಡೆಸಲಾಗುತ್ತದೆ. ಇದು ಕಂಬಳವಂತೆ!  ದೈವಗಳು ಅದನ್ನು ವೀಕ್ಷಿಸುವುದಂತೆ. ಕಂಬಳ(!) ಮುಗಿದ ಬಳಿಕ ಒಂದು ಚತುಷ್ಕೋನಾಕೃತಿಯ ಗುರ್ಜಿಯೊಂದನ್ನು ಒಣ ಗದ್ದೆಯ ಮಧ್ಯೆ ಇಡಲಾಗುತ್ತದೆ. ಮುಂದೆ ದೈವ, ಕೋಣಗಳು ಇಡೀ ಜಾತ್ರೆಯ ಆವರಣಕ್ಕೆ ಒಂದು ಸುತ್ತು ಬಂದು ಮತ್ತೆ ಕೋಲದ ಚಪ್ಪರ ಸೇರುತ್ತಾರೆ.
ಈಗ ಬೊಬ್ಬರ್ಯನ ಬಳಿ ದೈವಗಳ ಈ ನಡೆ ಕುರಿತು ಪ್ರಶ್ನೆಗಳು... ಕೇವಲ ಕುತೂಹಲಕ್ಕೆ ಕೇಳುತ್ತಿದ್ದೇನೆ. ಬೇಜಾರು ಮಾಡಿಕೊಳ್ಳಬೇಡ.
* ಕಂಬಳ ಎಂದರೆ ಹೀಗೂ ಉಂಟೇ?
* ಒಣ ಗದ್ದೆ, ಕಳದಲ್ಲಿ ಕೋಣ ಓಡಿಸುತ್ತಾರೆಯೇ? (ಅದೂ ನಿನ್ನ ಕ್ಷೇತ್ರದ ಕಂಬಳದಲ್ಲಿ ಕತ್ತಲೆಯಲ್ಲಿ ಕೋಣಗಳು ಓಡುವುದಾದರೂ ಹೇಗೆ? ಬರೀ ನಡೆಯುತ್ತವೆ.)
* ಅದನ್ನು ದೈವಗಳು ಮಧ್ಯರಾತ್ರಿ ವೀಕ್ಷಿಸುತ್ತವೆಯಲ್ಲಾ. ನಿನ್ನ ಭೌತಿಕ ಅಸ್ತಿತ್ವ ಇದ್ದ ಒಂದಾನೊಂದು ಕಾಲದಲ್ಲಿಯಾದರೂ ( ಬೇಕಿದ್ದರೆ ಸತ್ಯದ ಕಾಲ ಎಂದಿಟ್ಟುಕೋ) ಈ ರೀತಿ ಮಧ್ಯರಾತ್ರಿ ಕಂಬಳ (ಮಿಡ್‌ನೈಟ್‌ ರೇಸ್‌) ನಡೆಯುವುದು ಹಾಗೂ ಅದನ್ನು ನೀನು, ದೈವಗಳು ನೋಡುವುದು ಇತ್ತೇ?
* ಕೃಷಿ ಸಂಸ್ಕೃತಿ ಅದರಲ್ಲೂ ಭತ್ತ ಬೆಳೆಯುವುದು ಹಂತಹಂತವಾಗಿ ನಶಿಸಿರುವ, ಕೋಣಗಳೂ ಮರೆಯಾಗಿರುವ ಊರಿನಲ್ಲಿ ಇದು ಬೂಟಾಟಿಕೆಯ, ಪ್ರತಿಷ್ಠೆಯ, ಅವಾಸ್ತವದ ಪ್ರದರ್ಶನ ಎಂದು ನಿನಗನಿಸುವುದಿಲ್ಲವೇ?
ಹೇಳು ಬೊಬ್ಬರ್ಯ ನಿನ್ನ ಜತೆ ಇನ್ನೂ ಹಲವು ಪ್ರಶ್ನೆಗಳಿವೆ.
