Monday, 3 June 2019

ಇದು ಕ್ವಾರಿಯೊಳಗಿನ ಆರ್ತನಾದ


ಕೊಪ್ಪಳ: ಜಿಲ್ಲೆಯ ಪ್ರಾಕೃತಿಕ ಸಂಪತ್ತನ್ನು ಕಲ್ಲು ಗಣಿಗಾರಿಕೆ ಅಕ್ಷರಶಃ ಲೂಟಿ ಹೊಡೆದಿದೆ. ಬೆಟ್ಟಗಳನ್ನೇ ಬಗೆದು ಕಲ್ಲುಗಳ ಪುಡಿ ರಾಶಿರಾಶಿಯಾಗಿ ಕೆರೆ ಕೊಳ್ಳ ಸೇರುತ್ತಿದೆ. ಆರ್ಥಿಕವಾಗಿ ಮೇಲ್ನೋಟಕ್ಕೆ ಲಾಭದಾಯಕ ಅನಿಸಿದರೂ ಅಸುರಕ್ಷಿತ ಗಣಿಗಾರಿಕೆಯಿಂದ ಆಗಿರುವ ಪರಿಸರ, ಕೃಷಿ ಭೂಮಿಗಾಗಿರುವ ಹಾನಿ, ಸಾಮಾಜಿಕ ನಷ್ಟವನ್ನು ಅಳೆದವರಿಲ್ಲ. ಮಾತ್ರವಲ್ಲ, ಕಳೆದ ಐದು ವರ್ಷಗಳ ಅವಧಿಯಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಕಲ್ಲು ಗಣಿಗಾರಿಕೆ ಸಂಬಂಧಿಸಿದ ಅವಘಡದಲ್ಲಿ ಜೀವ ತೆತ್ತಿದ್ದಾರೆ.  ಆದರೆ, ದಾಖಲೆಗಳು ಈ ಘಟನೆಗಳಿಗೆ ಬೇರೆಯೇ ಕಾರಣ ಬರೆದಿಟ್ಟಿವೆಎನ್ನುತ್ತಾರೆ ಕುಷ್ಟಗಿ ತಾಲ್ಲೂಕು ಅಂಟರಠಾಣಾ ಪ್ರದೇಶದ ರೈತರು.



ಕೆಲವು ಕ್ರಷರ್‌ಗಳು, ಕ್ವಾರಿಗಳು ಅಕ್ರಮ ಅನ್ನುವುದಕ್ಕಿಂತಲೂ ಅವು ಅಸುರಕ್ಷಿತವಾಗಿ, ಜೀವಗಳಿಗೆ ಅಪಾಯಕಾರಿ ಎಂಬುದು ಇನ್ನೂ ಗಂಭೀರ ವಿಚಾರ. ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಹಾಲವರ್ತಿ ಬಳಿ 8 ಕ್ರಷರ್‌ ಘಟಕಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಕುಕನೂರು ಭಾಗದಲ್ಲಿ ಲೋಕಾಯುಕ್ತ ದಾಳಿಗೊಳಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಕೆಲವು ಗ್ರಾನೈಟ್‌ ಘಟಕಗಳನ್ನು ಹೊರತುಪಡಿಸಿದರೆ ಗಂಭೀರವಾಗಿ ಪ್ರಕರಣ ದಾಖಲಾಗಿ ಕ್ರಮ ಕೈಗೊಂಡ ಉದಾಹರಣೆ ಇಲ್ಲ.



ಮಳೆಮಲ್ಲೇಶ್ವರ ಬೆಟ್ಟದ ಹಿಂಭಾಗ ಅವ್ಯಾಹತವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ, ಹುಲಿಕೆರೆಗೆ ಹೋಗುವ ಕಾಲುದಾರಿ, ಮಂಗಳಾಪುರ ಗಡಿಭಾಗ (ಮಳೆ ಮಲ್ಲೇಶ್ವರ ಬೆಟ್ಟದ ಕೊನೆಯ ಭಾಗ) ಸ್ಫೋಟಕ ಸಿಡಿಸಿ ನಡೆಸಲಾಗುತ್ತಿರುವ ಕಲ್ಲುಗಣಿಗಾರಿಕೆ ಬಗ್ಗೆ ಸಂಬಂಧಿಸಿದವರು ಮೌನವಾಗಿದ್ದಾರೆ. 



