ಏಟು ಬುಡಕ್ಕೆ ಬಿದ್ದರೆ ಎಂಥ ಸದ್ದು ಬರುತ್ತದೆ ಎಂಬುದಕ್ಕೆ ಟಿವಿ–9ನ ಕುಟುಕು ಕಾರ್ಯಾಚರಣೆ ಪ್ರಸಂಗ ನೋಡಿದರೆ ಗೊತ್ತಾಗುತ್ತದೆ.ಅಂದಹಾಗೆ ಈ ಬರಹ ಟಿವಿ–9ಗೆ ಮಾತ್ರವಲ್ಲ. ಪತ್ರಕರ್ತರೆಂಬ ಹುದ್ದೆಯ ಮುಖವಾಡ ಧರಿಸಿರುವ ನಮ್ಮಂಥ ಎಲ್ಲ ನೌಕರರಿಗೆ ಅನ್ವಯಿಸುವ ಅನುಭವ ಆಧಾರಿತ ಮಾತು.
ನೋಡಿ ಟಿವಿ –9 ಅಷ್ಟೇ ಅಲ್ಲ ಇತರ ಸುದ್ದಿವಾಹಿನಿ, ದಿನಪತ್ರಿಕೆಯ ಪತ್ರಕರ್ತರು ಅಲ್ಲಲ್ಲಿ ಏಟು ತಿಂದ, ಅವಮಾನಕ್ಕೊಳಗಾದ ಪ್ರಕರಣಗಳು ದಿನನಿತ್ಯ ಎಂಬಂತೆ ವರದಿಯಾಗುತ್ತವೆ. ಇಂಥ ಪ್ರಕರಣಗಳಲ್ಲಿ ಆಯಾ ಸಂಸ್ಥೆಗಳು ವರದಿಗಾರರ ಸುರಕ್ಷತೆ ಬಗ್ಗೆ ಎಷ್ಟು ಕಾಳಜಿ ವಹಿಸಿವೆ? ಪತ್ರಿಕೆಯಾದರೆ ಅಬ್ಬಬ್ಬಾ ಎಂದರೆ ಒಂದು ಕಾಲಂ ಸುದ್ದಿ, ಟಿವಿಯಾದರೆ ಒಂದು ಹತ್ತಿಪ್ಪತ್ತು ಸೆಕೆಂಡ್‌ಗಳ ದೃಶ್ಯಗಳ ಓಟ ಅಷ್ಟೇ. ಮುಂದೇನಾಯಿತು? ಗೊತ್ತೇ ಇಲ್ಲ. ಕನಿಷ್ಠ ದೂರು ದಾಖಲೆ ಮಾಡಿದ್ದಾದರೂ ಎಷ್ಟಿದೆ?
ಕೆಲವು ಪ್ರಸಂಗ ಉದಾಹರಿಸುತ್ತೇನೆ.
2006ರಲ್ಲಿ ಮಂಗಳೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರನ್ನು ಮುಸ್ಲಿಂ ಯುವಕರು ಪ್ರವಾಸ ಕರೆದೊಯುತ್ತಿದ್ದಾರೆ ಎಂದು ಸುದ್ದಿ ತಿಳಿದು ಹಿಂದೂ ಸಂಘಟನೆಗಳು ಆ ಪ್ರವಾಸಿ ಬಸ್ಸನ್ನು ತಡೆಗಟ್ಟಿ ಹಾನಿ ಮಾಡಿದರು. ಯುವಕರ ಮೇಲೆ ಹಲ್ಲೆಯೂ ನಡೆಯಿತು. ಘಟನೆಯನ್ನು ಚಿತ್ರಿಸಿದ ಸ್ಥಳೀಯ ಟಿವಿ ಕ್ಯಾಮೆರಾಮನ್‌ಗೆ ಚೂರಿಯಿಂದ ಇರಿದರು. ಕ್ಯಾಮೆರಾ ಕಸಿದರು. (ಅದನ್ನು ನೇತ್ರಾವತಿ ನದಿಗೆ ಎಸೆದಿದ್ದಾರೆ ಎಂಬ ಸುದ್ದಿಯೂ ಇದೆ) ಕೊನೇ ಪಕ್ಷ ಆ ಹುಡುಗ ದೂರು ದಾಖಲಿಸುವ ಧೈರ್ಯ ಮಾಡಲಿಲ್ಲ. ಏಕೆಂದರೆ ನಾಳಿನ ಬಗ್ಗೆ ಅವನಿಗೆ ಧೈರ್ಯವಿಲ್ಲ.
