Monday, 10 March 2014

5 ವರ್ಷಗಳ ಕ್ಯಾಸೆಟ್‌ ರಿವೈಂಡ್‌ ಮಾಡುತ್ತಾ...

ಹಾ... ನೌಕರಿಗೆ ಸೇರಿ ಮೊನ್ನೆಗೆ (ಮಾರ್ಚ್‌ 9) ಭರ್ತಿ 5 ವರ್ಷ. ಒಟ್ಟಾರೆ ಕ್ಷೇತ್ರಕ್ಕೆ ಬಂದು ಏಳೂವರೆ ವರ್ಷ. ಸುಮ್ಮನೆ ಒಮ್ಮೆ ಹಿಂತಿರುಗಿ ನೋಡೋಣ ಅನಿಸುತ್ತಿದೆ.
ಪತ್ರಿಕೋದ್ಯಮವೊಂಬೋ ಕೋರ್ಸು ಮುಗಿಸಿ ಏನೇನೋ ಭಯಂಕರವೆನಿಸುವ ಕನಸು, ಉತ್ಸಾಹದಿಂದ ಬಂದ, ಮಂಗಳೂರಿನ ಬೀದಿ ಸುತ್ತಿದ 2006ರ ದಿನಗಳನ್ನು ನೆನಪಿಸಿಕೊಳ್ಳುತ್ತಲೇ ಇದ್ದೇನೆ. ಅದರಲ್ಲೂ ನನ್ನ ಪ್ರೀತಿಯ ಮಂಗಳೂರನ್ನು.
ಅದಕ್ಕಿಂತಲೂ ಹಿಂದಕ್ಕೆ ಹೋದರೆ ಈಗ ಕಳೆದು ಹೋಗಿರುವ ನನ್ನ ‘ಕಡ್ತಲ’ ಎಂಬ ಬ್ರಾಂಡ್‌ನೇಮ್‌. ಹೀಗೆ ಎಲ್ಲವೂ ಒಮ್ಮೆ ರಿವೈಂಡ್‌ ಮಾಡಿಕೊಳ್ಳಬೇಕೆನ್ನಿಸುವ ಹೊತ್ತು.

