Wednesday, 9 October 2013

ಸಬ್‌ಎಡಿಟರ್ ಸುಬ್ರಾಯ ಸತ್ತ ಮೇಲೆ...

ಬ್‌ಎಡಿಟರ್ ಸುಬ್ರಾಯ ಒಂದು ದಿನ ಇದ್ದಕ್ಕಿದ್ದಂತೆ ಗೊಟಕ್ ಎಂದ. ಅವನು ಹೇಗೆ ಸತ್ತ? ಯಾರಾದರೂ ಕಚಕ್ ಮಾಡಿದರೇ? ಇಲ್ಲ ಹಾರ್ಟ್ ಅಟ್ಯಾಕ್ ಆಯಿತೇ? ಪತ್ರಿಕೋದ್ಯಮ ಎಂಬ ತ್ರಿಶಂಕು ವ್ಯವಸ್ಥೆಯ ಕಿರಿಕಿರಿಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡನೋ... ಹೇಗೆ? ಅದೇನೋ ಗೊತ್ತಿಲ್ಲ. ಅಂತೂ ಸತ್ತ. ಮರಣೋತ್ತರ ವರದಿ ಬೇಕಾದರೆ ಯಾವುದಾದರೂ ಸುದ್ದಿವಾಹಿನಿಯವರು ಕೊಟ್ಟಾರು.
   ಸತ್ತ. ಸತ್ತವ ನೇರವಾಗಿ ಯಮನ ಇಂಟರ್‌ವ್ಯೂ ಕೊಠಡಿಗೆ ಹೋದ. ಯಮಧರ್ಮನಿಗೆ ಅವನನ್ನು ಕಂಡಾಗಲೇ ಗೊತ್ತಾಯ್ತು. ಅರೇ ಅವನು ನಮ್ಮ ಸುಬ್ರಾಯ ಅಲ್ವಾ? ಬಯೋಡೇಟಾ ಇಲ್ಲದೇ ಪರಿಚಯ!
ಯಮ ಹಾಗೆ ಕೇಳಿದಾಗ, ಈತನೇನಾದರೂ ಚಿತ್ರಗುಪ್ತನ ಶಾಪಗ್ರಸ್ತ ಮರಿಮೊಮ್ಮಗ ಮಾನವನಾಗಿ ಬಾಳಿ ವಾಪಸಾಗಿರಬಹುದೇ? ಎಂಬ ಶಂಕೆ ಅಲ್ಲಿನವರಿಗಾಗಿತ್ತು.
   ಸುಬ್ರಾಯ ಬೆಳೆಸಿಕೊಂಡ ಲಿಂಕು ಹಾಗಿತ್ತು. ಭೂಲೋಕದ ಯಮ ಪ್ರತಿನಿಧಿಗಳೆಲ್ಲ ಅವನಿಗೆ ಪರಿಚಯ. ದೊಡ್ಡಾಸ್ಪತ್ರೆಯ ಹೆಡ್ಡಾಕ್ಟ್ರುಗಳು, ಬಸ್, ಅದಿರು ಲಾರಿ, ಅಂಬುಲೆನ್ಸ್ ಡ್ರೈವರ್‌ಗಳು, ಪೊಲೀಸರು... ಹೀಗೆ. ದಿನಾ ಅವರಿಗೆ ಫೋನ್ ಮಾಡಿ ಸತ್ತವರ ಲೆಕ್ಕ ಪಡೆದು ಯಥಾವತ್ತಾಗಿ ಬರೆದು ಕೊಲೆ, ಆತ್ಮಹತ್ಯೆ, ದುರ್ಮರಣ, ಅಪಘಾತ... ಹೀಗೆ ಹೆಡ್‌ಲೈನ್ ಕೊಟ್ಟು ಮರುದಿನ ಓದುಗರ ಮುಂದಿಟ್ಟು `ಓದಿರಿ ಬಳಿಕ ಇವರ ತಿಥಿ ನೀವೇ ಮಾಡಿರಿ' ಎಂದು ಪರೋಕ್ಷ ಸೂಚನೆ ಕೊಡುತ್ತಿದ್ದ.