* ದಾವಣಗೆರೆಯಲ್ಲಿ ಕಾರಿನೊಳಗಿಟ್ಟಿದ್ದ ಲ್ಯಾಪ್‌ಟಾಪ್ ಕಳವಾದಾಗ ಅದರ ಜವಾಬ್ದಾರಿ ಹೊರಿಸಿ ವರದಿಗಾರನ ಸಂಬಳದಿಂದ ಕಡಿತಗೊಳಿಸಿ ಕೊನೆಗೆ ಆತನನ್ನೇ ಹೊರದಬ್ಬಿದ ಘಟನೆಯೂ ನಡೆದಿದೆ.
* ಹುಬ್ಬಳ್ಳಿಯಲ್ಲಿ ಕೆಪಿಎಸ್‌ಸಿ ಪರೀಕ್ಷಾ ಅಕ್ರಮಗಳು ನಡೆಯುತ್ತಿದ್ದಾಗ ವಿಡಿಯೋ ಚಿತ್ರಿಸಿದ ನನ್ನ ಸಹಪಾಠಿ ಗೆಳೆಯನ ಮೇಲೆ ಹಲ್ಲೆ ನಡೆಯಿತು. ಆತ ದೂರು ನೀಡಲು ಮುಂದಾದಾಗ ಸಂಸ್ಥೆಯವರೇ ತಡೆದು, ರಾಜಿಯಾಗು ಮಾರಾಯ. ಇಲ್ಲದ ರಗಳೆಯೇಕೆ ಎಂದು ಮನವೊಲಿಸಿದ್ದರು. ಆದರೆ ಅಕ್ರಮ ಎಸಗಿದವರು ಸುಮ್ಮನಿರದೆ ಇಲ್ಲದ ಕೇಸುಗಳನ್ನು ಜಡಿದರು. ಕೊನೆಗೂ ಈತನೊಬ್ಬನೇ ಸ್ವಂತ ಖರ್ಚಿನಿಂದ ಕೋರ್ಟ್‌ಗೆ ಅಲೆದಾಡಿ ಪ್ರಕರಣ ಬಗೆಹರಿಸಿಕೊಳ್ಳಬೇಕಾಯಿತು. ಆತ ಆಗ ಇದೇ ಟಿವಿ–9 ಸಂಸ್ಥೆಯಲ್ಲಿದ್ದ.
* ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಸಚಿವ ಶಿವರಾಜ ತಂಗಡಗಿ ಅವರ ಸಹೋದರನ ಮನೆಯ ಮುಂದೆ ‘ವಾಕ್‌ಥ್ರೂ’ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ಪಬ್ಲಿಕ್ ಟಿವಿಯ ವರದಿಗಾರ ಮುಕ್ಕಣ್ಣನಿಗೆ ತಂಗಡಗಿ ಬೆಂಬಲಿಗರು ಹಲ್ಲೆ ನಡೆಸಿದರು. ಆದರೆ, ಅಂದೂ ಮುಕ್ಕಣ್ಣ ಅಸಹಾಯಕನಾಗಿದ್ದ. ಸಂಜೆ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ತಮ್ಮ ವಾಹಿನಿಯ ‘ಬಿಗ್ ಬುಲೆಟಿನ್’ ಎಂಬ ಏಕಪಾತ್ರಾಭಿನಯದಲ್ಲಿ ಅದೊಂದು ರೋಚಕ ಹಾಸ್ಯಭರಿತ ಘಟನೆ ಎಂಬಂತೆ ನಿರೂಪಿಸಿದ್ದರು. ನೋಡಿ ಮೈಎಲ್ಲಾ ಉರಿದುಹೋಯಿತು.
* ಗಂಗಾವತಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ಪರೀಕ್ಷಾ ಕೇಂದ್ರದಲ್ಲಿ ನಡೆಯುತ್ತಿದ್ದ ಪರೀಕ್ಷಾ ಅಕ್ರಮಗಳನ್ನು ಚಿತ್ರಿಸಿದ ಟಿವಿ–9 ಕ್ಯಾಮೆರಾಮನ್ ಮಾರುತಿಯನ್ನು ಹಿಡಿದು ಆ ದಂಧೆಕೋರರು ಎಳೆದಾಡಿದ್ದರು. ಟಿವಿ ಸಂಸ್ಥೆಯಿಂದ ಸಾಂತ್ವನ ಬಿಟ್ಟರೆ ಅದೊಂದು ಹೈಪ್ ಆಗಲೇ ಇಲ್ಲ. ದೂರು ದಾಖಲಂತೂ ದೂರದ ಮಾತು.
* ಹಲವಾರು ಕಡೆ ಕ್ಯಾಮೆರಾ ಕಸಿದುಕೊಳ್ಳುವುದು. ವರದಿಗಾರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಅವಾಚ್ಯ ನಿಂದನೆ ಎಲ್ಲವನ್ನೂ ನಾವು ಸಹಿಸಿಕೊಳ್ಳಲೇಬೇಕು. ಕ್ಯಾಮೆರಾ, ಸಂಸ್ಥೆಯ ಯಂತ್ರೋಪಕರಣಗಳಿಗೆ ವಿಮೆ ಇದೆ. ಆದರೆ, ನಮಗೆ?
ಯಾವ ಸಂಸ್ಥೆಯ ಆಡಳಿತವೂ ಕಾಳಜಿ ವಹಿಸುತ್ತದೆ ಎಂಬ ಖಾತ್ರಿ ಇಲ್ಲ. ಅವುಗಳಿಗೆ ಕೋರ್ಟು, ಕಚೇರಿಯ ರಗಳೆ ಬೇಡವೇ ಬೇಡ. ವಿಪರೀತ ರಿಸ್ಕ್ ಬಂದರೆ ಒಂದಿಷ್ಟು ಕಾಸು ಬಿಸಾಕಿ ಕೈತೊಳೆದುಕೊಳ್ಳುತ್ತಾರೆ. ಸುಮ್ಮನೆ ಪತ್ರಿಕೋದ್ಯಮದ ಬೃಹತ್ ಐಡಿಯಾಲಜಿಗಳನ್ನು ಹೇಳುತ್ತಾರೆ ಅಷ್ಟೇ.
ಹಾಗಾದರೆ, ಡಿಕೆಶಿ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣ ಇಷ್ಟೊಂದು ಸದ್ದು ಮಾಡಿತು ಏಕೆ? ಅದಕ್ಕೇ ಹೇಳುವುದು ಏಟು ಬುಡಕ್ಕೇ ಬೀಳಬೇಕು ಅಂತ.
* ಟಿವಿ 9 ಕುಟುಕು ಕಾರ್ಯಾಚರಣೆಯ ಮೊದಲ ಆರೋಪಿ ಸಂಸ್ಥೆಯ ಮುಖ್ಯಸ್ಥ ಮಹೇಂದ್ರ ಮಿಶ್ರಾ. ಈಗ ಅವರನ್ನು ಬಚಾವ್ ಮಾಡಲು ಈ ನಾಲ್ಕು ದಿನಗಳಿಂದ ಇಷ್ಟೊಂದು ಹೈಪ್ ನಡೆಯುತ್ತಲೇ ಇದೆ. ನಿಜವಾಗಿಯೂ ಇದು ಪತ್ರಕರ್ತರ ಮೇಲೆ ಕಾಳಜಿಯೇ ಆಗಿದ್ದಲ್ಲಿ ಹಲವಾರು ಬಾರಿ ಮಾರಣಾಂತಿಕ ಹೊಡೆತ ತಿಂದ ನಿಷ್ಠಾವಂತ ವರದಿಗಾರ, ಕ್ಯಾಮೆರಾಮನ್‌ಗಳ ಬಗ್ಗೆ ಕಾಳಜಿ ಏಕೆ ತೋರಲಿಲ್ಲ? ಅದನ್ನೂ ಒಂದು ಟಿಆರ್‌ಪಿ ತಂತ್ರವನ್ನಾಗಿಯಷ್ಟೇ ಬಳಸಿಕೊಂಡರು ಏಕೆ? ಆ ಪ್ರಕರಣಗಳು ಏಕೆ ದಿನಗಟ್ಟಲೆ ಹೈಪ್ ಆಗಲಿಲ್ಲ? ನೋಡಿ ಇಲ್ಲಿ ಪತ್ರಿಕೋದ್ಯಮದ ಅಳಿವು ಉಳಿವಿನ ಪ್ರಶ್ನೆ ಬಂದೇ ಇಲ್ಲ!