ಹಲವು ನಮಸ್ಕಾರಗಳು

ಕಡ್ತಲ ಎಂಬ ಪುಟ್ಟ ಊರಿನ ಹಾದಿ ಬೀದಿಯಲ್ಲಿ ಓಡಾಡಿಕೊಂಡಿದ್ದವನಿಗೆ ಬದುಕಿನ ಗಂಭೀರತೆ ಅರಿವಾಗಿದ್ದೇ ಡಿಗ್ರಿ ಎಂಬೋ ಕೊಂಬು ಸ್ವಲ್ಪ ಚಿಗುರಿದಾಗ. ಏನೂ ಕೆಲಸಕ್ಕೆ ಬಾರದವನೆಂದುಕೊಂಡವ ಕಾರ್ಕಳದ ಭುವನೇಂದ್ರ ಕಾಲೇಜು ಎಂಬ ಸಮುದ್ರಕ್ಕೆ ಬಿದ್ದ. ಕಾಲೇಜು ಅಪ್ಪಿಕೊಂಡಿತು. ಪೋಷಿಸಿತು. ಬೆಳೆಸಿತು. ಹಾ ಕೆಲ ಕಾಲ ಬದುಕೂ ಕೊಟ್ಟಿತು. ಅದಕ್ಕೊಂದು ಭಕ್ತಿಯ ನಮಸ್ಕಾರ.
ಮತ್ತಷ್ಟು ರಿವೈಂಡ್‌ ಮಾಡುತ್ತಿದ್ದೇನೆ. ಮಂಗಳೂರಿನ ಆಕಾಶವಾಣಿಯ ಎತ್ತರದ ಟವರ್‌. ನನ್ನದೊಂದು ದೊಂಡೆ (ಗಂಟಲು–ಧ್ವನಿ)ಯನ್ನು ಊರಿಗೆಲ್ಲಾ ಕೇಳಿಸಿದ, ಸಾವಿರಾರು ಜನರಿಗೆ ಪರಿಚಯಿಸಿದ, ಕೆಲಸ ಕಲಿಸಿದ, ಗುರುಗಳು, ಸ್ನೇಹಿತರನ್ನು ಕೊಟ್ಟ
, ಕೀಟಲೆ, ಚೇಷ್ಟೆ ಸಹಿಸಿದ, ಅದ್ಭುತ ಪ್ರೀತಿಯ ದರ್ಶನ ಮಾಡಿಸಿದ ನನ್ನ ಪ್ರೀತಿಯ ಮನೆ ಆಕಾಶವಾಣಿಗೆ ಭಕ್ತಿಯ ನಮಸ್ಕಾರ.
ಕಾರ್ಕಳದಿಂದ ಹೊರಡುವ ಒಂದು ಸ್ಥಳೀಯ ಪತ್ರಿಕೆ ‘ಜನಬಿಂಬ’. ಒಂದಿಷ್ಟು ಬರಹಗಳನ್ನು ಅದರಲ್ಲಿ ‘ಸೋಮಾರಿಕಟ್ಟೆಯಿಂದ’ ಹೆಸರಿನಲ್ಲಿ ಗೀಚುತ್ತಿದ್ದೆ.  ನನಗೇನೋ ಬರೆಯಬೇಕು ಎಂಬ ತೆವಲು ಅಷ್ಟೆ. ಮುಂದೆ ಬರೆದೇ ಬದುಕುತ್ತೇನೆ. ಬರೆಯುತ್ತಲೇ ಬದುಕುತ್ತೇನೆ ಎಂಬ ಕಲ್ಪನೆಯೇ ಇರಲಿಲ್ಲ. ಬಿಡಿ, ಪತ್ರಿಕೋದ್ಯಮ ಎಂಬ ಕೋರ್ಸ್‌, ಉದ್ಯೋಗದ ಕ್ಷೇತ್ರ ಎಂಬ ಸಣ್ಣ ಮಾಹಿತಿಯೂ ಇಲ್ಲದ ಕಾಲವದು. ಅಂಥದ್ದರಲ್ಲಿ ಏನೋ ಮನಸ್ಸಿಗೆ ಬಂದದ್ದನ್ನು ಗೀಚುತ್ತಿದ್ದೆ. ಅದು ಮಾಡುತ್ತಿದ್ದ ಪರಿಣಾಮ ಎಷ್ಟಿದೆ ಎಂಬುದು ಒಂದೊಂದು ಕಾಲಂ ಬರುವಾಗಲೇ ಗೊತ್ತಾಗುತ್ತಿತ್ತು. ಎರಡನೇ ಅಂಕಣ ಬರುವ ಹೊತ್ತಿಗೆ ನಮ್ಮೂರಿನ ಕುಡುಕರ ಕಟಕಟೆಯೊಳಗೆ ವಿಚಾರಣೆ ಎದುರಿಸಿದ್ದೆ. ಸುತ್ತಲೂ ಬಾಟಲ್‌ ಹಿಡಿದಿರುವ ವ್ಯಕ್ತಿಗಳ ಮಧ್ಯೆ ನಾನೊಬ್ಬ ಅಯೋಗ್ಯ ಕುಳಿತಿದ್ದೆ. ಕಾಲಂನ ಸಾಲುಗಳನ್ನು ಆಯ್ದು, ‘ನಾಯಕರ ಹೋಟೆಲಿನಲ್ಲಿ ಮಸಾಲೆದೋಸೆ ಮೂಸುವವರು ಯಾರು? ನಿನ್ನ ಸೋಮಾರಿಕಟ್ಟೆಯ ಸದಸ್ಯರ ಹೆಸರುಗಳನ್ನು ಕೊಡು. ಈ ಸಾಲು ನನಗೇ ಬರೆದದ್ದು ಅಲ್ವಾ?’ ಹೀಗೆ ಪುಂಖಾನು ಪುಂಖದ ಪ್ರಶ್ನೆಗಳು. ಸುಮಾರು 13 ಸರಣಿ ಬರೆದಿದ್ದೆ. ಎಷ್ಟೋ ವೇಳೆ ಸಂಪಾದಕ ರಾಧಾಕೃಷ್ಣ ತೋಡಿಕಾನರಿಗೇ ಈ ಕಾಲಂ ಪೇಚುಂಟು ಮಾಡುತ್ತಿತ್ತು. ಅವರಿಗೆ ಬ
ರುತ್ತಿದ್ದ ಒತ್ತಡಗಳೇನೂ ಕಡಿಮೆ ಇರಲಿಲ್ಲ. ಕೊನೆಗೂ ಅನಿಯಮಿತವಾಗಿಯಾದರೂ ಕಾಲಂ ಪ್ರಕಟಗೊಳ್ಳುತ್ತಿತ್ತು. ಅಕ್ಷರ ಲೋಕದಲ್ಲಿ ಅಂಬೆಗಾಲಿಡಲು (ಈಗಲೂ ಪರಿಪೂರ್ಣನಲ್ಲ) ವೇದಿಕೆ ಕೊಟ್ಟ ‘ಜನಬಿಂಬ’ಕ್ಕೆ ಋಣಿ. ಈ ಮಧ್ಯೆ ಮಂಗಳೂರಿನ ಗೆಳೆಯ ಕೃಷ್ಣಮೋಹನ ಪತ್ರಿಕೋದ್ಯಮ ಕೋರ್ಸ್‌ ಇದೆ ಎಂಬುದನ್ನು ತಲೆಗೆ ತುಂಬಿದ.
ಒಂದಿಷ್ಟು ಕಾಲ ನನ್ನ ಸೋಮಾರಿಕಟ್ಟೆ ಹೆಸರೇನೋ ಮಾಡಿತು. ಅಷ್ಟರಲ್ಲೇ ಕ್ಷೇತ್ರದ ಸಹವಾಸವೇ ಬೇಡಪ್ಪಾ ಎಂದು ಸುಮ್ಮನೆ ಕುಳಿತಿದ್ದೆ. ಯಾವುದೋ ಒಂದು ಸಂದರ್ಭಕ್ಕೆ ಬರೆದ ಬರಹ. ಕಾಕತಾಳೀಯವೆಂಬಂತೆ ನಮ್ಮೂರಿನ ‘ಸಮಾಜ ಸೇವಕ’ರ ಎದೆಗೆ ನಾಟಿತಂತೆ. ಇಂಥ ಹಲವು ‘ಸೇವಕರು’ ಕೊಟ್ಟ ಮಾನಸಿಕ ಹಿಂಸೆ ಮರೆಯುವಂಥದ್ದಲ್ಲ. ಕೊನೆಯಲ್ಲಿ ಅವರಿಗೂ ಒಂದಿಷ್ಟು ಸಾಲುಗಳನ್ನು ಮೀಸಲಿಡುತ್ತೇನೆ. ತಪ್ಪದೇ ಓದಿ.