ಹಿರೇಕಾಸನಕಂಡಿ ಬಳಿ ಕ್ರಷರ್‌ ಬೆಲ್ಟ್‌ಗೆ ಸಿಲುಕಿ ಯುವಕ ಸಾವನ್ನಪ್ಪಿದ್ದು, ಇದೇ ಪ್ರದೇಶದಲ್ಲಿ ಗಣಿ ಸ್ಫೋಟಗೊಂಡು ಕಾರ್ಮಿಕ ಸಾವನ್ನಪ್ಪಿದ ಘಟನೆ ನಡೆದರೂ ಕೂಡಾ ಯಾವುದೇ ಇಲಾಖೆಗಳು ಕ್ರಷರ್, ಕ್ವಾರಿಗಳ ಸುರಕ್ಷತೆ ಬಗ್ಗೆ ಕನಿಷ್ಠ ಪರಿಶೀಲನೆಯೂ ನಡೆಸಿಲ್ಲ ಎಂಬ ದೂರು ಕೇಳಿಬಂದಿದೆ.



ಕುಕನೂರು, ಹನುಮಸಾಗರದ ಗ್ರಾನೈಟ್‌ ಗಣಿಗಳಲ್ಲಿ ಆಗಾಗ ನಡೆಯುವ ಅವಘಡಗಳು ಹೊರಜಗತ್ತಿಗೆ ಗೊತ್ತಾಗುವುದೇ ಇಲ್ಲ. ಕೆಲವು ಪ್ರಕರಣಗಳೂ ದಾಖಲಾಗುವುದಿಲ್ಲ. ಸಾವು ಸಂಭವಿಸಿದರೂ ಅದನ್ನು ರಸ್ತೆ ಅಪಘಾತ, ಬೇರೆ ರೀತಿಯ ಘಟನೆ ಎಂದು ನಮೂದಿಸುತ್ತಾರೆಯೇ ಹೊರತು ನೈಜ ಸಂಗತಿ ಹೊರಬರುವುದೇ ಇಲ್ಲಎನ್ನುತ್ತಾರೆ ತುಗ್ಗಲಡೋಣಿಯ ಕಾರ್ಮಿಕ ರೊಬ್ಬರು.



ಹಾಲವರ್ತಿ ಬಳಿ ನಡೆಯುವ ಗಣಿಗಾರಿಕೆ, ಕ್ರಷರ್‌ ಘಟಕಗಳ ದೂಳು ನೇರವಾಗಿ ಗ್ರಾಮಕ್ಕೆ ಬರುತ್ತದೆ. ಕುಷ್ಟಗಿ ತಾಲ್ಲೂಕು ಪುರತಗೇರಿಯಲ್ಲೂ ಇದೇ ದೃಶ್ಯ ಇದೆ. ಶಾಲಾ ಆವರಣದಲ್ಲೇ ದೂಳು ಹರಡುತ್ತದೆ. ಮೇಲ್ನೋಟಕ್ಕೆ ಇಲ್ಲಿನ ಘಟಕಗಳು ನಿಯಮ ಪ್ರಕಾರವೇ ಕಾರ್ಯನಿರ್ವಹಿಸುತ್ತಿವೆ. ಆದರೆ ದೂಳು ತಡೆಗಟ್ಟುವ ವ್ಯವಸ್ಥೆ ಇಲ್ಲದೇ ಮಕ್ಕಳ, ಶಿಕ್ಷಕರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಆರೋಗ್ಯ ಇಲಾಖೆ ಕನಿಷ್ಠ ಸಮೀಕ್ಷೆಯನ್ನೂ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.