* ಪಾಪ ಬಲಿಪಶುಗಳಾಗಿರುವ ಮುಗ್ದ ಪತ್ರಕರ್ತರ ಬಗ್ಗೆ ವಿಷಾದ, ಬೇಸರವಿದೆ.
* ಮಹಿಳಾ ಪತ್ರಕರ್ತೆಯ ಮೇಲೆ ದೌರ್ಜನ್ಯ (ಯಾವುದೇ ಸ್ವರೂಪದ್ದಿರಲಿ) ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ನಡೆದಿದ್ದರೂ ಅಂಥ ಹೆಣ್ಣುಮಗಳೊಬ್ಬಳ ಒಟ್ಟಾರೆ ಬದುಕಿಗೆ ಕೆಟ್ಟ ಪರಿಣಾಮ ಬೀರುವ ವಿಷಯನ್ನು ಟಿಆರ್‌ಪಿ ಗುರಿಯಿಟ್ಟುಕೊಂಡು ಮಾರುಕಟ್ಟೆ ಮಾಡುತ್ತಿರುವುದು, ಅದನ್ನೂ ಒಂದು ಅನುಕಂಪವನ್ನಾಗಿ ನಗದೀಕರಿಸಿಕೊಳ್ಳುವುದು ಅಕ್ಷಮ್ಯ.
* ಇದೀಗ ಡಿಕೆಶಿಯೇ ಹೀರೋ ಆಗುತ್ತಿದ್ದಾರೆ. ಏಕೆಂದರೆ ನಿರಂತರ ನೆಗೆಟಿವ್ ವರದಿಗಳನ್ನು ಬಿಂಬಿಸುತ್ತಲೇ ಇದ್ದರೆ ವೀಕ್ಷಕರೂ ನಮಗಿಂತ ಬುದ್ಧಿವಂತರಿದ್ದಾರೆ. ಮಾತ್ರವಲ್ಲ ಇದೇ ಪ್ರಕರಣದಿಂದ ಡಿಕೆಶಿಗೆ ಪ್ರಚಾರ ದೊರೆತು, ಅವರ ಮೇಲೇ ಜನರಿಗೆ ಕರುಣೆ ಮೂಡುವುದು ಖಚಿತ.
* ಇಂಥ ಘಟನೆ ನಡೆದಾಗ ಎಲ್ಲ ಮಾಧ್ಯಮಗಳು ಒಟ್ಟಾಗಿ ನಿಂತು ತಿರುಗಿ ಬೀಳುತ್ತಿದ್ದರೆ ಕಥೆಯೇ ಬೇರೆಯಾಗುತ್ತಿತ್ತು. ಕೇವಲ ಪತ್ರಿಕಾ ಸಂಘಟನೆಗಳು ಖಂಡನೆಗಳ ಮಂಡನೆ ಮಾಡಿ, ಒಂದಿಷ್ಟು ಗದ್ದಲ ಎಬ್ಬಿಸಿ ಸುಮ್ಮನಾದವು ಅಷ್ಟೆ. ಸಂಕಷ್ಟದ ಸಮಯದಲ್ಲಿ ಟಿಆರ್‌ಪಿ, ಮಾರುಕಟ್ಟೆ, ವಾಣಿಜ್ಯ ಹಿತಾಸಕ್ತಿಯನ್ನು ಬದಿಗಿಟ್ಟು ಒಂದಾಗಲೇಬೇಕು ಎಂಬ ಕನಿಷ್ಠ ಪ್ರಜ್ಞೆಯೂ ಇತರ ವಾಹಿನಿಗಳಿಗೆ ಹೊಳೆಯಲಿಲ್ಲವೇ? ನಾಳೆ ನಿಮ್ಮ ಮನೆಗೂ ಈ ಪರಿಸ್ಥಿತಿ ಬರುವುದಿಲ್ಲವೇ? ಹೌದು, ಇಲ್ಲಿಯೂ ಏಟು ಬುಡಕ್ಕೆ ಬೀಳಬೇಕು. ಆಗ ಅದರ ಸದ್ದೇ ಬೇರೆ.