ಹಿಂದೆ ನಿನ್ನದೊಂದು ಪುಟ್ಟ ಗುಡಿ ಇತ್ತು. ನಾವೆಲ್ಲಾ ಬಂದು ಕೈಮುಗಿಯುತ್ತಿದ್ದೆವು. ಜನಜಂಗುಳಿ ಇಷ್ಟೊಂದು ಇರಲಿಲ್ಲ. ನೀನೂ ತಣ್ಣಗೆ ಕುಳಿತಿದ್ದೆ. ನಾವೂ ತಣ್ಣಗಿದ್ದೆವು. ಬಳಿಕ ನಿನ್ನ ಹೆಸರಿನಲ್ಲಿ ಒಂದೊಂದೇ ಸಮಸ್ಯೆಗಳು ನಿನ್ನ ಸುತ್ತಮುತ್ತಲಿನವರಿಗೆ ಕಾಣಲಾರಂಭಿಸಿದವು. ಕೊನೆಗೂ ನಿನಗೊಂದು ಸುಸಜ್ಜಿತವಾದ ಕಟ್ಟಡ ಕಟ್ಟಿದರು. ಸಾಲದ್ದಕ್ಕೆ ಒಂದು ಕಾಂಪೌಂಡ್‌ ಬಂದಿತು. ಅದೂ ಸಾಲಲಿಲ್ಲ. ಎರಡು ಕಾಂಪೌಂಡ್‌ ಕಟ್ಟಿ ನಿನ್ನನ್ನು ಅಕ್ಷರಶಃ ಕೋಟೆಯೊಳಗೆ ಬಂಧಿಸಿದೆವು. ಊರು ಕಾಯುವ ನಿನಗೇಕೆ ಕೋಟೆಯ ಹಂಗು ದೇವರೇ?
ಕೊನೆಗೆ ನಿನ್ನನ್ನು  ನಿರ್ವಹಿಸಲು (maintain) ನಮಗೆ ದುಡ್ಡು ಬೇಕಾಯಿತು. ಅದುವರೆಗೆ ನೀನು ಏನನ್ನೂ ಕೇಳಲಿಲ್ಲ. ಇಂದಿಗೂ ಏನನ್ನೂ ಕೇಳುತ್ತಿಲ್ಲ ಎಂಬುದು ನನಗೂ ಗೊತ್ತು. ಕೇವಲ ಗುಡಿಯಿದ್ದ ಕಾಲದಲ್ಲೂ ನೀನು ಭಕ್ತರು ಶಕ್ತ್ಯಾನುಸಾರ ಕೊಟ್ಟದ್ದನ್ನು ಸ್ವೀಕರಿಸಿ ಮಹಾ ವರಪ್ರಸಾದಗಳನ್ನೇ ಕರುಣಿಸಿದ್ದಿ ಎಂದು ನಮ್ಮೂರ ಹಿರಿಯರು ನಿನ್ನ ಕಾರಣಿಕಗಳನ್ನು ಕೊಂಡಾಡುತ್ತಿದ್ದರು. ಈಗ ಮಹಾ ಪೂಜೆಗೆ ಇಂತಿಷ್ಟು, ರಂಗ ಪೂಜೆಗೆ ಇಂತಿಷ್ಟು, ಕರ್ಪೂರಾರತಿ, ಕುಂಕುಮಾರ್ಚನೆಗೆ ಇಂತಿಷ್ಟು, ವಾಹನ ಪೂಜೆ, ಆ ಪೂಜೆ, ಈ ಪೂಜೆಗೆ ಇಂತಿಷ್ಟು ಎಂದು ಹೋಟೆಲ್‌ನ ಮೆನು ಕಾರ್ಡ್‌ ತೂಗು ಹಾಕಿದ ಹಾಗೆ ಬೋರ್ಡ್ ಹಾಕಿಸಿಕೊಂಡೆ. ತಕ್ಕಂತೆ ಬಿಲ್‌ ಕೂಡಾ ಕೊಡುತ್ತಿ ಬಿಡು. ಬೊಬ್ಬರ್ಯ ನೀನೊಂದು ಬ್ರಾಂಡ್‌, ನಿನ್ನ ಹೆಸರಿನ ಉತ್ಪನ್ನಗಳು ಸೇವೆಯ ಹೆಸರಿನಲ್ಲಿ ಭಕ್ತರಿಗೆ ಮಾರಾಟವಾಗುವುದು ಬೇಕಿರಲಿಲ್ಲ ಅಲ್ವಾ?