ಗಣಿಗಾರಿಕೆ ಗ್ರಾಮೀಣ ಪ್ರದೇಶ ಅಥವಾ ಗ್ರಾಮಕ್ಕೆ ಅಂಟಿಕೊಂಡಂತಿರುವ ಪ್ರದೇಶದಲ್ಲಿ ಹೆಚ್ಚು ನಡೆಯುತ್ತದೆ. ಇಲ್ಲಿ ಸಮಸ್ಯೆಯ ವಿರುದ್ಧ ಧ್ವನಿ ಎತ್ತದಂತೆ ಮಾಡುವ ಎಲ್ಲ ವ್ಯವಸ್ಥೆಗಳೂ ಇವೆ. ಒಂದು ವೇಳೆ ಗಣಿಗಾರಿಕೆಯನ್ನೇ ನಿಲ್ಲಿಸುವಂತೆ ಒತ್ತಾಯಿಸಿದರೆ, ಗಣಿ ಕಾರ್ಮಿಕರ ಬದುಕನ್ನು ಮುಂದಿರಿಸಿ ಅವರ ಮೂಲಕ ಪ್ರತಿಭಟನೆ ಮಾಡಿಸುವುದು. ಒಟ್ಟಿನಲ್ಲಿ ಗ್ರಾಮಕ್ಕೆ ಗಣಿಗಾರಿಕೆಯೇ ಅಗತ್ಯ ಎಂಬಂಥ  ಒತ್ತಡ ಸೃಷ್ಟಿಸುವ ಕ್ರಿಯೆಯೂ ನಡೆಯುತ್ತದೆ. ಬಲಪ್ರಯೋಗದ ಪ್ರಕರಣಗಳೂ ಇಲ್ಲದಿಲ್ಲ ಎನ್ನುತ್ತಾರೆ ಕುಷ್ಟಗಿ ತಾಲ್ಲೂಕು ಕಡೂರು ಗ್ರಾಮದ ರೈತರು.



ಇಲಾಖೆಗಳ ನಡುವೆ ಸಮನ್ವಯದ ಕೊರತೆ: ಗಣಿಗಾರಿಕೆ ಪರವಾನಗಿಗೆ ಅರ್ಜಿ ಪಡೆಯುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ಇಲ್ಲಿ ದಾಖಲಾತಿ ಪರಿಶೀಲನೆ ನಡೆಯುತ್ತದೆ. ಪರವಾನಗಿ ಸಂಬಂಧಿಸಿ ಸರ್ಕಾರದಮಟ್ಟದ ಸಮಿತಿಯ ಮುಂದೆ ಗಣಿ ಇಲಾಖೆಯು ಪ್ರಸ್ತಾವ ಇಡುತ್ತದೆ. ಮುಂದೆ ಅರ್ಜಿದಾರರು ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ ಇಲಾಖೆ, ಅರಣ್ಯ ಇಲಾಖೆಗಳ ನಿರಾಕ್ಷೇಪಣಾ ಪತ್ರ ಸಲ್ಲಿಸಿದ ಬಳಿಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕಾರ್ಯಾಚರಣೆಗೆ ಒಪ್ಪಿಗೆ ನೀಡುತ್ತದೆ.



ಇಲ್ಲಿ ಪರಸ್ಪರ ಸಮನ್ವಯದ ಕೊರತೆಯಿಂದಾಗಿ ಎಷ್ಟೋ ಪರವಾನಗಿ ಅರ್ಜಿಗಳು ವಿಲೇ ಆಗದೆ ಬಾಕಿ ಉಳಿದಿವೆ. ಇನ್ನೂ ಕೆಲವರು ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿಕೊಳ್ಳುತ್ತಲೇ ಅನಧಿಕೃತವಾಗಿಯೇ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಾರೆ ಕಲ್ಲು ಗಣಿಗಾರಿಕೆ ಪ್ರದೇಶದ ಬಾಧಿತರು.

ಈ ಬಗ್ಗೆ ಪ್ರತಿಕ್ರಿಯಿಸಲು ಜಿಲ್ಲಾ ಕ್ರಷರ್‌ ಮಾಲೀಕರ ಸಂಘದ ಅಧ್ಯಕ್ಷ ಬಸವರಾಜ್‌ ಅವರನ್ನು ಸಂಪರ್ಕಿಸಿದರೂ ಅವರು ಲಭ್ಯರಾಗಲಿಲ್ಲ.