ಅಂತೂ ಹೊಟ್ಟೆಪಾಡಿಗೊಂದು ಕೆಲಸ ಬೇಕಲ್ಲ. ಅದೇ ತಾನೆ ಆರಂಭವಾಗಿದ್ದ ಉಷಾಕಿರಣ ಕೆಲಸ ಕೊಟ್ಟಿತು. ಒಳ್ಳೆಯದೋ ಕೆಟ್ಟದ್ದೊ ಗೊತ್ತಿಲ್ಲ. ಕೆಲಸಕ್ಕೆ ಸೇರಿ ನೇಮಕಾತಿ ಪತ್ರ ಬಂದ ಒಂದು ತಿಂಗಳಲ್ಲೇ ಸಂಸ್ಥೆ ಮುಚ್ಚಿತು. ಆದರೆ, ಮೂರು ತಿಂಗಳಲ್ಲಿ ಕೆಲಸದ ಅಆಇಈ ಕಲಿಸಿದ ಸಂಸ್ಥೆಗೆ ಕೃತಜ್ಞ. ಇನ್ನು ಮುಂದೆ ಅಂಥ ಪತ್ರಿಕೆ ಕ್ಷೇತ್ರದಲ್ಲಿ ಬರಲಿಕ್ಕಿಲ್ಲ ಎಂದೂ ಧೈರ್ಯವಾಗಿ ಹೇಳಬಲ್ಲೆ.
ಮತ್ತೆ ಒಂದೆರಡು ತಿಂಗಳ ಬ್ರೇಕ್‌. ಬೇಜಾರಾದಾಗ ಅದೇ ಆಕಾಶವಾಣಿಯ ಸ್ಟುಡಿಯೋ. ಸ್ವಲ್ಪ ಕಾಲದಲ್ಲೇ ಉದಯವಾಣಿಯಲ್ಲಿ ಒಂದು ಕುರ್ಚಿ ಸಿಕ್ಕಿತು. ಎನ್‌.ಗುರುರಾಜ್‌ ಎಂಬ ಅದ್ಭುತ ವ್ಯಕ್ತಿಯ ಕೆಳಗೆ ಕೆಲಸ ಮಾಡಿದ್ದೇನೆ ಎಂದು ಕೃತಜ್ಞತೆಯಿಂದಲೇ ಹೇಳುತ್ತೇನೆ. ಆ ಕಾಲಕ್ಕೆ ಕರೆದು ಕೆಲಸ ಕೊಟ್ಟ ಅವರು ದೇವರಂತೆ ಕಂಡಿದ್ದರು.
ಆ ಸಂದರ್ಭದ ಆರಂಭವೂ ಸ್ವಲ್ಪ ಕ್ಲಿಷ್ಟಕರವೇ ಆಗಿತ್ತು. ಮೊದಲೇ ಭಾಷೆ ಇಲ್ಲದವನನ್ನು ಭಾಷಾಂತರ ಮಾಡಲು ಹಾಕಿದರು. ಅಲ್ಲಿ ಏಕೋ ಸರಿಕಾಣಲಿಲ್ಲ. ಇಲ್ಲಿ ಇವನು ಪ್ರಯೋಜನವಿಲ್ಲ ಎಂದುಕೊಂಡವರು, ಡೆಸ್ಕ್‌ಗೆ ಹಾಕಿದರು. ಅದು ಪತ್ರಿಕೆಯ ಮುಂಬೈ ಆವೃತ್ತಿ. ಸತೀಶ್‌ ಮಲ್ಯ ಎಂಬ ಗುರುಗಳು ಪಿರಿಪಿರಿ ಮಾಡುತ್ತಲೇ ಎಲ್ಲವನ್ನೂ ಕಲಿಸಿದರು. ನಾನು ಪತ್ರಕರ್ತನಾಗಲಿಲ್ಲ. ಒಬ್ಬ ಒಳ್ಳೆಯ ಡಿಟಿಪಿ ಆಪರೇಟರ್‌ ಮತ್ತು ಪುಟವಿನ್ಯಾಸಕನಾಗಿದ್ದೆ. ದೇವರು ಕೈಬಿಡಲಿಲ್ಲ. ಯಾವುದೋ ಒಂದು ಕಸ, ಅಲ್ಲಿ ಹೇಗಿದ್ದರೂ ನಡೆಯುತ್ತದೆ ಎಂಬ ವಿಭಾಗಕ್ಕೆ ಹಾಕಿದ್ದರೋ ಅದೇ ವಿಭಾಗದ ಹೊಣೆಗಾರಿಕೆ ಬಂತು. ಇಲ್ಲಿ ಎಲ್ಲವೂ ನಾನೇ. ನನ್ನ ಮುಂಬೈ ಎಕ್ಸ್‌ಪ್ರೆಸ್‌ ವೇಗವಾಗಿಯೇ ಹೊರಟಿತು. ಒಂದಿಡೀ ಆವೃತ್ತಿಯ ನಿರ್ವಹಣೆ, ಸುದ್ದಿ ನಿರ್ಧಾರ ಎಲ್ಲವೂ ನನ್ನದೇ. ನನ್ನಿಂದೊಬ್ಬನಿಂದಲೇ ಅಲ್ಲವಾದರೂ ಆವೃತ್ತಿ ಕ್ಲಿಕ್‌ ಆಯಿತು ಎಂದು ವಿಶ್ವಾಸದಿಂದ ಹೇಳಬಲ್ಲೆ. ಓದುಗರ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೆರೆಮರೆಯಿಂದಲೇ ಗಮನಿಸುತ್ತಿದ್ದೆ. ಅರಿವಿಗೇ ಬಾರದಂತೆ ಓದುಗರೂ ಗುರುತಿಸಿದರು.
ಕಾಲ ನಿಲ್ಲುವುದಿಲ್ಲ. ನಾನೂ ಸುಮ್ಮನಿರಲಾಗಲಿಲ್ಲ. ಯಾಕೋ ಬೇಜಾರೆನಿಸಿತು. ಅಷ್ಟರಲ್ಲೇ ಪತ್ರಿಕೋದ್ಯಮದ ಹಲವು ಮುಖಗಳನ್ನು ನೋಡಿದ್ದೆ. ಸಾಕೆನಿಸಿತು. ಗೌರವದಿಂದಲೇ ಹೊರ ಹೊರಟೆ. ಒಂದಿಷ್ಟು ಕಾಲ ನನಗೆ ಡಿಗ್ರಿ ಕೊಟ್ಟ ಕಾಲೇಜಿನಲ್ಲಿ ಮೇಷ್ಟ್ರಾಗಿ ಸೇರಿದೆ. ಬಹುಶಃ ಶೇ 90ರಷ್ಟು ಪ್ರಾಮಾಣಿಕನಾಗಿದ್ದದ್ದು ಇದ್ದರೆ ಇಲ್ಲಿಯೇ.
ಇದೇ ಸಾಕು. ಕ್ಷೇತ್ರದ ತಂಟೆಯೇ ಬೇಡ ಎಂದು ಸುಮ್ಮನಿದ್ದೆ. ಪತ್ರಿಕೋದ್ಯಮ ಒಂಥರಾ ಆಲ್ಕೋಹಾಲ್‌ ಇದ್ದಹಾಗೆ. ಅದ್ಯಾಕೋ ಈ ಪತ್ರಿಕೆಯ ಪರೀಕ್ಷೆ ಬರೆದೆ. ಯಾಕೋ ಸರಿಯಾಗಿ ಬರೆದಿಲ್ಲ ಅನಿಸಿತು. ಆಸೆಬಿಟ್ಟು ಇದ್ದ ಕೆಲಸ ಮಾಡಿಕೊಂಡಿದ್ದರಾಯಿತು ಎಂದು ಸುಮ್ಮನಿದ್ದೆ. ಹಾಗೆ ಸುಮ್ಮನಿದ್ದವನನ್ನು ಕ್ಷೇತ್ರದ ಅಲೆ ತನ್ನೊಳಗೆ ಬೇಡವೆಂದರೂ ಸೆಳೆದುಕೊಂಡಿತು. ಹಾಗೆ ಸೆಳೆದ ಮಂಗಳೂರಿನವರಿಗೆ ತುಂಬು ಕೃತಜ್ಞ.