ಸುಬ್ಬರಾಯನ ಇಂಥ ಸುದ್ದಿ ಸಂಗ್ರಹ, ವರದಿ ಮಂಡನೆ ಯಮನಿಗೇ ಆಶ್ಚರ್ಯ ಉಂಟು ಮಾಡಿತ್ತು. ಅರೇ ಪತ್ರಿಕಾ ವರದಿಯಲ್ಲಿ ಸತ್ತಿದ್ದಾನೆ ಎಂದು ಬರೆಯಲಾದ ವ್ಯಕ್ತಿ ನನ್ನಲ್ಲಿಗೆ ಬರಲೇ ಇಲ್ಲವಲ್ಲ. ಈ ಪ್ರೇತ ಹೇಗೆ ಮಿಸ್ ಆಯ್ತು? ತನ್ನ ದ್ವಾರಪಾಲಕರು ಲಂಚ ಪಡೆದು ಸ್ವರ್ಗಕ್ಕೇ ಕಳುಹಿಸಿದರೇ? ಹೀಗೆ ಹತ್ತಾರು ಪ್ರಶ್ನೆಗಳು ಯಮನ ತಲೆ ಕೊರೆಯುತ್ತಿದ್ದವು. ದಿಢೀರನೆ ತನ್ನ ಪ್ರತಿನಿಧಿಗಳ ಸಭೆ ಕರೆದು, ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದ(ಪತ್ರಿಕಾ ಸಂಪಾದಕರು ಅಂದು ತಮ್ಮ ಪತ್ರಿಕೆಯಲ್ಲಿ ತಪ್ಪಿಹೋದ ಸುದ್ದಿಗಾಗಿ ತಮ್ಮ ವರದಿಗಾರರನ್ನು ಬೈಯುತ್ತಾರಲ್ಲಾ ಹಾಗೆ) ಈ ರೀತಿ ಸುಬ್ರಾಯನ ಲಿಂಕು, ಖ್ಯಾತಿ ಅಮೆರಿಕ ಬಿಡಿ, ಯಮಲೋಕದವರೆಗೂ ಹಬ್ಬಿತ್ತು. ಹಾಗಾಗಿ, ಆತ ಇನ್‌ಪ್ಲ್ಯೂಯೆನ್ಸ್ ಕೋಟಾದಡಿ ಬಂದ.
   ತನ್ನ ಜೀವಿತಾವಧಿಯಲ್ಲಿ ಬದುಕಿದ್ದವರನ್ನು ಸತ್ತಿದ್ದಾರೆ ಎಂದು ಬರೆದದ್ದು, ಆತ್ಮಸಾಕ್ಷಿಗೆ ವಿರುದ್ಧವಾಗಿ ಬರೆದದ್ದು ಇತ್ಯಾದಿ ಪಾಪಗಳಿಗೆ ಒಂದು ವಾರ ಕಾಲ ಯಾವುದೇ ಪತ್ರಿಕೆ ಓದದಂತೆ, ಚಾನೆಲ್ ನೋಡದಂತೆ, ಬರೆಯದಂತೆ ತಾಕೀತು ಮಾಡಲಾಯಿತು. ಕೆಲವು ವರದಿಗಳ ಪ್ರತಿ ತರಿಸಿ ಅದರಲ್ಲಿ ಕಡ್ಲೆಪುರಿ, ಚಿತ್ರಾನ್ನ ಹಾಕಿ ತಿನ್ನಿಸಲಾಯಿತು.
   ವಾರ ಕಳೆದ ಬಳಿಕ ಯಮ ಒಂದು ಪ್ರಸ್ತಾವ ತೆಗೆದ. ನಿನ್ನ ಶಿಕ್ಷೆಯ ಅವಧಿ ಮುಗಿದಿದೆ. ಇನ್ನು ನೀನು ಸ್ವರ್ಗಕ್ಕೆ ಹೋಗಬಹುದು. ಆದರೆ, ಒಂದು ಕಂಡೀಶನ್, ನೀನು ಅಲ್ಲಿ ಒಂದು ಪತ್ರಿಕೆ ತರಬೇಕು. ಅದರಲ್ಲಿ ಸಂಪಾದಕ, ಉಪ(ದ್ರ) ಸಂಪಾದಕ ಎಲ್ಲಾ ನೀನೆ. ಬೇಕಿದ್ದರೆ ಸ್ವರ್ಗ ನರಕದ ಕೆಲವರನ್ನು ಸಹಾಯಕ್ಕಾಗಿ ಪಡೆಯಬಹುದು!!