ಇತಿಮಿತಿಯಲ್ಲಿ ನಡೆಯಲಿ: ಒಟ್ಟಿನಲ್ಲಿ ಗಣಿಗಾರಿಕೆ ಪೂರ್ಣವಾಗಿ ನಿಲ್ಲಿಸಬೇಕು ಎನ್ನುವುದರಲ್ಲೂ ಅರ್ಥವಿಲ್ಲ. ಏಕೆಂದರೆ ಅಭಿವೃದ್ಧಿ ಕಾಮಗಾರಿಗಳಿಗೆ ಜಲ್ಲಿ, ಕಲ್ಲು ಅತ್ಯಗತ್ಯ. ಆರ್ಥಿಕ ವಹಿವಾಟಿನ ದಾರಿಯೂ ಹೌದು. ಆದರೆ, ಅದು ಜೀವಗಳಿಗೆ ಎರವಾಗುವಷ್ಟು ಅಪಾಯದಮಟ್ಟಕ್ಕೆ ಬೆಳೆಯಬಾರದು.

ಕನಿಷ್ಠ ಪಕ್ಷ ಜನರ ಆರೋಗ್ಯ, ಪ್ರಾಣರಕ್ಷಣೆ ಪರಿಸರದ ಹಿತಾಸಕ್ತಿಯನ್ನು ಉಳಿಸಿಕೊಂಡು ಇತಿಮಿತಿಯಲ್ಲಿ ನಡೆಸಬೇಕು ಎನ್ನುತ್ತಾರೆ ಗಣಿ ಪ್ರದೇಶಗಳಿಂದ ತೊಂದರೆ ಅನುಭವಿಸುತ್ತಿರುವ ನಾಗರಿಕರು.



ನಿರಂತರ ಸ್ಫೋಟ: ಗ್ರಾಮಸ್ಥರ ಆತಂಕ

ಯಲಬುರ್ಗಾ: ತಾಲ್ಲೂಕಿನ ವಜ್ರಬಂಡಿ ಗ್ರಾಮದ ವ್ಯಾಪ್ತಿಯಲ್ಲಿ ಮೂರು ಕ್ರಷರ್‌ ಘಟಕಗಳಿವೆ. ಅದರಲ್ಲಿ ಒಂದು ಘಟಕ ಮಾತ್ರ ಉತ್ಪಾದನೆಯಲ್ಲಿ ತೊಡಗಿದೆ. ಸ್ಥಗಿತಗೊಳಿಸಿದ್ದ ಎರಡು ಘಟಕಗಳ ಪುನರಾರಂಭಕ್ಕೆ ಅರ್ಜಿ ಸಲ್ಲಿಸಲಾಗಿದೆ. ಒಂದು ಘಟಕ ಪ್ರೌಢಶಾಲೆಗೆ ಸಮೀಪ ಇದ್ದ ಕಾರಣ ಆ ಘಟಕವನ್ನು ಸ್ಥಗಿತಗೊಳಿಸಲಾಗಿದೆ.  
ಗ್ರಾಮಕ್ಕೆ ಹೊಂದಿಕೊಂಡಿರುವ ಕಲ್ಲುಗುಡ್ಡದಲ್ಲಿ ನಿರಂತರವಾಗಿ ನಡೆಯುತ್ತಿರುವ ಸ್ಫೋಟದಿಂದ ಗ್ರಾಮಸ್ಥರು ವಿವಿಧ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಗುಡ್ಡದ ಸತ್ತಲು ಇರುವ ನೀರಾವರಿ ಕೃಷಿ ಜಮೀನು ಹಾಳಾಗುತ್ತಿದೆ. ಕೊಳವೆಬಾವಿಯ ನೀರಿನ ಮೂಲಕ್ಕೆ ಧಕ್ಕೆಯಾಗುತ್ತಿದೆ. ವಿವಿಧ ಬೆಳೆಗಳ ಮೇಲೆ ದೂಳು ಶೇಖರಣೆಯಾಗುತ್ತಿದೆ, ಅನೇಕ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಕ್ಕಪಕ್ಕದಲ್ಲಿರುವ ಶಾಲೆ ಹಾಗೂ ದೇವಸ್ಥಾನಗಳಿಗೆ ಧಕ್ಕೆಯಾಗುತ್ತಿದೆ.