ಸುಳಿಗೆ ಸಿಕ್ಕ ಮೇಲೆ ಈಜಲೇಬೇಕು. ಈಜುತ್ತಲೇ ಇದ್ದೇನೆ. ಈಜುತ್ತಲೇ ಇರುತ್ತೇನೆ. ಕೈ ಸೋಲುವವರೆಗೆ...
ಎಷ್ಟೋ ಆಸೆಗಳು ಮೂಡಿ ಕಮರಿವೆ. ಹೋ ನಾನು ಹಾಗಾಗಬೇಕಿತ್ತು. ಉದ್ಯಮಿಯಾಗಿ ದುಡ್ಡು ಮಾಡಬೇಕಿತ್ತು. ಮೇಷ್ಟ್ರಾಗಿ ಆರಾಮವಾಗಿರಬಹುದಿತ್ತು. ಇನ್ನಷ್ಟು ಓದಬೇಕಿತ್ತು. ಛೆ ಕಥೆಗಾರನೋ ಕಲಾವಿದನೋ ಆಗಿ ಸುತ್ತಾಡುತ್ತಲೇ ಇರಬೇಕಿತ್ತು. ಹೀಗೆ ಒಂದಾ ಎರಡಾ... ಎಲ್ಲರಿಗೂ ಇರುವಂತೆ ನನಗೂ ನೂರಾರು ಆಸೆ, ಕನಸು. ಒಮ್ಮೊಮ್ಮೆ ಯಾವುದೂ ಕೈಗೂಡಲಿಲ್ಲ ಎಂಬ ಕೊರಗು.
ಒಂದು ನಿರ್ಧಾರಕ್ಕೆ ಬಂದೆ. ಇದು ನನ್ನ ಆಟದ ಮೈದಾನ. ಇಲ್ಲಿರುವಷ್ಟು ಕಾಲ ಚೆನ್ನಾಗಿ ಆಡಬೇಕು. ಕೊನೆಗೊಮ್ಮೆ ನನಗೇ ಸಾಕೆನಿಸಬಹುದು. ಎದುರಾಳಿ ಸೋಲಿಸಲೂಬಹುದು. ಆಗ ಹೊರನಡೆದಾಗ ಇನ್ನೊಂದು ದಾರಿ ಕಾಣುತ್ತದೆ. ಹೀಗೆ ಬಂದ ಬದುಕನ್ನು ಹಾಗೇ ಸ್ವೀಕರಿಸಬೇಕು. ಆಟದ ಮೈದಾನದಲ್ಲಿರುವಾಗ ಈಜುಕೊಳದ ಚಿಂತೆಯೇಕೆ? ಹೀಗೆ ಗಟ್ಟಿ ನಿರ್ಧಾರದ ಕಲ್ಲು ಹೊತ್ತು ಕನಸುಗಳನ್ನು ತಾತ್ಕಾಲಿಕ ಸಮಾಧಿ ಮಾಡಿದ್ದೇನೆ.
 ನಕ್ಷೆಯಲ್ಲೇ ನೋಡದ ದಾವಣಗೆರೆಯಲ್ಲಿ ನಾಲ್ಕು ವರ್ಷ ಕಳೆದೆ. ಮತ್ತೂ ಅದರಾಚೆ ನೋಡದ ನನ್ನನ್ನು ಉತ್ತರ ಕರ್ನಾಟಕ ಕರೆದಿದೆ. ನೋಡೋಣ ಮುಂದಿನ ದಾರಿ ಎಲ್ಲಿಗೆ?
 ಈ ಅವಧಿಯಲ್ಲಿ ನೂರಾರು ಜನ ಸಿಕ್ಕಿದ್ದಾರೆ. ಗುರುಗುರು ಎನ್ನುತ್ತಲೇ ಎಲ್ಲವನ್ನೂ ಕಲಿಸಿದ್ದಾರೆ. ಬಯಲು ಸೀಮೆಯ ಹಳ್ಳಿ ಹಳ್ಳಿ ಸುತ್ತಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೂ ಚುನಾವಣೆ, ರಾಜಕೀಯ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಾಲ್ಕು ವರ್ಷ ಕಲಿಸಿದ ಹಿರಿಯರಿದ್ದಾರೆ. ಮುಂಗೋಪ ಸ್ವಭಾವದ ನಾನು ಎಷ್ಟೋ ಬಾರಿ ಅವರನ್ನೂ ಬೈದದ್ದಿದೆ. ಮುನಿಸಿಕೊಂಡದ್ದಿದೆ. ಅವರಿಂದ ಸಾಕಷ್ಟು ಬಾರಿ ಬೈಸಿಕೊಂಡದ್ದಿದೆ (ಅವರ ಕೆಲವು ತಿಕ್ಕಲುತನಗಳೂ ಹಾಗೇ ಇದ್ದವು ಎಂಬುದೂ ಉಲ್ಲೇಖಾರ್ಹ). ಆ ಕಠಿಣ ತರಬೇತಿಯ ಫಲಿತಾಂಶ ಈಗ ಸಿಗುತ್ತಿದೆ. ಹೌದು ಅಂಥ ತರಬೇತಿ ಕೊಟ್ಟ ಸಂಸ್ಥೆಯ ಹಿರಿಯರು ಮತ್ತೂ ಬೆಳೆದು ತಮ್ಮೂರು ಸೇರಿದ್ದಾರೆ. ಅವರಿಗೆ ಕೃತಜ್ಞತೆಯ ನಮಸ್ಕಾರ ಸಲ್ಲಿಸುತ್ತಿದ್ದೇನೆ. ನನ್ನ ಆಫೀಸಿನ ನಾಲ್ಕು ಗೋಡೆಗಳ ನಡುವೆ ಅವರ ಮೇಲೆ ಕೋಪ ಕಾರಿದ್ದಕ್ಕೆ ಕ್ಷಮೆ ಕೋರುವ ಸಹಿತ.
ಇನ್ನೂ ಕೆಲವು ಹಿರಿಯರ ಬಗ್ಗೆ ಹೇಳಬೇಕೆನಿಸುತ್ತದೆ. ಆದರೆ, ಅವರು ಇವೆರಡಕ್ಕೂ ಅರ್ಹರಲ್ಲ. ಬಹುಶಃ ಆ ಕಾಲ ಮುಂದುವರಿಯುತ್ತಿದ್ದರೆ ನಾನು ಕ್ಷೇತ್ರದಲ್ಲಿ ಇರುತ್ತಿರಲಿಲ್ಲ ಎಂದಷ್ಟೇ ಹೇಳಿ ಮುಗಿಸುತ್ತೇನೆ.