   ಸುಬ್ರಾಯ ಒಳಗೊಳಗೇ ಗೊಣಗಿದ. ಅಯ್ಯೋ ವಿಧಿಯೇ ಬಿಟ್ಟೆನೆಂದರೂ ಬಿಡದೀ ಡೆಸ್ಕು. ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ. `ಪತ್ರಿಕೋದ್ಯಮ ಒಳ್ಳೆಯ ಕ್ಷೇತ್ರ. ಕೆಲವು ಕ್ರಿಮಿಕೀಟಗಳನ್ನು ಹೊರತುಪಡಿಸಿ' ಇದು ಅವನು ಕಂಡ ವಾಸ್ತವ. ಅಂತೂ ಆತ ಒಪ್ಪಿದ. ಯಮ ಸ್ವರ್ಗದಲ್ಲಿಯೇ ಒಂದು ಕಚೇರಿ, ಕಂಪ್ಯೂಟರುಗಳು ಎಲ್ಲವನ್ನೂ ಏರ್ಪಾಡುಗೊಳಿಸಿದ. ನರಕದಲ್ಲಿ ಮುದ್ರಣಾಲಯ ಇತ್ತು.
   ಪತ್ರಿಕೆ ಆರಂಭದ ದಿನ ಜೇಮ್ಸ ಆಗಸ್ಟಸ್ ಹಿಕ್ಕಿ ಬಂದು ಸುಬ್ರಾಯನಿಗೆ `ಯು ಆರ್ ವೆರಿ ಲಕ್ಕಿ' ಎಂದು ಕೈಕುಲುಕಿದ. ಯಂಗ್ ಇಂಡಿಯಾ ಸಂಪಾದಕ ಮಹಾತ್ಮ ಗಾಂಧೀಜಿ, ಕಚೇರಿ ಉದ್ಘಾಟಿಸಿ `ಸುಬ್ರಾಯ ಹೆಂಗ್ ಬಂದೀಯಾ...' ಕೇಳಿದರು.
ಭೂಲೋಕದಲ್ಲಿ ಪತ್ರಿಕಾ ಕ್ರಾಂತಿಯನ್ನೇ ಮಾಡಿದರೂ ನಮಗೊಂದು ಪತ್ರಿಕೆ ತೆರೆಯಲು ಇಲ್ಲಿ ಆಗಲಿಲ್ಲ. ಯಕಶ್ಚಿತ್ ಒಬ್ಬ ಉಪ ಸಂಪಾದಕ ಪತ್ರಿಕೆ ತೆರೆಯುವುದು ಆಶ್ಚರ್ಯ ಮತ್ತು ಸಂತೋಷ ಎಂದು ಅಲ್ಲಿ ಬಂದಿದ್ದ ಘಟಾನುಘಟಿ ಪತ್ರಕರ್ತರು ಕೊಂಡಾಡಿದರು.
   ಸುಬ್ರಾಯ ನರಕದ ಮುದ್ರಣಾಲಯಕ್ಕೆ ಭೇಟಿ ನೀಡಿದ. ಭೂಲೋಕದಲ್ಲಿ ನಂಬರ್ 1 ಪಟ್ಟಕಟ್ಟಿಕೊಂಡಿದ್ದವರು, ಅಪರಾಧ ವರದಿಗಾರರು ಮುದ್ರಣಾಲಯದಲ್ಲಿ ಪ್ಲೇಟ್ ಜೋಡಿಸುತ್ತಿದ್ದರು. ಕೆಲವರು ಶಾಯಿ ಒರೆಸುತ್ತಿದ್ದರು. ಜೀವಿತಾವಧಿಯಲ್ಲಿ ಆಗಾಗ `ಪ್ಲೇಟ್' ಬದಲಾಯಿಸಿದ್ದು, ಬಣ್ಣಹಚ್ಚಿ ಬರೆದಿದ್ದಕ್ಕೆ ಈ ಶಿಕ್ಷೆ.
   ಅಂತೂ ಸ್ವರ್ಗ, ನರಕ, ಶೈಮಿನೀಪುರ, ವೈಕುಂಠ, ಕೈಲಾಸ, ಇಂದ್ರಲೋಕದ ಅತ್ಯಧಿಕ ಪ್ರಸಾರದ ಏಕೈಕ ಪತ್ರಿಕೆ `ಪಾಶ' ಆರಂಭವಾಯಿತು. ಸಿನಿಮಾ ಪುರವಣಿಗೆ ಬಿಪಾಶ ಎಂದು ಹೆಸರಿಸಲಾಯಿತು. ರಂಭೆ, ಊರ್ವಶಿ ಪತ್ರಿಕೆಯ ಬ್ರಾಂಡ್ ಅಂಬಾಸಡರ್‌ಗಳಾದರು. ಚಿತ್ರಗುಪ್ತನಿಗೆ ಪತ್ರಿಕಾ ಮಾರುಕಟ್ಟೆ ವೃದ್ಧಿ ಮಾಡುವ ಹೆಚ್ಚುವರಿ ಕೆಲಸ ಸಿಕ್ಕಿತು. ಇಬ್ಬರು ದೂತರು ತಾತ್ಕಾಲಿಕ ವರದಿಗಾರರಾದರು. ಪತ್ರಿಕೆ ಸಾಗಾಟಕ್ಕೆ ಭೂಲೋಕದಿಂದ ಹೆಚ್ಚುವರಿಯಾಗಿ ಎಮ್ಮೆ, ಕೋಣ (ಅದರ ಹಾಗೆ ಬದುಕಿದ್ದವರನ್ನೂ) ತರಿಸಲಾಯಿತು.
   ಸುದ್ದಿ ಮಾಧ್ಯಮವೊಂದು ಜನ್ಮ ತಳೆಯುವುದೇ ತಡ. ಅದುವರೆಗೆ ಬಾಲ ಮುದುರಿಕೊಂಡಿದ್ದ ಪ್ರಚಾರಪ್ರಿಯರು ಹಸಿದ ನಾಯಿಗಳಂತೆ ಕಾದಿರುತ್ತಾರೆ. ಅವರಿಗೂ ಒಂದು ಅವಕಾಶ ಸಿಕ್ಕಿತು.
   ಇಂದಿರಾರಿಂದ ರಾಜೀವ್‌ವರೆಗಿನ ಕುಟುಂಬ ರಾಜಕಾರಣಿಗಳು, ಬೊಮ್ಮಾಯಿ, ಗುಂಡೂರಾವ್, ರಾಮಕೃಷ್ಣ ಹೆಗಡೆ, ವೈ.ಎಸ್.ಆರ್... ಕೆಲವು ಚಿಲ್ಲರೆಗಳು ಆಗಾಗ ಪತ್ರಿಕಾಗೋಷ್ಠಿ ಕರೆದು ಭೂಲೋಕದ ತಮ್ಮ ರಾಜಕೀಯ ವೈರಿಗಳನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಪತ್ರಿಕೆ ಭೂಲೋಕಕ್ಕೆ ಹೋಗುವುದಿಲ್ಲವಾದ್ದರಿಂದ ಯಾರೂ ಪ್ರತಿಕ್ರಿಯಿಸುತ್ತಿರಲಿಲ್ಲ. ತಾಕತ್ತಿದ್ದರೆ ದೇವೇಗೌಡರೂ ಇಲ್ಲಿ ಬಂದು ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲೆಸೆಯುತ್ತಿದ್ದರು.