ಈ ಕಾರಣದಿಂದ ಘಟಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಅಥವಾ ದೂರದ ಸ್ಥಳಕ್ಕೆ ಸ್ಥಳಾಂತರಿಸುವಂತೆ ಮೇಲಿಂದ ಮೇಲೆ ಒತ್ತಾಯಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರಾದ ಶರಣಪ್ಪ, ಮರಿಯಪ್ಪ ಒಡ್ಡರ್ ಸೇರಿದಂತೆ ಅನೇಕರ ಆರೋಪ.

ಕ್ರಷರ್‌ ಘಟಕಗಳಿಗೆ ಕಲ್ಲುಗಳು ಸಾಗಿಸು ವಾಗ ಕಾರ್ಮಿಕರ ಜೀವಕ್ಕೂ ಅಪಾಯವಾಗುವ ಸಾಧ್ಯತೆಗಳು ಇವೆ. ಆದರೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಭದ್ರತೆ ಅಥವಾ ರಕ್ಷಣೆ ಇಲ್ಲ. ರಾತ್ರಿ ಹೊತ್ತಿನಲ್ಲಿ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಂಡು ಜಲ್ಲಿ ತಯಾರಿಸಿಕೊಳ್ಳುತ್ತಾರೆ. ದೂರು ಕೊಟ್ಟಾಗ ಮಾತ್ರ ಜಾಗೃತರಾಗುವ ಜೆಸ್ಕಾಂ ಅಧಿಕಾರಿಗಳು ಮತ್ತೆ ಇತ್ತ ಕಡೆ ಸುಳಿಯುವುದಿಲ್ಲ ಎಂಬುದು ವಜ್ರಬಂಡಿ ಗ್ರಾಮದ ಮಾಜಿ ಸದಸ್ಯರೊಬ್ಬರು ಟೀಕಿಸಿದ್ದಾರೆ.



ಗ್ರಾಮದ ವ್ಯಾಪ್ತಿಯಲ್ಲಿರುವ ಕ್ರಷರ್‌ ಘಟಕಗಳಿಂದಾಗುವ ತೊಂದರೆಗಳ ನಿಯಂತ್ರಣಕ್ಕಾಗಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿ ನಿರ್ಣಯ ಕೈಗೊಂಡು ಸ್ಥಗಿತಗೊಳಿಸುವಂತೆ ಹಾಲಿ ಕಾರ್ಯನಿರ್ವಹಿಸುತ್ತಿರುವ ಘಟಕಕ್ಕೆ ನೋಟಿಸ್‌ ಜಾರಿಮಾಡಿಸಿದ್ದರೂ ಯಾವುದೇ ಪರಿಣಾಮ ಆಗಿಲ್ಲ, ಕಲ್ಲು ಸ್ಫೋಟಿಸುವುದಕ್ಕೂ ನಮಗೂ ಸಂಬಂಧವಿಲ್ಲ ಎಂದು ಉತ್ತರಿಸಿ ಬೇರೆಯವರ ಮೂಲಕ ಸ್ಪೋಟಿಸಿ ಕಲ್ಲು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ ಎಂದು ಅಸಹಾಯಕ ಸದಸ್ಯರೇ ದೂರಿದ್ದಾರೆ.



ಗಾವರಾಳ ಹಾಗೂ ಗುದ್ನೆಪ್ಪನಮಠದ ಪ್ರದೇಶದಲ್ಲಿ ಕ್ರಷರ್‌ ಘಟಕಗಳಿದ್ದು, ಇವುಗಳಲ್ಲಿ ಒಂದೆರಡು ಪರವಾನಿಗೆ ಪಡೆದುಕೊಂಡಿದ್ದನ್ನು ಹೊರತುಪಡಿಸಿದರೆ ಬಹುತೆೇಕ ಅಕ್ರಮವಾಗಿ ನಡೆಸುತ್ತಿದ್ದಾರೆ. ಯಾವಾಗ ಕೇಳಿದರೂ ಪರವಾನಗಿ ನವೀಕರಣಕ್ಕೆ ಕಳುಹಿಸಲಾಗಿದೆ ಎಂದು ಹೇಳುತ್ತಲೇ ಜಲ್ಲಿ ಉತ್ಪಾದಿಸುತ್ತಿದ್ದಾರೆ. 