ದಾವಣಗೆರೆಯಲ್ಲಿ ವೃತ್ತಿಗೆಳೆಯರ ನಡುವೆ ಮಧುರ ಪ್ರೀತಿ ಅನುಭವಿಸಿದ್ದೇನೆ. ಮಾನವೀಯ ಹೃದಯ ಕಂಡಿದ್ದೇನೆ. ಬಂದ ಆರು ತಿಂಗಳಲ್ಲೇ ತಂದೆ ಅಸ್ವಸ್ಥರಾದಾಗ ದುಡ್ಡುಕೊಟ್ಟು ಬಸ್ಸು ಹತ್ತಿಸಿದ ಸಹೋದ್ಯೋಗಿಗಳು, ಹುಷಾರಿಲ್ಲದೇ ಬಿದ್ದುಕೊಂಡಿದ್ದಾಗ ಡಾಕ್ಟ್ರಬಳಿ ಕರೆದೊಯ್ದ ಹಿರಿಯ ಗೆಳೆಯ ಚಂದ್ರ,  ಒಂದಿಷ್ಟು ಗಂಜಿ ತಂದು ಕೊಟ್ಟ ಸಹೋದ್ಯೋಗಿ, ಸೋಂಬೇರಿಯಾಗಿದ್ದವನಿಗೆ ಪ್ರೀತಿಯಿಂದ ಊಟ ಹಾಕುತ್ತಿದ್ದ ಭಗತ್‌ಸಿಂಗ್‌ ನಗರದ ನನ್ನ ಪಕ್ಕದಮನೆಯ ಅಮ್ಮ. ಕೊನೆಗೂ ಪ್ರೀತಿಯ ನೋಟ ಬೀರಿದ ಹುಡುಗಿ, ಮನೆತುಂಬಾ ಓಡಾಡಿಕೊಂಡು ಗದ್ದಲ ಎಬ್ಬಿಸುತ್ತಿದ್ದ ತುಂಟ ಮಕ್ಕಳು... ಹೀಗೆ ಬಯಲು ಸೀಮೆಯ ಹೃದಯ ತುಂಬಿದ ಮುಗ್ದ ಪ್ರೀತಿಯ ಮುಖಗಳು ಸಾವಿರಾರು ಇವೆ.
ನಮ್ಮ  ಜಿಲ್ಲೆಯ ‘ಬುದ್ಧಿವಂತ’ರೆನಿಸಿಕೊಂಡವರು ಕಲಿಯಲೇಬೇಕಾದ ಪಾಠವಿದು.
ಈ ನಡುವೆ ವೃತ್ತಿಬದುಕಿನಲ್ಲಿ ಗದ್ದಲಗಳು ಇಲ್ಲದಿಲ್ಲ. ಸ್ವಲ್ಪ ಕೆಲಸ ಮಾಡಿದೆ ಅಷ್ಟೇ. ಸಂಸ್ಥೆ ಎಲ್ಲವನ್ನೂ ಕೊಟ್ಟಿತು. ಅದೂ ಅಲ್ಪ ಅವಧಿಯಲ್ಲೇ. ಇದೆಲ್ಲಾ ಏನು ಮಾಡಿತೋ ಗೊತ್ತಿಲ್ಲ. ಒಂದು ಹಂತದಲ್ಲಿ ಎಲ್ಲವೂ ವಿಕೋಪಕ್ಕೇರಿ ಇನ್ನೇನು ಈ ಸಂಸ್ಥೆಯಲ್ಲ ಯಾವ ಸಂಸ್ಥೆ, ಕ್ಷೇತ್ರದಲ್ಲಿಯೂ ಕೆಲಸ ಸಿಗಬಾರದಂಥ ಸನ್ನಿವೇಶ ನಿರ್ಮಿಸುವ ಘಟನೆ ನಡೆಯಿತು. ನಾನೂ ಮಾನಸಿಕವಾಗಿ ಒಂದು ಕಾಲು ಹೊರಗಿಟ್ಟಿದ್ದೆ. ಆದರೆ, ಹಾಗೆ ಮಾಡಿದವರನ್ನೂ ಸುಮ್ಮನೆ ಬಿಡುವುದಿಲ್ಲ ಎಂಬ ಸೇಡಿನ ಸಹಿತ. (ಈ ಘಟನೆಯಲ್ಲಿ ನನ್ನ ತಪ್ಪಿಲ್ಲವಾದರೂ ಮುಂಗೋಪದ ಪಾಲು ಇದೆ ಎಂದು ಹೇಳಲು ವಿಷಾದವಿದೆ)
ನನಗೊಂದು ವಿಶ್ವಾಸವಿತ್ತು. ತಪ್ಪಿ ನಡೆದಿಲ್ಲ. ತಲೆ ಬಾಗಿಸಿದ್ದೇನೆ. ಆದರೆ, ತಲೆತಗ್ಗಿಸಿಲ್ಲ. ವಾಸ್ತವ ನನ್ನಪರ ಇತ್ತು. ಘಟನೆಗೆ ಸಾಕ್ಷಿಯಾದ ಸಹೋದ್ಯೋಗಿಗಳು ನನ್ನಪರ ಏನೂ ಹೇಳಲಿಲ್ಲ. ಆದರೆ, ವಾಸ್ತವದ ಪರ ನಿಂತರು. ನನಗೆ, ಸಂಸ್ಥೆಗೆ ಅಷ್ಟೇ ಸಾಕಿತ್ತು. ಅಂಥದ್ದೊಂದು ಸನ್ನಿವೇಶ ತಪ್ಪಿಹೋಯಿತು. ಆದರೆ, ಕೊನೆಗೂ ಅದಕ್ಕೆ ಕಾರಣರಾದವರಿಗೆ ಮನವರಿಕೆಯಾಯಿತು. ತಾನು ಹೀಗೆ ಮಾಡಬಾರದಿತ್ತು. ಮುಂದೊಂದು ದಿನ ಅವರದೇ ವೃತ್ತಿಬದುಕಿಗೆ ಕಲ್ಲು ಬೀಳುವ ಅಥವಾ ಕಪ್ಪು ಚುಕ್ಕೆ ಮೂಡಿಸುವ ಎಲ್ಲ ಸನ್ನಿವೇಶ ನಿರ್ಮಾಣವಾಗಿ ಎಲ್ಲವೂ ಮುಗಿದೇ ಹೋಯಿತು ಎಂದಾದಾಗ ಎಲ್ಲರನ್ನೂ ಎದುರುಹಾಕಿಕೊಂಡು ನಾನೇ ತಡೆದಿದ್ದೆ. ಇದಕ್ಕೆ ಹಲವು ಟೀಕೆ, ಅಪಹಾಸ್ಯಗಳನ್ನೂ ಎದುರಿಸಬೇಕಾಯಿತು. ಹೌದು ನಿಸರ್ಗ ಎಲ್ಲವನ್ನೂ ಸರಿಪಡಿಸುತ್ತದೆ (Belive the nature. Nature heels everything) ಎಂಬ ನಂಬಿಕೆ ನನ್ನದು. ನಾವು ಯಾರೂ ಏನೂ ಮಾಡಬೇಕಿಲ್ಲ. ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ. ನನ್ನ ಬದುಕಿನುದ್ದಕ್ಕೂ ಆಗಿದ್ದೂ ಅದೇ. ಇರುವ ನಾಲ್ಕು ದಿನ ಚೆನ್ನಾಗಿಯೇ ಇರೋಣ ಅಲ್ವಾ?
ಹಾಗೆಂದ ಮಾತ್ರಕ್ಕೆ ನಾನು ನೂರಕ್ಕೆ ನೂರು ಪ್ರಾಮಾಣಿಕ ಎಂದೇನೂ ಭಾವಿಸಬೇಕಿಲ್ಲ. ನನ್ನಲ್ಲೂ ನೂರಾರು ತಿಕ್ಕಲುತನ, ಕೀಟಲೆಬುದ್ದಿ ಒಮ್ಮೊಮ್ಮೆ ಕಿಡಿಗೇಡಿತನವೂ ಇಣುಕಿದ್ದಿದೆ. ವ್ಯಕ್ತಿಗತ ದೌರ್ಬಲ್ಯಗಳೂ ಇವೆ. ಆದರೆ, ಅದು ನನ್ನ ವೃತ್ತಿ, ಬದುಕು, ಯಾವುದೇ ವ್ಯಕ್ತಿ, ಸಂಸ್ಥೆಗೆ ತೊಂದರೆ ಉಂಟು ಮಾಡಿಲ್ಲ ಅಷ್ಟೇ.