ನಿನ್ನ ಕ್ಷೇತ್ರದಲ್ಲೇ ಮದುವೆಯಾಗಬೇಕು ಎಂದು ಹರಕೆ ಹೊತ್ತಿದ್ದವರೆಲ್ಲಾ ಈಗ ಬೇರೆಡೆ ಮದುವೆಯಾಗಿ ನಿನ್ನ ಹುಂಡಿಗೊಂದಿಷ್ಟು ದಂಡ ಕಟ್ಟಿ ಹೋಗುತ್ತಿರುವುದೂ ನಿನ್ನ ಗಮನದಲ್ಲಿದೆ ತಾನೆ? ಯಥಾಶಕ್ತ್ಯಾನುಸಾರ ಎಂದು ಇದ್ದದ್ದು ಮೆನು ಕಾರ್ಡ್‌ಗೆ ಬದಲಾದಾಗ ಆಗುವ ಪರಿಸ್ಥಿತಿ ಇದು. ನಿನ್ನ ಮೆನುಕಾರ್ಡ್‌ನ ಬಿಲ್‌ನ್ನು ಸಾಮಾನ್ಯ ಭಕ್ತ ಎಲ್ಲ ಸಂದರ್ಭದಲ್ಲಿಯೂ ಭರಿಸಲು ಶಕ್ತನಾಗಿರುತ್ತಾನೆ ಎನ್ನಲಾಗದು.
ಇಲ್ಲಿ ವ್ಯಾಪಾರಿ ಮನಸ್ಸುಗಳ ಲಾಬಿ ಎಷ್ಟು ಜೋರಾಗಿದೆ. ಅದು ಶ್ರೀಸಾಮಾನ್ಯ ಭಕ್ತನನ್ನು ಹೇಗೆ ಹಿಂಡಿ ಹಿಪ್ಪೆ ಮಾಡುತ್ತಿದೆ. ಅರ್ಥಾತ್‌ ಸುಲಿಯುತ್ತಿದೆ ಎಂಬುದು ನಿನ್ನ ಗಮನಕ್ಕೆ ಬಾರದ ವಿಷಯವೇನಲ್ಲ.
ಅಂತೂ ದುಡ್ಡು ಸಂಗ್ರಹವಾಯಿತು. ಅದೂ ಆಗಾಗ ಕಳ್ಳನ ಪಾಲಾದದ್ದೂ ನಡೆಯಿತು. ಇದುವರೆಗೆ ಕಳ್ಳ ಸಿಕ್ಕಿದ ಉದಾಹರಣೆ ಇಲ್ಲ. ಬಹುಶಃ ಕಳ್ಳ ಯಾವುದೋ ಬಹುದೊಡ್ಡ ಸಂಕಟದ ಕಾಲದಲ್ಲಿ ಬಂದು ನಿನ್ನನ್ನು ಬೇಡಿ ಹುಂಡಿಗೆ ಕೈಹಾಕಿದ್ದಿರಬಹುದು. ಸತ್ಯದ ಪರವಾಗಿರುವ ನೀನು ಅವನನ್ನೂ ರಕ್ಷಿಸಿದ್ದಿ ಎಂಬುದು ನನ್ನ ಭಾವನೆ.
