ಸುಮಾ... ಪುಚ್ಚೆ ಕಣ್ಣ್ ಮುಚ್ಚ್ದ್ ಪೇರ್ ಪಂರ್ಡ ಏರೆಗಲ್ ಗೊತ್ತಾಪುಜಿ ಪಂಡ್ದ್ ಎಣ್ಣಿಯನಾ...? (ಡಸ್್್ಸ್ಸ್... ಎಂಬ ಹಿನ್ನೆಲೆ ಸಂಗೀತ)
ಒಬ್ಬ ಜಾಕೆಟ್ ಧರಿಸಿದ ದಪ್ಪ ದೇಹದ ಗಡ್ಡಧಾರಿ ರಂಗದ ಮೇಲೆ ಏರು ಧ್ವನಿಯಲ್ಲಿ ಈ ಸಂಭಾಷಣೆ ನುಡಿಯುತ್ತಾನೆ. ಕೆಂಪು ಬೆಳಕು ಅವನ ಮೇಲೆ ಬೀಳುತ್ತದೆ... ಇಡೀ ರಂಗದಲ್ಲಿ ಗಂಭೀರ ವಾತಾವರಣ. ಹಿನ್ನೆಲೆಯಲ್ಲಿ ಭಯ ಹುಟ್ಟಿಸುವ ಸಂಗೀತ. ... ಹಾ ಪನ್ಲ ಸುಮಾ ( ಪ್ರತಿಧ್ವನಿ, ಮತ್ತೆ ಡಸ್್್ಸ... ಸಂಗೀತ) ...–ಅಲೆ ಉಂದು ಶೇಖರೆ...(ಅದೋ ನೋಡಿ ಇದು ಶೇಖರ) ಎಂದು ನಾಟಕ ನೋಡುತ್ತಿದ್ದ ಪಡ್ಡೆಮಂದಿ ಪಾತ್ರಧಾರಿಯನ್ನು ಗುರುತಿಸಿ ಕಿಸಕ್ಕನೆ ಕಿಸಿಯುತ್ತಾರೆ. ಇವತ್ತು ಶೇಖರ ಮಾಷ್ಟ್ರ ಪರಿಚಯ ನಿಮಗಾಗಿ. ಸದ್ಯ ಕಡ್ತಲದ ಎಲ್ಲ ಕಥೆಗಳಿಗೂ ಬೇಕಾಗುವ, ಸದಾ ಚಾಲ್ತಿಯಲ್ಲಿರುವ ಬಹುಮುಖ ಪ್ರತಿಭೆಯ ಮನುಷ್ಯ. ಶೇಖರ ನಾಯ್ಕ್ ಆಲಿಯಾಸ್ ಪೀಟಿ ಮಾಷ್ಟ್ರು, ಉರೂಫ್ ಶೇಖರ ಮಾಷ್ಟ್ರು, ಹೋಗ್ಲಿ ಹಲವರ ಬಾಯಲ್ಲಿ ಶೇಖರೆ... ಹೀಗೆ ಹಲವು ನಾಮ ಉಪನಾಮ, ಅಡ್ಡನಾಮಗಳಿಂದ ಹೊಗಳಿಗೆ, ಟೀಕೆ ಎರಡಕ್ಕೂ ಆಹಾರವಾಗಿರುವವರು ಮಾಷ್ಟ್ರು. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡೇ ಹೋಗುತ್ತಾರೆ. ಕಡ್ತಲದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕವಾಗಿ ದೈಹಿಕ ಶಿಕ್ಷಕರಾಗಿದ್ದವರು ಕೆಲಕಾಲ ಅಲ್ಲಿಂದ ಮುಳ್ಕಾಡು ಶಾಲೆಯಲ್ಲಿ ಕೆಲಸ ಮಾಡಿದ್ದು... ಇದ್ಯಾವುದೂ ವರ್ಕ್ಔಟ್ ಆಗೋದಿಲ್ಲ ಎಂದು ಅರಿತ ಮಾಷ್ಟ್ರು ಸರ್ಕಾರಿ ನೌಕರಿಗೆ ಕಾಯದೇ ಮಂಗಳೂರಿನ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಈ ಮಧ್ಯೆ ಮಾಷ್ಟ್ರ ಗರಡಿಯಲ್ಲಿ ಪಳಗಿದ ಹುಡುಗರು ಎಷ್ಟೋ ಮಂದಿ. ಕಡ್ತಲದ ಹುಡುಗರಿಗೊಂದು ಸಾಂಸ್ಕೃತಿಕ ಚೌಕಟ್ಟು ಹಾಕಿ ಹೀಗೆ ಇರಬೇಕಪ್ಪಾ ಎಂದು ಸದಾ ಹೇಳುತ್ತಿದ್ದವರು. ಇಂದು ನನ್ನ ಬದುಕಿನಲ್ಲಿಯೂ ಶೇಖರ ಮಾಷ್ಟ್ರ ಕೊಡುಗೆಯ ಸ್ವಲ್ಪ ಪಾಲೂ ಇದೆ ಎಂದು ಕೃತಜ್ಞತೆಯಿಂದಲೇ ಹೇಳುತ್ತೇನೆ. ಊರಿನ ಹುಡುಗರು ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಬೇಕು. ಹೌದು ಅವರನ್ನೆಲ್ಲಾ ಒಂದೆಡೆ ಕಟ್ಟಿಹಾಕಿ, ಕುಣಿಸುವುದೆಂದರೆ ಸುಲಭದ ಮಾತಾ? ಆದರೆ, ತಕ್ಕಮಟ್ಟಿಗೆ ಶೇಖರ ಮಾಷ್ಟ್ರು ಯಶಸ್ವಿಯಾಗಿದ್ದಾರೆ. ಊರಿನಲ್ಲಿ ನಡೆಸಿದ ಯೋಗ ಶಿಬಿರಗಳು, ಕಟ್ಟಿದ ನಾಟಕ ತಂಡಗಳು, ಆಡಿದ ನಾಟಕಗಳು. ಅದಕ್ಕೆ ಬರುತ್ತಿದ್ದ ಊರ ಮಂದಿಯ ವಿಮರ್ಶೆಗಳು ಹೀಗೆ ಒಂದಾ ಎರಡಾ.. ನಾನೂ ಶೇಖರ ಮಾಷ್ಟ್ರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಖುಷಿಪಟ್ಟಿದ್ದೇನೆ. ನಮ್ಮ ನಡುವೆ ತಾತ್ವಿಕ ತಿಕ್ಕಾಟಗಳೂ ನಡೆದಿವೆ. ನನ್ನ ವಿಪರೀತ ತುಂಟತನವನ್ನು ಮಾಷ್ಟ್ರು ಸಹಿಸಿಕೊಂಡಿದ್ದಾರೆ. ಇವೆಲ್ಲದರ ನಡುವೆ ನಮ್ಮದೊಂದು ಒಳ್ಳೆಯ ತಂಡ ಅಂದು ಇತ್ತು. ಇಂದು ಮಾಷ್ಟ್ರು ರಾಜ್ಯ– ಅಂತರರಾಜ್ಯಮಟ್ಟಕ್ಕೆ ಬೆಳೆದಿದ್ದಾರೆ. ಆದರೆ, ಊರಿನ ಮೋಹ ಬಿಟ್ಟಿಲ್ಲ. ತೀವ್ರ ಟೀಕೆ ಎದುರಿಸಿದಾಗ ಬೇಜಾರು ಮಾಡಿಕೊಂಡು ಮಂಗಳೂರಿಗೆ ಹೋಗಿದ್ದಾರೆ. ಮನಸ್ಸು ತಿಳಿಯಾದಾಗ ಮತ್ತೆ ಬಂದು ಇನ್ನೊಂದು ಹೊಸ ನಾಟಕವನ್ನು ವೇದಿಕೆಗೆ ತಂದಿದ್ದಾರೆ. ನಾನು ಮಾಷ್ಟ್ರನ್ನು ಅತ್ಯಂತ ಖುಷಿಯಿಂದ ಗುರುತಿಸುವುದು ಅವರ ರಂಗ ಸೇವೆ ಹಾಗೂ ಅದರ ಮೇಲಿರುವ ಪ್ರೀತಿಗೆ. ಯಾರು ಏನೇ ಅಂದರೂ ತಕ್ಷಣಕ್ಕೆ ಎದುರಾಡದ ಸ್ವಭಾವ ಮಾಷ್ಟ್ರದ್ದು. ಇಷ್ಟೆಲ್ಲಾ ಆದರೂ ಟೀಕಿಸುವವರು ಒಂದಂಶ ನೋಡಬೇಕು. ಊರಿನ ಗಣೇಶೋತ್ಸವ, ಶಾಲೆಯ ವಾರ್ಷಿಕೋತ್ಸವ, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮುಂದಾಳುತ್ವ ವಹಿಸಿಕೊಳ್ಳುವವರೇ ಇಂದು ನಮ್ಮೂರಿನಲ್ಲಿ ಇಲ್ಲವಾಗಿದ್ದಾರೆ. ಊರಿನ ಶಾಲಾ ವಾರ್ಷಿಕೋತ್ಸವದಲ್ಲಿ ಪಕ್ಕದೂರಿನವರನ್ನು ಕರೆಸಿ ಕಾರ್ಯಕ್ರಮ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಟೀಕಿಸುವವರಿಗೆ ಮುಂದೆ ಹೋಗಿ ಒಂದು ಕುರ್ಚಿ ಎತ್ತಿಡಲೂ ಪ್ರತಿಷ್ಠೆ ಅಡ್ಡಬರುತ್ತದೆ. ಇನ್ನೂ ಹಲವರು ಗುಂಪುಗಾರಿಕೆ ನಿರತರು. ಇಂಥ ಸಂದರ್ಭವನ್ನು ನಿಭಾಯಿಸಬಹುದಾದ ನಾಯಕತ್ವ ಮಾಷ್ಟ್ರಲ್ಲಿ ಇದೆ. 