ಅಡ್ಡದಾರಿ ಹಿಡಿದು ದುಡ್ಡು ಮಾಡುವ ಚಾಲಾಕಿತನ ನನ್ನಲ್ಲಿಲ್ಲ. ಯಾವುದೋ ವಿಷಯ, ವಸ್ತುವಿಗಾಗಿ ಕೈಚಾಚಿದ್ದೂ ಇಲ್ಲ. ಮುಖ್ಯವಾಗಿ ದುಡ್ಡು ಕಾಸಿನ ಕೊರತೆಯೂ ಕಾಡಿಲ್ಲ. ವೇತನ ಸಾಲದಿದ್ದರೆ ವೃತ್ತಿಯಲ್ಲಿ ಗೆಳೆಯರೆಂಬ ಕುಬೇರರು ಇರಬೇಕಾದರೆ ಚಿಂತೆಯೇಕೆ? ಚಟ ಚಾಳಿಗಳೂ ಇಲ್ಲ. ಹಾಗಿದ್ದರೆ ಮತ್ತೇನು?
ಒಟ್ಟಾರೆ ಬದುಕಿನಲ್ಲಿ ಕೆಲವೊಮ್ಮೆ ಮಾನಸಿಕವಾಗಿ ಭ್ರಷ್ಟನಾದದ್ದಿದೆ. ಅದೂ ಯಾವುದೋ ಒತ್ತಡಕ್ಕೆ ಬಿದ್ದು. ಇನ್ಯಾವನೋ ಅಯೋಗ್ಯನನ್ನು ಸತ್ಯಹರಿಶ್ಚಂದ್ರ ಎಂದು ಬಿಂಬಿಸಬೇಕಾಗಿ ಬಂದದ್ದು, ಸತ್ಯ ಮರೆಮಾಚಬೇಕಾಗಿ ಬಂದದ್ದು ಹೀಗೆ ಹಲವು ಸಂದರ್ಭಗಳಿವೆ. ಈಗ ಎಲ್ಲವೂ ನೆನಪಾಗುತ್ತಿಲ್ಲ.
ಅಪಾಯಕಾರಿ ಸ್ಥಳಗಳಿಗೆ ಹೋಗಿ ಫೋಟೋ ತೆಗೆದದ್ದು, ನಡುರಾತ್ರಿಯಲ್ಲಿ ಹೋಗಿ ಬೆಂಕಿ ದುರಂತದ ಫೋಟೋ ತೆಗೆದು ವರದಿ ಪ್ರಕಟಿಸಿಯೂ ಬೈಸಿಕೊಂಡದ್ದು, ದುರ್ಗಮ್ಮನ ಜಾತ್ರೆಯಲ್ಲಿ ಗಲಾಟೆಯ ಫೋಟೋ ತೆಗೆದು ಹೊಡೆಸಿಕೊಂಡು, ಕ್ಯಾಮೆರಾ ಕಳೆದುಕೊಂಡದ್ದು. (ಕೊನೆಗೂ ಸಿಕ್ಕಿತು) ಆದರೆ, ಕನಿಷ್ಠ ದೂರುಕೊಡಲೂ ಅಸಹಾಯಕನಾಗಿ ಮೋಸ ಹೋದದ್ದು, ಬೆಳಗಿನ ಜಾವ ಮೂರು ಗಂಟೆಯವರೆಗೆ ಸೂಕ್ತ ಯೋಜನೆಯಿಲ್ಲದ ಹಿರಿಯರ ‘ಮಂತ್ರೋಚ್ಛಾರಣೆ’ಯ ಸಹಿತ ಪತ್ರಿಕೆಯ ಪುಟ ಸಿದ್ಧಪಡಿಸುತ್ತಿದ್ದದ್ದು. ಎಲ್ಲವನ್ನು ಮಾಡಿಯೂ ಮರುದಿನ ತಪ್ಪು ಹುಡುಕುವ ನಮ್ಮವರದೇ ‘ಫಿಟ್ಟಿಂಗ್‌’ಗಳಿಗೆ ನೊಂದುಕೊಂಡದ್ದು... ಇವೆಲ್ಲಾ ನೋಡುವಾಗ ಇದು ಪತ್ರಿಕೋದ್ಯಮವೇ ಅಥವಾ ವೇಶ್ಯಾವಾಟಿಕೆಯೇ? ಎಂದು ಎಷ್ಟೋ ಬಾರಿ ನನ್ನನ್ನೇ ಪ್ರಶ್ನಿಸಿಕೊಂಡದ್ದಿದೆ.
ವೇಶ್ಯೆಗಾದರೂ ತಾನು ಯಾರ ಜತೆ ಮಲಗಬೇಕು ಎಂಬ ಆಯ್ಕೆ ಇರುತ್ತದೆ. ಆದರೆ, ಪತ್ರಕರ್ತರಿಗಿರುವುದಿಲ್ಲ. ವ್ಯಕ್ತಿ/ ಘಟನೆ ಒಳ್ಳೆಯದೋ ಕೆಟ್ಟದ್ದೋ... ಬರೆಯಲೇಬೇಕು. ಬೇಡವೆಂದರೂ ಸ್ಪಂದಿಸಲೇಬೇಕು. ಕೊನೆಗೆರಡು ಬೈಗುಳ ಸ್ವೀಕರಿಸಲೇಬೇಕು.
ಹಿರಿಯರೇ ಒಂದು ಮಾತು ನೆನಪಿಡಿ. ನಮ್ಮದು ಪತ್ರಿಕಾ ಕಚೇರಿ. ಪೊಲೀಸ್‌ ಠಾಣೆ ಅಲ್ಲ.
ಒಟ್ಟಾರೆ ಬದುಕಿನಲ್ಲಿ ಹಲವು ಮುಖಗಳನ್ನು ನೋಡಿದ್ದೆ ಎಂದೆನಲ್ಲಾ 2006ರಿಂದ ಇಲ್ಲಿವರೆಗೆ ಕೆಲವನ್ನು ಹೇಳುತ್ತೇನೆ.
* ಯಾವುದೋ ತನಿಖಾ ವರದಿ ಬರೆಸಿ ಪ್ರಕಟಿಸಿದ ಸ್ಥಾನಿಕ ಸಂಪಾದಕರನ್ನು ನೋಡಿದ್ದೇನೆ. ಎಲ್ಲವೂ ಸರಿಯಿದ್ದರೂ ಮರುದಿನ ಪತ್ರಿಕಾ ಸಂಸ್ಥೆ ಹಾಗೂ ವರದಿಯಲ್ಲಿ ಒಳಗೊಂಡ ವ್ಯವಸ್ಥೆಯ ಒತ್ತಡಕ್ಕೊಳಗಾಗಿ ತಾವೇ ಸ್ಪಷ್ಟನೆ ಬರೆದ ಅವರನ್ನೂ ನೋಡಿದ್ದೇನೆ.
*ಅದ್ಯಾರೋ ಅಯೋಗ್ಯ ಫೋನ್‌ನಲ್ಲಿ ಗುರ್‌ ಎಂದರೂ ಗಡಗಡ ನಡುಗುವ ಸಂಪಾದಕರನ್ನೂ ನೋಡಿದ್ದೇನೆ.
* ಪತ್ರಿಕಾ ಕಚೇರಿಯನ್ನು ಜೈಲಿನಥರ ಇಟ್ಟುಕೊಂಡ ವ್ಯವಸ್ಥೆಯನ್ನೂ ನೋಡಿದ್ದೇನೆ. * ಅಪರೂಪಕ್ಕೊಮ್ಮೆ ಮಾನವೀಯ ಮುಖಗಳನ್ನೂ ನೋಡಿದ್ದೇನೆ.
* ಪತ್ರಕರ್ತ ಎನ್ನುವುದಕ್ಕೆ ದೊಡ್ಡ ಅರ್ಥ ಹಾಗೂ ವ್ಯಾಖ್ಯೆಯಿದೆ. ಆದರೆ, ನಾನೊಬ್ಬ ವರದಿಗಾರ ಅನಿಸಿಕೊಳ್ಳಬಹುದು ಅಷ್ಟೆ. ಪತ್ರಕರ್ತ ಅನಿಸಿಕೊಳ್ಳಲು ಇನ್ನೂ ದಾರಿ ದೂರವಿದೆ.