ಮುಂದೆ ಈ ಕಳ್ಳರ ಪತ್ತೆಗೆ ಸಿಸಿ ಕ್ಯಾಮೆರಾ ಹಾಕುತ್ತಾರೆ. ಭಕ್ತರು ಬರುವುದು, ಹೋಗುವುದು, ಪೂಜೆ, ಪುನಸ್ಕಾರ, ತೀರಾ ಪರ್ಸನಲ್‌ ಅನ್ನಿಸುವ ಹರಕೆ, ಬಯಕೆಗಳ ನಿವೇದನೆ ಎಲ್ಲವೂ ಕ್ಯಾಮೆರಾ ಕಣ್ಗಾವಲಿನಲ್ಲೇ ನಡೆಯುತ್ತವೆ. ಎಂಥಾ ತಮಾಷೆ ಗೊತ್ತಾ, ಇಡೀ ಊರು ಕಾಯುವ ನಿನ್ನನ್ನು ಕಾಯಲು ಸಿಸಿ ಕ್ಯಾಮೆರಾ!. ಆ ದಿನಗಳೂ ದೂರವಿಲ್ಲ. ಈ ಮಂತ್ರಿ ಮಹೋದಯರಿಗಿರುತ್ತದಲ್ಲಾ ಹಾಗೆ.
ಬೊಬ್ಬರ್ಯಾ, ನಿನ್ನ ಜಾತ್ರೆಯಲ್ಲಿ ಎಂಥ ಅದ್ಭುತ ಅವಕಾಶಗಳಿವೆ ಗೊತ್ತಾ, ಆದರೆ ನಿನ್ನ ಸುತ್ತಮುತ್ತಲಿನ ಬಾಡಿಗಾರ್ಡ್‌ಗಳು, ಏಜೆಂಟರು ಅದಕ್ಕೆ ಮನಸ್ಸು ಮಾಡಲೇ ಇಲ್ಲ.
ಹಾ ಕ್ಷಮೆಯಿರಲಿ, ಈಗ ಭಜನಾ ತಂಡ ಕಟ್ಟಿ ನಿನ್ನ ಮುಂದೆ ಕುಣಿಯುತ್ತಾರಲ್ಲಾ ಆ ಹುಡುಗರು ಒಂದಿಷ್ಟು ಕೆಲಸ ಮಾಡಿದ್ದಾರೆ. ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ಎಂದೆಲ್ಲಾ ಏನೇನೋ ಒಂದಿಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರಿಗೆ ನಿನ್ನ ಬಾಡಿಗಾರ್ಡ್‌ಗಳು, ತಲೆಮಾರಿನ ಗುತ್ತಿಗೆದಾರರಿಂದ ಪೂರ್ಣ ಪ್ರಮಾಣದ ಬೆಂಬಲ ಸಿಕ್ಕಿಲ್ಲ. ಭಜನಾ ತಂಡದ ಹಿಂದೆ ಒಂದಿಷ್ಟು ದೊಡ್ಡವರು, ಕೈ ಬಿಚ್ಚುವವರು ಇರುವುದರಿಂದ ಈ ಬಾಡಿಗಾರ್ಡ್‌ಗಳು, ಗುತ್ತಿಗೆದಾರರು ಸುಮ್ಮನಿದ್ದಾರೆ ಅಷ್ಟೆ.
ಬೊಬ್ಬರ್ಯ, ಸ್ವಲ್ಪ ಮಧ್ಯ, ಉತ್ತರ ಕರ್ನಾಟಕದ ಕಡೆಗೆ ಬಾ. ಕಷ್ಟವಾದರೆ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಧರ್ಮಸ್ಥಳದ ಜಾತ್ರೆಗಳನ್ನು ನೋಡು. ದೇಸಿ ಕ್ರೀಡೆಗಳಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಷ್ಟೊಂದು ಆದ್ಯತೆ ಕೊಡುತ್ತಾರೆ ಗೊತ್ತಾ. ಸ್ಥಳೀಯ ಹುಡುಗರ ತಂಡ ಕಟ್ಟಿಸಿ ಆಡಿಸುತ್ತಾರೆ, ಕುಣಿಸುತ್ತಾರೆ....