   ಜೆ.ಎಚ್. ಪಟೇಲರಂತೂ ವಿಜಯ್‌ಮಲ್ಯ ಥರ ಒಮ್ಮೆ ಸಿಲ್ಕ್‌ಸ್ಮಿತಾ, ಸೌಂದರ್ಯ, ಕಲ್ಪನಾ... ಒಂದೊಂದು ದಿನ ಒಬ್ಬೊಬ್ಬರ ಜತೆ ಕಾಣಿಸಿಕೊಂಡು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಅದೂ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.
ಅಪರಾಧ ಸುದ್ದಿಗಳಿಗೂ ಕೊರತೆಯಿರಲಿಲ್ಲ. ನರಕದಲ್ಲಿ ನಡೆಯುವ ಗ್ಯಾಂಗ್‌ವಾರ್‌ಗಳು, ಅತೃಪ್ತ ಆತ್ಮಗಳನ್ನು ಭೂಮಿಯಲ್ಲೇ ತಡೆಹಿಡಿಯುವ ಮಾಂತ್ರಿಕರ ಬಗ್ಗೆ ತನಿಖಾ ವರದಿಗಳು, ಯಮದೂತರು ನಿಗದಿತ ವ್ಯಕ್ತಿಯ ಬದಲಿಗೆ ಇನ್ಯಾರನ್ನೋ ಕರೆತರುವುದು ಇತ್ಯಾದಿ ಪ್ರಕಟವಾಗುತ್ತಿದ್ದವು. ಯಮನಿಗೆ ಸಂಬಂಧಿತ ವರದಿಗಳು ಸೆನ್ಸಾರ್ ಆಗುತ್ತಿದ್ದವು.
ಭೂಲೋಕದಲ್ಲಿ ಸಂಭವಿಸಿದ ಸಾವಿನ ಸುದ್ದಿಯನ್ನು ಹಾಗೇ ಬರೆಯುವಂತಿರಲಿಲ್ಲ. ಬದಲಾಗಿ ಆತ್ಮಗಳ ಆಗಮನ, ಯಮಲೋಕಕ್ಕೆ ಸುರಕ್ಷಿತ ಆಗಮನ. ಭಾರೀ ಸಾವು ನೋವುಗಳಾದರೆ, ಯಮಲೋಕಕ್ಕೆ ಆತ್ಮಗಳ ಆಗಮನ ಹೆಚ್ಚಳ... ಹೀಗೆ ಆಕರ್ಷಕ ಶೀರ್ಷಿಕೆ ಕೊಟ್ಟು ಅದನ್ನೊಂದು ಸಂಭ್ರಮ ಎಂಬಂತೆ ಬರೆಯಬೇಕಿತ್ತು.
   ಇಂತಿಪ್ಪ `ಪಾಶ'ದಲ್ಲಿ ಒತ್ತಡಗಳಿಗೇನೂ ಕೊರತೆಯಿರಲಿಲ್ಲ. ಕಿರಿಕಿರಿ, ಬೆದರಿಕೆ ಬರುತ್ತಲೇ ಇದ್ದವು. ಒಮ್ಮೆ ರಾಜಕುಮಾರಿ ಡಯಾನಾ ಅಂತೂ ಭೂಮಿಯಲ್ಲಿ ನೆಮ್ಮದಿಯಾಗಿ ಬಾಳೋದಿಕ್ಕೆ ನಿಮ್ಮಂಥ ಪೇಪರ್‌ನವರು ಬಿಡಲಿಲ್ಲ. ಇಲ್ಲಿಯೂ ನನ್ನ ಫೋಟೊವನ್ನು ಅಷ್ಟು ಕೆಟ್ಟದಾಗಿ ಹಾಕಿದ್ದೀರಿ ಎಂದು ರಂಪ ಮಾಡಿದ್ದಳು.
 ಈ ನಡುವೆ ಜಾಹೀರಾತುಗಳೂ ಬರಲಾರಂಭಿಸಿದವು.