ಒಟ್ಟಾರೆ ನನ್ನದೂ ಒಂದು ನೌಕರಿ ಅಷ್ಟೆ. ಅದರಾಚೆ ಏನೂ ಇಲ್ಲ. ಬರೆದು ಸಮಾಜ ಸುಧಾರಣೆ ಮಾಡುತ್ತೇನೆ ಎಂಬ ಕಾಲ ಸಂಪೂರ್ಣ ಹೋಯಿತು. ಒಂದಿಷ್ಟು ಸಂದೇಶ ಕೊಟ್ಟು ಸುಮ್ಮನಾಗಬಹುದು ಅಷ್ಟೆ. ನಮಗಿರುವ ಇತಿಮಿತಿ, ಚೌಕಟ್ಟು ಹಾಗಿದೆ. ಇದು ಈ ಕ್ಷೇತ್ರದಲ್ಲಿ ಬಹುತೇಕರಿಗೆ ಅನ್ವಯಿಸುವ ಮಾತು.

ಕಂಡದ್ದು/ ಗಳಿಸಿದ್ದು

* ಒಂದು ನೌಕರಿ, ಕರ್ನಾಟಕದ ಮಾನವೀಯ ಮುಖ, ಭೌಗೋಳಿಕ ಪರಿಸರ, ಸಂಸ್ಕೃತಿಯ ಅಧ್ಯಯನ. ಕರ್ನಾಟಕದ ಹಲವು ಮುಖಗಳನ್ನು ನೋಡಿದೆ. ಹಾ ಓಡಾಡಿದ್ದಕ್ಕೆ ಗೌರವದ ಸಂಬಳ. ಒಂದಿಷ್ಟು ಪ್ರಶಂಸೆ. ಮಲ್ಲಿಗೆಯ ಜತೆಗೆ ನಾರಿಗೂ ಗೌರವ ಅಷ್ಟೆ.

ಕಳೆದುಕೊಂಡದ್ದು

* ನನ್ನೂರು. ಜನ. ಊರಿನ ಸುಖ–ದುಃಖ, ನಮ್ಮವರ ಒಡನಾಟ. ಆಟ, ಜಾತ್ರೆ, ನಾಟಕ, ಸಂಬಂಧಗಳು, ನನ್ನ ಕುಟುಂಬ, ಭಾವನೆಗಳು, ಹಲವಾರು ಬಾರಿ ನೆಮ್ಮದಿ.

ಕೃತಜ್ಞ

ಇರಲಿ ಬಿಡಿ ಸುಖದುಃಖ ಎಲ್ಲೆಡೆಯೂ ಇದ್ದದ್ದೆ. ಒಂದು ಗಳಿಸಿದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು. ಹಾಗಾಗಿ ಅದು ಯಾವ ಕ್ಷೇತ್ರದಲ್ಲಿಯೂ ಅನಿವಾರ್ಯವೇ. ಒಂದು ಗೌರವದ ಬದುಕುಕೊಟ್ಟ ಕ್ಷೇತ್ರ ಹಾಗೂ ವ್ಯವಸ್ಥೆಗೆ ಕೃತಜ್ಞ.

ಕಡ್ತಲವೊಂದನ್ನು ಬಿಟ್ಟು....