ಕೊನೇ ಪಕ್ಷ ಜನಶ್ರೀ ಮತ್ತು ಸುವರ್ಣ ನ್ಯೂಸ್ ಒಂದಿಷ್ಟು ಹೊತ್ತು ಮೀಸಲಿಟ್ಟವು ಎಂಬುದು ಸಮಾಧಾನಕರ.
* ಪ್ರಕರಣದಲ್ಲಿ ಹೇಳಿದ್ದನ್ನೇ ಹೇಳಿ ವಿಷಯದ ತಲೆಬುಡ ಗೊತ್ತಿಲ್ಲದೇ ಪ್ರಚಾರ ಪ್ರಿಯರು, ‘ಹೋರಾಟಗಾರರು’ ಮೈಲೇಜ್ ಪಡೆದುಕೊಂಡರು. ಚಾನೆಲ್‌ಗೂ ಟೈಂಪಾಸ್ ಆಯಿತು. ರಾಜಕಾರಣಿಗಳ ವಾಚಾಳಿತನ, ಆರೋಪ –ಪ್ರತ್ಯಾರೋಪಕ್ಕೂ ವೇದಿಕೆಯಾಯಿತು.
* ನಾವು ಎಂಥ ‘ ಹುಲಿ’, ‘ಸಿಂಹ’ಗಳೇ ಆಗಿರಲಿ. ನಮ್ಮನ್ನು ಮೀರಿದ, ಬಲಿಷ್ಠವಾದ ಶಕ್ತಿಯಾಗಿ ಕಾನೂನು ಮತ್ತು ಸರ್ಕಾರ ಎಂಬವು ಇವೆ. ಸರ್ಕಾರದಲ್ಲಿರುವವರು ಕಾನೂನಿನ ಕೈಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆ. ಆದರೆ, ಬದುಕಿನಲ್ಲಿ ಒಂದು ನೌಕರಿ, ಅದರಿಂದ ಬರುವ ಗಳಿಕೆಯೊಳಗೇ ಜೀವಿಸುವ ನಮ್ಮಂಥವರು ‘ದೊಡ್ಡವರ’ ಗಾಳಕ್ಕೆ ಬೀಳುವ ಮುನ್ನ ಎಚ್ಚರವಿರಬೇಕು. ಬ್ರೇಕಿಂಗ್ ನ್ಯೂಸ್ ಕ್ರ್ಯಾಕಿಂಗ್ ನ್ಯೂಸ್ ಎಂಬ ತಗಡು ಸುದ್ದಿಗಳಿಂದ ದೇಶ ಉದ್ಧಾರವಾಗುವುದಿಲ್ಲ.
* ಟಿವಿ ವಾಹಿನಿಗಳ ಮೇಲೆ ನನ್ನ ಆಕ್ರೋಶವಲ್ಲ. ಸಮಾಜ ತಿದ್ದಿದ, ಮಳೆ, ಗಾಳಿ, ಪ್ರವಾಹ, ಅಪಘಾತದಂಥ ಸಂದರ್ಭದಲ್ಲಿ ನಿರಂತರ ಮಾಹಿತಿ ನೀಡಿ ವ್ಯವಸ್ಥೆಗೆ ನೆರವಾದ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ ಬೆಳಕು ಚೆಲ್ಲಿದ ಸಾವಿರಾರು ಉದಾಹರಣೆಗಳೂ ಕಣ್ಣಮುಂದಿವೆ. ಆದರೆ, ಮೊದಲು ನಮ್ಮ ಸುರಕ್ಷೆ ಬಳಿಕ ಊರವರ ಕಾಳಜಿ ಇರಲಿ. ಹಾ, ಸುದ್ದಿ ಮಾರ್ಗದಲ್ಲಿ ಅಡ್ಡಹಾದಿಯೂ ಬೇಡ.
ಪ್ರೀತಿಯಿಂದ
ಶರತ್ ಹೆಗ್ಡೆ, ಕಡ್ತಲ
No comments:
Post a Comment