   ಭೂಲೋಕಕ್ಕೆ ಹೋಗಲಿಚ್ಛಿಸುವ ಆತ್ಮಗಳಿಗೆ ಸದಾವಕಾಶ. ನೀವು ಬಯಸುವ ದೇಹ ಹೊಂದಬಹುದು. ಮಾನವ, ದಾನವ, ಕುರಿ, ಕೋಳಿ, ಹಂದಿ, ಕತ್ತೆ... ಹೀಗೆ ಯಾವುದೇ ಜನ್ಮ ಎತ್ತಬಹುದು ಎಂದು ಏಜೆಂಟರು ಆಹ್ವಾನ ನೀಡುತ್ತಿದ್ದರು. ಇದಕ್ಕೆ ನಿಗದಿತ ಶುಲ್ಕ ಭರಿಸಬೇಕು. ಯಮಲೋಕದ ‘ಜನಸ್ನೇಹಿ’/ನೆಮ್ಮದಿ ಕೇಂದ್ರದಲ್ಲಿ ಸಾಲುನಿಂತು ಅರ್ಜಿ ಸಲ್ಲಿಸಿ, ಪಾಪ-ಪುಣ್ಯಗಳ ಅಕೌಂಟ್ ತೆರೆದು ಪ್ರಮಾಣ ಪತ್ರ ಪಡೆಯಬೇಕಿತ್ತು. ಈ ಕೇಂದ್ರಗಳದ್ದೂ ಯಮ(!)ಯಾತನೆಯೇ ಆಗಿತ್ತು. ಯಾರ್ದ್ದದೋ ಲೆಕ್ಕ ಯಾರಿಗೋ ಹೋಗುವ ಅವಾಂತರಗಳೂ ನಡೆಯುತ್ತಿದ್ದವು.
   ಬ್ರಹ್ಮನಿಂದ ಹೊಸದಾಗಿ ಬಿಡುಗಡೆಯಾಗುವ ಆತ್ಮಗಳು ಯಮಕರಣಿಕರ ಬಳಿ ಹೋಗಿ ನೋಂದಣಿ ಮಾಡಿಸಿಕೊಳ್ಳಬೇಕಿತ್ತು.
ಯಮಲೋಕ, ನರಕಲೋಕಕ್ಕೆ ಹೊಸ ನೇಮಕಾತಿ, ಎಣ್ಣೆ ಕಾಯಿಸಲು, ಹೋಮ-ಕುಂಡ ನಿರ್ಮಾಣಕ್ಕೆ ಟೆಂಡರು, ಆತ್ಮ ಮಿಲನ(ರೇವ್ ಪಾರ್ಟಿ) ಜಾಹೀರಾತುಗಳು ಸಾಕಷ್ಟು ಬರುತ್ತಿದ್ದವು.
ವೈಕುಂಠ, ಕೈಲಾಸ, ಇಂದ್ರಲೋಕದಿಂದ ನಾರದರು ಆಗಾಗ ಪತ್ರಿಕಾ ವರದಿ, ಪ್ರಕಟಣೆ ತರುತ್ತಿದ್ದರು. ಬಂದವರು ಹಾಗೇ ಹೋಗುತ್ತಿರಲಿಲ್ಲ. ಸುಬ್ರಾಯನ ತಲೆಗೊಂದು ಸುದ್ದಿಹುಳ ಬಿಟ್ಟು ಹೋಗುತ್ತಿದ್ದರು.
ವೈಕುಂಠ, ಇಂದ್ರಲೋಕದ ಸುದ್ದಿಗಳನ್ನು ಹಾಗೇ ಬಿಡುವಂತಿರಲಿಲ್ಲ. ಕಾರ್ಪೊರೇಟ್ ಜಗತ್ತು ಅದು. ಸುದ್ದಿ ಬಿಟ್ಟರೆ ಯಮನಿಗೆ ವೈರ್‌ಲೆಸ್ ಹೋಗುತ್ತಿತ್ತು. ಜಾಹೀರಾತು ಸ್ಥಗಿತಗೊಳ್ಳುತ್ತಿತ್ತು.
   ರಂಬೆ, ಊರ್ವಶಿ, ಮೈಕೆಲ್ ಜಾಕ್ಸನ್ ನೃತ್ಯಗಳು, ಒಡ್ಡೋಲಗ ಇತ್ಯಾದಿ ಭಾರೀ ಪ್ರಮಾಣದ ಜಾಹೀರಾತು ತರುತ್ತಿದ್ದವು.