ಇಲ್ಲಿ ಎಲ್ಲವೂ ದುಡ್ಡಿನಿಂದ ಆಗುವುದಿಲ್ಲ. ದುಡ್ಡಿನ ಕೊರತೆಯೂ ನಿನಗಿಲ್ಲ. ನಿನ್ನ ಸುತ್ತಮುತ್ತಲಿನ ಹಳೇ ಹಾರ್ಡ್‌ಡಿಸ್ಕ್‌ಗಳು ಬದಲಾಗಬೇಕು. ಹೊಸ ತಲೆಮಾರುಗಳನ್ನು ಹುರಿದುಂಬಿಸುವ ಪ್ರಯತ್ನ ಆಗಬೇಕು. ಹೇಳು ಇದುವರೆಗಿನ ನಿನ್ನ ಜಾತ್ರೆಗಳಲ್ಲಿ ಇಂಥ ಒಂದಾದರೂ ಪ್ರಯತ್ನ ಆಗಿದೆಯಾ? ನಮ್ಮೂರ ಗಣೇಶೋತ್ಸವ ಮಾಡುವ ಕನಿಷ್ಠ ಕೆಲಸವನ್ನು ನಿನ್ನ ಉತ್ಸವ ಮಾಡಿದೆಯಾ? ನೀನು ಕಂಬಳ ನೋಡಲು ಹೋದಾಗ ಮೈಕ್‌ ತೆಗೆದುಕೊಂಡು ಅದೇ ಹಳೇ ಕ್ಯಾಸೆಟ್‌ ನುಡಿಸುವ ಬೊಗಳೆ ಬಾಯಿಬಡಕರು, ಹೊಸತನಕ್ಕೆ ಒಡ್ಡಿಕೊಳ್ಳದೇ ಜಡ್ಡುಗಟ್ಟಿದವರನ್ನು ನೋಡಿ ನೋಡಿ ಬೇಜಾರಾಗಿದೆ.
ಜಾತ್ರೆ, ಧರ್ಮರಕ್ಷಣೆ ಅಂದರೆ ಮತ್ತೇನು? ಇದೇ ಅಲ್ಲವೇ?
ಆದರೆ ನೀನು ನಿನ್ನ ಗುಡಿ ಒಳ್ಳೆಯದಾಯಿತು. ಅಂದರೆ ನಿನ್ನನ್ನು ಒಳ್ಳೆಯದು ಮಾಡಿದೆವು!! ಎಂದು ನಾವು ಕೊಚ್ಚಿಕೊಂಡೆವು. ಆದರೆ ನಾವು ನೈತಿಕವಾಗಿ ಕೆಟ್ಟು ಹೋಗಿದ್ದೇವೆ. ಅಧೋಗತಿಗೆ ಹೋಗುತ್ತಲೂ ಇದ್ದೇವೆ ಎಂಬುದೂ ನಿನ್ನ ಗಮನದಲ್ಲಿದೆ ಅಲ್ವಾ?
ಮುಂದಿನ ಬರಹದಲ್ಲಿ ಮತ್ತಷ್ಟು ಮಾತನಾಡುವುದಿದೆ. ನಾನು ಹೇಳಿದ್ದು ನಿನಗೇನನಿಸಿತು? ಹೋಗಲಿ ನಿನ್ನನ್ನು ನಂಬಿದ ನಿಜವಾದ ಭಕ್ತರ ಮೂಲಕವಾದರೂ ಒಂದು ಆತ್ಮಸಾಕ್ಷಿಯ comment ಹಾಕು ಪ್ಲೀಸ್‌.

                                                                                                        ಪ್ರೀತಿಯಿಂದ
                                                                                                       –ಶರತ್‌ ಹೆಗ್ಡೆ, ಕಡ್ತಲ