90ರ ದಶಕದಲ್ಲಿ ನಮ್ಮೂರಿನಲ್ಲಿ ರಮಾನಂದ ಹೆಗ್ಡೆ ಅವರು ಒಂದಿಷ್ಟು ರಂಗ ಸಂಘಟನೆ ನಡೆಸಿದ್ದರು. ಅವರ ನಿಧನದ ಬಳಿಕ ಅಕ್ಷರಶಃ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳು ಸತ್ತೇಹೋಗಿದ್ದವು. ಚೇತನ ಯುವಕ ಮಂಡಲ ಸಂಪೂರ್ಣ ಚೇತನ ಕಳೆದುಕೊಂಡಿತು. ಅದರ ಸದಸ್ಯರೆಲ್ಲಾ ಬೇರೆ ವಹಿವಾಟಿಗೆ ಮುಂದುವರಿದರು. ಇಂಥ ಪರಿಸ್ಥಿತಿಯಲ್ಲಿ ಬರಿಗೈಯಲ್ಲಿ ಬಂದು ಎಲ್ಲರನ್ನೂ ಸಂಘಟಿಸಿ ಊರಿನ ವೇದಿಕೆಯಲ್ಲಿ ರಂಗದ ಬೆಳಕು ಹಚ್ಚಿದರು. ನಿರ್ದಿಷ್ಟ ಸಂಘಟನೆಯ ಬ್ಯಾನರ್ ಅಡಿ ಗುರುತಿಸಿಕೊಳ್ಳಲಿಲ್ಲ. ಆಯಾ ಕಾಲ, ಸಂದರ್ಭ, ಕಾರ್ಯಕ್ರಮಕ್ಕೆ ಅನುಗುಣವಾಗಿ ತಕ್ಷಣಕ್ಕೊಂದು ಸಂಘಟನೆ ಕಟ್ಟಿದರು. ಹುಡುಗ–ಹುಡುಗಿಯರನ್ನು ವೇದಿಕೆ ಹತ್ತಿಸಿದರು, ಹಾಡಿಸಿ ಕುಣಿಸಿದರು. ಆದರೆ, ಶೇಖರ ಮಾಷ್ಟ್ರೂ ಯಾಕೋ ಬೇಜಾರಾಗಿದ್ದಾರೆ ಅನ್ನುವುದು ಗೊತ್ತಾಗಿದೆ. ‘ಸಾಕು ಮಾರಾಯ ಇವರನ್ನೆಲ್ಲಾ ಒಟ್ಟು ಮಾಡುವುದು ಯಾರು. ಇರಲಿ ನಮ್ಮ ಕೆಲಸ ಎಷ್ಟು ಇದೆಯೋ ಮಾಡೋಣ...’ ಎಂದು ಹೇಳಿ ಮೌನವಾಗಿದ್ದಾರೆ. ಮಾಷ್ಟ್ರು ಹಲವಾರು ಮಂದಿಗೆ ಸನ್ಮಾನ ಮಾಡಿಸಿದ್ದಾರೆ. ಗುರುತಿಸಿದ್ದಾರೆ. ಒಂದಿಷ್ಟು ವಿಶಿಷ್ಟ ( ಒಮ್ಮೊಮ್ಮೆ ವಿಚಿತ್ರ) ಎನಿಸುವ ಕಾರ್ಯಕ್ರಮಗಳನ್ನು ಕಡ್ತಲಕ್ಕೆ ಪರಿಚಯಿಸಿದ್ದಾರೆ. ಅವರಿಗೆ ಹಾರ ತುರಾಯಿಗಳೇನೂ ಬೇಡ. ಮಾಡಿದ್ದಕ್ಕೊಂದಿಷ್ಟು ಒಳ್ಳೆಯ ಮಾತನಾಡೋಣ. ಅದೇ ಅವರಿಗೆ ನೀಡುವ ಕೃತಜ್ಞತೆಯ ಪ್ರಶಸ್ತಿ.
ಪ್ರೀತಿಯಿಂದ
–ಶರತ್ ಹೆಗ್ಡೆ, ಕಡ್ತಲ
ಚೆನ್ನಾಗಿದೆ...:)
ReplyDeleteಮಾಸ್ಟ್ರೇ..... ಬರವಣಿಗೆ ಶೈಲಿ ಚೆನ್ನಾಗಿದೆ.
ReplyDelete