ಇದನ್ನೆಲ್ಲಾ ಬರೆದೂ ಬರೆದೂ ಸುಬ್ರಾಯನ ತಲೆ ಚಿಟ್ಟು ಹಿಡಿದಿತ್ತು. ಇತ್ತೀಚೆಗೆ ಬಿಪಿಯೂ ಶುರುವಾಗಿದೆ. ಅತ್ತ ಸಾಯುವಂತೆಯೂ ಇಲ್ಲ. ಅವರಿವರ ಭಾಷಣ ಬರೆದೇ ಜೀವಿತಾವಧಿ ಕಳೆದ ಅವನಿಗೆ ಸಾವಿನ ನಂತರವೂ ಅದೇ ಕಾಯಕ. ಅಯ್ಯೋ... ವಿಧಿಯೇ ಎಂದೂ ಕೂಗುವಂತಿಲ್ಲ. ಸುಬ್ರಾಯನಂತೆ ಬದುಕಿದ್ದವರೂ ಇಲ್ಲಿ ಅವನ ಜತೆಯಾಗಿದ್ದರು.
ಅಸಹಾಯಕ ಸುಬ್ರಾಯ ದೀರ್ಘ ರಜೆಗಾಗಿ ಯಮನನ್ನು ಕೇಳಿದ. ಆದರೆ, ಆತ ಕೆಲವೇ ದಿನಗಳಿಗೆ ರಜೆ ಸೀಮಿತಗೊಳಿಸಿದ. ಯಮಧರ್ಮಾ ಇನ್ನು ನನ್ನಿಂದಾಗದು. ದಯವಿಟ್ಟು ರಜೆ ದಯಪಾಲಿಸು ಎಂದು ಅಂಗಲಾಚಿದ. ಯಮ ಒಪ್ಪಲಿಲ್ಲ. ಯಾರೂ ಇಲ್ಲದಿದ್ದರೂ ಪತ್ರಿಕೆ ನಡೆಯುತ್ತದೆ. ಸಾಧ್ಯವಾದರೆ ಕೆಲಸ ಮಾಡು. ಇಲ್ಲವಾದರೆ ತೊಲಗು ಎಂದು ಅದ್ಯಾವುದೋ ಮೂಡ್‌ನಲ್ಲಿದ್ದ ಯಮ ಗುಡುಗಿದ.
  ಸುಬ್ರಾಯನಿಗೆ ಸುತ್ತ ಕತ್ತಲು ಕವಿದಂತಾಯಿತು. ಅಷ್ಟು ವರ್ಷಗಳ ಪರಿಶ್ರಮ, ಪತ್ರಿಕೆ ಕಟ್ಟಿ ಬೆಳೆಸಿದ ರೀತಿ. ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಅನಿಸಿತು. ಎಂಥ ಮಾತು ಯಮನಿಂದ. ಆದರೂ... ತೊಲಗು ಎಂದ. ಸರಿ ಕೊನೆಗೂ ಮುಕ್ತಿ ಸಿಕ್ಕಿತಲ್ಲಾ ಎಂದು ಸುಬ್ರಾಯ ತಲೆತಗ್ಗಿಸಿ ಹೊರಟ.
ನಿಲ್ಲು! ಎಂದು ಗರ್ಜಿಸಿದ ಯಮ... ನೀನು ಹಾಗೆಯೇ ಹೋಗುವಂತಿಲ್ಲ. ಮತ್ತೆ ಭೂಲೋಕಕ್ಕೆ ತೆರಳಿ ಯಾವುದಾದರೂ ಪತ್ರಿಕೆಯ ಪತ್ರಕರ್ತನಾಗಿಯೇ ಬದುಕು ಎಂದು ವರಸಹಿತ ಶಾಪಕೊಟ್ಟ.
ಸುಬ್ರಾಯ ಯಮಸ್ಥಾನದಲ್ಲಿಯೇ ಕುಸಿದುಬಿದ್ದ.


ಪ್ರೀತಿಯಿಂದ
–ಶರತ್‌ ಹೆಗ್ಡೆ, ಕಡ್ತಲ

No comments:

Post a Comment