ಕುಷ್ಟಗಿ ವರದಿ: ಹೂಲಗೇರಿ, ಅಂಟರಠಾಣಾ, ಸೇಬಿನಕಟ್ಟೆ, ಹನುಮಸಾಗರ ಭಾಗಗಳಲ್ಲಿ ಗ್ರಾನೈಟ್‌ ಗಣಿಗಾರಿಕೆ ನಡೆಯುತ್ತಿದೆ. ಕಡೂರು ಕೆರೆ ಗ್ರಾನೈಟ್‌ ತ್ಯಾಜ್ಯದಿಂದ ತುಂಬಿ ಹೋಗಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮಾಡಲಾದ ನೀರಾವರಿ ಯೋಜನೆ ರೈತರಿಗೆ ತಲುಪುವಲ್ಲಿ ವಿಫಲವಾಗಿದೆ.



ಅಕ್ರಮ ಘಟಕ ಇಲ್ಲ

ಸದ್ಯ ಜಿಲ್ಲೆಯಲ್ಲಿ ಇಲಾಖೆಯ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಕ್ವಾರಿಯಾಗಲಿ, ಘಟಕಗಳಾಗಲಿ ಇಲ್ಲ. ಗಣಿ, ಕ್ರಷರ್‌ಗಳ ಸುರಕ್ಷತೆಯನ್ನು ಆಯಾ ಘಟಕಗಳ ಮಾಲೀಕರು ನೋಡಿಕೊಳ್ಳಬೇಕು. ಮಾಲಿನ್ಯ ಸಂಬಂಧಿ ಪ್ರಕರಣಗಳು ಇದ್ದಲ್ಲಿ ಅದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನೋಡಿಕೊಳ್ಳಬೇಕು. ನಾವು ಗಣಿಗಾರಿಕೆ ಪರವಾನಗಿ ಸಂಬಂಧಿಸಿ ಅರ್ಜಿಗಳನ್ನು ಸ್ವೀಕರಿಸಿ ಅದನ್ನು ಪರವಾನಗಿ ಸಮಿತಿ ಮುಂದಿಟ್ಟು ಅನುಮೋದನೆ ಪಡೆಯುತ್ತೇವೆ. ಕಂದಾಯ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟರೆ ಮಾತ್ರ ನಾವು ಕಾರ್ಯಾಚರಣೆಗೆ ಅನುಮತಿ (ಸಿಎಫ್‌ಒ) ಕೊಡುತ್ತೇವೆ.

ಆರ್‌.ಎಸ್‌.ರಾವಳ್‌ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೊಪ್ಪಳ



ಜಲ್ಲಿ ಪುಡಿ ಮಾಡುವ ಘಟಕಗಳಿಗೆ ನಿಯಮಗಳು

* 
ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಗಳ ಗಡಿಯಿಂದ 200 ಮೀಟರ್‌ಗಳಿಂದ ಆಚೆ, ಪ್ರಧಾನ ಜಿಲ್ಲಾ ರಸ್ತೆ ಅಥವಾ ಇತರ ರಸ್ತೆಗಳ ಗಡಿಯಿಂದ ನೂರು ಮೀಟರ್‌ಗಳ ಆಚೆ, ಕಂದಾಯ ಗ್ರಾಮಗಳು, ದೇವಾಲಯಗಳು, ಶಾಲೆಗಳಿಂದ 500 ಮೀಟರ್‌ಗಳ ಆಚೆ ಇರಬೇಕು
* ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸರಹದ್ದಿನಲ್ಲಿ ಇರಬಾರದು.



ಅ. 4ರಂದು ಸಭೆ

ಗಣಿಗಾರಿಕೆ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು  ಸುತ್ತೋಲೆಯೇ ಇದೆ. ಅಕ್ಟೋಬರ್‌ 4ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆ ಇದೆ. ಅಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿರುವ ಕುರಿತು ಮಾಹಿತಿ ಪಡೆದು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.

-
ಎಂ.ಕನಗವಲ್ಲಿಜಿಲ್ಲಾಧಿಕಾರಿ ಕೊಪ್ಪಳ



No comments:

Post a Comment