ಗೆಳೆಯರೇ ವೃತ್ತಿಬದುಕು ಉತ್ತರ ಕರ್ನಾಟಕದವರೆಗೂ ನನ್ನನ್ನು ಕರೆದುತಂದಿದೆ. ನಾನು ಈ ನಾಡನ್ನು ಪ್ರೀತಿಸುತ್ತೇನೆ. ವೃತ್ತಿ ಬದುಕಿನಲ್ಲಿ ಕರೆದುತಂದ ಎಲ್ಲ ಊರುಗಳೂ, ಸಂಸ್ಥೆ, ವ್ಯವಸ್ಥೆ ನನ್ನನ್ನು ಪ್ರೀತಿಸಿವೆ. ಆದರಿಸಿವೆ. ಪ್ರೋತ್ಸಾಹಿಸಿವೆ, ತಪ್ಪಿದಾಗ ಆರೋಗ್ಯಕರವಾಗಿ ತಿದ್ದಿ ತೀಡಿವೆ.  
ಆದರೆ....
ಕಡ್ತಲವೊಂದನ್ನು ಬಿಟ್ಟು.
ನನ್ನ ಸಂಸ್ಥೆ ಶರತ್‌ ಹೆಗ್ಡೆ, ಕಡ್ತಲ ಎಂಬ ಹೆಸರಿನಲ್ಲಿ ಕಡ್ತಲವನ್ನು ಕತ್ತರಿಸಿ ಹಾಕಿದಾಗ ಒಂಥರಾ ಬಾಲ ಕಟ್‌ ಮಾಡಿದ ಹಾಗಾಗಿತ್ತು. ಕೆಲಕಾಲ ಬೇಸರಿಸಿಕೊಂಡಿದ್ದೆ. ಪ್ರೀತಿಯ ಹೆಸರದು.
ಆದರೆ, ಪತ್ರಿಕಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದವನನ್ನು ತುಳಿದು ಹಾಕಲು ಶತಪ್ರಯತ್ನ ಮಾಡಿದ ನನ್ನೂರು ಕಡ್ತಲದ ಕೆಲವು ‘ಕೊಳಕುಮಂಡಲ’, ‘ಕನ್ನಡಿ ಹಾವು’ಗಳಿಗೆ ಕೃತಜ್ಞತೆಯ ಹಾಲು ಎರೆಯುತ್ತೇನೆ. (ಹಾಗಿದ್ದರೂ
ಅಲ್ಲಿನ ಒಳ್ಳೆಯ ಮನಸ್ಸುಗಳಿಗೆ ಬೆನ್ನುತಟ್ಟಿದ ಕೈಗಳಗೆ ನಮಸ್ಕರಿಸುತ್ತೇನೆ)
ಅವು ಭುಸುಗುಟ್ಟಿದವು. ಕಚ್ಚಲು ಬಂದವು. ಹಲವಾರು ಬಾರಿ ಥೇಟ್‌ ನಾಯಿಗಳಂತೆ ಅರಚಿದವು. ತಿರುಗಿಬಿದ್ದಾಗಲೂ ಸುಮ್ಮನಾಗಲಿಲ್ಲ. ಆದರೆ, ಅವುಗಳ ಭುಸುಗುಡುವಿಕೆ ಹೆಸರಿನಲ್ಲಿ ನೀಡಿದ ಮಾನಸಿಕ ಹಿಂಸೆಯೇ ಇಂದು ಕ್ಷೇತ್ರದಲ್ಲಿ ಗಟ್ಟಿಯಾಗಿ ನಿಂತು ನಿಭಾಯಿಸಲು ಸಾಧ್ಯವಾಯಿತು. ಸಮಾಜಸೇವಕರ ಸೋಗಿನಲ್ಲಿರುವ ಈ ವಿಷಜಂತುಗಳಿಗೆ ಸೊಪ್ಪುಹಾಕಲಿಲ್ಲ. ಹಿಂಬಾಲಕನಾಗಲಿಲ್ಲ. ನನಗೆ ವಿನಾಕಾರಣ ಹೊಗಳಲು ಬರುವುದಿಲ್ಲ
. ಇದೇ ಸಮಸ್ಯೆ. ಹೋಗಲಿ ಇದೆಲ್ಲಾ ಆದಾಗ ಮನೆಯಲ್ಲೊಂದು ಧೈರ್ಯದ ಮಾತೂ ಸಿಗಲಿಲ್ಲ. ಕೊನೆಗೂ ಧೈರ್ಯಮಾಡಿದೆ. ಇವು ಬೌಗುಡುತ್ತಿದ್ದಂತೆಯೇ ಸ್ಥಿರವಾಗಿ ನಿಂತೆ. ಮುಂದೆಯೂ ನಿಲ್ಲುತ್ತೇನೆ. ಹಾವುಗಳು ಮಾತ್ರ ಹುತ್ತಬಿಟ್ಟು ಹೊರಬಂದಿಲ್ಲ.
ಗಾಳಿ ಸ್ವಚ್ಛವಾಗಿರುವಷ್ಟು ಕಾಲ ಹಕ್ಕಿ ಸ್ವತಂತ್ರವಾಗಿ ಹಾರುತ್ತಿದೆ. ಹಾಡುತ್ತಿದೆ. ಮುಂದೆಯೂ ಹಾಡುತ್ತಿರುತ್ತದೆ.


3 comments:

  1. Nice..Blog....
    my father often used to tell abt ur stories many years back when i was small but i never knw anything at that age....

    ReplyDelete
  2. ಪ್ರೀತಿಯ ಶರತ್ ಸರ್... ನೀವು ಭುವನೇಂದ್ರ ಕಾಲೇಜಿನಲ್ಲಿ ಶಿಕ್ಷಕನಾಗಿ ಶೇಕಡಾ ೯೦ ರಷ್ಟು ಪ್ರಾಮಾಣಿಕನಾಗಿ ಇದ್ದೆ ಎಂದಿರಲ್ಲಾ... ಬಹುಶಃ ಆ ನಿಮ್ಮ ಪ್ರಾಮಾಣಿಕತೆಯೇ ನನ್ನ ಬದುಕಿಗೊಂದು ದಿಕ್ಕು ತೋರಿಸಿದ್ದು...
    ಹೊಸ ದಾರಿಯಲ್ಲಿ ಎಷ್ಟು ಯಶಸ್ವಿಯಾಗಿದ್ದೇನೋ ಗೊತ್ತಿಲ್ಲ (ಬಹುಶಃ ಇನ್ನು ಪ್ರಾಥಮಿಕ ಹಂತದಲ್ಲೇ ಇದ್ದೇನೆ) ಆದರೆ ಯಶಸ್ವಿಯಾಗಬೇಕೆಂಬ ಹಂಬಲ ಮಾತ್ರ ಬಹಳಷ್ಟಿದೆ, ಆದರೆ ನೀವು ಅಂದು ಬೊಟ್ಟು ಮಾಡಿ ತೋರಿಸಿದ ನ್ಯೂನತೆಗಳಿಂದ ಹೊರಬರುವಲ್ಲಿ ಒಂದಷ್ಟು ಯಶಸ್ವಿಯಾಗಿದ್ದೇನೆ ಎಂದು confident ಆಗಿ ಹೇಳಬಲ್ಲೆ. ಯಾವುದಕ್ಕೂ ನಿಮಗೊಂದು ಥ್ಯಾಂಕ್ಸ್..

    ReplyDelete
    Replies
    1. ಹ ಹ ಶೇ 100ರಷ್ಟು ಪ್ರಾಮಾಣಿಕನಾಗಲಿಲ್ಲ. ಅದು ಸಾಧ್ಯವೂ ಇರಲಿಲ್ಲ ಎಂದು ಹೇಳಲು ಬೇಸರವಾಗುತ್ತದೆ.

      Delete